ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಬುದ್ಧಿಮತ್ತೆಯ ದುರ್ಬಳಕೆ

Last Updated 27 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ತಂತ್ರಜ್ಞಾನ ಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಸಂಚಲನ ಮೂಡಿಸುತ್ತಿರುವ ಕೃತಕ ಬುದ್ಧಿಮತ್ತೆ (ಎ.ಐ) ಪ್ರಿಯರಿಗೆ ಒಂದು ಹೊಸ ಸುದ್ದಿಯೊಂದು ಇಲ್ಲಿದೆ. ಅದು ಏನೆಂದರೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ. ಆದರೆ, ಇದಕ್ಕೆ ವಿರುದ್ಧವಾದ ಸುದ್ದಿಯೂ ಒಂದಿದೆ. ಅದು ಈ ತಂತ್ರಜ್ಞಾನ ಈಗ ಎಲ್ಲರಿಗೂ ಎಗ್ಗಿಲ್ಲದೆ ಸಿಗುತ್ತಿದೆ. ಯಾವುದೇ ತಂತ್ರಜ್ಞಾನ ಅಭಿವೃದ್ಧಿಗೆ ಬಳಕೆಯಾದರೆ ಪರವಾಗಿಲ್ಲ. ಆದರೆ ಅದನ್ನು ಬಳಸಿಕೊಂಡು ವಿನಾಶಕಾರಿ ಚಟುವಟಿಕೆಗಳನ್ನು ನಡೆಸಿದರೆ ಅದರಿಂದ ಮನುಕುಲಕ್ಕೆ ಅಪಾಯ ಎದುರಾಗುತ್ತದೆ. ಈಗ ಇಂತಹ ಆತಂಕವೊಂದು ಕೃತಕಬುದ್ಧಿಮತ್ತೆ ವಿಜ್ಞಾನಿಗಳನ್ನೂ ಕಾಡತೊಡಗಿದೆ.

ಸಿಲಿಕಾನ್‌ ವ್ಯಾಲಿಯಲ್ಲಿನ ಸ್ಟಾರ್ಟ್‌ಅಪ್‌ವೊಂದು ಡ್ರೋನ್‌ ಸಿದ್ಧಪಡಿಸಿತ್ತು. ಮನುಷ್ಯ ಹೋದ ಕಡೆಯಲ್ಲೆಲ್ಲ ಇದು ಹಿಂಬಾಲಿಸುತ್ತದೆ. ಆದರೆ ಇದು ಆ ವ್ಯಕ್ತಿಗೆ ತಿಳಿಯುವುದೇ ಇಲ್ಲ. ಸ್ಮಾರ್ಟ್‌ಫೋನ್‌ ಆ್ಯಪ್‌ ಮೂಲಕ ಯಾವುದಾದರೂ ವ್ಯಕ್ತಿಯನ್ನು ಹಿಂಬಾಲಿಸು ಎಂದು ಈ ಡ್ರೋನ್‌ಗೆ ಸೂಚನೆ ನೀಡಬಹುದು.

ಮೇಲುನೋಟಕ್ಕೆ ಇದು ತಮಾಷೆಗಾಗಿ ಇರುವ ಡ್ರೋನ್‌ ಎಂಬಂತೆ ಕಾಣಬಹುದು. ಆದರೆ ಇದರಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಲಾಗಿದೆ.

ಇತ್ತೀಚೆಗೆ ಕೃತಕ ಬುದ್ಧಿಮತ್ತೆ ಸಂಶೋಧನಾ ತಂಡ ವರದಿಯೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ವಿವರಗಳಿವೆ. ಇದೇ ವೇಳೆ ಯಾವ ಕ್ರಮಗಳನ್ನು ಕೈಗೊಂಡರೆ ಇಂತಹ ದುರ್ಬಳಕೆ ತಡೆಯಬಹುದು ಎಂಬುದನ್ನೂ ತಿಳಿಸಿದ್ದಾರೆ.

ಸ್ಕೈಡಿಯೊ ಎಂಬ ಕಂಪನಿ ತಯಾರು ಮಾಡಿದ ಟ್ರಾಕಿಂಗ್ ಡ್ರೋನ್‌, ಕೇವಲ 2499 ಅಮೆರಿಕನ್ ಡಾಲರ್‌ಗೆ (₹ 1.62 ಲಕ್ಷ) ಸಿಗುತ್ತಿದೆ. ಪ್ರತಿಯೊಬ್ಬರಿಗೂ ದೊರೆಯಬಹುದಾದ ತಂತ್ರಜ್ಞಾನವನ್ನು ಬಳಸಿಕೊಂಡು ಈ ಡ್ರೋನ್‌ ತಯಾರಿಸಲಾಗಿದೆ. ಸಾಮಾನ್ಯ ಕ್ಯಾಮೆರಾಗಳು, ಓಪನ್‌ ಸೋರ್ಸ್‌ ತಂತ್ರಾಂಶ ಮತ್ತು ಕಡಿಮೆ ವೆಚ್ಚದ ಕಂಪ್ಯೂಟರ್ ಚಿಪ್‌ಗಳು ಇದರಲ್ಲಿವೆ.

‘ಈ ರೀತಿ ಕಡಿಮೆ ಹಣಕ್ಕೆ ತಂತ್ರಜ್ಞಾನ ದೊರೆತರೆ ಅದು ಸ್ವಯಂಚಾಲಿತ ಕಾರುಗಳಿಗೆ, ರೋಬೊಟ್‌ಗಳಿಗೆ, ಭದ್ರತಾ ಕ್ಯಾಮೆರಾಗಳಿಗೆ ಮತ್ತು ವಿಸ್ತೃತ ಬಳಕೆಯ ಇಂಟರ್‌ನೆಟ್‌ ಸೇವೆಗಳಿಗೆ ಬಳಕೆಯಾಗುತ್ತದೆ’ ಎಂಬ ಆತಂಕವನ್ನು ಸ್ಕೈಡಿಯೊ ಕಂಪನಿಯ ವಿಜ್ಞಾನಿಯೊಬ್ಬರು ವ್ಯಕ್ತಪಡಿಸಿದ್ದಾರೆ.

ಏನೋ ಮಾಡಲು ಹೋಗಿ ಏನೋ ಆಯಿತು ಎಂಬಂತೆ ಕೃತಕ ಬುದ್ಧಿಮತ್ತೆ ಸಾಧನಗಳು ವಿಚಿತ್ರವಾದ ಮತ್ತು ನಿರೀಕ್ಷೆಯನ್ನೇ ಮಾಡದ ಕೆಲಸಗಳಿಗೆ ಬಳಕೆಯಾಗುತ್ತಿವೆ ಎಂಬ ಆತಂಕ ಸಂಶೋಧಕರನ್ನು ಈಗ ಕಾಡುತ್ತಿದೆ.

ಭದ್ರತಾ ಕ್ಯಾಮೆರಾ ಮತ್ತು ಸ್ವಯಂ ಚಾಲಿಕ ಕಾರುಗಳಿಗೆ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವು ದುಷ್ಕರ್ಮಿಗಳಿಗೆ ಲಭ್ಯವಾದರೆ ಇದರಿಂದ ಒಳಿತಂತೂ ಆಗುವುದಿಲ್ಲ ಎನ್ನುತ್ತಾರೆ ಇವರು.

ಸ್ವಯಂಚಾಲಿತ ತಂತ್ರಜ್ಞಾನ ಬಳಸಿದ ಸಾಧನಗಳಿಂದ ಯಾವುದಾದರೂ ಒಂದರ ಮೇಲೆ ದಾಳಿ ನಡೆಸುವಂತೆ ಮಾಡುವುದು ಸರಳ. ಆದರೆ ಇವುಗಳು ಜನರ ಮೇಲೆ ದಾಳಿ ನಡೆಸಿದರೆ, ವೈಯಕ್ತಿಕ ಮಾಹಿತಿಯನ್ನು ಕದಿಯುವಂತಾದರೆ ಏನು ಮಾಡುವುದು ಎಂಬುದು ಸಂಶೋಧಕರ ಆತಂಕವಾಗಿದೆ. ಆದರೆ ಒಂದು ಆಶಾವಾದದ ಸಂಗತಿ ಎಂದರೆ ಈ ರೀತಿ ದುರ್ಬಳಕೆಯಾಗುವ ತಂತ್ರಜ್ಞಾನದ ಮೇಲೆ ಹಿಡಿತ ಸಾಧಿಸಲು ಸಂಶೋಧಕರೂ ಸಿದ್ಧರಾಗಿದ್ದಾರೆ. ನಾವೂ ಇವುಗಳಿಗೆ ರಕ್ಷಣಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

ಕ್ವಾಡ್‌ ಕಾಪ್ಟರ್‌ ಸಂಶೋಧನೆ: ಕ್ಯಾಲಿಫೋರ್ನಿಯಾದ ರೆಡ್‌ವುಡ್‌ ಸಿಟಿಯ ಸ್ಕೈಡಿಯೊ ಸ್ವಯಂಚಾಲಿತ ಡ್ರೋನ್‌ ಒಂದನ್ನು ತಯಾರು ಮಾಡಿದೆ. ‘ಆರ್1’ ಎಂದು ಕರೆಯಲಾಗುವ  ಇದರ ಸಂಶೋಧಕರು ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಒಳಗೊಂಡ ಇದಕ್ಕೆ ಕ್ವಾಡ್‌ ಕಾಪ್ಟರ್‌ ಎಂದು ಕರೆಯಲಾಗುತ್ತದೆ. 4ಕೆ ವಿಡಿಯೊವನ್ನು ಇದು ಮಾಡುತ್ತದೆ. ಮೊದಲ ಗ್ರೇಡ್ 1 ಡ್ರೋನ್‌ ಆಗಿರುವ ಇದು ಹಾರಾಟ ಮಾಡಲಾರಂಭಿಸಿದರೆ ನಿಯಂತ್ರಣಕ್ಕೆ ಸಿಗುವುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT