ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಚುನಾವಣಾ ಗಿಮಿಕ್: ಟೀಕೆ

Last Updated 27 ಫೆಬ್ರುವರಿ 2018, 6:30 IST
ಅಕ್ಷರ ಗಾತ್ರ

ಕಸಬಾ (ರಾಮನಗರ): ಅಭಿವೃದ್ಧಿಗೆ ಇದುವರೆಗೂ ಗಮನ ನೀಡದ ಶಾಸಕ ಬಾಲಕೃಷ್ಣ, ಚುನಾವಣಾ ಸಂದರ್ಭದಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್‌ ಆರೋಪಿಸಿದರು.

ಇಲ್ಲಿನ ಬೊಮ್ಮಚ್ಚನಹಳ್ಳಿ ಗ್ರಾಮದ ಚಿಕ್ಕಕಟ್ಟೆ ಹೊಸ ಕಾಲೊನಿಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸ್ವರಾಜ್ ಯೋಜನೆ ಅನುದಾನದಡಿ ₹25 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಸೋಮವಾರ ನಡೆದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರದ ಜನ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದ ಸಂದರ್ಭದಲ್ಲಿ ಮಂಚನಬೆಲೆ ಜಲಾಶಯದಿಂದ ನೀರು ಬಿಡಲು ಶಾಸಕ ಬಾಲಕೃಷ್ಣ ವಿರೋಧ ವ್ಯಕ್ತಪಡಿಸಿದ್ದರು. ಈಗ ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವುದಾಗಿ ಹೇಳಿಕೆ ನೀಡುವ ಮೂಲಕ ಚುನಾವಣಾ ಗಿಮಿಕ್ ಮಾಡುತ್ತಿದ್ದಾರೆ ಎಂದು ದೂರಿದರು.

ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅಭಿವೃದ್ದಿ ಕಾಮಗಾರಿ ಕಣ್ಣಿಗೆ ಕಾಣಿಸುತ್ತಿವೆ. ಅವರ ಅಭಿವೃದ್ಧಿ ಕೆಲಸಗಳ ಶಂಕುಸ್ಥಾಪನೆ ನೋಡಿದರೆ ಇದುವರೆಗೂ ಕ್ಷೇತ್ರದ ಕೆಲಸ ಮಾಡಿಲ್ಲ ಎಂಬುದು ಗೊತ್ತಾಗುತ್ತದೆ ಎಂದರು.

ರಾಮನಗರ, ಕಸಬಾ ಮತ್ತು ಕೈಲಂಚ ಭಾಗದ ಜನರಿಗೆ ಕುಡಿಯುವ ನೀರಿಗಾಗಿ ಅರ್ಕಾವತಿ ನದಿಗೆ ನೀರು ಬಿಡುವಂತೆ ಶಾಸಕ ಎಚ್.ಡಿ.ಕುಮಾರಸ್ವಾಮಿ ಮಂಚನೆಬೆಲೆಯಿಂದ ರಾಮನಗರಕ್ಕೆ ಪಾದಯಾತ್ರೆ ಮಾಡಿದರು. ಆ ಸಂದರ್ಭದಲ್ಲಿ ಬಾಲಕೃಷ್ಣ ಬೆಂಬಲಿಗರು ನೀರು ಬಿಡಿಸಲು ತಕರಾರು ಮಾಡಿದರು ಎಂದು ತಿಳಿಸಿದರು.

ಭೂಮಿ ಪೂಜೆ ನೆರವೇರಿಸಿದ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾರಾಮಕೃಷ್ಣಯ್ಯ ಮಾತನಾಡಿ, ಮಾರೇಗೌಡನದೊಡ್ಡಿ ಬಳಿಯಿಂದ ಮಂಚನಬೆಲೆ ವರೆಗೆ ₹5 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ, ಸುಗ್ಗನಹಳ್ಳಿ- ಸಂಜೀವೆಗೌಡನದೊಡ್ಡಿ ರಸ್ತೆ ಅಭಿವೃದ್ದಿಗೆ ₹3.25 ಲಕ್ಷ, ಕಟಮಾನದೊಡ್ಡಿ- ತಿರುಮಳಾಪುರ ರಸ್ತೆ ಅಭಿವೃದ್ಧಿಗೆ ₹75 ಲಕ್ಷ, ಸುಗ್ಗನಹಳ್ಳಿ-ಬೆಜ್ಜರಹಳ್ಳಿ ಕಟ್ಟೆ ರಸ್ತೆ ಅಭಿವೃದ್ಧಿಗೆ ₹45 ಲಕ್ಷ, ರಾಂಪುರ ಸೇತುವೆ ನಿರ್ಮಾಣಕ್ಕಾಗಿ ₹7 ಕೋಟಿ, ಮಾಯಗಾನಹಳ್ಳಿ ಮುಖ್ಯರಸ್ತೆಯಿಂದ ಲಕ್ಕಸಂದ್ರ ರಸ್ತೆ ಅಭಿವೃದ್ಧಿಗೆ ₹25 ಲಕ್ಷ ಮಂಜೂರಾಗಿದೆ ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವರಾಮು, ಸದಸ್ಯರಾದ ಮಹದೇವಯ್ಯ, ಶಶಿಧರ್, ಕೃಷ್ಣಪ್ಪ, ಮುಖಂಡರಾದ ಎಸ್.ಆರ್. ರಾಮಕೃಷ್ಣಯ್ಯ, ರಮೇಶ್, ಬೈರಪ್ಪ, ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT