ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬಬ್ಬಾ ಹೋರಿಹಬ್ಬ!

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘ಗೌಡ್ರ ಗೂಳಿ ಬಂತು ದಾರಿಬಿಡ್ರೆಲೇ’, ‘ಚಿನ್ನಾಟದ ಚೆಲುವ ಬಂತು ಸರೀರಲೇ’, ‘ಅಲೆಲೇ, ಬ್ರಹ್ಮಾಂಡದ ಆರ್ಭಟ ನೋಡಲೇ’, ‘ಅಣ್ಣಾ ಹಜಾರೇ ಹಿಡಿಬ್ಯಾಡ್ರಲೇ’ ಎಂದು ಯುವಕರ ದಂಡು ಹೋರಿ ಹಬ್ಬದಲ್ಲಿ ಕೂಗುತ್ತ ಕುಣಿ ದಾಡುವುದನ್ನು ನೋಡುವುದೇ ಹಬ್ಬ! ಉತ್ತರ ಕರ್ನಾಟಕದ ಊರೂರಲ್ಲಿ ಈಗ ರೈತರ ಗ್ರಾಮೀಣ ಕ್ರೀಡೆ ಹೋರಿಹಬ್ಬದ ಅಭೂತಪೂರ್ವ ಕ್ಷಣಗಳನ್ನು ಆಸ್ವಾದಿಸಬಹುದು.

ವರ್ಷಪೂರ್ತಿ ದುಡಿದುಡಿದು ಬೇಸತ್ತಾಗ, ಸುಗ್ಗಿ ಕಾಲ ಮುಗಿದು ಬಸವಳಿದಾಗ, ಕಮತಕ್ಕೆ ವಿರಾಮ ಸಿಕ್ಕಾಗ ರೈತ ಜನಪದ ಸಂಭ್ರಮಗಳಲ್ಲಿ ತೊಡಗುತ್ತಾನೆ. ಮನಕ್ಕೆ ಮುದಕೊಡುವ ವಿವಿಧ ಹಬ್ಬ ಮಾಡುತ್ತಾನೆ. ಈ ಮೋಜಿನಲ್ಲಿ ಅವನು ಸಾಕಿದ ಎತ್ತು, ಕೋಣ, ಹೋರಿಗಳೂ ಪಾಲ್ಗೊಳ್ಳುತ್ತವೆ. ಇದಕ್ಕೆ ಪೂರಕವಾಗಿ ಕರಾವಳಿಯ ಕಂಬಳ, ತಮಿಳುನಾಡಿನ ಜಲ್ಲಿಕಟ್ಟುಗಳನ್ನು ಉದಾಹರಿಸಬಹುದು. ಸ್ಪೇನಿನ ಬುಲ್ ಫೈಟ್ ಕೂಡ ಸುಪ್ರಸಿದ್ಧವಾದುದು.

ಇಂಥದೇ ಜನಪದ ಸಡಗರವನ್ನು ಉತ್ತರ ಕರ್ನಾಟಕದ ಹೋರಿ ಹಬ್ಬದಲ್ಲಿ ಕಾಣಬಹುದು. ಇದಕ್ಕೆ ಕರಿಬಿಡುವುದು, ಹೋರಿ ಬೆದರಿಸುವುದು ಎಂಬ ಹೆಸರುಗಳೂ ಇವೆ.

ಉತ್ತರ ಕರ್ನಾಟಕದ ಹಾವೇರಿ, ಬ್ಯಾಡಗಿ, ಮಲ್ಲೂರು, ಹಾನಗಲ್‌, ದೇವಿಹೊಸೂರು, ಶಿಕಾರಿಪುರ, ಕರ್ಜಗಿ, ಮಾಸೂರು, ದೇವಗಿರಿ, ಹುಲುಗಿನಕೊಪ್ಪಗಳಲ್ಲಿ ರಾಷ್ಟ್ರಮಟ್ಟದ ಹೋರಿ ಬೆದರಿಸುವ ಹಬ್ಬಗಳು ನಡೆಯುತ್ತವೆ.

ಹಾವೇರಿ, ಶಿವಮೊಗ್ಗ, ಧಾರವಾಡ ಜಿಲ್ಲೆಗಳ ನೂರಾರು ಹೋರಿಗಳು ಪಾಲ್ಗೊಳ್ಳುತ್ತವೆ. ಜೊತೆಗೆ ಹೋರಿಗಳನ್ನು ಹಿಡಿಯಲು ಯುವಕರ ದಂಡೇ ಬರುತ್ತದೆ. ರೈತಾಪಿ ಜನರೇ ಈ ಆಚರಣೆಗಾಗಿ ಸಮಿತಿಯೊಂದನ್ನು ರಚಿಸಿರುತ್ತಾರೆ. ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಸಮಿತಿಯೇ ಕರಪತ್ರಗಳ ಮೂಲಕ ಪ್ರಕಟಿಸುತ್ತದೆ. ಇದಕ್ಕೆ ಪ್ರತಿಯೊಬ್ಬರೂ ಬದ್ಧರಾಗಿರಲೇಬೇಕು.

ಕರಿ ಬಿಡಲು ಸಮಿತಿಯವರು ಊರಿನ ರಸ್ತೆಯೊಂದನ್ನು ಆಯ್ಕೆ ಮಾಡುತ್ತಾರೆ. ರಸ್ತೆಯ ಇಕ್ಕೆಲಗಳಲ್ಲಿ ನಿಂತು ನೋಡಲು ಬಾಲಕರು, ಯುವಕರು, ವೃದ್ಧರು ಮತ್ತು ಮಹಿಳೆಯರಿಗೆ ಅನುಕೂಲವಿರುತ್ತದೆ. ಕೆಲವರು ಪಕ್ಕದ ದಿಬ್ಬ ಹತ್ತಿ, ಮನೆಯ ಮಾಳಿಗೆ ಏರಿಯೂ ಹೋರಿಗಳು ಜಿಗಿಯುತ್ತ ಓಡುವುದನ್ನು ಕಂಡು ಕೇಕೆ ಹಾಕುತ್ತಾರೆ. ಕೆಲವು ಕಡೆಗೆ ಐವತ್ತು ಸಾವಿರದವರೆಗೆ ಜನರು ಸೇರುವುದುಂಟು.

ಯುವ ರೈತರು ತಮಗಿಷ್ಟವಾದ ಹೆಸರುಗಳನ್ನು ಹೋರಿಗಳಿಗೆ ನಾಮಕರಣ ಮಾಡಿರುತ್ತಾರೆ. ಊರಿನ, ರಾಷ್ಟ್ರೀಯ ನಾಯಕರ, ಸಿನಿಮಾಗಳ ಹೆಸರುಗಳನ್ನಿಟ್ಟು ಹೋರಿಗಳು ರಸ್ತೆಯಲ್ಲಿ ಓಡುವಾಗ ಕೂಗುತ್ತ ಹುಮ್ಮಸ್ಸು ತುಂಬುತ್ತಾರೆ. ಜೋಗಿ, ಅಧ್ಯಕ್ಷ, ಬಹದ್ದೂರ, ಸುನಾಮಿ, ಹಟವಾದಿ, ರಾಜಕುಮಾರ, ಯಶ್, ಚಿನ್ನಾಟದ ಚೆಲುವ, ಅನ್ನದಾತ, ಬೇಟೆಗಾರ ಹೀಗೆಯೇ ಹೆಸರುಗಳ ಪಟ್ಟಿ ಬೆಳೆಯುತ್ತದೆ.

ಹೋರಿಗಳಿಗೆ ಉತ್ತಮ ಆಹಾರ ನೀಡಿ ತಯಾರಿ ಮಾಡಲಾಗಿರುತ್ತದೆ. ಅವುಗಳಿಗೆ ವಿಧ ವಿಧದ ಝೂಲಗಳು, ರಿಬ್ಬನ್ನುಗಳು, ಪ್ಲಾಸ್ಟಿಕ್ ಹೂಗಳು, ಬಲೂನುಗಳಿಂದ ಸಿಂಗರಿಸಿರುತ್ತಾರೆ. ಅಂದು ಹೋರಿಯ ಮೈ ತೊಳೆದು ಬಣ್ಣ ಬಳಿಯುತ್ತಾರೆ.

ರಸ್ತೆಯಲ್ಲಿ ಹೋರಿಯ ಮೂಗುದಾಣವನ್ನು ಬಿಚ್ಚಿ ಓಡಿಸಿ ಅದರ ಹಿಂದೆಯೇ ಹೆಸರು ಕೂಗುತ್ತ ಪರ್ಸಿ ಪೈಕಿ ಬೇಕಾದೋರು ಹಿಡೀರಿ ಎನ್ನುತ್ತ, ಕುಣಿಯುತ್ತ ಸಾಗುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಜನರೂ ತಮಗೆ ಇಷ್ಟವಾದ ಹೋರಿ ಬಂದಾಗ ಕೇಕೆ ಹಾಕಿ ಕುಣಿಯುತ್ತಾರೆ. ಹೋರಿಗೆ ಕಟ್ಟಿದ ವಸ್ತುಗಳನ್ನು ಹರಿಯಲು ಇಕ್ಕೆಲಗಳಲ್ಲಿ ನಿಂತ ಯುವ ಮೇಳ ಹೋರಿಯ ಕೊಂಬು, ಬಾಲ ಹಿಡಿದು ಡುಬ್ಬದ ಮೇಲೆರಗಿ ಬೆನ್ನಟ್ಟಿ ಹೋರಿಯನ್ನು ನಿಲ್ಲಿಸಲು ಯತ್ನಿಸುತ್ತಾರೆ.

ಬಹುಮಾನಗಳ ಸುರಿಮಳೆ!: ಇನ್ನು ಕರಿ ಹರಿಯುವ ಯುವಕರಿಗೆ ಚಾಲೆಂಜ್‌ ಮಾಡಲು ಕೊರಳಿನ ತುಂಬ ಒಣ ಕೊಬ್ಬರಿಯ ಬಟ್ಟಲಿನ ಸರ ಹಾಕಿರುತ್ತಾರೆ. ಹಿಡಿಯುವವರಿಗೆ ಬಂಗಾರದ ಖಡಗ, ಬೆಳ್ಳಿಯ ಸರಗಳು, ಉಂಗುರಗಳನ್ನೂ ಕಟ್ಟಿರುವುದಾಗಿ ಹೋರಿ ಕಣಕ್ಕೆ ಬಿಡುವುದಕ್ಕೆ ಮುನ್ನ ಹಲಗೆ ಬಡಿದು ಸಾರುತ್ತಾರೆ.

ಗೆದ್ದ ಹೋರಿಗಳಿಗೆ ನಾಲ್ಕೈದು ತೊಲೆ ಬಂಗಾರ, ತಾಮ್ರದ ಹಂಡೆಗಳು, ನೀರಿನ ಟಾಕಿಗಳು, ಬೈಕುಗಳ ಪುರಸ್ಕಾರ ದೊರಕುತ್ತದೆ. ಸಮಿತಿಯವರು ಬಂಪರ್ ಬಹುಮಾನ, ಪ್ರಥಮ, ದ್ವಿತೀಯ ಮತ್ತು ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ಆಯ್ಕೆ ಮಾಡಿ ಪ್ರಕಟಿಸುತ್ತಾರೆ. ಯುವಕರ ತಂಡಕ್ಕೆ ಸಿಕ್ಕಿ ಬೀಳದ, ಯಾರಿಂದಲೂ ಮೈ ಮುಟ್ಟಿಸಿಕೊಳ್ಳದ ಹೋರಿಗಳು ಬಹುಮಾನ ಪಡೆಯುತ್ತವೆ. ಹೋರಿಗಳನ್ನು ಮಣ್ಣು ಮುಕ್ಕಿಸಿದವರಿಗೆ ಬೆಳ್ಳಿಯ ಖಡಗ ನೀಡುತ್ತಾರೆ.

ಅಪಾಯಕಾರಿ ಕ್ರೀಡೆ: ಮನೀಷ್‌ ಹಾವನೂರ ಎಂಬ ಯುವಕ ‘ಹೋರಿ ಹಿಡಿಯುವುದು ತುಂಬ ಅಪಾಯಕಾರಿ ಕೆಲಸ. ಹೋರಿಗಳ ಚಲನ ವಲನ ನೋಡಿ ಕೈ ಹಾಕುತ್ತೇವೆ’ ಎನ್ನುತ್ತಾರೆ. ಇದೇ ಅಭಿಪ್ರಾಯ ಶಿಕಾರಿಪುರದ ಕಾಂತ, ಬ್ಯಾಡಗಿಯ ಮಾಂತ ಅವರದೂ ಆಗಿದೆ.

ಎಷ್ಟೇ ಮುನ್ನೆಚ್ಚರಿಕೆ ವಹಿಸಿದಾಗಲೂ ಕೆಲವೊಮ್ಮೆ ಹಿಡಿಯುವವರಿಗೆ ಗಾಯ ಆಗುವುದುಂಟು. ಈ ಸಾಹಸದಲ್ಲಿ ಎಷ್ಟು ಜಾಗ್ರತೆ ವಹಿಸಿದರೂ ಕಡಿಮೆಯೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT