ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯ, ಪ್ರತಿಭೆಗಳ ಸಮ್ಮಿಲನ

Last Updated 25 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಕೆಲವು ನಟಿಯರಲ್ಲಿ ಸೌಂದರ್ಯ ಇರುತ್ತದೆ, ಆದರೆ ಪ್ರತಿಭೆ ಇರುವುದಿಲ್ಲ. ಕೆಲವರಲ್ಲಿ ಪ್ರತಿಭೆ ಇರುತ್ತದೆ, ಸೌಂದರ್ಯ ಇರುವುದಿಲ್ಲ. ಈ ಎರಡೂ ಒಟ್ಟೊಟ್ಟಿಗೇ ಇರುವವರು ತೀರಾ ಅಪರೂಪ. ಅಂಥ ಅಪರೂಪದವರ ಸಾಲಿನಲ್ಲಿ ನಿಲ್ಲುವ ನಟಿ ಶ್ರೀದೇವಿ. ಅವರು ಅದ್ಭುತ ಸೌಂದರ್ಯವತಿ. ಅಷ್ಟೇ ಪ್ರತಿಭಾವಂತೆಯೂ ಆಗಿದ್ದರು. ಯಾವುದೇ ನಟ/ನಟಿಗೆ ಅಭಿನಯದಲ್ಲಿ ಕಣ್ಣು ತುಂಬಾ ಮುಖ್ಯ. ಶ್ರೀದೇವಿ ಅವರ ಕಣ್ಣುಗಳಲ್ಲಿ ವಿಶೇಷವಾದ ಆಕರ್ಷಣೆ ಇತ್ತು. ಹಾಗೆಯೇ ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ಅಭಿನಯದಲ್ಲಿ ಬಳಸಿಕೊಳ್ಳುವ ಕಲೆಯೂ ಅವರಿಗೆ ತಿಳಿದಿತ್ತು.

ನಾನು ಶ್ರೀದೇವಿ ಅವರನ್ನು ಮೊದಲು ನೋಡಿದ್ದು ಮೈಸೂರಿನ ಪ್ರೀಮಿಯರ್ ಸ್ಟುಡಿಯೊದಲ್ಲಿ. ಅದು 1972 ಅಥವಾ 73ರಲ್ಲಿರಬೇಕು. ನಿರ್ಮಾಪಕ ಪ್ರಕಾಶ್ ರಾವ್ ಅವರ ಸಿನಿಮಾದಲ್ಲಿ ನಟಿಸಲಿಕ್ಕಾಗಿ ಅವರು ಮೈಸೂರಿಗೆ ಬಂದಿದ್ದರು. ನಂತರ ಅಂಬರೀಷ್ ಅವರ ಒಂದು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆಗಲೂ ನಾನೊಮ್ಮೆ ಭೇಟಿಯಾಗಿದ್ದೆ. ಆದರೆ ಆಗೆಲ್ಲ ನಸುನಗೆಯ ಪರಿಚಯವಷ್ಟೆ.

ನಾನು ಅವರ ಜತೆ ಹತ್ತಿರದಿಂದ ಒಡನಾಡಿದ್ದು ‘ಬಂಧನ’ ಸಿನಿಮಾ ಬಿಡುಗಡೆಯಾದ ನಂತರ. ಆ ಸಿನಿಮಾವನ್ನು ಹಿಂದಿಯಲ್ಲಿ ಮಾಡಬೇಕು ಮತ್ತು ಅದರಲ್ಲಿ ನಟಿಸಬೇಕು ಎಂದು ಅವರು ಇಷ್ಟಪಟ್ಟಿದ್ದರು. ಆ ಸಿನಿಮಾವನ್ನು ಬೆಂಗಳೂರಿಗೆ ಬಂದು ನೋಡಿಕೊಂಡು ಹೋಗಿದ್ದರು.

ನಂತರ ನಾನು ಮುಂಬೈಗೆ ಹೋಗಿ ಅವರಿಗೆ ಕಥೆ ಹೇಳಿದ್ದೆ. ಒಂದೊಂದು ಡೈಲಾಗ್‍ಗಳನ್ನೂ ಆಸಕ್ತಿಯಿಂದ ಕೇಳಿಸಿಕೊಂಡ ಅವರ ಕಣ್ಣಿನಲ್ಲಿ ನೀರು ಜಿನುಗಿದ್ದು ನನಗೆ ಇನ್ನೂ ನೆನಪಿದೆ. ಒಂದು ಕಥೆಗೆ, ಪಾತ್ರಕ್ಕೆ, ಸನ್ನಿವೇಶಕ್ಕೆ ಅವರು ಅಷ್ಟು ಆಪ್ತವಾಗಿ ಸ್ಪಂದಿಸುತ್ತಿದ್ದರು. ಆ ಚಿತ್ರವನ್ನು ರಾಜೇಶ ಖನ್ನಾ ಅವರ ಜತೆ ಮಾಡಬೇಕು ಅಂತ ಅಂದುಕೊಂಡಿದ್ದೆವು. ಆದರೆ ಡೇಟ್ಸ್ ಹೊಂದಾಣಿಕೆ ಆಗಲೇ ಇಲ್ಲ.

ನಂತರ ನಾನು ಅಮಿತಾಭ್ ಬಚ್ಚನ್ ಅವರನ್ನು ಹಾಕಿಕೊಂಡು ಒಂದು ಸಿನಿಮಾ ಮಾಡಬೇಕಾಗಿತ್ತು. ಆಗ ಅಮಿತಾಭ್ ಮತ್ತು ಶ್ರೀದೇವಿ ಜೋಡಿ ತುಂಬ ಜನಪ್ರಿಯವಾಗಿತ್ತು. ಈ ಸಿನಿಮಾದಲ್ಲಿಯೂ ಶ್ರೀದೇವಿ ಅವರನ್ನೇ ನಾಯಕಿಯನ್ನಾಗಿ ಹಾಕಿಕೊಳ್ಳಬೇಕು ಎಂದು ನಿರ್ಧರಿಸಿದ್ದೆವು. ಆದರೆ ನಮ್ಮ ದುರದೃಷ್ಟಕ್ಕೆ ಅದೇ ಸಮಯದಲ್ಲಿ ಅಮಿತಾಭ್‌ ಅವರಿಗೆ ಆಕ್ಸಿಡೆಂಟ್ ಆಗಿಬಿಡ್ತು. ಆದ್ದರಿಂದ ಆ ಸಿನಿಮಾ ಕೂಡ ಮುಂದಕ್ಕೆ ಹೋಯಿತು.

ಅದಾದ ಹಲವು ವರ್ಷಗಳ ನಂತರ ಎಚ್.ಕೆ. ಅನಂತರಾಮ್ ಅವರ ‘ಅಪೂರ್ವ’ ಎಂಬ ಕಾದಂಬರಿಯನ್ನು ಸಿನಿಮಾ ಮಾಡಬೇಕು ಎಂದು ನಾನು ಸಿದ್ಧತೆ ಮಾಡಿಕೊಂಡಿದ್ದೆ. ಅದನ್ನು ಕನ್ನಡ, ತೆಲುಗು, ತಮಿಳು ಮೂರೂ ಭಾಷೆಯಲ್ಲಿ ಮಾಡಿ ಶ್ರೀದೇವಿ ಅವರನ್ನು ನಾಯಕಿಯನ್ನಾಗಿ ಯಾಕೆ ಮಾಡಿಕೊಳ್ಳಬಾರದು ಎಂಬ ಆಲೋಚನೆ ಬಂದು ಶ್ರೀದೇವಿ ಅವರನ್ನು ಸಂಪರ್ಕಿಸಿದ್ದೆ. ಅವರಿಗೆ ಆ ಕಥೆ ತುಂಬ ಇಷ್ಟವಾಗಿತ್ತು. ಆದರೆ ಅಷ್ಟರಲ್ಲಾಗಲೇ ಅವರು ಗರ್ಭಿಣಿಯಾಗಿದ್ದರು. ಇಷ್ಟೊಂದು ಸವಾಲಿನ, ದೈಹಿಕ ಶ್ರಮವನ್ನು ಬೇಡುವ ಪಾತ್ರವನ್ನು ಮಾಡುವುದು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ.

ನಾನು ಬೋನಿ ಕಪೂರ್ ಅವರ ಸಿನಿಮಾಗಳಿಗೆಲ್ಲ ಕರ್ನಾಟಕದಲ್ಲಿ ಹಲವು ಲೊಕೆಶನ್ ಹುಡುಕಿಕೊಟ್ಟಿದ್ದೆ. ಆದ್ದರಿಂದ ಶ್ರೀದೇವಿ ಮತ್ತು ಬೋನಿಕಪೂರ್ ಇಬ್ಬರೂ ನನಗೆ ಆಪ್ತರಾಗಿದ್ದರು. ನನ್ನ ಸಿನಿಮಾಗಳಿಗೆ ಮುಂಬೈನಲ್ಲಿ ಕೆಲಸ ಮಾಡುವ ಹರೀಶ್ ಸಿಂಗ್ ಅವರು ಶ್ರೀದೇವಿ ಅವರಿಗೂ ಮ್ಯಾನೇಜರ್ ಆಗಿದ್ದರು. ಹಾಗಾಗಿ ಅವರ ಮೂಲಕವೂ ನಾವು ಆಗೀಗ ಭೇಟಿ ಮಾಡುತ್ತಿದ್ದೆವು. ಅವರು ತುಂಬ ಸರಳ ವ್ಯಕ್ತಿತ್ವದವರು. ನಾನು ದೊಡ್ಡ ನಟಿ ಎಂಬ ಅಹಂಕಾರವಾಗಲೀ, ಜನಪ್ರಿಯತೆಯ ಬಿಗುಮಾನವಾಗಲಿ ಇರಲಿಲ್ಲ. ಸೌಮ್ಯ ಸ್ವಭಾವದ ಅವರು ಎಲ್ಲರೊಂದಿಗೂ ಬೆರೆಯುತ್ತಿದ್ದರು. ಇವೆಲ್ಲವನ್ನೂ ಹೊರತುಪಡಿಸಿ ಅವರೊಬ್ಬ ಅತ್ಯುತ್ಕೃಷ್ಟ ನಟಿಯಾಗಿದ್ದರು.

ಕನ್ನಡದ ಕೆಲವು ಸಿನಿಮಾಗಳಲ್ಲಿಯೂ ಅವರು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರನ್ನೇ ಮುಖ್ಯಪಾತ್ರದಲ್ಲಿ ಹಾಕಿಕೊಂಡು ಸಿನಿಮಾ ಮಾಡು
ವುದು ಕನ್ನಡ ಚಿತ್ರಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ಅಷ್ಟು ಬೇಡಿಕೆಯ ನಟಿ ಅವರು. ಅವರ ಸಂಭಾವನೆಯೂ ಅಷ್ಟೇ ದುಬಾರಿ ಆಗಿತ್ತು.

ಅವರಿಗೆ ಯಾರೂ ಶತ್ರುಗಳೇ ಇರಲಿಲ್ಲ. ಅವರ ವ್ಯಕ್ತಿತ್ವವೇ ಹಾಗಿತ್ತು. ಅಸಂಖ್ಯ ಮಹಿಳಾ ಅಭಿಮಾನಿಗಳು ಇದ್ದರು. ಯಾವುದೇ ಕಲಾವಿದನಾಗಲಿ ಕಲಾವಿದೆಯಾಗಲಿ ಮಹಿಳಾ ಅಭಿಮಾನಿಗಳು ಇದ್ದರೆ ಅವರ ಸಿನಿಮಾಗಳು ಗೆಲ್ಲುತ್ತವೆ. ಶ್ರೀದೇವಿಗೆ ಅಂಥ ಅಭಿಮಾನಿಗಳ ದೊಡ್ಡ ಸಮೂಹವೇ ಇತ್ತು. ಅವರ ನಟನೆಯ ಅಧ್ಯಾಯ ಮುಗಿಯಿತು ಎನ್ನುವಷ್ಟರಲ್ಲಿಯೇ ಮತ್ತೆ ‘ಇಂಗ್ಲಿಷ್ ವಿಂಗ್ಲಿಷ್’ನಂಥ ಸಿನಿಮಾದ ಮೂಲಕ ಮರಳಿದ್ದರು. ಮತ್ತಷ್ಟು ಸಿನಿಮಾ
ಗಳಲ್ಲಿ ಅಭಿನಯಿಸುವ ಶಕ್ತಿ ಸತ್ವ ಎರಡೂ ಅವರಲ್ಲಿತ್ತು.

ಖಂಡಿತ ಅವರದು ಸಾಯುವ ವಯಸ್ಸಲ್ಲ. ಅವರನ್ನು ಕಳೆದುಕೊಂಡಿದ್ದು ದೊಡ್ಡ ನಷ್ಟ.

ಎಸ್.ವಿ. ರಾಜೇಂದ್ರಸಿಂಗ್ ಬಾಬು ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT