ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹವೆಂಬ ಗಿಂಡಿಯಲ್ಲಿ ಆತ್ಮ ಎಂಬ ತೀರ್ಥ

Last Updated 28 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಡಿವಿಜಿಯವರ ಮಾತುಗಳಲ್ಲಿ ‘ಅಧ್ಯಾತ್ಮ’ದ ವಿವರಣೆಯನ್ನು ನೋಡುತ್ತಿದ್ದೇವೆ.

ಯಾವುದೇ ಮಿತಿಗಳಿಲ್ಲದೆ ಎಲ್ಲೆಲ್ಲೂ ಇರುವ ತತ್ತ್ವವೇ ‘ಬ್ರಹ್ಮ’ ಎಂದು ನೋಡಿದೆವು. ಆ ಬ್ರಹ್ಮವಸ್ತುವಿನ ಲಕ್ಷಣವನ್ನು ಡಿವಿಜಿಯವರ ಮಾತುಗಳಲ್ಲಿಯೇ ನೋಡೋಣ:

‘ಬ್ರಹ್ಮವಸ್ತುವು ಅನಂತವಾದದ್ದು, ಸ್ವತಂತ್ರವಾದದ್ದು, ಅಪಾರ ಚೈತನ್ಯನಿಧಿಯಾದದ್ದು. ಅದು ಸರ್ವವ್ಯಾಪಿಯಾದದ್ದು. ಅದು ಕಲ್ಲು ಮಣ್ಣು ಮೊದಲಾದ ಜಡಪದಾರ್ಥಗಳಲ್ಲಿ ನಿದ್ರಿಸುವಂತೆ ಇರುತ್ತದೆ. ಗಿಡಮರಗಳಲ್ಲಿ ಅದು ಕೊಂಚ ಎಚ್ಚತ್ತಿರುವಂತೆ ಕಾಣುತ್ತದೆ. ಕ್ರಿಮಿಕೀಟಗಳಲ್ಲಿ ಇನ್ನೂ ಹೆಚ್ಚು ಎಚ್ಚರಿರುತ್ತದೆ. ಮೃಗಪಕ್ಷಿಗಳಲ್ಲಿ ಅದಕ್ಕಿಂತ ಹೆಚ್ಚು ಬೆಳಗುತ್ತದೆ. ಮನುಷ್ಯಪ್ರಾಣಿಯಲ್ಲಿ ಮತ್ತೂ ಹೆಚ್ಚು ಪ್ರಕಾಶವಾಗಿರುತ್ತದೆ. ಮನುಷ್ಯರಲ್ಲಿ ಸಹ ಅದು ಕೆಲ ಮಂದಿಯಲ್ಲಿ ಪ್ರಕಾಶಿಸುವುದಕ್ಕಿಂತ ಹೆಚ್ಚಾಗಿ ಬೇರೆ ಕೆಲಮಂದಿಯಲ್ಲಿ ಪ್ರಕಾಶಿಸುತ್ತದೆ. ಹೀಗೆ ಆ ವಿಶ್ವಚೈತನ್ಯವು ಕೆಲವೆಡೆ ಗೂಢವಾಗಿ, ಕೆಲವೆಡೆ ಪ್ರಕಾಶವಾಗಿ, ಕೆಲವೆಡೆ ಸುಪ್ತವಾಗಿ, ಕೆಲವೆಡೆ ಜಾಗೃತವಾಗಿ – ಏವಂಚ ಎಲ್ಲ ಕಡೆಯೂ ತುಂಬಿಕೊಂಡಿರುತ್ತದೆ. ಹಾಗಿದ್ದರೂ ಚೈತನ್ಯದ ನಡುನಡುವೆ ದೇಹಾದಿ ಜಡಪದಾರ್ಥ ಸೇರಿರುವುದರಿಂದ ಅಖಂಡೈಕವಾದದ್ದು ನಾಲ್ಕೆಂಟವಾಗಿ ಒಡೆದಿರುವಂತೆ ನಮಗೆ ಕಾಣುತ್ತದೆ. ಇದೇ ಚರಾಚರ. ಜಡದೇಹವೆಂಬ ಗಿಂಡಿಯಲ್ಲಿರುತ್ತದೆ ಆತ್ಮಚೈತನ್ಯ ಎಂಬ ತೀರ್ಥ. ದೇಹವೂ ಆತ್ಮವೂ ಸೇರಿ ಜೀವಾತ್ಮ’.

ತುಂಬ ಗಹನವೂ ಸಂಕೀರ್ಣವೂ ಆದ ವಿವರಗಳನ್ನು ಡಿವಿಜಿಯವರು ಇಲ್ಲಿ ಅತ್ಯಂತ ಸರಳವಾಗಿ ನಿರೂಪಿಸಿರುವ ವಿಧಾನ ಮನೋಜ್ಞವಾಗಿದೆ.

ಬ್ರಹ್ಮವಸ್ತುವಿನ ಸ್ವರೂಪವನ್ನು ಅವರು ಮೊದಲಿಗೆ ಹೇಳಿದ್ದಾರೆ: ‘ಅದು ಅನಂತವಾದ್ದು; ಎಂದರೆ ಕೊನೆಯೇ ಇಲ್ಲದ್ದು’; ‘ಅದು ಸ್ವತಂತ್ರವಾದದ್ದು; ಎಂದರೆ ಅದು ಯಾರೊಬ್ಬರ ಯಾವುದರ ಹಂಗಿನಲ್ಲಾಗಲೀ ನಿಯಂತ್ರಣದಲ್ಲಾಗಲೀ ಇಲ್ಲ’; ‘ಅದು ಅಪಾರ ಚೈತನ್ಯನಿಧಿಯಾದದ್ದು; ಎಂದರೆ ಅದು ಸುಮ್ಮನೆ ಇಲ್ಲ, ಶಕ್ತಿಯ ರೂಪದಲ್ಲಿದೆ’;‘ಅದು ಸರ್ವವ್ಯಾಪಿಯಾದದ್ದು; ಎಂದರೆ ಎಲ್ಲೆಲ್ಲೂ ಹರಡಿದೆ’. ಇಷ್ಟನ್ನು ತಿಳಿದ ಮೇಲೂ ಹಲವು ಸಂದೇಹಗಳು ಏಳದಿರದು. ಅವುಗಳಿಗೂ ಅವರು ಸಮಾಧಾನವನ್ನು ನೀಡಿದ್ದಾರೆ.

ಎಲ್ಲೆಲ್ಲೂ ಆ ಬ್ರಹ್ಮವಸ್ತುವು ಚೈತನ್ಯರೂಪದಲ್ಲಿದೆ ಎಂದು ಒಪ್ಪಿದರೂ ಲೋಕದಲ್ಲಿ ಒಂದು ವಸ್ತು ಇದ್ದಂತೆ ಇನ್ನೊಂದಿಲ್ಲವಲ್ಲ – ಎಂಬ ಪ್ರಶ್ನೆ ಕಾಡುತ್ತದೆ ಅಲ್ಲವೆ? ಈ ಚೈತನ್ಯದ ಸ್ವರೂಪವೇ ಒಂದೊಂದು ವಸ್ತುವಿನಲ್ಲಿ ಒಂದೊಂದು ವಿಧದಲ್ಲಿ ಇರುತ್ತದೆ ಎನ್ನುತ್ತಾರೆ ಡಿವಿಜಿ. ಕಲ್ಲು–ಮಣ್ಣು ಮೊದಲಾದ ಜಡಪದಾರ್ಥದಲ್ಲೂ ಬ್ರಹ್ಮವಸ್ತು ಇದೆಯೆ? ಹೌದು, ಇದೆ; ಆದರೆ ಅದು ನಿದ್ರಾವಸ್ಥೆಯಲ್ಲಿದೆ. ಹಾಗಾಗಿ ನಮಗೆ ಆ ವಸ್ತುಗಳಲ್ಲಿ ಮೇಲ್ನೋಟಕ್ಕೇ ಬ್ರಹ್ಮವಸ್ತುವಿನ ಚೈತನ್ಯ ಅರಿವಿಗೆ ಬರುವುದಿಲ್ಲ. ಗಿಡಮರಗಳಲ್ಲಿ ಈ ಚೈತನ್ಯ ಇನ್ನು ಸ್ವಲ್ಪ ಜಾಗ್ರತಾವಸ್ಥೆಯಲ್ಲಿರುತ್ತದೆ. ಗಿಡಮರಗಳಿಗೆ ಜೀವ ಇರುವುದು ಅವುಗಳ ಬೆಳವಣಿಗೆಯಿಂದಲೇ ಗೊತ್ತಾಗುತ್ತದೆ. ಹೀಗಾಗಿ ಗಿಡಮರಗಳಲ್ಲಿ ಸ್ವಲ್ಪ ಮಟ್ಟಿಗೆಯಾದರೂ ಬ್ರಹ್ಮಚೈತನ್ಯವು ನಮ್ಮ ದೃಷ್ಟಿಗೆ ಒದಗುವಂತಿದೆ. ಕ್ರಿಮಿಕೀಟಗಳಲ್ಲಿ ಚೈತನ್ಯದ ಪ್ರಮಾಣ ಗಿಡಮರಗಳಿಗಿಂತಲೂ ಇನ್ನು ಸ್ವಲ್ಪ ಹೆಚ್ಚು ಕಾಣುತ್ತದೆ. ಪ್ರಾಣಿಗಳಲ್ಲಿಯೂ ಪಕ್ಷಿಗಳಲ್ಲಿಯೂ ಚೈತನ್ಯ ಇನ್ನೂ ಅಧಿಕ ಪ್ರಮಾಣದಲ್ಲಿ ಪ್ರಕಟವಾಗಿರುತ್ತದೆ. ಆದರೆ ಮನುಷ್ಯನಲ್ಲಿ ಈ ಎಲ್ಲ ಜಡ–ಜೀವಪದಾರ್ಥಗಳಿಗಿಂತಲೂ ಅಧಿಕವಾಗಿರುವುದು ಸ್ಪಷ್ಟವಷ್ಟೆ! ಆದರೆ ಇಲ್ಲೂ ಒಂದು ಸಮಸ್ಯೆ ಏಳುತ್ತದೆ. ಮನುಷ್ಯರಲ್ಲಿಯೂ ಒಬ್ಬರಿರುವಂತೆ ಇನ್ನೊಬ್ಬರು ಇಲ್ಲವಲ್ಲ? ಹೌದು, ಬ್ರಹ್ಮಚೈತನ್ಯ ಒಬ್ಬೊಬ್ಬರಲ್ಲಿ ಒಂದೊಂದು ಪ್ರಮಾಣದಲ್ಲಿರುವಂತೆ ತೋರುತ್ತದೆ.

ಇಷ್ಟು ರೀತಿಯಲ್ಲಿ ತನ್ನ ಇರವನ್ನು ಪಡೆದಿರುವ ಬ್ರಹ್ಮವಸ್ತುವು ಹಾಗಾದರೆ ಒಂದೋ ಎರಡೋ ನಾಲ್ಕೋ ನೂರೋ ಸಾವಿರವೋ – ಎಂಬ ಪ್ರಶ್ನೆಯೂ ಇಲ್ಲಿ ಹುಟ್ಟುತ್ತದೆ. ಬ್ರಹ್ಮವಸ್ತುವು ಒಂದೇ; ಮಾತ್ರವಲ್ಲ, ಅದು ಅಖಂಡ – ಎಂದರೆ ತುಂಡಾಗದೆ ಇರುವಂಥದ್ದು. ಹೀಗಿದ್ದರೂ ಅದು ಜಡದಲ್ಲೂ ಜೀವದಲ್ಲೂ ಬೆರೆತುಕೊಂಡಿರುವುದರಿಂದ, ಅದು ಬೇರೆ ಬೇರೆ ಪ್ರಮಾಣದಲ್ಲಿ ಒಡೆದಿರುವಂತೆ ಕಾಣುತ್ತಿದೆಯಷ್ಟೆ. ಡಿವಿಜಿಯವರು ಹೀಗೆ ವಿವರಣೆಗೆ ಕೊಟ್ಟಿರುವ ಹೋಲಿಕೆ ಸೊಗಸಾಗಿದೆ. ‘ಜಡದೇಹ ಎಂಬ ಗಿಂಡಿಯಲ್ಲಿರುತ್ತದೆ ಆತ್ಮಚೈತನ್ಯ ಎಂಬ ತೀರ್ಥ.’ ನಮ್ಮ ದೇಹವೂ ಸೇರಿದಂತೆ ಕಲ್ಲು–ಮಣ್ಣು, ಗಿಡ–ಮರ, ಪ್ರಾಣಿ–ಪಕ್ಷಿ – ಇವೆಲ್ಲವೂ ಒಂದು ದೃಷ್ಟಿಯಿಂದ ಜಡವಸ್ತುಗಳೇ; ಆದರೆ ಈ ವಸ್ತುಗಳಿಗೆ ಆ ‘ವಸ್ತುತನ’ ಒದಗಿರುವುದೇ ಬ್ರಹ್ಮಚೈತನ್ಯದಿಂದ. ಕಲ್ಲಿನ ಕಲ್ಲುತನಕ್ಕೂ ಗಿಡದ ಗಿಡತನಕ್ಕೂ ಪ್ರಾಣಿಯ ಪ್ರಾಣಿತನಕ್ಕೂ ಮನುಷ್ಯನ ಮನುಷ್ಯತನಕ್ಕೂ ಕಾರಣವೇ ಈ ಬ್ರಹ್ಮಚೈತನ್ಯದ ಇರುವಿಕೆ. ಇವೆಲ್ಲವೂ ಪಾತ್ರೆಯಂತೆ; ಅದರ ಒಳಗಿರುವ ತೀರ್ಥವೇ ಈ ಬ್ರಹ್ಮವಸ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT