ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ಕಾಮನ್‌ವೆಲ್ತ್‌ ಗುರಿ...

Last Updated 25 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಅದು 2015ರ ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಫೆಡರೇಷನ್‌ನ (ಫಿಬಾ) ಏಷ್ಯಾ ಚಾಂಪಿಯನ್‌ಷಿಪ್‌. ಟೂರ್ನಿಯಲ್ಲಿ ಅಮೋಘ ಆಟವಾಡಿದ್ದ ಭಾರತ ಪುರುಷರ ತಂಡ ಎಂಟನೇ ಸ್ಥಾನ ಗಳಿಸಿತ್ತು. ಅದು ದೇಶದ ಬ್ಯಾಸ್ಕೆಟ್‌ಬಾಲ್‌ನಲ್ಲಿ ಮಹತ್ವದ ಮೈಲುಗಲ್ಲಾಗಿತ್ತು. ಯಾಕೆಂದರೆ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಇಂಥ ಸಾಧನೆ ಮಾಡಿ 12 ವರ್ಷಗಳೇ ಕಳೆದಿದ್ದವು.

ಈ ಸಾಧನೆಯೊಂದಿಗೆ ಫಿಬಾ ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತ ಎಂಟು ಸ್ಥಾನಗಳ ಏರಿಕೆ ಕಂಡು 53ನೇ ಸ್ಥಾನಕ್ಕೆ ಜಿಗಿಯಿತು. ಆಗ ತಂಡ ಏಷ್ಯಾದ ಬ್ಯಾಸ್ಕೆಟ್‌ಬಾಲ್‌ನ ಬಲಿಷ್ಠ ಶಕ್ತಿಗಳಾದ ಜಪಾನ್ ಮತ್ತು ಚೀನಾ ತೈಪೆಗಿಂತ ಕೇವಲ ಐದು ಸ್ಥಾನಗಳಿಂದ ಹಿಂದೆ ಉಳಿದಿತ್ತು.

ಈ ಸಾಧನೆ ದೇಶದ ಬ್ಯಾಸ್ಕೆಟ್‌ಬಾಲ್‌ನ ಮನ್ವಂತರಕ್ಕೆ ಕಾರಣವಾಯಿತು. ಕಾಮನ್‌ವೆಲ್ತ್‌ ಗೇಮ್ಸ್‌ ಮತ್ತು ವಿಶ್ವಕಪ್‌ನಲ್ಲೂ ಸಾಧನೆ ಮಾಡುವ ಪ್ರಯತ್ನಕ್ಕೆ ಕೈ ಹಾಕಲು ಪ್ರೇರಣೆಯಾಯಿತು. ಇದರ ಪರಿಣಾಮ, ಈಗ ಈ ಎರಡೂ ಟೂರ್ನಿಗಳಿಗಾಗಿ ಕಠಿಣ ಅಭ್ಯಾಸ ನಡೆಯುತ್ತಿದೆ. ಆಟಗಾರರನ್ನು ಪಳಗಿಸುವ ಶಿಬಿರಕ್ಕೆ ಬೆಂಗಳೂರು ಆತಿಥ್ಯ ವಹಿಸಿದೆ.

ಕಂಠೀರವ ಕ್ರೀಡಾಂಗಣ ಮತ್ತು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಶಿಬಿರದಲ್ಲಿ ಪುರುಷ ಮತ್ತು ಮಹಿಳಾ ತಂಡಗಳ ಸಾಮರ್ಥ್ಯ ವೃದ್ಧಿಗಾಗಿ ಎಡೆಬಿಡದ ‘ಕಸರತ್ತು’ ನಡೆಯುತ್ತಿದೆ.


ಬ್ಯಾಸ್ಕೆಟ್‌ಬಾಲ್‌ ಆಟಗಾರ ಅರವಿಂದ್ ಆರ್‌ಮುಗಮ್ ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್

ದಕ್ಷಿಣ ಏಷ್ಯಾದ ಬ್ಯಾಸ್ಕೆಟ್‌ಬಾಲ್ ಶಕ್ತಿಗಳಲ್ಲಿ ಒಂದಾಗಿರುವ ಭಾರತ ಒಲಿಂಪಿಕ್ಸ್‌, ವಿಶ್ವಕಪ್‌ ಮತ್ತು ಏಷ್ಯಾ ಚಾಂಪಿಯನ್‌ಷಿಪ್‌ಗಳಲ್ಲಿ ಗಮನಾರ್ಹ ಸಾಧನೆ ಮಾಡಲು ವಿಫಲವಾಗಿದೆ. ಒಲಿಂಪಿಕ್ಸ್‌ನಲ್ಲಿ 1980ರಲ್ಲಿ ಮಾತ್ರ ಭಾರತ ಭಾಗವಹಿಸಿತ್ತು. ತಂಡ ಬರಿಗೈಯಲ್ಲಿ ಮರಳಿತ್ತು. ಫಿಬಾ ವಿಶ್ವಕಪ್‌ಗೆ ತಂಡ ಒಮ್ಮೆಯೂ ಅರ್ಹತೆ ಪಡೆದಿಲ್ಲ. ಏಷ್ಯಾಕಪ್‌ನಲ್ಲಿ ಒಟ್ಟು 25 ಬಾರಿ ಆಡಿದರೂ ಪ್ರಶಸ್ತಿಯ ಸನಿಹಕ್ಕೆ ಸುಳಿಯಲು ಕೂಡ ಸಾಧ್ಯವಾಗಲಿಲ್ಲ. ದಕ್ಷಿಣ ಏಷ್ಯಾ ಕೂಟದಲ್ಲಿ ಮಾತ್ರ ತಂಡದ ಸಾಧನೆ ಉತ್ತಮವಾಗಿದೆ. ಒಟ್ಟು ನಾಲ್ಕು ಬಾರಿ ಪಾಲ್ಗೊಂಡು 1995, 1999 ಮತ್ತು 2004ರಲ್ಲಿ ಪ್ರಶಸ್ತಿ ಗೆದ್ದಿದೆ. 2010ರಲ್ಲಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ.

ಮಹಿಳಾ ವಿಭಾಗದ ಕಥೆಯೂ ಭಿನ್ನವಾಗಿಲ್ಲ. ಒಲಿಂಪಿಕ್ಸ್‌ ಮತ್ತು ಮಹಿಳಾ ವಿಶ್ವಕಪ್‌ಗೆ ಪ್ರವೇಶ ಪಡೆಯಲು ತಂಡಕ್ಕೆ ಸಾಧ್ಯವಾಗಿಲ್ಲ. ಆದರೆ ಏಷ್ಯನ್ ಚಾಂಪಿಯನ್‌ಷಿಪ್‌ಗಳಲ್ಲಿ 17 ಬಾರಿ ಪಾಲ್ಗೊಂಡಿದೆ. ಕಳೆದ ಬಾರಿ ‘ಬಿ’ ವಿಭಾಗದ ಚಾಂಪಿಯನ್‌ ಆಗಿದ್ದು ತಂಡದ ಶ್ರೇಷ್ಠ ಸಾಧನೆ. ಈ ಗರಿಮೆ ತಂಡದಲ್ಲಿ ಈಗ ಆತ್ಮವಿಶ್ವಾಸ ಮೂಡಲು ಕಾರಣವಾಗಿದೆ. ಜೊರಾನ್ ವಿಸಿಕ್‌ ಗರಡಿಯಲ್ಲಿ ಪಳಗಿರುವ ತಂಡ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲೂ ಉತ್ತಮ ಸಾಧನೆಯ ಕನಸು ಕಾಣುತ್ತಿದೆ. ವಿಶ್ವಕಪ್‌ಗೆ ಪದಾರ್ಪಣೆ ಮಾಡುವ ನಿಟ್ಟಿನಲ್ಲೂ ತಂಡ ಪ್ರಯತ್ನಿಸುತ್ತಿದೆ.

ಕಾಮನ್‌ವೆಲ್ತ್‌ನಲ್ಲಿ ಹಾದಿ ಸುಗಮ?

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳೆರಡರಲ್ಲೂ ಭಾರತ ‘ಬಿ’ ಗುಂಪಿನಲ್ಲಿದೆ. ಪುರುಷರ ವಿಭಾಗದಲ್ಲಿ ಕ್ಯಾಮರೂನ್‌, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌ ತಂಡಗಳು ಭಾರತಕ್ಕೆ ಗುಂಪು ಹಂತದಲ್ಲಿ ಸವಾಲೊಡ್ಡಲಿವೆ. ಮಹಿಳಾ ವಿಭಾಗದಲ್ಲಿ ಜಮೈಕಾ, ಮಲೇಷ್ಯಾ ಮತ್ತು ನ್ಯೂಜಿಲೆಂಡ್‌ ತಂಡಗಳ ಸವಾಲು ಮೀರಬೇಕಾಗಿದೆ. ಎರಡೂ ವಿಭಾಗಗಳಲ್ಲಿ ಏಪ್ರಿಲ್‌ ಐದರಂದು ಭಾರತಕ್ಕೆ ಮೊದಲ ಪಂದ್ಯ.

ಆರಂಭಿಕ ಘಟ್ಟದ ಸವಾಲನ್ನು ಮೆಟ್ಟಿ ನಿಂತು ನಾಕೌಟ್ ಹಂತಕ್ಕೆ ಪ್ರವೇಶ ಪಡೆಯುವ ಭರವಸೆಯಲ್ಲಿದ್ದಾರೆ ಕೋಚ್‌ಗಳು ಮತ್ತು ಆಟಗಾರರು.

‘ತಂಡ ಈಗ ಬಲಿಷ್ಠವಾಗಿದೆ. ವಿದೇಶಿ ತಂಡಗಳಲ್ಲಿ ಆಡಿ ವಾಪಸಾಗಿರುವ ಇಬ್ಬರು ಆಟಗಾರರು ತಂಡದ ಶಕ್ತಿ ಹೆಚ್ಚಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಾಕೌಟ್ ಹಂತ ಪ್ರವೇಶಿಸುವುದು ಭಾರತಕ್ಕೆ ಕಷ್ಟಕರವಾಗಲಾರದು’ ಎಂದು ಹೇಳುತ್ತಾರೆ ಸಹಾಯಕ ಜಿ.ಆರ್‌.ಎಲ್‌ ಪ್ರಸಾದ್‌.

‘ವಿಶ್ವಕಪ್‌ಗೆ ಇನ್ನೂ ಸಾಕಷ್ಟು ಸಮಯ ಇದೆ. ಅದರ ಅರ್ಹತಾ ಸುತ್ತಿನ ಪಂದ್ಯಗಳು ಇನ್ನೂ ಮುಗಿಯಬೇಕಾಗಿದೆ. ಆದರೆ ಕಾಮನ್‌ವೆಲ್ತ್ ಗೇಮ್ಸ್‌ಗೆ ನಾವು ಸಜ್ಜಾಗಿದ್ದೇವೆ. ಅಲ್ಲಿ ಉತ್ತಮ ಸಾಮರ್ಥ್ಯ ತೋರುವ ಭರವಸೆ ಇದೆ. ಈಗ ಈ ಕೂಟದ ಕಡೆಗೆ ಹೆಚ್ಚು ಗಮನ ನೀಡಲಾಗುತ್ತಿದೆ’ ಎಂದು ತಂಡದಲ್ಲಿರುವ ಕರ್ನಾಟಕದ ಏಕೈಕ ಆಟಗಾರ ಅರವಿಂದ ಆರ್ಮುಗಂ ಹೇಳುತ್ತಾರೆ.
***


ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಎರಡನೇ ಬಾರಿ

ಬ್ಯಾಸ್ಕೆಟ್‌ಬಾಲ್‌ಗೂ ಕಾಮನ್‌ವೆಲ್ತ್‌ ಗೇಮ್ಸ್‌ಗೂ ದೊಡ್ಡ ನಂಟು ಇಲ್ಲ. ಈ ಹಿಂದೆ 2006ರಲ್ಲಿ ಮಾತ್ರ ಈ ಕ್ರೀಡೆಯನ್ನು ಕೂಟದಲ್ಲಿ ಆಡಿಸಲಾಗಿತ್ತು. ಈಗ ಎರಡನೇ ಬಾರಿ ಬ್ಯಾಸ್ಕೆಟ್‌ಬಾಲ್ ಆಡಿಸಲಾಗುತ್ತಿದೆ. ವಿಶೇಷವೆಂದರೆ ಹಿಂದಿನ ಬಾರಿಯೂ ಈ ಕ್ರೀಡೆಯನ್ನು ಸೇರಿಸಿದಾಗ ಕೂಟ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ನಡೆದಿತ್ತು. ಈ ಬಾರಿ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿದೆ.

ಮೊದಲ ಬಾರಿ ಪುರುಷ ಮತ್ತು ಮಹಿಳಾ ವಿಭಾಗಗಳ ಚಿನ್ನ ಆತಿಥೇಯರ ಪಾಲಾಗಿತ್ತು. ಭಾರತ ಎರಡೂ ವಿಭಾಗಗಳಲ್ಲಿ ಕೊನೆಯ ಸ್ಥಾನ ಗಳಿಸಿತ್ತು.

2018ರ ಕೂಟದಲ್ಲಿ ಬ್ಯಾಸ್ಕೆಟ್‌ಬಾಲ್‌ ಕ್ರೀಡೆಯನ್ನು ಸೇರಿಸಲು 2011ರಲ್ಲಿ ನಿರ್ಧರಿಸಲಾಯಿತು. ಈ ಬಾರಿ ಎರಡೂ ವಿಭಾಗಗಳಲ್ಲಿ ತಲಾ ಎಂಟು ತಂಡಗಳು ಪಾಲ್ಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT