ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿಗೆ ಐಸಿಸಿ ಟೆಸ್ಟ್‌ ರಾಜದಂಡ

ಭಾರತ ತಂಡ ಐಸಿಸಿ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದಕ್ಕೆ ಈ ಗೌರವ
Last Updated 25 ಫೆಬ್ರುವರಿ 2018, 20:20 IST
ಅಕ್ಷರ ಗಾತ್ರ

ಕೇಪ್‌ಟೌನ್‌: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಶನಿವಾರ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ನ ‘ರಾಜದಂಡ’ ಸ್ವೀಕರಿಸಿದರು.

ಟೆಸ್ಟ್‌ ತಂಡಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ (ಏಪ್ರಿಲ್‌ 3ರ ಅವಧಿಯೊಳಗೆ) ತಂಡಗಳಿಗೆ ಐಸಿಸಿ ಪ್ರತಿವರ್ಷ ಇದನ್ನು ನೀಡುತ್ತದೆ. ಹೋದ ವರ್ಷವೂ ಭಾರತ ಈ ಪ್ರಶಸ್ತಿಗೆ ಭಾಜನವಾಗಿತ್ತು. ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ತಂಡಗಳ ನಡುವೆ ಟೆಸ್ಟ್‌ ಸರಣಿ ನಡೆಯಲಿದೆ. ಇದರಲ್ಲಿ ಯಾರೇ ಪ್ರಶಸ್ತಿ ಗೆದ್ದರೂ ಭಾರತವನ್ನು ಹಿಂದಿಕ್ಕಲು ಸಾಧ್ಯವಿಲ್ಲ. ಹೀಗಾಗಿ ಒಂದು ತಿಂಗಳು ಮುಂಚಿತವಾಗಿಯೇ ಪ್ರಶಸ್ತಿ ನೀಡಲಾಗಿದೆ.

ಹೋದ ತಿಂಗಳು ಜೊಹಾನ್ಸ್‌ಬರ್ಗ್‌ ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಗೆದ್ದಿತ್ತು. ಈ ಮೂಲಕ ಕೊಹ್ಲಿ ಬಳಗ ಒಟ್ಟು ರ‍್ಯಾಂಕಿಂಗ್‌ ಪಾಯಿಂಟ್ಸ್ ಅನ್ನು 121ಕ್ಕೆ ಹೆಚ್ಚಿಸಿಕೊಂಡಿತ್ತು. 2016ರ ಅಕ್ಟೋಬರ್‌ನಿಂದಲೂ ತಂಡ ಮೊದಲ ಸ್ಥಾನ ಕಾಪಾಡಿಕೊಂಡಿತ್ತು.

ಶನಿವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟ್ವೆಂಟಿ–20 ಪಂದ್ಯದಲ್ಲಿ ಭಾರತ ಗೆದ್ದ ಬಳಿಕ ಹಿರಿಯ ಆಟಗಾರರಾದ ಸುನಿಲ್‌ ಗಾವಸ್ಕರ್‌ ಮತ್ತು ಗ್ರೆಮ್ ಪೊಲಾಕ್‌ ಅವರು ಐಸಿಸಿ ಪರವಾಗಿ ಕೊಹ್ಲಿಗೆ ರಾಜದಂಡ ನೀಡಿದರು. ತಂಡ ₹ 6.5 ‌ಕೋಟಿ ಬಹು ಮಾನವನ್ನೂ ಜೇಬಿಗಿಳಿಸಿಕೊಂಡಿತು.

ಮಹೇಂದ್ರ ಸಿಂಗ್‌ ದೋನಿ ನಾಯಕರಾಗಿದ್ದಾಗ ಭಾರತ, ದೀರ್ಘ ಅವಧಿಯವರೆಗೆ (ನವೆಂಬರ್‌ 2009ರಿಂದ ಆಗಸ್ಟ್‌ 2011) ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿತ್ತು.

ಸ್ಟೀವ್ ವಾ, ರಿಕಿ ಪಾಂಟಿಂಗ್‌, ಮೈಕಲ್‌ ಕ್ಲಾರ್ಕ್‌ ಮತ್ತು ಸ್ಟೀವ್‌ ಸ್ಮಿತ್‌ (ಎಲ್ಲರೂ ಆಸ್ಟ್ರೇಲಿಯಾ), ಆ್ಯಂಡ್ರ್ಯೂ ಸ್ಟ್ರಾಸ್‌ (ಇಂಗ್ಲೆಂಡ್‌), ಗ್ರೇಮ್‌ ಸ್ಮಿತ್‌ ಮತ್ತು ಹಾಶೀಮ್‌ ಆಮ್ಲಾ (ಇಬ್ಬರೂ ದಕ್ಷಿಣ ಆಫ್ರಿಕಾ) ಮತ್ತು ಮಿಸ್ಬಾ ಉಲ್‌ ಹಕ್‌ (ಪಾಕಿಸ್ತಾನ) ಅವರು ಈ ಮೊದಲು ರಾಜದಂಡ ಪಡೆದಿದ್ದರು.

‘ಹಿಂದಿನ ಕೆಲ ಟೆಸ್ಟ್‌ ಸರಣಿಗಳಲ್ಲಿ ನಮ್ಮ ಆಟಗಾರರು ಶ್ರೇಷ್ಠ  ಆಟವಾಡಿದ್ದರಿಂದ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಗಳಿಸಲು ಸಾಧ್ಯವಾಗಿದೆ’ ಎಂದು ಕೊಹ್ಲಿ ಹೇಳಿದ್ದಾರೆ. ‘ಕ್ರಿಕೆಟ್‌ನ ಮೂರೂ ಮಾದರಿ ಗಳಲ್ಲೂ ಯಶಸ್ಸಿನ ಶಿಖರಕ್ಕೇರುವುದು ತುಂಬಾ ಕಷ್ಟ. ಹಲವು ಸವಾಲುಗಳ ನಡುವೆಯೂ ನಾವು ಈ ಸಾಧನೆ ಮಾಡಿದ್ದೇವೆ. ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ’ ಎಂದು ವಿರಾಟ್‌, ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಒಬ್ಬರಿಂದಲೇ ತಂಡವನ್ನು ಯಶಸ್ಸಿ ನತ್ತ ಕೊಂಡೊಯ್ಯಲು ಸಾಧ್ಯವಿಲ್ಲ. ಈ ಸಾಧನೆಯ ಶ್ರೇಯ ಎಲ್ಲಾ ಆಟಗಾರರು ಮತ್ತು ತಂಡದ ನೆರವು ಸಿಬ್ಬಂದಿಗಳಿಗೆ ಸಲ್ಲಬೇಕು. ಎಲ್ಲರ ಬದ್ಧತೆ ಮತ್ತು ಪರಿಶ್ರಮದಿಂದ ನಾವು ವಿಶ್ವದ ಶ್ರೇಷ್ಠ ತಂಡವಾಗಿ ಬೆಳೆಯುತ್ತಿದ್ದೇವೆ. ನಮ್ಮನ್ನು ಬೆಂಬಲಿಸಿರುವ ಅಭಿಮಾನಿಗಳಿಗೂ ಆಭಾರಿಯಾಗಿದ್ದೇನೆ’ ಎಂದರು.

‘ಹಿಂದಿನ ಕೆಲ ವರ್ಷಗಳಿಂದ ಭಾರತ, ಟೆಸ್ಟ್‌ನಲ್ಲಿ ಅಮೋಘ ಆಟ ಆಡುತ್ತಿದೆ. ಎರಡನೇ ಬಾರಿಗೆ ರಾಜದಂಡ ಸ್ವೀಕರಿಸುತ್ತಿರುವ ಭಾರತ ತಂಡಕ್ಕೆ ಅಭಿನಂದನೆಗಳು’ ಎಂದು ಐಸಿಸಿ ಮುಖ್ಯ ಕಾರ್ಯನಿರ್ಹಹಣಾ ಅಧಿಕಾರಿ ಡೇವಿಡ್‌ ರಿಚರ್ಡ್‌ಸನ್‌ ತಿಳಿಸಿದ್ದಾರೆ.

*

₹ 6.5 ‌ಕೋಟಿ ಬಹುಮಾನವನ್ನೂ ಜೇಬಿಗಿಳಿಸಿಕೊಂಡ ಭಾರತ ತಂಡ

ವಿರಾಟ್‌ ಕೊಹ್ಲಿ ಪಡೆ ಹೋದ ವರ್ಷವೂ ಈ ಗೌರವಕ್ಕೆ ಭಾಜನವಾಗಿತ್ತು

ಭಾರತ ತಂಡ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ 121 ಪಾಯಿಂಟ್ಸ್‌ ಹೊಂದಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT