ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಲಲ್ಲ ಇದು ನೀರಿನ ಕೊಳವೆ

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಕನಿಷ್ಠ ನೀರನ್ನು ಬಳಸಿ ಕೃಷಿಕರ ಆದಾಯವನ್ನು ಹೆಚ್ಚಿಸುವ ಹೊಸ ಮಾರ್ಗವೇನಾದರೂ ಇದೆಯೇ? ಇದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಆಲೋಚನೆಗೆ ತೊಡಗಿಕೊಂಡವರು ಎಕ್ಙಾ ಗ್ರೀನ್‌ ಸೊಲ್ಯೂಷನ್ಸ್‌ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ರಿಷಭ್‌ ಎಸ್‌.

ಪಾರಂಪರಿಕ ಕೃಷಿ ಪದ್ಧತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ವ್ಯರ್ಥವಾಗುವುದನ್ನು ತಪ್ಪಿಸಲು ಸ್ಪ್ರಿಂಕ್ಲರ್‌, ಹನಿ ನೀರಾವರಿ ವ್ಯವಸ್ಥೆಯ ಮೂಲಕ ಈ ಸಮಸ್ಯೆಗೆ ಒಂದಿಷ್ಟು ಪರಿಹಾರ ಕಂಡುಹಿಡಿಯಲಾಗಿದೆ. ಆದರೆ, ಇದರಿಂದಲೂ ನೀರಿನ ಅಭಾವದ ಪ್ರಶ್ನೆ ಕೊನೆಯಾಗಿಲ್ಲ. ಇದಕ್ಕೆ ಪರಿಹಾರ ಕಲ್ಪಿಸಿದೆ ಆಳನೆಲದ ಹನಿನೀರಾವರಿ ಪದ್ಧತಿ. ಇವರ ಉಪಕರಣ ಕನಿಷ್ಠ ನೀರು ಬಳಸಿ, ಕೃಷಿ ಉತ್ಪನ್ನ ಹೆಚ್ಚಿಸಲು ನೆರವಾಗುತ್ತದೆ.

ವಿಶೇಷತೆಯೇನು ?

ಸಾಮಾನ್ಯವಾಗಿ ಯಾವುದೇ ಗಿಡ ಅಥವಾ ಮರದ ಬೇರುಗಳು ಆಳವಾಗಿ ವಿಸ್ತರಿಸಿಕೊಂಡಿರುತ್ತವೆ. ಹನಿ ನೀರಾವರಿಯಲ್ಲಿ ಬುಡಕ್ಕೆ ನೀರು ಹಾಯಿಸುವುದರಿಂದ ಬೇರುಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ದೊರೆಯುವುದಿಲ್ಲ. ಆಳ ನೀರಾವರಿ ಪದ್ಧತಿಯಲ್ಲಿ ಗಿಡದ ಬೇರುಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ನೀರು ಒದಗಿಸಬಹುದು.

ಇಲ್ಲಿ ನೀರು ವ್ಯರ್ಥವಾಗುವುದಿಲ್ಲ. ಬೇರುಗಳು ಅಗತ್ಯ ನೀರು ಸ್ವೀಕರಿಸಿದ ಬಳಿಕ ಕೊಳವೆಯೂ ನೀರು ಹೊರಬಿಡುವುದಿಲ್ಲ.

ಹಾಗೊಮ್ಮೆ ನೀರು ಖಾಲಿ ಯಾದ ಸಂದರ್ಭದಲ್ಲಿ ಬೇರುಗಳಿಗೆ ಗಾಳಿಯನ್ನು ಒದಗಿಸುತ್ತದೆ. ಇದರಿಂದ ಗಿಡದ ಬುಡದಲ್ಲಿ ಪಾತಿ (ಗಾಳಿ ಹೋಗಲು ಮಾಡುವ ವ್ಯವಸ್ಥೆ) ತೆಗೆಯಬೇಕಾಗಿಲ್ಲ.

ಮರಗಳಿಗೆ ಪುನರ್‌ಜೀವ: ‘ಈ ಸಲಕರಣೆ ಬಳಸಿಕೊಂಡರೆ ಹೊಸ ಗಿಡಗಳು ಬಹುಬೇಗ ಬೆಳೆಯುತ್ತದೆ.ಸಾಯುವ ಹಂತದಲ್ಲಿರುವ ಮರಗಳಿಗೆ ಮರುಜೀವ ಕಲ್ಪಿಸುತ್ತದೆ’ ಎಂಬುದು ರಿಷಭ್‌ ಅವರ ಅನುಭವದ ಮಾತು.

ಕಡಿಮೆ ಮಳೆಬೀಳುವ ಹಾಗೂ ಬರಪೀಡಿತ ಪ್ರದೇಶಗಳಲ್ಲಿ ತೋಟಗಾರಿಕೆ ಕೃಷಿ ಮಾಡುವವರಿಗೆ ಹೆಚ್ಚು ಅನುಕೂಲಕಾರಿಯಾಗಿದೆ. ಹನಿ ನೀರಾವರಿ ಪದ್ಧತಿಗೆ ಹೋಲಿಸಿದರೆ, ಇಲ್ಲಿ ಶೇಕಡಾ 50ರಷ್ಟು ನೀರು ಉಳಿತಾಯವಾಗುತ್ತದೆ.

ರೈತರಿಗಿದೆ ಲಾಭ: ಈ ಸಲಕರಣೆಯು ಕೊಳಲಿನ ಆಕಾರ ಹೊಂದಿದ್ದು, ಒಳಭಾಗ ದಲ್ಲಿ ಜಾಲರಿ ಹೊಂದಿದೆ. ಇದರಿಂದ ಅನಗತ್ಯ ಕಸಗಳು ಸೇರದಂತೆ ಇದು ತಡೆಯುತ್ತದೆ. ಒಂದು ಮರದಿಂದ ಇನ್ನೊಂದು ಮರಕ್ಕೆ ಸುಲಭವಾಗಿ ಕೊಂಡೊಯ್ಯಬಹುದು. ಯಾವುದೇ ತೆರನಾದ ಮಣ್ಣಿಗೂ ಹೊಂದುವ ಗುಣ ಇದಕ್ಕಿದೆ. ಗಿಡದ ಬುಡಕ್ಕೆ ನೀರು ಒದಗಿಸುವುದರಿಂದ ಮೇಲ್ಭಾಗದಲ್ಲಿ ಅನಗತ್ಯ ಕಳೆಗಳು ಹುಟ್ಟುವುದಿಲ್ಲ. ಇದರಿಂದ ರೈತರಿಗೆ ನೀರು, ಸಮಯ ಹಾಗೂ ವಿದ್ಯುತ್‌ ಉಳಿತಾಯವಾಗುತ್ತದೆ.

‘ಉನ್ನತ ದರ್ಜೆಯ ಪ್ಲಾಸ್ಟಿಕ್‌ನಿಂದ ಇದನ್ನು ತಯಾರಿಸಲಾಗಿದ್ದು, 15 ವರ್ಷ ಬಾಳಿಕೆ ಹೊಂದಿರುತ್ತದೆ. ಹಾಗೊಮ್ಮೆ ಮುರಿದುಹೋದರೆ, ಅದಕ್ಕೆ ಪರ್ಯಾಯವಾಗಿ ಹೊಸತನ್ನು ಪೂರೈಸುತ್ತೇವೆ’ ಎಂದು ಖಾತ್ರಿ ನೀಡುತ್ತಾರೆ ರಿಷಭ್‌.

‘ಈ ಸಲಕರಣೆಯನ್ನು ನೀಡುವ ಮುನ್ನ ಅವರಿದ್ದಲ್ಲಿಗೆ ತೆರಳಿ ರೈತರಿಗೂ ಪ‍್ರಾಥಮಿಕ ತರಬೇತಿ ನೀಡಲಾಗುತ್ತದೆ. ಇದಾದ ಬಳಿಕ ಅವರೇ ಅದನ್ನು ಬಳಸಬಹುದು’ ಎಂದು ಅವರು ವಿವರಿಸುತ್ತಾರೆ.

‘ಸದ್ಯ ಅಮೆರಿಕದಿಂದ ಆಮದು ಮಾಡಿಕೊಂಡು ರೈತರಿಗೆ ಪೂರೈಸುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಭಾರತದಲ್ಲೇ ತಯಾರಿಸಿ ಇನ್ನಷ್ಟು ಕಡಿಮೆ ದರದಲ್ಲಿ ಪೂರೈಸುವ ಉದ್ದೇಶ ಹೊಂದಿದ್ದೇವೆ’ ಎಂದು ಮುಂದಿನ ಉದ್ದೇಶವನ್ನು ವಿವರಿಸುತ್ತಾರೆ.

8,14,24 ಹಾಗೂ 36 ಇಂಚಿನ ಗಾತ್ರದಲ್ಲಿ ಲಭ್ಯವಿದೆ. ಒಂದು ಸಲಕರಣೆಯ ಬೆಲೆ ₹500ರಿಂದ ₹1000 ತನಕವಿದೆ. ಮರಗಳ ಬೇರು ಆಳವಾಗಿದ್ದ ಸಂದರ್ಭದಲ್ಲಿ ದೊಡ್ಡದಾದ ಉಪಕರಣವನ್ನು ಬಳಸಬಹುದು, ತರಕಾರಿ ಸಸ್ಯಗಳಿಗೆ ಚಿಕ್ಕದಾದ ಕೊಳವೆಯನ್ನು ಬಳಸಬಹುದು.
ಸಂಪರ್ಕ ಸಂಖ್ಯೆ: 9886053432, 9972028657

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT