ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾದ ಬಾಲಿವುಡ್‌ ‘ಚಾಂದನಿ’

Last Updated 25 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಮುಂಬೈ: ಬಹುಭಾಷಾ ನಟಿ ಹಾಗೂ ಮೋಹಕ ತಾರೆ ಶ್ರೀದೇವಿ (54) ಅವರು ಶನಿವಾರ ರಾತ್ರಿ ದುಬೈನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಹತ್ತಿರದ ಸಂಬಂಧಿ ಮೊಹಿತ್‌ ಮಾರ್ವಾ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮ್ಮ ಪತಿ ಬೋನಿ ಕಪೂರ್ ಹಾಗೂ ಕಿರಿಯ ಪುತ್ರಿ ಖುಷಿ ಜೊತೆ ಅವರು ಬುಧವಾರ ದುಬೈಗೆ ತೆರಳಿದ್ದರು.

ಹೋಟೆಲ್‌ನ ಸ್ನಾನಗೃಹದಲ್ಲಿ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

ಸೋಮವಾರ ವಿಶೇಷ ವಿಮಾನದ ಮೂಲಕ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಾಗುವುದು. ಯುಎಇನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಕಪೂರ್‌ ಕುಟುಂಬಕ್ಕೆ ನೆರವು ನೀಡುತ್ತಿದೆ ಎಂದು ರಾಯಭಾರಿ ನವದೀಪ್‌ ಸೂರಿ ತಿಳಿಸಿದ್ದಾರೆ.

ಮುಂಬೈನಲ್ಲಿ ಶವಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದ್ದು, ಮೃತದೇಹ ಬಂದ ನಂತರ ಅಂತ್ಯಸಂಸ್ಕಾರ ನಡೆಸುವ ದಿನವನ್ನು ನಿರ್ಧರಿಸಲಾಗುವುದು ಎಂದು ಕಪೂರ್‌ ಕುಟುಂಬ ಹೇಳಿದೆ.

ತೊಂದರೆ ಇರಲಿಲ್ಲ: ‘ಶ್ರೀದೇವಿ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇರಲಿಲ್ಲ. ಕುಟುಂಬದಲ್ಲೂ ಯಾರಿಗೂ ಇಂತಹ ಸಮಸ್ಯೆ ಇರಲಿಲ್ಲ’ ಎಂದು ಬೋನಿ ಕಪೂರ್‌ ಅವರ ಕಿರಿಯ ಸಹೋದರ ಸಂಜಯ್ ಕಪೂರ್‌ ಸ್ಪಷ್ಟಪಡಿಸಿದ್ದಾರೆ.

ಸಾವಿನ ಸುದ್ದಿ ತಿಳಿದ ತಕ್ಷಣ ಶನಿವಾರ ಬೆಳಿಗ್ಗೆ ಅವರು ದುಬೈಗೆ ಧಾವಿಸಿದ್ದಾರೆ. ಮರಣೋತ್ತರ ಪರೀಕ್ಷೆ ಈಗಾಗಲೇ ಮುಗಿದಿದ್ದು, ವರದಿಗಾಗಿ ಕುಟುಂಬ ವರ್ಗ ಕಾಯುತ್ತಿದೆ. ಉದ್ಯಮಿ ಅನಿಲ್‌ ಅಂಬಾನಿ ಅವರು ಶವ ತರಲು ದುಬೈಗೆ ವಿಶೇಷ ವಿಮಾನ ಕಳಿಸಿದ್ದಾರೆ.

ಬಾಲಿವುಡ್ ಮತ್ತು ದಕ್ಷಿಣ ಭಾರತದ ಭಾಷೆಗಳ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಶ್ರೀದೇವಿ ಅಭಿನಯಿಸಿದ್ದರು. ಐದು ಬಾರಿ ಫಿಲಂ ಫೇರ್ ಪ್ರಶಸ್ತಿ ಪಡೆದಿದ್ದರು. 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ದೊರೆತಿತ್ತು.

ಆರು ಕನ್ನಡ ಚಿತ್ರಗಳಲ್ಲಿ ಅಭಿನಯ

ಆರು ಕನ್ನಡ ಸಿನಿಮಾಗಳಲ್ಲೂ ಶ್ರೀದೇವಿ ನಟಿಸಿದ್ದರು. ಡಾ. ರಾಜಕುಮಾರ್‌ ಅವರು ನಟಿಸಿದ್ದ ಕನ್ನಡದ ಭಕ್ತಕುಂಬಾರದಲ್ಲಿ ಅವರು ಬಾಲನಟಿಯಾಗಿ ಅಭಿನಯಿಸಿದ್ದರು. ಹೆಣ್ಣು ಸಂಸಾರದ ಕಣ್ಣು, ಬಾಲಭಾರತ, ಯಶೋಧ ಕೃಷ್ಣ, ಸಂಪೂರ್ಣ ರಾಮಾಯಣ, ಪ್ರಿಯಾ ಚಿತ್ರಗಳಲ್ಲಿ ನಟಿಸಿದ್ದರು.

ಹೆಣ್ಣು ಸಂಸಾರದ ಕಣ್ಣು ಎಂಬ ಚಿತ್ರದಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ರಜನಿಕಾಂತ್, ಅಂಬರೀಷ್ ನಟಿಸಿದ್ದ ‘ಪ್ರಿಯಾ’ ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT