ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾತಂಕವಾಗಿ ಪರೀಕ್ಷೆಯನ್ನು ಎದುರಿಸಿ

Last Updated 25 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿಮಿತ್ರರೇ, ಇನ್ನು ಎರಡು ಮೂರು ವಾರಗಳಲ್ಲಿ ಬರಲಿರುವ ಪರೀಕ್ಷೆಯನ್ನು ಎದುರಿಸುವ ಅಂತಿಮ ಹಂತದ ಸಿದ್ಧತೆಯಲ್ಲಿ ನೀವು ತೊಡಗಿದ್ದೀರಿ ಅಲ್ಲವೆ? ಪರೀಕ್ಷೆಯ ಬಗ್ಗೆ ಅವ್ಯಕ್ತ ಭಯ ಅಥವಾ ಆತಂಕಕ್ಕೆ ಒಳಗಾಗಿದ್ದೀರಾ? ಖಂಡಿತ ಯಾವುದೇ ಭಯ ಅಥವಾ ಆತಂಕಕ್ಕೆ ಅವಕಾಶ ಮಾಡಿಕೊಡಬೇಡಿ. ಪರೀಕ್ಷೆಯ ಮುಂಚಿನ ಈ ದಿನಗಳಲ್ಲಿನ ನಿಮ್ಮ ಮನಃಸ್ಥಿತಿಯು ಪರೀಕ್ಷೆ ಬರೆಯುವ ದಿನಗಳಲ್ಲಿನ ನಿಮ್ಮ ಅಭಿವ್ಯಕ್ತಿಯ ಮೇಲೆ ಪರಿಣಾಮವನ್ನು ಬೀರುತ್ತದೆ. ಹಾಗಾಗಿ, ನೀವು ಈ ದಿನಗಳಲ್ಲಿ ಆತ್ಮವಿಶ್ವಾಸದಿಂದ, ಸಂಪೂರ್ಣ ಸಿದ್ಧತೆಯಿಂದ ಕ್ರಮಬದ್ಧ ಅಧ್ಯಯನ ಮುಂದುವರೆಸಿದಲ್ಲಿ, ಯಾವ ಆತಂಕವೂ ಇಲ್ಲದೆ ಮುಕ್ತ ಮನಸ್ಸಿನಿಂದ ಬರಲಿರುವ ಪರೀಕ್ಷೆಗಳನ್ನು ಎದುರಿಸಬಹುದು; ಉತ್ತಮ ಅಂಕಗಳನ್ನು ಗಳಿಸಬಹುದು. ಪರೀಕ್ಷೆಯ ಭಯವನ್ನು ದೂರ ಮಾಡುವ ನಿಟ್ಟಿನಲ್ಲಿ ನಿಮ್ಮ ಮಾನಸಿಕ ಸಿದ್ಧತೆಗೆ ನೀವು ಅಳವಡಿಸಿಕೊಳ್ಳಬಹುದಾದ ಕೆಲವು ಸಲಹೆಗಳನ್ನು ನೀಡುವುದೇ ಈ ಲೇಖನದ ಉದ್ದೇಶ.

ಕೊನೆಯ ಹಂತದ ತಯಾರಿ ಹೀಗಿರಲಿ

ಕಳೆದ ಕೆಲವು ವಾರಗಳಿಂದ ಪರೀಕ್ಷೆಗೆ ಸಂಬಂಧಿಸಿದಂತೆ ನಿಮ್ಮ ಅಧ್ಯಯನ ತೀವ್ರಗತಿಯಲ್ಲಿ ಸಾಗುತ್ತಿದೆ ಅಲ್ಲವೆ? ಈ ಹಿಂದಿನ ಒಂದು ಲೇಖನದಲ್ಲಿ ನೀಡಲಾದ ಕೆಲವು ಸಲಹೆಗಳನ್ನು ಬಹುಶಃ ನೀವು ಈಗಾಗಲೇ ಅಳವಡಿಸಿಕೊಂಡಿರಬಹುದು. ಅದರಲ್ಲಿ ಮುಖ್ಯವಾಗಿ, ನೀವು ಅಧ್ಯಯನ ಮಾಡಿದ ಯಾವುದೇ ಅಧ್ಯಾಯದ ಸಾರಾಂಶಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿ ಇಟ್ಟುಕೊಳ್ಳಿ ಎಂದು ಸೂಚಿಸಲಾಗಿತ್ತು, ಅಲ್ಲವೆ? ಈಗ ಪರೀಕ್ಷೆಗೆ ಕೆಲವೇ ದಿನಗಳಿರುವಾಗ ಈ ಸಾರಾಂಶದ ಪಟ್ಟಿಗಳು ನಿಮಗೆ ಹೆಚ್ಚು ಉಪಯೋಗಕ್ಕೆ ಬರುತ್ತವೆ. ಪ್ರತಿಯೊಂದು ವಿಷಯದಲ್ಲಿ ಮತ್ತೆ ಮತ್ತೆ ಇಡೀ ಅಧ್ಯಾಯವನ್ನು ಓದುವಷ್ಟು ಸಮಯ ಈಗ ಇಲ್ಲದಿರುವುದರಿಂದ, ಪಟ್ಟಿ ಮಾಡಿಕೊಂಡಿರುವ ಸಾರಾಂಶಗಳನ್ನು ಪರಿಶೀಲಿಸಿ ನೋಡಿ. ಅದರಲ್ಲಿ ನಿಮಗೆ ಅರ್ಥವಾಗಿರುವ, ನೆನಪಿನಲ್ಲಿರುವ ವಿಷಯಗಳನ್ನು ಬಿಟ್ಟು, ಯಾವ ವಿಷಯಗಳಲ್ಲಿ ನಿಮಗೆ ಸಂದೇಹ ಅಥವಾ ಅಸ್ಪಷ್ಟತೆ ಇದೆಯೋ ಅದನ್ನು ಮಾತ್ರ ಪುನರ್ಮನನ ಮಾಡಿಕೊಳ್ಳಿ. ಈಗ ಉಳಿದಿರುವ ನಿಮ್ಮ ಅಮೂಲ್ಯ ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳಲು ಹಾಗೂ ಅದನ್ನು ಸದುಪಯೋಗ ಪಡಿಸಿಕೊಳ್ಳಲು ಇಂಥ ಪ್ರಕ್ರಿಯೆ ನಿಮಗೆ ನೆರವಾಗುತ್ತದೆ.
ಹೀಗೆ ಪುನರ್ಮನನ ಮಾಡಿಕೊಂಡ ನಂತರ, ಆ ವಿಷಯದಲ್ಲಿನ ಹಿಂದಿನ ಇತ್ತೀಚಿನ ಪ್ರಶ್ನಪತ್ರಿಕೆಗಳನ್ನು ನೋಡಿ ಯಾವ ರೀತಿಯ ಪ್ರಶ್ನೆಗಳನ್ನು ಸಂಬಂಧಿಸಿದ ಅಧ್ಯಾಯದಿಂದ ಕೇಳಲಾಗಿದೆ ಎಂಬುದನ್ನು ಗಮನಿಸಿ. ಪ್ರಶ್ನೆಗಳಿಗೆ ಮೀಸಲಿಟ್ಟಿರುವ ಅಂಕಗಳ ಆಧಾರದ ಮೇಲೆ ಹೇಗೆ ಮತ್ತು ಎಷ್ಟು ಉತ್ತರಿಸಬೇಕು ಎಂಬುದನ್ನು ನಿರ್ಧರಿಸಲು ನಿಮಗೆ ಇದು ಅನುಕೂಲವಾಗುತ್ತದೆ. ಪ್ರತಿಯೊಂದು ವಿಷಯದ ಪ್ರತಿಯೊಂದು ಅಧ್ಯಾಯಕ್ಕೂ ಇದೇ ರೀತಿಯ ತಯಾರಿ ನಡೆಸಿ.

ಸ್ನೇಹಿತರೊಡನೆ, ಶಿಕ್ಷಕರೊಡನೆ ಚರ್ಚಿಸಿ

ನಿಮ್ಮ ಹಾಗೇ ಅಧ್ಯಯನಶೀಲರಾಗಿರುವ ಸಮಾನಮನಸ್ಕ ಗೆಳೆಯರ ಜೊತೆಗೆ ಪ್ರತಿದಿನ ಸಂಜೆ ಒಂದು ಗಂಟೆ ಕಾಲ ಕಳೆಯಿರಿ. ಆ ದಿನ ನೀವು ಓದಿದ ವಿಷಯದ ಬಗ್ಗೆ ಪರಸ್ಪರ ಚರ್ಚೆ ಮಾಡಿ. ಗುಂಪಿನಲ್ಲಿ ಚರ್ಚೆ ನಡೆಸಿ. ನಿಮಗೆ ಅರ್ಥವಾಗಿರುವ ವಿಷಯವನ್ನು ಬೇರೆಯವರಿಗೆ ಹೇಳಿಕೊಡಿ. ನಿಮ್ಮ ಸಂದೇಹವನ್ನು ಬೇರೆಯವರಿಂದ ಪರಿಹರಿಸಿಕೊಳ್ಳಿ. ಇದರಿಂದ ಗುಂಪಿನ ಎಲ್ಲ ಸದಸ್ಯರಿಗೂ ಪ್ರಯೋಜನವಾಗುತ್ತದೆ. ಈ ರೀತಿಯ ಚರ್ಚೆಯಿಂದ ಸಮಯ ವ್ಯರ್ಥವಾಗುತ್ತದೆ ಎಂಬ ಭಾವನೆ ಬೇಡ. ಒಂದು ವೇಳೆ, ಯಾವುದಾದರೂ ವಿಷಯ ಅಥವಾ ಸಿದ್ಧಾಂತದ ಬಗ್ಗೆ ನಿಮಗೆ, ನಿಮ್ಮ ಸ್ನೇಹಿತರಿಗೆ ಸಂದೇಹ ಉಳಿದು ಹೋಗಿದ್ದರೆ, ಸಂಬಂಧಿಸಿದ ನಿಮ್ಮ ಶಿಕ್ಷಕರನ್ನು ಭೇಟಿ ಮಾಡಿ. ಇಲ್ಲವೇ, ಮನೆಯಲ್ಲಿರುವ ಹಿರಿಯರಿಂದ ಸೂಕ್ತ ಪರಿಹಾರವನ್ನು ಪಡೆದುಕೊಳ್ಳಿ. ಈ ವಿಷಯದಲ್ಲಿ ಯಾವುದೇ ಹಿಂಜರಿಕೆ ಬೇಡ.

ವಿಶ್ರಾಂತಿ, ವಿರಾಮ ಅತಿ ಮುಖ್ಯ

ಯಾವುದೇ ಕಾರಣಕ್ಕೂ ಹಲವು ಗಂಟೆಗಳ ಕಾಲ ಸತತವಾಗಿ ಅಧ್ಯಯನ ಮಾಡಬೇಡಿ. ಇದರಿಂದ ನಿಮ್ಮ ಮೆದುಳಿನ ಮೇಲೆ ಅನಗತ್ಯ ಒತ್ತಡ ಬೀಳುತ್ತದೆ. ಪ್ರತಿ ಒಂದು ಗಂಟೆಯ ಅಧ್ಯಯನದ ನಂತರ ಕನಿಷ್ಠ ಐದರಿಂದ ಹತ್ತು ನಿಮಿಷಗಳ ವಿರಾಮ ಪಡೆದುಕೊಳ್ಳಿ. ಸಣ್ಣ ಪುಟ್ಟ ವ್ಯಾಯಾಮ ಮಾಡಿ, ಇಲ್ಲವೇ ಸ್ವಲ್ಪ ಹೊತ್ತು ಓಡಾಡಿ. ಇದರಿಂದ ರಕ್ತಸಂಚಾರ ಉತ್ತಮಗೊಂಡು ಮೆದುಳಿಗೆ ಅಗತ್ಯವಾದ ವಿಶ್ರಾಂತಿ ದೊರಕುತ್ತದೆ. ರಾತ್ರಿ ಬಹಳ ಹೊತ್ತಿನವರೆಗೆ ನಿದ್ದೆಗೆಟ್ಟು ಓದುವುದಕ್ಕಿಂತ, ಬೆಳಿಗ್ಗೆ ಬೇಗ ಎದ್ದು ಓದುವುದು ಬಹಳ ಒಳ್ಳೆಯ ಅಭ್ಯಾಸ. ಪರೀಕ್ಷೆಯ ದಿನಗಳು ಹತ್ತಿರ ಬಂದಂತೆ ನೀವು ಓದುವ ಸಮಯವನ್ನು ಕ್ರಮೇಣ ಹೆಚ್ಚಿಸುತ್ತಾ ಹೋಗುವುದು ಖಂಡಿತ ಒಳ್ಳೆಯದಲ್ಲ. ನೀವು ಕ್ರಮಬದ್ಧವಾಗಿ ಅಧ್ಯಯನ ಮಾಡಿದ್ದರೆ ಈ ಸಮಸ್ಯೆ ಖಂಡಿತ ಉದ್ಭವಿಸುವುದಿಲ್ಲ. ಪರೀಕ್ಷೆ ಸಮೀಪಿಸುತ್ತಿದ್ದಂತೆ ನಿಮ್ಮ ದೇಹಕ್ಕೆ, ವಿಶೇಷವಾಗಿ ಮೆದುಳಿಗೆ ಹೆಚ್ಚಿನ ವಿಶ್ರಾಂತಿ ಅವಶ್ಯವಾಗುತ್ತದೆ. ಪರೀಕ್ಷೆಯ ಪ್ರಾರಂಭದ ಹಿಂದಿನ ದಿನವಂತೂ ಕೊಂಚ ಬೇಗ ಮಲಗಿ, ಬೆಳಿಗ್ಗೆ ಬೇಗ ಎದ್ದು ಸಿದ್ಧರಾಗಿ.

ದೈಹಿಕ ಆರೋಗ್ಯದ ಕಡೆ ಗಮನಕೊಡಿ

ಪರೀಕ್ಷೆಗಳು ಮುಗಿಯುವವರೆಗೂ ನಿಮ್ಮ ಆರೋಗ್ಯವನ್ನು ಸಮಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಅತ್ಯವಶ್ಯ. ಪರೀಕ್ಷಾ ಸಿದ್ಧತೆಯ ಈ ಮುಂದಿನ ದಿನಗಳಲ್ಲಿ ನಿಮ್ಮ ಆಹಾರಪದ್ಧತಿಯಲ್ಲಿ ಹಾಗೂ ಆಹಾರ ಸೇವನೆಯ ಪ್ರಮಾಣದಲ್ಲಿ ಯಾವುದೇ ಮಹತ್ತರವಾದ ಬದಲಾವಣೆ ಮಾಡಿಕೊಳ್ಳಬೇಡಿ. ಸಾಧ್ಯವಾದಷ್ಟೂ ಕುದಿಸಿ, ಆರಿಸಿದ ನೀರನ್ನು ಸೇವಿಸಿ. ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಿ. ಪೌಷ್ಟಿಕವಾದ ಆಹಾರವನ್ನೇ ಸೇವಿಸಿ. ಕಾಫಿ, ಟೀ ಮುಂತಾದ ಪಾನೀಯಗಳ ಸೇವನೆಯನ್ನು ಕಡಿಮೆ ಮಾಡಿ. ನಿಮ್ಮ ದೈಹಿಕ ಆರೋಗ್ಯಕ್ಕೂ ಮಾನಸಿಕ ಆರೋಗ್ಯಕ್ಕೂ ಸಂಬಂಧವಿದೆಯೆಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

ನಿಮ್ಮ ಮನಸ್ಸು ಪ್ರಶಾಂತವಾಗಿರಲಿ

ಪರೀಕ್ಷಾ ಸಿದ್ಧತೆಯ ಈ ದಿನಗಳಲ್ಲಿ ನಿಮ್ಮ ಮನಸ್ಸು ನಿರ್ಮಲವಾಗಿ, ಪ್ರಶಾಂತವಾಗಿ ಇರಬೇಕು. ಅದಕ್ಕೆ ಪೂರಕವಾಗಿ ನಿಮ್ಮ ವರ್ತನೆ ಇರಬೇಕು. ಯಾವುದೇ ಕಾರಣಕ್ಕೂ ಮನಸ್ಸಿಗೆ ಘಾಸಿಯಾಗುವಂಥ ಘಟನೆಗಳಲ್ಲಿ ಪಾಲ್ಗೊಳ್ಳಬೇಡಿ. ಯಾರ ಜೊತೆಗೂ ಅನವಶ್ಯ ಕಲಹ ಬೇಡ. ಉದ್ವೇಗಕ್ಕೆ ಒಳಗಾಗಬೇಡಿ. ಅಂಥ ಯಾವುದೇ ಸಂದರ್ಭ ಅಕಸ್ಮಾತ್ ಎದುರಾದಲ್ಲಿ, ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ನಿಮ್ಮ ಮನಸ್ಸು ಪ್ರಶಾಂತವಾಗಿದ್ದರೆ, ನಿಮ್ಮ ಆತ್ಮವಿಶ್ವಾಸಕ್ಕೆ ಯಾವುದೇ ಕುಂದು ಬರುವುದಿಲ್ಲ ಹಾಗೂ ನಿಮ್ಮ ಏಕಾಗ್ರತೆಗೆ ಭಂಗ ಉಂಟಾಗುವುದಿಲ್ಲ. ನೀವು ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ, ಪರೀಕ್ಷೆ ಮುಗಿಯುವವರೆಗೆ ನಿಮ್ಮ ಮನಸ್ಸನ್ನು ಕೆಡಿಸುವ ಮೊಬೈಲ್, ಲ್ಯಾಪ್‍ಟಾಪ್ ಮುಂತಾದ ಎಲೆಕ್ಟ್ರಾನಿಕ್‌ ಉಪಕರಣಗಳ ಬಳಕೆಯನ್ನು ನಿಲ್ಲಿಸುವುದು. ನಿಮ್ಮ ವಿದ್ಯಾರ್ಥಿಜೀವನಕ್ಕೆ ಅವು ಅನಿವಾರ್ಯವಲ್ಲ.

ಬೇಕಾದ ಸಿದ್ಧತೆ ಮಾಡಿಕೊಳ್ಳಿ

ನಿಮ್ಮ ಪರೀಕ್ಷೆ ಪ್ರಾರಂಭವಾಗುವ ಒಂದು ದಿನ ಮುಂಚಿತವಾಗಿಯೇ ಅತ್ಯಂತ ಅವಶ್ಯವಾದ ಕೆಲವು ಸಿದ್ಧತೆಗಳನ್ನು ನೀವು ಮಾಡಿಕೊಳ್ಳಬೇಕು. ಬಹು ಮುಖ್ಯವಾಗಿ, ಪರೀಕ್ಷಾ ಕೊಠಡಿಗೆ ನಿಮ್ಮೊಂದಿಗೆ ಕೊಂಡೊಯ್ಯಬೇಕಾದ ವಸ್ತುಗಳು. ಪರೀಕ್ಷೆಯ ಪ್ರವೇಶ ಪತ್ರ, ಚೆನ್ನಾಗಿ ಬರೆಯುವ ಎರಡು ಪೆನ್‍ಗಳು, ಪೆನ್ಸಿಲ್, ರಬ್ಬರ್, ಇವುಗಳನ್ನು ತೆಗೆದಿರಿಸಿಕೊಳ್ಳಿ. ಪರೀಕ್ಷೆಯ ದಿನ ಬೆಳಿಗ್ಗೆ ಮನೆಯಿಂದ ಹೊರಡುವ ಮುನ್ನ ಮರೆಯದೆ ಇವುಗಳನ್ನು ನಿಮ್ಮ ಜೊತೆ ತೆಗೆದುಕೊಂಡು ಹೋಗಿ. ಅಗತ್ಯ ಬಿದ್ದರೆ, ನಿಮ್ಮ ಪೋಷಕರಿಗೆ ನೆನಪು ಮಾಡುವಂತೆ ಹೇಳಿ. ಅಂಥ ಯಾವುದೇ ವಸ್ತುವನ್ನು ಮರೆತು ಹೋದರೆ ಪರೀಕ್ಷಾ ಕೊಠಡಿಯಲ್ಲಿ ಅನವಶ್ಯ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಅವಶ್ಯ ಇರುವ ದಿನ ಜ್ಯಾಮಿಟ್ರಿ ಬಾಕ್ಸ್, ಮತ್ತು ಸರಳ ಕ್ಯಾಲ್ಕ್ಯುಲೇಟರ್ ಕೊಂಡೊಯ್ಯಲು ಮರೆಯಬೇಡಿ. ಹಿಂದಿನ ದಿನವೇ ಅವುಗಳನ್ನೂ ತೆಗೆದಿಟ್ಟುಕೊಳ್ಳಲು ಮರೆಯಬೇಡಿ.

ವಿದ್ಯಾರ್ಥಿಗಳೇ, ಏಕಾಗ್ರತೆಯಿಂದ ಕೂಡಿದ ಶಿಸ್ತುಬದ್ಧ ಅಧ್ಯಯನ, ಈಗಾಗಲೇ ಓದಿರುವ ವಿಷಯಗಳ ಪುನರ್ಮನನ, ಇವೆರಡೂ ನಿಮ್ಮ ಅಂತಿಮ ಹಂತದ ಪರೀಕ್ಷಾ ಸಿದ್ಧತೆಯ ಪ್ರಮುಖ ಅಂಶಗಳು. ಪೂರಕವಾಗಿ ಬೇಕಾಗುವುದು ನಿರ್ಮಲವಾದ ಮನಸ್ಸು. ಇವುಗಳೊಂದಿಗೆ ಬರಲಿರುವ ಪರೀಕ್ಷೆಯನ್ನು ನಿರಾತಂಕವಾಗಿ ಎದುರಿಸಲು ಸೂಕ್ತವಾದ ವಾತಾವರಣವನ್ನು ನಿರ್ಮಿಸಿಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ.
***
ಪೋಷಕರ ಪಾತ್ರವೂ ಮುಖ್ಯ

ತಮ್ಮ ಮಕ್ಕಳ ಪರೀಕ್ಷೆಯ ದಿನಗಳು ಹತ್ತಿರ ಬಂದಂತೆ ಪೋಷಕರಲ್ಲಿಯೂ ಒಂದು ರೀತಿಯ ಆತಂಕ, ತಳಮಳ ಕಂಡುಬರುವುದು ಸಹಜವೇ. ನಿಮ್ಮ ಮಗುವಿನ ಪರೀಕ್ಷಾ ಸಿದ್ಧತೆಯ ಪ್ರಕ್ರಿಯೆಯಲ್ಲಿ ನೀವೂ ಪೂರಕವಾಗಿ ನಿಮ್ಮ ಸಹಕಾರ ನೀಡುವುದು ಅತ್ಯವಶ್ಯ. ಮಕ್ಕಳ ಪರೀಕ್ಷಾ ಸಿದ್ಧತೆಯ ಪ್ರಕ್ರಿಯೆಯ ಮೇಲೆ ನೀವು ನಿಗಾ ವಹಿಸುವುದಷ್ಟೇ ಅಲ್ಲ, ಅವರ ಆರೋಗ್ಯದ ಕಡೆಯೂ ಗಮನ ಹರಿಸಿ. ಸಾಕಷ್ಟು ವಿಶ್ರಾಂತಿ ಪಡೆಯುವಂತೆ ನೋಡಿಕೊಳ್ಳಿ. ಅವರಿಗೆ ಕ್ಲುಪ್ತ ಸಮಯಕ್ಕೆ ಪೌಷ್ಟಿಕ ಆಹಾರ ಒದಗಿಸಿ. ಈ ಸಮಯದಲ್ಲಿ ಅವರ ಮನಸ್ಸಿನ ಮೇಲೆ ಪರಿಣಾಮ ಬೀರುವ ಯಾವುದೇ ಘಟನೆಗಳು ನಡೆಯದಂತೆ ನೋಡಿಕೊಳ್ಳಿ. ಅವರು ಯಾವುದೇ ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ನಿಗಾ ವಹಿಸಿ. ಅವರ ಮೇಲೆ ನೀವೂ ಯಾವುದೇ ರೀತಿಯ ಒತ್ತಡ ಹಾಕಬೇಡಿ. ಪರೀಕ್ಷೆಯ ದಿನದಂದು ಕೊಂಡೊಯ್ಯಬೇಕಾದ ವಸ್ತುಗಳನ್ನೆಲ್ಲ ಸರಿಯಾಗಿ, ಸಿದ್ದವಾಗಿಟ್ಟುಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ. ಸಾಧ್ಯವಾದಷ್ಟೂ ಪರೀಕ್ಷೆಯ ದಿನಗಳಂದು ಪರೀಕ್ಷಾ ಕೇಂದ್ರಕ್ಕೆ ನೀವೇ ಕರೆದುಕೊಂಡು ಹೋಗಿ ಹಾಗೂ ವಾಪಸ್ ಕರೆದುಕೊಂಡು ಬನ್ನಿ. ಈ ದಿನಗಳಲ್ಲಿ ನೀವು ಅವರ ಜೊತೆಯಲ್ಲಿ ಇದ್ದಲ್ಲಿ, ಅವರ ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ಇಮ್ಮಡಿಯಾಗುತ್ತದೆ. ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯ ಯಶಸ್ಸು ಸೂಕ್ತ ಹಾಗೂ ಸಮರ್ಥ ಅಧ್ಯಯನದ ಜೊತೆಗೆ ಮಾನಸಿಕ ಒತ್ತಡವಿಲ್ಲದ ವಾತಾವರಣದ ಮೇಲೆಯೂ ಅವಲಂಬಿತವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT