ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ವಾಹನದ ಚಾಲಕನಿಗೆ ಜೀವಾವಧಿ ಶಿಕ್ಷೆ

Last Updated 28 ಫೆಬ್ರುವರಿ 2018, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿ ಬಾಲಕೊಂಡಯ್ಯ (29) ಎಂಬಾತನಿಗೆ ಜೀವಾವಧಿ ಶಿಕ್ಷೆ (ಸಾಯುವವರೆಗೂ ಜೈಲು) ವಿಧಿಸಿ ನಗರದ 54ನೇ ಸಿಸಿಎಚ್‌ ನ್ಯಾಯಾಲಯವು ಬುಧವಾರ ಆದೇಶ ಹೊರಡಿಸಿದೆ.

2017ರ ಆಗಸ್ಟ್‌ 13ರಂದು ನಡೆದಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ಲತಾ ಕುಮಾರಿ, ‘ಪುಟ್ಟ ಕಂದಮ್ಮನ ಮೇಲೆ ಅತ್ಯಾಚಾರ ನಡೆಸಿ ಮೃಗೀಯ ವರ್ತನೆ ತೋರಿರುವ ಅಪರಾಧಿಗೆ ನಾಗರಿಕ ಸಮಾಜದಲ್ಲಿ ಬದುಕುವ ಹಕ್ಕಿಲ್ಲ’ ಎಂದು ಅಭಿಪ್ರಾಯಪಟ್ಟು ಈ ಆದೇಶ ಹೊರಡಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಚಿನ್ನ ವೆಂಕಟರಮಣಪ್ಪ ವಾದಿಸಿದ್ದರು.

ಪ್ರಕರಣದ ವಿವರ:  ಹಲಸೂರು ಠಾಣೆ ವ್ಯಾಪ್ತಿಯ ಸೇನಾ ಸಮುಚ್ಚಯದಲ್ಲಿ ವಾಸವಿದ್ದ ಅಪರಾಧಿ, ಅಲ್ಲಿಯೇ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಅದೇ ಸಮುಚ್ಚಯದಲ್ಲೇ 9 ವರ್ಷದ ಬಾಲಕಿಯು ಪೋಷಕರೊಂದಿಗೆ ವಾಸವಿದ್ದಳು ಎಂದು ಚಿನ್ನ ವೆಂಕಟರಮಣಪ್ಪ ತಿಳಿಸಿದರು.

ಬಾಲಕಿಯು ಸಮುಚ್ಚಯದಲ್ಲಿ ಸೈಕಲ್‌ ಓಡಿಸಿಕೊಂಡು ಹೊರಟಿದ್ದಳು. ಅವಳನ್ನು ತಡೆದಿದ್ದ ಅಪರಾಧಿ, ‘ನೀನು ಶಾಲೆಗೆ ಯಾವ ಬಸ್ಸಿನಲ್ಲಿ ಹೋಗುತ್ತಿಯಾ’ ಎಂದು ಕೇಳಿದ್ದ. ಅದಕ್ಕೆ ಆಕೆ ಉತ್ತರಿಸುತ್ತಿದ್ದಂತೆ, ಎದೆ ಮುಟ್ಟಿ ಸ್ಥಳದಿಂದ ಹೊರಟು ಹೋಗಿದ್ದ. ಕೆಲ ನಿಮಿಷ ಬಿಟ್ಟು ಪುನಃ ಬಾಲಕಿ ಬಳಿ ಬಂದಿದ್ದ ಆತ, ‘ನಿನ್ನ ತಂದೆ ನಮ್ಮ ಮನೆಯಲ್ಲಿ ಊಟ ಮಾಡುತ್ತಿದ್ದಾರೆ. ನಿನ್ನನ್ನು ಕರೆದುಕೊಂಡು ಬರಲು ಹೇಳಿದ್ದಾರೆ’ ಎಂದು ತಿಳಿಸಿದ್ದ.

ಅದನ್ನು ನಂಬಿ ಸಂತ್ರಸ್ತೆಯು ಆತನೊಂದಿಗೆ ಹೋಗಿದ್ದಳು. ಮನೆಯೊಳಗೆ ಹೋಗುತ್ತಿದ್ದಂತೆ ಬಾಗಿಲು ಮುಚ್ಚಿದ್ದ ಅಪರಾಧಿ, ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ಬಳಿಕ
ಮನೆಗೆ ಕಳುಹಿಸಿದ್ದ. ಕೃತ್ಯದ ಬಗ್ಗೆ ಬಾಲಕಿಯು ಪೋಷಕರಿಗೆ ತಿಳಿಸಿದ್ದಳು. ಪೋಷಕರು ಹಾಗೂ ಸ್ಥಳೀಯ ನಿವಾಸಿಗಳು, ಅಪರಾಧಿಯ ಮನೆಗೆ ಹೋಗಿ ಆತನನ್ನು ಹಿಡಿದು
ಹಲಸೂರು ಪೊಲೀಸರಿಗೆ ಒಪ್ಪಿಸಿದ್ದರು ಎಂದು ಚಿನ್ನವೆಂಕಟರಮಣಪ್ಪ ಹೇಳಿದರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ತನಿಖಾಧಿಕಾರಿ ಸುಬ್ರಹ್ಮಣ್ಯ, 45 ದಿನಗಳಲ್ಲೇ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ತ್ವರಿತವಾಗಿ ವಿಚಾರಣೆ ನಡೆದು ಅಪರಾಧಿಗೆ ಶಿಕ್ಷೆಯಾದ ರಾಜ್ಯದ ಮೊದಲ ಪೋಕ್ಸೊ ಪ್ರಕರಣ ಇದಾಗಿದೆ ಎಂದು ತಿಳಿಸಿದರು.

ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣ

ಬೆಂಗಳೂರು: ಯಲಹಂಕ ಠಾಣೆ ವ್ಯಾಪ್ತಿಯ ಅಂಗನವಾಡಿಯೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿ ಸೋಮು (45) ಎಂಬಾತನಿಗೆ ನಗರದ 54ನೇ ಸಿಸಿಎಚ್‌ ನ್ಯಾಯಾಲಯವು 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ.

2013ರಲ್ಲಿ ನಡೆದಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಎಂ.ಲತಾ ಕುಮಾರಿ ನಡೆಸಿದ್ದರು.

‘ಅಪರಾಧಿಯ ಪತ್ನಿಯು ಅಂಗನವಾಡಿಯಲ್ಲಿ ಸಹಾಯಕಿ ಆಗಿದ್ದರು. ಆಗಾಗ ಆತ ಅಂಗನವಾಡಿಗೆ ಹೋಗಿಬರುತ್ತಿದ್ದ. ಅದೇ ವೇಳೆ ಕೃತ್ಯ ಎಸಗಿದ್ದ’ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಚಿನ್ನವೆಂಕಟರಮಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪತ್ನಿಯು ಮಧ್ಯಾಹ್ನ ಅಂಗನವಾಡಿಯಿಂದ ಹೊರಗೆ ಹೋಗಿದ್ದರು. ಅದೇ ವೇಳೆ ಅಲ್ಲಿಗೆ ಬಂದಿದ್ದ ಸೋಮು, ಬಾಲಕಿಯನ್ನು ಒತ್ತಾಯದಿಂದ ಅಡುಗೆ ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ, ಸ್ಥಳದಿಂದ ಪರಾರಿಯಾಗಿದ್ದ.’

‘ಮನೆಗೆ ಸಂಜೆ ಹೋಗಿದ್ದ ಬಾಲಕಿಯು ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಆ ಬಗ್ಗೆ ಪೋಷಕರು ಕೇಳಿದಾಗ, ಸಂತ್ರಸ್ತೆ ವಿಷಯ ತಿಳಿಸಿದ್ದಳು. ತದನಂತರ ಪೋಷಕರು ನೀಡಿದ್ದ ದೂರಿನನ್ವಯ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಯಲಹಂಕ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದು ಹೇಳಿದರು.

ಬಾಲಕಿಯನ್ನು ಕೊಂದಿದ್ದ ಅಪರಾಧಿ: ‘ಪ್ರಕರಣದ ತನಿಖೆ ಕೈಗೊಂಡಿದ್ದ ಯಲಹಂಕ ಪೊಲೀಸರು, ಸೋಮು ಇನ್ನೊಬ್ಬ ಬಾಲಕಿಯೊಬ್ಬಳನ್ನು ಕೊಂದಿದ್ದ ಸಂಗತಿಯನ್ನೂ ಬಯಲು ಮಾಡಿದ್ದರು. ಆ ಪ್ರಕರಣದಲ್ಲಿ ಆತನಿಗೆ ಈಗಾಗಲೇ ಜೀವಾವಧಿ ಶಿಕ್ಷೆ ಆಗಿದೆ’ ಎಂದು ಚಿನ್ನವೆಂಕಟರಮಣಪ್ಪ ಹೇಳಿದರು.

‘ಅಂಗನವಾಡಿಯಿಂದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಳು. ಆ ಬಗ್ಗೆ ಪ್ರಕರಣ ದಾಖಲಾದ ನಂತರ ತನಿಖೆ ನಡೆಸಿದಾಗ, ಆಕೆಯ ಸುಳಿವು ಸಿಕ್ಕಿರಲಿಲ್ಲ. ಸೋಮುನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆ ಬಾಲಕಿಯನ್ನು ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT