ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು, ಸೌಂದರ್ಯ ಮತ್ತು ದುರಂತ

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನಟಿ ಶ್ರೀದೇವಿಯ ಅಕಾಲಿಕ ಮರಣದ ಬಗ್ಗೆ ಪೀಯಾಲಿ ಗಂಗೂಲಿಯವರು ತಮ್ಮ ಫೇಸ್‍ಬುಕ್ ಗೋಡೆಯಲ್ಲಿ ‘ಆಕರ್ಷಕವಾಗಿ ಕಾಣುವ, ವಯಸ್ಸನ್ನು ಮರೆಮಾಚುವ ಅನಿವಾರ್ಯಕ್ಕೆ ಸಿಲುಕಿ ಆಕೆ ಮತ್ತೆ ಮತ್ತೆ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯ ಮೊರೆಹೋದರು. ದಕ್ಷಿಣ ಕ್ಯಾಲಿಫೋರ್ನಿಯಾದ ಆಸ್ಪತ್ರೆಗಳಲ್ಲಿ ತಮ್ಮ ಒಂದೊಂದು ಅವಯವವನ್ನೂ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಶರೀರವನ್ನು ನಿಶ್ಶಕ್ತವಾಗಿಸಿಕೊಂಡರು...’ ಇತ್ಯಾದಿ ಮಾತುಗಳನ್ನು ಬರೆದಿದ್ದಾರೆ.

ಶ್ರೀದೇವಿ ಅವರ ಸಾವಿನ ನಿಖರ ಕಾರಣಗಳು ಗೊತ್ತಾಗುವ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಆ ಕುರಿತು ವ್ಯಾಪಕ ಚರ್ಚೆಗಳು ನಡೆದಿದ್ದವು. ಸ್ತ್ರೀವಾದಿ ಮಧುಪೂರ್ಣಿಮಾ ಕಿಶ್ವರ್ ಸಹ ‘ಅವರ ಆಹಾರ ಪದ್ಧತಿ, ಜೀರೊ ಸೈಜ್ ಹೊಂದಲು ಮತ್ತು ತಾರುಣ್ಯಭರಿತವಾಗಿ ಕಾಣಲು ನಡೆಸಲಾಗುವ ಸೌಂದರ್ಯ ಶಸ್ತ್ರಚಿಕಿತ್ಸೆ ಮುಂತಾದವುಗಳು ಅವರ ಸಾವಿಗೆ ಕಾರಣವಾದವೇ?’ ಎಂಬ ಅನುಮಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಈಗ, ಅವರ ಸಾವು ಹೃದಯಾಘಾತದಿಂದ  ಆದದ್ದಲ್ಲ ಎಂದು ವರದಿಯಾಗಿದೆ. ಸಾವಿನ ಕುರಿತಾದ ತನಿಖೆ ಈಗ ಮುಂದುವರಿದಿದೆ.

ಇದೇನೇ ಇರಲಿ ಹೆಣ್ಣಿನ ಸೌಂದರ್ಯ ಕುರಿತಾಗಿ ಬೇರೂರಿರುವ ಮಾನದಂಡಗಳು ಸೃಷ್ಟಿಸುವ ಒತ್ತಡಗಳನ್ನು ಈ ಸಂದರ್ಭದಲ್ಲಿ ವಿಶ್ಲೇಷಿಸಬಹುದೇನೋ.

ಹೆಣ್ಣಿನ ಸೌಂದರ್ಯ ಮತ್ತು ಮೈಬಣ್ಣಗಳ ವಿಷಯದಲ್ಲಿ ಪುರುಷ ಕೇಂದ್ರಿತ ಸಮಾಜವು ಕೆಲವು ನಿರ್ದಿಷ್ಟ ಮಾನದಂಡಗಳನ್ನು ವಿಧಿಸಿದೆ; ಮಾತ್ರವಲ್ಲ, ಹೆಣ್ಣಾದವಳು ಆ ಮಾನದಂಡಗಳನ್ನು ಪ್ರಶ್ನಾತೀತವಾಗಿ ಒಪ್ಪಿ ನಂಬುವಂತೆ ಮಾಡಿದೆ. ಮುಖದ ಮೇಲೆ ವೃದ್ಧಾಪ್ಯದ ಗೆರೆಗಳು ಮೂಡುತ್ತಿವೆ ಎಂದು ತಲ್ಲಣಿಸಿ ಆತ್ಮಹತ್ಯೆಗೆ ಶರಣಾದ ಖ್ಯಾತ ನಟಿಯರು ಮಾತ್ರವಲ್ಲ, ಸಾಮಾನ್ಯ ಮಹಿಳೆಯರ ನಿದರ್ಶನಗಳು ನಮ್ಮ ಮುಂದುಂಟು.

ಹೆಣ್ಣಿನ ಸೌಂದರ್ಯದ ಮಾನದಂಡ ಜಗತ್ತಿನಾದ್ಯಂತ ಏಕರೂಪದ್ದಾಗಿದೆ - ಜೀರೊ ಸೈಜ್‍ನದ್ದಾಗಿದೆ. ಶಾಂತಲೆ, ಶಕುಂತಲೆಯರ ಕಾಲದಿಂದ ಹಿಡಿದು ಇಂದಿನ ಶ್ರೀದೇವಿಯ ಕಾಲದವರೆಗೆ ಹೆಣ್ಣಿನ ಸೌಂದರ್ಯದ ವ್ಯಾಖ್ಯಾನದಲ್ಲಿ ಒಂದೇ ಒಂದು ಬದಲಾವಣೆಯೂ ಆದಂತಿಲ್ಲ. ಪುರುಷಕಾಮಕ್ಕೆ ಅನುರೂಪವಾದ ಭೋಗವಸ್ತುವಿನಂತೆ ಕಂಗೊಳಿಸಬೇಕು. ಇದುವೇ ಇಂದಿಗೂ ಹೆಣ್ಣಿನ ಸೌಂದರ್ಯದ ಮಾನದಂಡವಾಗಿದೆ. ಶರೀರ ಪ್ರದರ್ಶನವನ್ನೇ ಬಂಡವಾಳವನ್ನಾಗಿಸಿಕೊಂಡ ಸಿನಿಮಾದಂತಹ ರಂಗದಲ್ಲಿ ದುಡಿಯುವ ಹೆಂಗಸರು ತಮ್ಮ ದೇಹ ಸೌಂದರ್ಯ ಕಾಪಾಡಿಕೊಳ್ಳಲು ಸಹಜವಾಗಿಯೇ ಕಾಸ್ಮೆಟಿಕ್ ಸರ್ಜರಿಯಂತಹ ಚಿಕಿತ್ಸೆಗಳ ಮೊರೆ ಹೋಗಬೇಕಾಗುತ್ತದೆ. ಇಲ್ಲವೇ ನಿರ್ಲಕ್ಷ್ಯಕ್ಕೆ ಒಳಗಾಗಿ ತನ್ನ ವೃತ್ತಿಜೀವನಕ್ಕೆ ವಿದಾಯ ಹೇಳಬೇಕಾಗುತ್ತದೆ.

ಆದರೆ ಪುರುಷರಿಗೆ ಸಿನಿಮಾ ರಂಗದಲ್ಲಿ (ಹಾಗೆಯೇ ಸಮಾಜದಲ್ಲಿ) ಈ ತರಹದ ಯಾವುದೇ ನಿರ್ದಿಷ್ಟ ಮಾನದಂಡಗಳ ಹಂಗಿಲ್ಲ. ಒಂದು ಕಾಲದಲ್ಲಿ ಮೀಸೆ– ಗಡ್ಡಗಳನ್ನು ಬೋಳಿಸಿಕೊಂಡ ಚಾಕೊಲೆಟ್ ಮುಖವೇ ಪುರುಷ ಸೌಂದರ್ಯದ ಪ್ರತೀಕವಾಗಿತ್ತು, ದಾಡಿ ಬಿಟ್ಟವನನ್ನು ಆಗ ಜೋಲುಮುಖದ ದೇವದಾಸ್‍ಗೆ ಹೋಲಿಸಲಾಗುತ್ತಿತ್ತು. ಸಿಗರೇಟು, ಮದ್ಯಪಾನಗಳು ಖಳನಟರಿಗಷ್ಟೇ ಮೀಸಲಾದ ವ್ಯಸನವಾಗಿದ್ದವು. ಆದರೆ ಇಂದಿನ ಮಾನದಂಡಗಳು ತಾರಾಮಾರಾ ಬದಲಾಗಿಬಿಟ್ಟಿವೆ. 

ಇಂದು ದಾಡಿ ಬೆಳೆಸುವುದೇ ಫ್ಯಾಷನ್ ಆಗಿದೆ. ಟಿ.ವಿ. ಸುದ್ದಿ ವಾಚಕರಿಂದ ಹಿಡಿದು ಸಿನಿಮಾ ನಟರವರೆಗೆ ಪ್ರತಿಯೊಬ್ಬ ತರುಣನೂ ಮುಖದ ಮೀಸೆ– ದಾಡಿಗಳನ್ನು ತನ್ನ ಪುರುಷತ್ವದ ಲಕ್ಷಣವೆಂದು ನಂಬಿದ್ದಾನೆ. ‘ಕಾಲೇಜಿನ ಕಾರಿಡಾರ್‍ನಲ್ಲಿ ನಡೆದಾಡುತ್ತಿದ್ದರೆ ದಾಡಿ ಬಿಟ್ಟ ತರುಣ ಮುಖಗಳೇ ಎಲ್ಲೆಲ್ಲೂ ಕಾಣಸಿಗುತ್ತವೆ’ ಎಂದು ಮೊನ್ನೆ ದಿವಸ ಕಾಲೇಜು ಪ್ರೊಫೆಸರ್ ಒಬ್ಬರು ವಿಸ್ಮಯಪಟ್ಟಿದ್ದರು. ಹಾಗೆಯೇ ಹೆಂಡ– ಸಿಗರೇಟು ಸೇವನೆಗಳು ಇಂದು ಖಳರ ವ್ಯಸನಗಳಲ್ಲ; ಅವು ಹೀರೊಗಳ ಗಮ್ಮತ್ತಿನ ವ್ಯಸನಗಳಾಗಿ ಪರಿಣಮಿಸಿವೆ.

ಇನ್ನು ಸಿನಿಮಾಗಳಲ್ಲಿ ಪುರುಷತ್ವವೆಂಬುದು ತಾರುಣ್ಯಕ್ಕಷ್ಟೇ ಸೀಮಿತವಾದುದಲ್ಲ. ಅಮಿತಾಭ್ ಬಚ್ಚನ್, ನಾಸಿರುದ್ದೀನ್ ಶಾ, ಮೋಹನ್ ಲಾಲ್ ಮುಂತಾದ ಹಿರಿಯ ನಾಗರಿಕರ ಸ್ಥಾನಮಾನ ಪಡೆದ ನಟರೂ ಆಕರ್ಷಕ ಪ್ರಭಾವಿ ತಾರೆಗಳಾಗಿ ಮಿಂಚುತ್ತ ಮುಂದುವರಿಯಬಲ್ಲರು. ಪುರುಷರಿಂದಲೇ ಅನುಮೋದಿತವಾದ, ಪುರುಷ ಸೌಂದರ್ಯದ ಯಾವ ಮಾನದಂಡಕ್ಕೂ ನಿಲುಕದ, ಇತ್ತೀಚೆಗೆ ದಿವಂಗತರಾದ ಕಾಶೀನಾಥ್‍ರಂತಹವರೂ ಪ್ರತಿಭೆ ಮಾತ್ರದಿಂದಲೇ ಹೀರೊ ಎನಿಸಿಕೊಳ್ಳಬಲ್ಲರು.

ಆದರೆ ಹೆಣ್ಣು ಅಹಲ್ಯೆಯಂತೆ ಚಿರಸ್ಥಾಯಿಯಾಗಿ ಶರೀರಕ್ಕೆ ಬಂದಿಯಾಗಿಬಿಟ್ಟಿದ್ದಾಳೆ. ಹೆಣ್ಣನ್ನು ಶರೀರದಿಂದ ಆಚೆಗೆ ನೋಡುವ ವಿವೇಕವನ್ನು, ಪಕ್ವತೆಯನ್ನು ನಮ್ಮ ಸಮಾಜ ಇನ್ನೂ ಸಿದ್ಧಿಸಿಕೊಂಡಿಲ್ಲ. ಸಮಾಜದ ಈ ಧೋರಣೆಗೆ ದುರದೃಷ್ಟವಂತ ನಟಿಯರು ಆಗಾಗ ಬಲಿಯಾಗುತ್ತಿರುತ್ತಾರೆ. ಇತ್ತೀಚೆಗೆ ಕ್ಲಾಡಿಯಾ ಎಂಬ ಹಾಲಿವುಡ್ ನಟಿ ಇಂತಹುದೇ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಅಸುನೀಗಿದರು.

‘ಸೌಂದರ್ಯ ಶಸ್ತ್ರಚಿಕಿತ್ಸೆ ಕೂಡ ಯಾವುದೇ ಗಂಭೀರ ಶಸ್ತ್ರಚಿಕಿತ್ಸೆಯಷ್ಟೇ ಅಪಾಯಕಾರಿಯಾದುದು. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರು ಇದರಿಂದಾಗುವ ಈ ಅಪಾಯ ಮತ್ತು ಪ್ರಯೋಜನ ಎರಡನ್ನೂ ತುಲನೆ ಮಾಡಿ ಬಳಿಕ ನಿರ್ಧರಿಸಬೇಕು’ ಎಂದು ಬ್ರಿಟಿಷ್ ಅಸೋಸಿಯೇಷನ್ ಆಫ್ ಈಸ್ತೆಟಿಕ್ ಪ್ಲಾಸ್ಟಿಕ್ ಸರ್ಜನ್ಸ್ ಸಂಸ್ಥೆಯ ಅಧ್ಯಕ್ಷರಾದ ಫಜಲ್ ಫತಾ ಎಚ್ಚರಿಸುತ್ತಾರೆ.

ಇತ್ತೀಚೆಗೆ ಶ್ರೀದೇವಿಯವರ ಹಿರಿಮಗಳು ಫೋಟೋಶೂಟ್‍ನಲ್ಲಿ ಅಂಗಾಂಗ ಪ್ರದರ್ಶನ ಮಾಡಲು ಮುಂದಾದಾಗ ಶ್ರೀದೇವಿ ‘ಅದನ್ನೆಲ್ಲ ನಿಲ್ಲಿಸಿ ಸುಮ್ಮನೆ ನನ್ನ ಹಿಂದೆ ಬಾ’ ಎಂದು ಮಗಳಿಗೆ ಕಣ್ಸನ್ನೆಯಲ್ಲೇ ಜಂಕಿಸಿ ಫೋಟೊಶೂಟ್‍ಗೆ ಹೋಗದಂತೆ ತಡೆದಿದ್ದರು. ಆ ವಿಡಿಯೊ ತುಣುಕು ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಗಳ ಬಗ್ಗೆ ಅಷ್ಟೆಲ್ಲ ಮುತುವರ್ಜಿ ಹೊಂದಿದ್ದ ಈ ನಟಿ ತನ್ನದೇ ಶರೀರದ ಬಗ್ಗೆ ಕಾಳಜಿ ವಹಿಸಲಿಲ್ಲವೇ ಎಂದು ವ್ಯಥೆಯಾಗುತ್ತದೆ.

ಸೌಂದರ್ಯವು ಪ್ರದರ್ಶನದ ವಸ್ತುವಲ್ಲ. ತನ್ನ ವಿದ್ವತ್ತನ್ನು ಪ್ರದರ್ಶನಕ್ಕಿಡುವ ಒಬ್ಬ ವಿದ್ವಾಂಸ ಅಥವಾ ತನ್ನ ಸಂಪತ್ತನ್ನು ಪ್ರದರ್ಶನ ಮಾಡುವ ಒಬ್ಬ ಶ್ರೀಮಂತ ಹೇಗೆ ಹಾಸ್ಯಾಸ್ಪದನಾಗುತ್ತಾನೋ ಹಾಗೆಯೇ ದೇಹಪ್ರದರ್ಶನ ಮಾಡುವ ಹೆಣ್ಣೂ ಸಹ ಹಾಸ್ಯಾಸ್ಪದಳಾಗುತ್ತಾಳೆ. ಏಕೆಂದರೆ ನಮ್ಮೊಳಗಿನ ಸಂಪತ್ತು, ಅದು ಶ್ರೀಮಂತಿಕೆ ಇರಲಿ, ಸೌಂದರ್ಯವಿರಲಿ ಅಥವಾ ವಿದ್ವತ್ತಿರಲಿ- ನಾವು ತೋರಿಸಲಿ ಬಿಡಲಿ - ಪ್ರತಿ ಕ್ಷಣವೂ ಹೊರಲೋಕದ ಕಣ್ಣಿಗೆ ಕಾಣಿಸುತ್ತಲೇ ಇರುತ್ತದೆ. ಅದನ್ನು ಪ್ರದರ್ಶಿಸಬೇಕಾದ ಅಗತ್ಯವಿರುವುದಿಲ್ಲ. ಆದರೆ ಪ್ರದರ್ಶನವೇ ಜೀವನೋಪಾಯವಾಗಿಬಿಟ್ಟರೆ ಅದಕ್ಕಿಂತ ಮಿಗಿಲಿನ ದುರ್ವಿಧಿ ಮತ್ತೊಂದಿಲ್ಲ.

ಹೊಟ್ಟೆಪಾಡಿಗಾಗಿ ಅಪಾಯಕಾರಿ ಕೆಲಸಗಳಲ್ಲಿ ತೊಡಗಿ ಸಾವನ್ನಪ್ಪುವ ಕೂಲಿಕಾರರು, ಪೌರ ಕಾರ್ಮಿಕರ ಸಾವಿಗೂ ಸೆಲೆಬ್ರಿಟಿಗಳ ಸಾವಿಗೂ ಮೂಲಭೂತವಾಗಿ ಯಾವುದೇ ವ್ಯತ್ಯಾಸ ಕಾಣಿಸುವುದಿಲ್ಲ. ಇಬ್ಬರ ಸಾಮಾಜಿಕ ಸ್ಥಾನಮಾನ ಬೇರೆ ಬೇರೆ ಇರಬಹುದು; ಆರ್ಥಿಕ ಸ್ಥಿತಿಗತಿಗಳಲ್ಲಿ ಅಜಗಜ ಅಂತರ ಇರಬಹುದು. ಆದರೆ ಇಬ್ಬರೂ ತಮ್ಮ ಉಳಿವಿಗಾಗಿ ದೇಹದಂಡನೆ ಮಾಡುವವರಾಗಿದ್ದಾರೆ ಮತ್ತು ಇಬ್ಬರೂ ಸಮಾಜದ ಮನೋಸ್ಥಿತಿಗೆ ಬಲಿಪಶುಗಳಾಗುತ್ತಿದ್ದಾರೆ.

ಹೆಣ್ಣು ಇನ್ನಾದರೂ ತನ್ನ ದೇಹಭಾವವನ್ನು ಮೀರಿ ಬದುಕಲು ಪ್ರಾರಂಭಿಸಬೇಕಾಗಿದೆ. ದೇಹಭಾವದಲ್ಲಿ ಇರುವವರೆಗೂ ಅವಳು ಪುರುಷ ದುರಭಿಮಾನದ ಊಳಿಗ ಮಾಡುತ್ತಲೇ ಬದುಕನ್ನು ಸವೆಸುತ್ತಿರಬೇಕಾಗುತ್ತದೆ. ಅಪ್ರತಿಮ ಸೌಂದರ್ಯವತಿಯಾಗಿದ್ದ ಆಮ್ರಪಾಲಿಗೆ ‘ನಾನು ಗಂಡೂ ಅಲ್ಲ, ಹೆಣ್ಣೂ ಅಲ್ಲ’ ಎಂದು ಘೋಷಿಸಿದ್ದ ಬುದ್ಧನ ಪದತಳದಲ್ಲಿ ತನ್ನ ದೇಹಭಾವ ಮೀರಲು ಸಾಧ್ಯವಾಯಿತು.

‘ಆತ್ಮ ಗಂಡೋ ಹೆಣ್ಣೋ ರಾಮನಾಥ’ ಎಂದು ಜಿಜ್ಞಾಸೆ ನಡೆಸಿದ್ದ ದಾಸಿಮಯ್ಯ, ಅಲ್ಲಮರಂತಹ ಶರಣರ ಸಾನ್ನಿಧ್ಯದಲ್ಲಿ ಅಕ್ಕಮಹಾದೇವಿಗೆ ಪುರುಷ ದುರಭಿಮಾನವನ್ನು ಮೆಟ್ಟಿ ನಿಲ್ಲಲು ಸಾಧ್ಯವಾಯಿತು. ಅಂತಹ ಅಲೌಕಿಕ ಸಾನ್ನಿಧ್ಯದಲ್ಲಿ ಮಾತ್ರ ಹೆಣ್ಣಿಗೆ ವಿಮೋಚನೆ ದೊರೆತೀತು. ಹೀಗೆ ಶರೀರಭಾವದಿಂದ ವಿಮೋಚನೆ ಹೊಂದಿದಾಗ ಮಾತ್ರ ಮನುಷ್ಯಕುಲಕ್ಕೆ ಅವಳ ನಿಜವಾದ ಕೊಡುಗೆಗಳು ಸಿಗಬಲ್ಲವು.

ಅಲ್ಲಿಯವರೆಗೆ ಸೆಲೆಬ್ರಿಟಿ ನಟಿಯರ ಸಾವಿನ ದುರಂತ ಪರಂಪರೆ ಮುಂದುವರಿಯುತ್ತಲೇ ಇರುತ್ತದೆ. ಸಾವಿನ ದುರಂತದ ನಿಗೂಢತೆಯೂ ಮುಂದುವರಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT