ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಕು ಬೆಟ್ಟಗಳ ನಾಕದಲ್ಲಿ...

Last Updated 28 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನೋಡಿ ಅಲ್ಲಿ ಕಾಣುತ್ತಿರುವುದು ಕೊಡೆ ಕಲ್ಲು, ಅದರಾಚೆಗೆ ಕಾಣುತ್ತಿರುವುದು ಬಾಳೆ ಕಲ್ಲು ಗುಡ್ಡ. ಎಲ್ಲಕ್ಕಿಂತ ಅದ್ಭುತ ಜೇನುಕಲ್ಲಿನ ನೆತ್ತಿಯ ಮೇಲೆ ನಿಂತು ಕಾಡಿನ ವಿಹಂಗಮ ಸೌಂದರ್ಯವನ್ನು ಸವಿಯೋದು. ಇವತ್ತು ಈ ಮೂರೂ ಗುಡ್ಡಗಳನ್ನು ಏರೋಕಿದೆ. ನಿಮ್ಮ ಮೊಬೈಲ್ ಅನ್ನೋ ಭೂತವನ್ನು ಈಗ ಪಕ್ಕಕ್ಕಿಡಿ, ಯಾವ ಆಧುನಿಕತೆಯ ಹಂಗಿಲ್ಲದೇ ಕಾಡಿನ ಮೌನದಲ್ಲಿ ಕಳೆದುಹೋಗುವ ಸುಖ ಹೇಗಿರುತ್ತದೆ ನೋಡಿ’

–ಪರಿಸರ ಹೋರಾಟಗಾರ, ಸಹ್ಯಾದ್ರಿ ಸಂಚಯ ಚಾರಣ ತಂಡದ ಮುಖ್ಯಸ್ಥ ದಿನೇಶ್ ಹೊಳ್ಳರು ಹೀಗೆಲ್ಲ ಕಾಡನ್ನು ಕಾಡಿಸಿದಾಗ ನಮಗೆಲ್ಲಾ ಬೆಟ್ಟ ಹತ್ತುವ ಅಮಿತೋತ್ಸಾಹ, ಕಾಡಿನ ಮೌನದಲ್ಲಿ ಕಳೆದುಹೋಗುವ ಆಸೆ.

ಕುಂದಾಪುರದ ಭಂಡಾರ್‍ಕರ್ಸ್ ಕಾಲೇಜಿನ ವಿದ್ಯಾರ್ಥಿಗಳು ಕ್ಲಾಸ್ ರೂಂನ ಪಾಠವನ್ನೂ ಮೀರಿದ ಈ ಕಾಡಿನ ಅನುಭೂತಿ ಸವಿಯಲು ಕಾಡಿನ ನೆತ್ತಿಯನ್ನೇ ನೋಡಿ ಸುಖಿಸುತ್ತಿದ್ದರು. ದೈನಂದಿನ ವೃತ್ತಿ ಜೀವನದ ಜಂಜಡದಿಂದ ಮುಕ್ತಿ ಸಿಕ್ಕ ಖುಷಿಯಿಂದ ನಾವು ಒಂದಿಷ್ಟು ಯುವಕರು ಕಾಡು ನಮಗೆ ಹೊಸತೇನ್ನೋ ಕಲಿಸುತ್ತದೆ ಅನ್ನೋ ಸಂಭ್ರಮದಿಂದ ಕಾಡಿನ ನೆತ್ತಿಗೊಯ್ಯುವ ಕಿರಿದಾದ ಹಾವಿನಂಥ ದಾರಿ ಹಿಡಿದು ಸಾಗಿದಾಗ ಇನ್ನೂ ಬೆಳಗು ಹರಿಯುತ್ತಿತ್ತು. ನಮ್ಮ ವೃತ್ತಿ, ಅತೃಪ್ತಿ, ನಿರಾಶೆ, ಒತ್ತಡ ಎಲ್ಲವನ್ನೂ ಮರೆಸುವ ಬರೀ ಹಸಿರಿನಲ್ಲೇ ನಮ್ಮನ್ನು

ಮೆರೆಸುವ ಚಾರ್ಮಾಡಿ

ಘಾಟಿಯ ಗುಡ್ಡದ ಸೆರಗೇರಿದಾಗ ನಾವೆಲ್ಲ ನಮ್ಮ ಹೆಸರನ್ನೇ ಮರೆತು ಹಸಿರಾಗಿ ಬಿಟ್ಟಿದ್ದೆವು.

‘ಈ ಹಾವಿನಂಥ ದಾರಿ ಸಾಗಿದರೆ ನಾವು ಯಾಕಾದ್ರೂ ಚಾರಣಕ್ಕೆ ಬಂದಿದ್ದೇವೊ? ಅಂತ ನಿಮಗೆ ಕಾಡಿನ ಬಗ್ಗೇನೇ ಒಂದು ಕ್ಷಣ ಭ್ರಮನಿರಸನವಾಗಬಹುದು. ಆದ್ರೆ ಒಮ್ಮೆ ಈ ದಾರಿ ಸಾಗಿದರೆ ಮತ್ತೆಲ್ಲಾ ನಿಮಗೆ ಹಸುರಿನ ಹಬ್ಬ’ ಅಂತ ಹೊಳ್ಳರು ಅಭಯವೇನೋ ನೀಡಿದರು. ಆದರೆ ಹೆಗಲ ಮೇಲೆ ಮೂಟೆಯಂತಹ ಬ್ಯಾಗುಗಳನ್ನು ಹೊತ್ತು ಸುಮಾರು 70 ಡಿಗ್ರಿಯಷ್ಟಿರುವ ಆ ಕಿರಿದಾದ ದಾರಿಯಲ್ಲಿ ಏರಿದಾಗ ಮೈಯೆಲ್ಲಾ ಬೆವರ ಸ್ನಾನ, ಬಿಟ್ಟೂಬಿಡದ ಏದುಸಿರು, ನಮ್ಮ ಜೊತೆಗೆ ಬಂದಿದ್ದ ಸಹ್ಯಾದ್ರಿ ಸಂಚಯದ ಅಣ್ಣಂದಿರಂತಹ ಗೆಳೆಯರು ಹಸಿರು ಸೇನೆಯ ದಂಡನಾಯಕರಂತೆ ಅಲ್ಲಲ್ಲಿ ನಿಂತು ಆಯಾಸವಾದವರಿಗೆ ನೀರು ಕೊಡುತ್ತ, ಏರಲಾಗದೇ ಸಿಕ್ಕಸಿಕ್ಕಲ್ಲಿ ಕೂತವರ ಜೊತೆ ತಾವೂ ಕೂತು ಚೆಂದದ ಜೋಕುಗಳನ್ನು ಹೇಳಿ ನಗೆಯ ಹಾಯಿ ದೋಣಿ ಚಿಮ್ಮಿಸಿದರು. ಆ ನಗುವನ್ನೇ ಹೊತ್ತುಕೊಂಡು ಮತ್ತೆ ದಾರಿ ಸಾಗುತ್ತಿದ್ದ ಅವರಲ್ಲಿ ಜೀವನೋತ್ಸಾಹದ ಬೆರಗಿತ್ತು.

ಅಲ್ಲೇ ದೂರದಿಂದ ಕೊಡೆಕಲ್ಲು ಆ ಬಿಸಿಲಿಗೆ ಕೊಡೆ ಬಿಚ್ಚಿಕೊಂಡಂತೆ ಆರಾಮಾಗಿ ನಿಂತ ಪರಿಗೇ ನಮ್ಮಲ್ಲಿ ಆನಂದದ ಹಬ್ಬ. ‘ಅಬ್ಬಬ್ಬ ಎಂಥಾ ಚೆಂದ ಕಲ್ಲು ಮಾರಾಯ‍್ರೆ’ ಅನ್ನೋ ಹೂಂಕಾರ. ಜೋರಾಗಿ ಬೀಸಿ ನಮ್ಮನ್ನು ಗಾಳಿಪಟದಂತೆ ಸುತ್ತಿಸುವ ಗಾಳಿಯಲ್ಲಿ ಯಾರಿಗೂ ಕೇಳಿಸಲಿಲ್ಲ. ತನ್ನ ಬೃಹದಾಕಾರದ ದೇಹದಿಂದ, ಭಯಾನಕತೆಯಿಂದ, ವಿಶಾಲತೆಯಿಂದ ನಿಂತಿರೋ ಕಲ್ಲಿನ ಬುಡದಲ್ಲಿ ಇರುವೆ ಸಾಲಿನಂತೆ ಹೋಗಿ ಕೂತಾಗ, ಕೊಡೆ ಕಲ್ಲಿನ ಮಡಿಲಲ್ಲಿ ದಣಿವೆಲ್ಲವೂ ಮಂಗಮಾಯ.

‘ಒಮ್ಮೆ ಹೀಗೇ, ಗುಡ್ಡ ಏರಿ ಏರಿ ಸುಸ್ತಾಗಿ ಈ ಕಲ್ಲಿನ ಮಡಿಲಿಗೆ ಬರುವ ಮೊದಲೇ ಚಾರಣಿಗರೊಬ್ಬರು ಜೀವ ಬಿಟ್ಟಿದ್ದರು. ಆ ಬಳಿಕ ನಮ್ಮ ಚಾರಣ ಬಳಗಕ್ಕೆ ಕತ್ತಲು ಕವಿದಂತಾಗಿತ್ತು. ಈಗ ಪ್ರತೀ ಸಲ ಈ ಕೊಡೆಕಲ್ಲಿನ ಬುಡಕ್ಕೆ ಬಂದಾಗಲೂ ಇಲ್ಲೇ ಜೀವ ತೇಯ್ದ ಆ ವ್ಯಕ್ತಿಯ ನೆನಪಾಗಿ ನಮ್ಮ ಜೀವವೂ ಅರೆಕ್ಷಣ ಅದುರುತ್ತದೆ’ ಅಂತ ತಂಡದ ಸದಸ್ಯರೊಬ್ಬರು ಹೇಳಿದಾಗ ನಾವೆಲ್ಲ ಹನಿಗಣ್ಣಾಗಿ ಕೊಡೆ ಕಲ್ಲಿನ ಭಯಾನಕತೆಗೆ ಮತ್ತಷ್ಟು ಬೆದರಿ ಅದರ ಮಡಿಲಲ್ಲೆ ಕೂತು ಸಾವರಿಸಿಕೊಂಡೆವು. ತಂದಿದ್ದ ಕಿತ್ತಳೆ ಹಣ್ಣಿನ ಹೋಳುಗಳು ಎಲ್ಲರ ಹೊಟ್ಟೆಗಿಳಿದಾಗ ಮತ್ತೆ ಜೀವ ಸಂಚಾರ. ಅಲ್ಲೇ ಕೂತಿದ್ದ ಸಹ್ಯಾದ್ರಿ ಸಂಚಯದ ಸದಸ್ಯರು ಕಾಡಿನ ಕತೆಗಳನ್ನು ಹೇಳಲು ಶುರು ಮಾಡಿದ್ದರು.

‘ಈ ಬಿರುಬಿಸಿಲಿನಲ್ಲಿ ಬೆಟ್ಟ ಒಣಗಿ ಅಷ್ಟೇನೂ ಚೆಂದ ಕಾಣಿಸಲ್ಲ. ಮಳೆಗಾಲ ಅಥವಾ ಚಳಿಗಾಲಕ್ಕೆ ಬಂದರೆ ಈ ಬೆಟ್ಟವನ್ನು ದಮ್ಮಯ್ಯವೆಂದರೂ ಬಿಡಲು ಮನಸ್ಸು ಬರಲ್ಲ. ಇಲ್ಲೇ ಇದ್ದುಬಿಡೋಣ ಅನ್ನಿಸುತ್ತೆ’ ಅಂತ ಆಸೆ ಹುಟ್ಟಿಸುತ್ತ, ಫೋಟೊ ಹೊಡೆಯುತ್ತ ಬಾಳೆಕಲ್ಲು ಗುಡ್ಡದ ನೆತ್ತಿಯತ್ತ ಸಾಗಿಸಿದರು ಸಂಚಯದ ಸದಸ್ಯ ಸುಧೀರಣ್ಣ.

ಆಗಲೇ ಸಹ್ಯಾದ್ರಿಯ ಬಿಸಿಲಿಗೆ ನೆತ್ತಿ ಬಡಿದುಕೊಳ್ಳುತ್ತಿತ್ತು. ಬಾಟಲಿ ತುಂಬಾ ತಂದಿದ್ದ ನೀರೆಲ್ಲಾ ಖಾಲಿಯಾಗಿ ಗಂಟಲೊಳಗೆ ಗಾಳಿ ಮಾತ್ರ ಇಳಿಯುತ್ತಿತ್ತು. ಎಲ್ಲರ ಬಳಿ ಇದ್ದ ನೀರಿನ ಬಾಟಲುಗಳಲ್ಲಿಯೂ ಇಷ್ಟೇ ಇಷ್ಟು ನೀರಿತ್ತು.

ಸದಸ್ಯರೊಬ್ಬರು ಕೊಟ್ಟ ಮೂಸಂಬಿ ಹಣ್ಣಿನ ಒಂದೇ ಒಂದು ಹೋಳಿನಲ್ಲಿ ನೀರಿನಂಶ ಇದ್ದದ್ದರಿಂದ ಅದೇ ನೀರಾಗಿ ಗಂಟಲಿಗೆ ಅಮೃತ ಸೇಚನವಾಯ್ತು. ಒಂದೊಂದು ನೀರಿನ ಹನಿಯ ಮಹತ್ವ ಬದುಕಿನಲ್ಲಿ ಆಗ ಅರಿವಾದಷ್ಟು ಯಾವತ್ತೂ ಅರಿವಾಗಿಲ್ಲ ಅನ್ನಿಸುತ್ತದೆ.

‘ಎಲ್ಲಾದ್ರೂ ಒಂದು ಹೊಳೆ ಸಿಕ್ಕರೆ ಸಾಕಿತ್ತು, ಆನೆಯಂತೆ ನೀರು ಕುಡಿಬೋದಿತ್ತು’ ಅಂತ ಆಸೆ ಪಟ್ಟ ನಮಗೆ ‘ಹೊಳೆ ಸಿಗಬೇಕಾದ್ರೆ ಇನ್ನೊಂದು ಗುಡ್ಡ ಹತ್ತಲೇಬೇಕು. ರಾತ್ರಿ ಉಳಿಯುವ ಪುಟ್ಟ ಮನೆಯ ಬಳಿ ಜಲಪಾತ ಉಂಟು ಬೇಕಾದಷ್ಟು ಕುಡೀರಿ’ ಅಂತ ಏಕಕಾಲಕ್ಕೆ ನಿರಾಶೆಯನ್ನೂ, ಆಶೆಯನ್ನೂ ಹುಟ್ಟಿಸಿಬಿಟ್ಟರು ಸಂಚಯದ ಸದಸ್ಯ ಅವಿನಾಶ್.

‘ನೀವೆಲ್ಲಾ ಬಾಳೆಕಲ್ಲಿಗೆ ಹೋಗಿಬನ್ನಿ ನಾವು ಇಲ್ಲೇ ಕೆಳಗೆ ಕೂರ್ತೇವೆ’ ಅಂತ ಒಂದಿಷ್ಟು ಹುಡುಗಿಯರು ಠುಸ್ಸಾಗಿ ಅಲ್ಲೇ ಜಾಂಡಾ ಊರಿಬಿಟ್ಟರು.

ಬಾಳೆಕಲ್ಲು ಗುಡ್ಡದಲ್ಲಿ ಬಾಳೆ ಬಂಗಾರ: ಬಾಯಾರಿಸಿಕೊಂಡು ಬಾಳೆಕಲ್ಲು ಗುಡ್ಡದ ನೆತ್ತಿ ತಲುಪಿದಾಗ ಮಟ ಮಟ ಮಧ್ಯಾಹ್ನ. ಹೊಟ್ಟೆಯೆಲ್ಲಾ ಖಾಲಿಯಾಗಿ ಮರುಭೂಮಿಯಂತಾಗಿದ್ದರೂ ಬಾಳೆಕಲ್ಲು ಗುಡ್ಡದ ಹೃದಯಂಗಮ ಸೊಬಗು ಕಣ್ತುಂಬಿದಾಗ ಮೈಮನಸ್ಸೆಲ್ಲ ಪುಲಕದ ರಸಜಳಕ. ‘ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ’ ಅನ್ನೋ ಕುವೆಂಪು ಸಾಲು ನೆನಪಾಯಿತು. ಮತ್ತೆ ಮತ್ತೆ ದೂರದಲ್ಲಿ ಕಾಣುತ್ತಿರುವ ಕಳಸದ ಬಲ್ಲಾಳರಾಯನ ದುರ್ಗ, ಮಿಂಚುಕಲ್ಲು, ಅಮೇದಿಕಲ್ಲು ಮೊದಲಾದ ಬೆಟ್ಟದ ಹಸಿರನ್ನು ಕಣ್ಣ ಕ್ಯಾಮೆರಾದಲ್ಲಿ ಝೂಮ್ ಇನ್ ಮಾಡಿ ನೋಡಿದಾಗ ಕಾಡಿನ ವಿಸ್ಮಯದ ನೋಟಗಳು ಕೂಡಿ ಬಾಳೆಕಲ್ಲು ಗುಡ್ಡದಲ್ಲಿ ನಮ್ಮ ಬಾಳ್ವೆಯೇ ಪಾವನವಾದಂತಾಯಿತು. ಅಲ್ಲೇ ಕೂತು ಸಂಚಯದ ದಿನೇಶ್ ಹೊಳ್ಳರು, ‘ಮನುಷ್ಯ ಕಾಡನ್ನು ಎಷ್ಟೊಂದು ನಾಶ ಮಾಡಿದ್ದಾನೆ. ದೂರದಲ್ಲಿ ಕಾಣುತ್ತಿರುವ ರೆಸಾರ್ಟ್‌ಗಳು, ಹಸಿರಿನ ಹೆಸರು ಹೇಳಿಕೊಂಡು ಶಿಕಾರಿಗೆ ಅವಕಾಶ ಕೊಡುತ್ತಿವೆ, ನದಿ ಮೂಲಗಳನ್ನು ನಾಶ ಮಾಡುತ್ತಿವೆ. ರಬ್ಬರ್ ತೋಟಗಳ ಬಿಸಿಗೆ ಕಾಡು ಜೀವಿಗಳು ಕಂಗಾಲಾಗಿವೆ’ ಎಂದರು.

ದೂರದ ಹಸುರಿನ ನಟ್ಟನಡುವೆ ಕಾಣುತ್ತಿರುವ ಎಸ್ಟೇಟ್‍ವೊಂದನ್ನು ತೋರಿಸುತ್ತ. ಹಸಿರ ನಡುವೆ ಅಲ್ಲಲ್ಲಿ ತಲೆ ಎತ್ತಿ ನಿಂತ ಕಾಂಕ್ರೀಟು ಕಾಡುಗಳು ಕೆಲ ವರ್ಷದಲ್ಲಿಯೇ ಇಡೀ ಕಾಡನ್ನು ಆಕ್ರಮಿಸಿದರೂ ಅಚ್ಚರಿಯಿಲ್ಲ ಎಂದು ಎಸ್ಟೇಟ್ ಮಾಲೀಕರ ಪರಿಸರ ವಿರೋಧಿ ಧೋರಣೆ ನೋಡಿ ನಮಗೆಲ್ಲಾ ಸಿಟ್ಟು ಬಂತು. ಕೆಲ ದಿನಗಳ ಹಿಂದಷ್ಟೆ ಬೆಂಕಿ ತಗುಲಿ ಸುಟ್ಟು ಹೋದ ಗುಡ್ಡದ ನೆತ್ತಿ, ಅಲ್ಲಲ್ಲಿ ಹಸುರು ದೋಚಿ, ಕಣ್ಣು ಕುಕ್ಕುತ್ತಿರುವ ರೆಸಾರ್ಟ್, ಖಾಸಗಿ ಎಸ್ಟೇಟ್‍ – ಇವೆಲ್ಲ ಮನುಷ್ಯ ಪ್ರಕೃತಿಯನ್ನು ವಿಕೃತಿ ಮಾಡುತ್ತಿರುವ ದೊಡ್ಡ ನಿದರ್ಶನಗಳಾಗಿ ಕಂಡವು. ಬಾಳೆಕಲ್ಲು ಗುಡ್ಡ ಇಳಿದು, ನೆರಳ ಜಾಗದಲ್ಲಿ ಕೂತ ನಾವೆಲ್ಲ ಅಡಿಕೆ ಹಾಳೆಯಲ್ಲಿ ತಂದಿದ್ದ ಪಲಾವ್ ಹಾಗೂ ಸಲಾಡ್ ಹಾಕಿ ಭೋಜನ ಹೊಡೆದಾಗ ಬಕಾಸುರ ಹೊಟ್ಟೆಗೆ ಅರೆ ಜೀವ ಬಂತು.

ಜೇನುಕಲ್ಲಿನಲ್ಲಿ ಜೇನಿನಂಥ ಸಾಯಂಕಾಲ: ಹಸಿರ ಜಗತ್ತು ಎಷ್ಟೊಂದು ಮನಮೋಹಕ, ನಿಗೂಢ, ಮುಗ್ಧ ಅಂತನ್ನಿಸಿದ್ದು ಜೇನುಕಲ್ಲಿನ ನೆತ್ತಿಯಲ್ಲಿ ನಿಂತ ಮೇಲೆಯೇ. ಸಮುದ್ರಮಟ್ಟದಿಂದ ಅಂದಾಜು 3,500 ಅಡಿಯಿರುವ ಜೇನುಕಲ್ಲಿನ ತುದಿಯಲ್ಲಿ ನಿಂತರೆ ಚಾರ್ಮಾಡಿ ಘಾಟಿಯ ಹಾವಿನಂತಹ ರಸ್ತೆಗಳು, ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಪುಟ್ಟ ಊರುಗಳು, ಚಿಕ್ಕಮಗಳೂರು ಕಾಡಿನ ತಪ್ಪಲುಗಳು ಕಾಣಿಸಿ ಕಣ್ಣೆಲ್ಲಾ ತಂಪಾಗುತ್ತದೆ. ನೆತ್ತಿ ಮೇಲೆ ನಿಂತು ಹಸಿರ ನೋಡುವಾಗ ಅದಮ್ಯವಾಗಿ ಬದುಕುವ ಆಸೆಯೂ ಕೊನರುತ್ತದೆ. ಕಾಡೆಂದರೆ ಬದುಕುವ ದಾರಿ, ಸ್ಫೂರ್ತಿ, ನೆಮ್ಮದಿಯ ಉಸಿರು, ಬದುಕು ಪೊರೆಯುವ ಹಸಿರು ಅಂತ ಅನ್ನಿಸಲು ಜೇನುಕಲ್ಲಿನ ನೆತ್ತಿ ಏರಬೇಕು, ಬದುಕಿನಲ್ಲಿ ಎಲ್ಲವನ್ನೂ ಗೆದ್ದವರಂತೆ ಜೇನುಕಲ್ಲಿನ ನೆತ್ತಿ ಹತ್ತಿದ ನಾವೆಲ್ಲ ಮೌನದಲ್ಲೇ ಕುಣಿದಾಡಿದಾಗ ಸಂಜೆಯಾಗಿ ಜೇನುಕಲ್ಲು ನೇಸರನ ಕೆಂಬಣ್ಣದಲ್ಲಿ ಮೀಯುತ್ತಿತ್ತು.

ಜೇನುಕಲ್ಲಿನ ಹಂಗು ತೊರೆದು ಬೆಟ್ಟದ ಕೆಳಗಿದ್ದ ಬಿದಿರುತಳ ಅನ್ನೋ ಪುಟ್ಟ ಊರಿನಲ್ಲಿರುವ ಮೀನಾಕ್ಷಮ್ಮನ ಮನೆಯಂಗಳಕ್ಕೆ ಬಂದು ನಿಂತಾಗ ಕಾಡಂಚಿನಲ್ಲಿರುವ ಅವರ ಪುಟ್ಟ ಮನೆ ಇಂದ್ರನಗರಿಯಂತೆ ಕಾಣುತ್ತಿತ್ತು.

ಜಲಪಾತದಿಂದ ಮನೆಗೆ ನಳ್ಳಿ ಮೂಲಕ ಬರುವ ನೀರನ್ನು ಬೇಕಾದಷ್ಟು ಕುಡಿಯುತ್ತ, ಸ್ವಲ್ಪ ಆಚೆಗಿರುವ ಜಲಪಾತದಲ್ಲಿ ಮಹಾಮಜ್ಜನ ಪೂರೈಸಿ ಮರಳಿ ಬಂದಾಗ, ಅಂಗಳದಲ್ಲಿ ಹಾಕಿದ್ದ ಸೌದೆಯ ಒಲೆಯಲ್ಲಿ ಗಂಜಿ ಬೇಯುತ್ತಿತ್ತು. ರಾತ್ರಿ ಬೆಂಕಿಯ ಬೆಳಕಿನಲ್ಲಿ ಕೂತು ಕಾಡಿನ ಕತೆಗಳನ್ನು ಹೇಳುತ್ತ, ಕೇಳುತ್ತ ಗಂಜಿ, ಉಪ್ಪಿನಕಾಯಿ, ಸಂಡಿಗೆಯ ಭೂರಿ ಭೋಜನವಾಯಿತು. ಮನೆಯ ಸೆಗಣಿ ಸಾರಿಸಿದ ಅಂಗಳದಲ್ಲಿ ಅಷ್ಟೊತ್ತಿಗೆ ದಣಿವಾಗಿ ಒಂದಿಬ್ಬರು ಮಲಗಿಬಿಟ್ಟಿದ್ದರು. ‘ಇವತ್ತು ಸಂಜೆ ಇದೇ ಅಂಗಳದಲ್ಲಿ ಚಿರತೆ ಬಂದಿತ್ತು. ಪಕ್ಕದ ಹೊಳೆಯಲ್ಲಿ ರಾತ್ರಿ ನೀರು ಕುಡಿಯಲು ಆನೆಗಳೂ ಬರುತ್ತಿರುತ್ತವೆ. ಯಾವುದಕ್ಕೂ ಆಗಾಗ ಬೆಂಕಿಗೆ ಕಟ್ಟಿಗೆ ಹಾಕಿ ಬೆಂಕಿ ಆರದಂತೆ ನೋಡಿಕೊಳ್ಳಬೇಕು, ದೂರದಿಂದ ಬೆಂಕಿ ನೋಡಿದರೆ ಯಾವ ಪ್ರಾಣಿಗಳು ಹತ್ತಿರ ಸುಳಿಯಲ್ಲ’ ಎಂದು ದಿನೇಶ್ ಹೊಳ್ಳರು ನಿದ್ದೆಗೆ ಜಾರಿದರು. ನಾವೆಲ್ಲ ಚಿರತೆ, ಆನೆಗಳು ಬಂದರೆ ಹೇಗಾಗಬಹುದು ಅಂತ ಯೋಚಿಸುತ್ತ ಆಗಾಗ ಭಯದಿಂದ ಎಚ್ಚರಾಗುತ್ತಲೇ ಮಲಗಿದೆವು. ಕಗ್ಗಾಡಿನ ಆ ರಾತ್ರಿಯಲ್ಲಿ ಅಷ್ಟೂ ಮಂದಿಯ ಗೊರಕೆ ಸದ್ದುಗಳು ಕಾಡಾನೆಗಳು ಘೀಳಿಡುವಂತೆ ಕೇಳಿ ಹ್ಯಾಗೋ ನಿದ್ದೆ ಜಾರಿದೆವು.

ಹೊಸಮನೆ ಗುಡ್ಡದಿಂದ ಬಂದೂಕು ಸದ್ದು: ಮರುದಿನ ನಮ್ಮ ದಾರಿ ಸಾಗಿದ್ದು ಹೊಸಮನೆ ಗುಡ್ಡಕ್ಕೆ. ಗುಡ್ಡದ ಹಾದಿಯಲ್ಲಿ ಸರಳ ಸೌಂದರ್ಯವಿತ್ತು. ಅಲ್ಲಿ ಕೂತು ಹೊಳ್ಳರು, ಪಶ್ಚಿಮ ಘಟ್ಟದ ಜೀವಸೆಲೆ ನೇತ್ರಾವತಿ ನದಿ ಬತ್ತುತ್ತಿರುವ ಬಗ್ಗೆ, ರಾಜಕಾರಣಿಗಳ ಅರಣ್ಯ ವಿರೋಧಿ ನೀತಿಯಿಂದಾಗಿ ಹಾಡುಹಗಲೇ ಶಿಕಾರಿಕೋರರು ಕಾಡು ಲೂಟಿ ಮಾಡುತ್ತಿರುವ ಕುರಿತು ಮಾತನಾಡುತ್ತಿದ್ದಾಗಲೇ, ಮೂಡಿಗೆರೆಯ ಕಡೆಗಿರುವ ಬೆಟ್ಟದ ಸಂದಿನಿಂದ ಬಂದೂಕಿನ ಸದ್ದೊಂದು ಕೇಳಿ ಎಲ್ಲರನ್ನೂ ಮೂಕವಾಗಿಸಿತು.

‘ನೋಡಿ ಒಂದು ಶಿಕಾರಿಯಾಯ್ತು ಕಾಡಲ್ಲಿ’ ಅಂತ ಬೇಸರದ ನಿಟ್ಟುಸಿರಿಟ್ಟರು ಹೊಳ್ಳರು. ಮನುಷ್ಯನ ಕ್ರೌರ್ಯ ಹೇಗೆ ಕಾಡನ್ನು ಹಂತ ಹಂತವಾಗಿ ನಾಶಮಾಡುತ್ತದೆ ಅನ್ನುವ ಸತ್ಯದ ಅರಿವಾಗಿ ಆ ಕ್ಷಣಕ್ಕೆ ನಮಗೆಲ್ಲಾ ದಿಗಿಲಾಯ್ತು. ನಮ್ಮ ಬದುಕಿಗೆ ಉಸಿರನ್ನೇ ಕೊಡುವ ಪಶ್ಚಿಮ ಘಟ್ಟವನ್ನು ಉಳಿಸಲು ಯುವಕರ ಹಸಿರು ಪಡೆಯೊಂದು ಸಿದ್ಧವಾಗಬೇಕು ಅಂತನ್ನಿಸಿದಾಗ ದೂರದಿಂದ ಮಿಂಚುಕಲ್ಲು ಮತ್ತಷ್ಟು ಹೊಳೆಯಿತು. ಹಸಿರ ಕಾಪಾಡುವ ಬಯಕೆ ಜಾಸ್ತಿಯಾಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT