ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಾಂಗಣದಲ್ಲಿ ಹಸಿರಿನ ಮೇಲುಗೈ

Last Updated 1 ಮಾರ್ಚ್ 2018, 19:30 IST
ಅಕ್ಷರ ಗಾತ್ರ

'ಗೋ ಗ್ರೀನ್‌' ಪರಿಕಲ್ಪನೆ ಮನೆಯ ಒಳಾಂಗಣಕ್ಕೂ ಅನ್ವಯವಾಗುತ್ತದೆ. ಹಸಿರು ಮನಸಿಗೆ ಮುದ ನೀಡುವ ಬಣ್ಣವೆಂದೇ ಜನಜನಿತ. ಹಸಿರನ್ನು ಕಣ್ತುಂಬಿಕೊಂಡಷ್ಟು ಮನಸು ಶಾಂತವಾಗಿ, ಉಲ್ಲಾಸದಿಂದಿರುವುದು ಸಾಧ್ಯವಾಗುತ್ತದೆ ಎಂಬ ನಂಬಿಕೆಯಿರುವುದರಿಂದಲೇ ಈ ಬಣ್ಣ ಒಳಾಂಗಣ ವಿನ್ಯಾಸದಲ್ಲಿಯೂ ಸ್ಥಾನ ಪಡೆದಿದೆ.

ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದಂತೆ ವ್ಯಕ್ತಿ ತನ್ನ ಅಲಂಕಾರಕ್ಕೆ ನೀಡುವಷ್ಟೇ ಪ್ರಾಮುಖ್ಯವನ್ನು ಮನೆಯ ಅಲಂಕಾರಕ್ಕೂ ನೀಡುತ್ತಿದ್ದಾನೆ. ಮನೆಯನ್ನು ಶುಚಿಯಾಗಿರಿಸಿಕೊಳ್ಳುವ ಜೊತೆಗೆ ಕಣ್ಸೆಳೆಯುವ ಬಣ್ಣದ ಮೆರುಗು ತುಂಬುವುದಕ್ಕೆ ವಿಶೇಷ ಪ್ರಾಧಾನ್ಯ ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ಗಾಢ ಬಣ್ಣಗಳು ಒಳಾಂಗಣ ವಿನ್ಯಾಸದಲ್ಲಿ ಆದ್ಯತೆ ಪಡೆದು ಬಹಳ ವರ್ಷಗಳೇ ಸಂದಿವೆ. ಇದರಲ್ಲಿ ಬಗೆಬಗೆ ಬಣ್ಣಗಳ ಆವಿಷ್ಕಾರಗಳು ಆಗುತ್ತಲೇ ಇರುತ್ತದೆ. ಚಿತ್ರ, ಉಡುಪು ವಿನ್ಯಾಸ ಸೇರಿದಂತೆ ಹಲವು ಸೃಜನಾತ್ಮಕ
ಕಲೆಗೆ ಪ್ರಕೃತಿಯೇ ಪ್ರೇರಣೆ. ನಿಸರ್ಗದ ಬಣ್ಣಗಳಲ್ಲಿ ಮೇರು ಸ್ಥಾನವನ್ನು ಪಡೆದಿರುವ ಹಸಿರು ಕೂಡ ಪ್ರಯೋಗಗಳಿಗೆ ಒಗ್ಗಿಕೊಂಡಿದೆ.

ಮನೆಯ ಪ್ರತಿಯೊಂದು ಪರಿಕರಗಳಲ್ಲಿಯೂ ಹಸಿರು ಆವರಿಸಿಕೊಂಡಿರುವುದು ಸದ್ಯದ ಟ್ರೆಂಡ್‌. ಇಡೀ ಮನೆಗೆ ಅಲ್ಲದಿದ್ದರೂ, ಮನೆಯ ಒಂದು ಕೋಣೆಯನ್ನಾದರೂ, 'ಇಕೋ ಫ್ರೆಂಡ್ಲಿ' ಪರಿಕಲ್ಪನೆಗೆ ಅನುಸಾರವಾಗಿ ಸಿಂಗರಿಸಲು ಹಲವರು ಇಷ್ಟಪಡುತ್ತಾರೆ. ಹಸಿರಿನಲ್ಲಿ ಹಳದಿ ಛಾಯೆಯಿರುವ ಬಣ್ಣಕ್ಕೆ ಹೆಚ್ಚಿನ ಬೇಡಿಕೆಯಿದೆ. ತಿಳಿ ಹಸಿರು ಬಣ್ಣದ ಗೋಡೆಯ ಮೇಲೆ ಚಿತ್ತಾರ ಮೂಡಿಸುವುದು ಹೆಚ್ಚು ಪ್ರಚಲಿತದಲ್ಲಿದೆ. ಹಸಿರು ಬಣ್ಣದ ಜೊತೆಗೆ ಗಾಢ ಬಣ್ಣದ ಪ್ರಯೋಗ ಚೆನ್ನಾಗಿ ಕಾಣುವುದಿಲ್ಲ. ಹೀಗಾಗಿ ಬಿಳಿ, ಹಳದಿ, ತಿಳಿ ನೀಲಿ ಬಣ್ಣಗಳ ಬಳಕೆ ಮಾಡಲಾಗುತ್ತದೆ. ಸೀಲಿಂಗ್‌ಗೂ ಹಸಿರನ್ನೇ ಬಳಸುತ್ತಿದ್ದಾರೆ. ಬಣ್ಣಕ್ಕೆ ಅನುಸಾರವಾಗಿ ಬೆಳಕಿನ ಸಂಯೋಜನೆ ಮಾಡಲಾಗುತ್ತದೆ. ಎಲ್ಲಾ ಸಂದರ್ಭಗಳಲ್ಲಿಯೂ ಈ ಬೆಳಕನ್ನು ಉಪಯೋಗಿಸದಿದ್ದರೂ, ವಿಶೇಷ ಸಂದರ್ಭದಲ್ಲಿ ಮನೆಗೆ ಅತಿಥಿಗಳು ಬಂದಾಗ ಬಳಸುವುದರಿಂದ ಹಸಿರು ಬಣ್ಣಕ್ಕೆ ಇನ್ನಷ್ಟು ಕಳೆ ಬರುತ್ತದೆ.

ಹಸಿರು ಬಣ್ಣಗಳಲ್ಲಿ ಹಲವು ಶೇಡ್‌ಗಳಿವೆ. ಗಾಢ ಹಸಿರಿಗಿಂತ ತಿಳಿ ಹಸಿರು ಬಣ್ಣದ ಬಳಕೆಯೇ ಹೆಚ್ಚು. ಹಸಿರು ಬಣ್ಣವನ್ನು ಗೋಡೆಗೆ ಬಳಿದರಷ್ಟೇ ಸಾಲದು. ಅದಕ್ಕೊಪ್ಪುವ ನೆಲದ ಹಾಸು, ಪೀಠೋಪಕರಣ, ಸೋಫಾ, ಕುಷನ್‌ಗಳ ಆಯ್ಕೆಯೂ ಇರಬೇಕು. ಜೊತೆಗೆ ಒಳಾಂಗಣ ಗಿಡಗಳ ಆಯ್ಕೆಯೂ ಸೂಕ್ತವಾಗಿರಬೇಕು. ಇವುಗಳೆಲ್ಲದರ ಸಮಾಗಮ ಸರಿಯಾಗಿದ್ದರಷ್ಟೇ ಹಸಿರು ಬಣ್ಣದ ಆಯ್ಕೆಗೂ
ಮೆರುಗು ಸಿಗುವುದು.

ಆಯ್ಕೆ ಹೀಗಿರಲಿ...

* ಮಲಗುವ ಕೋಣೆಯಲ್ಲಿ ಬೆಳಕು ಹೆಚ್ಚಿರುವುದರಿಂದ ಗಾಢ ಹಸಿರು ಬಳಕೆ ಅಗತ್ಯವಿರುವುದಿಲ್ಲ. ಸೌತೆಕಾಯಿ, ಪಿಸ್ತಾ ಹಸಿರು ಬಣ್ಣವನ್ನು ಬಳಸಬೇಕು. ಇದು ಕಣ್ಣಿಗೆ ಹಿತವನ್ನು ನೀಡುತ್ತದೆ.

* ಅಡುಗೆ ಮನೆಗೆ ಹಳದಿ ಛಾಯೆಯಿರುವ ಹಸಿರು ಬಣ್ಣವನ್ನು ಬಳಸಬೇಕು. ಇದು ಉಲ್ಲಾಸದ ಸಂಕೇತ.

* ಮನೆಯ ತುಂಬಾ ಹಸಿರೇ ಇದ್ದರೆ ಏಕತಾನತೆ ಎನಿಸಬಹುದು. ಹಾಗಾಗಿ ಮನೆಯ ಎಲ್ಲ ಗೋಡೆಗೂ ಹಸಿರು ಬಳಕೆ ಬೇಡ. ಒಂದು ಅಥವಾ ಎರಡು ಗೋಡೆಗೆ ಹಸಿರು ಬಣ್ಣ ಹಚ್ಚಿದರೆ ಒಳ್ಳೆಯದು.

* ಗಾಢ ಹಸಿರು ಬಣ್ಣವನ್ನು ಬಳಕೆ ಕಡಿಮೆ ಮಾಡಿದರೇನೆ ಒಳಿತು. ಇದು ಕೋಣೆ ಚಿಕ್ಕದಾಗಿ ಕಾಣುವಂತೆ
ಮಾಡುತ್ತದೆ. ಅಲ್ಲದೇ ಈ ಬಣ್ಣಕ್ಕೆ ಹೊಂದುವಂತೆ ಪೀಠೋಪಕರಣ, ಕರ್ಟನ್‌ಗಳನ್ನು ಹೊಂದಿಸುವುದು ಕಷ್ಟವಾಗುತ್ತದೆ.

***

ತಿಳಿ ಹಸಿರು ಒಳಿತು

ಹಸಿರು ಹಲವರ ಇಷ್ಟದ ಬಣ್ಣ. ಹಸಿರಿನಲ್ಲಿ ಹಳದಿ ಛಾಯೆಯಿರುವ ಬಣ್ಣಕ್ಕೆ ಹೆಚ್ಚಿನ ಬೇಡಿಕೆಯಿದೆ. ಹಸಿರು ಕಣ್ಣಿಗೆ ಮುದ ನೀಡುತ್ತದೆ ಎಂಬ ಕಾರಣಕ್ಕೆ ಇದನ್ನು ಒಳಾಂಗಣ ವಿನ್ಯಾಸದಲ್ಲಿ ಬಳಕೆ ಮಾಡುತ್ತಾರೆ. ಆದರೆ ಬಹಳಷ್ಟು ಮಂದಿಗೆ ಇದರ ಬಗ್ಗೆ ತಿಳಿದಿಲ್ಲ. ಹಾಗಾಗಿ ಹಳೆಯ ಸಾಂಪ್ರದಾಯಿಕ ಮಾದರಿಯ ಬಣ್ಣವನ್ನೇ ಹೆಚ್ಚಾಗಿ ಬಳಸುತ್ತಾರೆ. ಒಳಾಂಗಣದ ಬಗ್ಗೆ ಹೆಚ್ಚು ತಿಳಿದುಕೊಂಡವರಷ್ಟೇ ಈ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪೂರ್ತಿ ಮನೆಗೆ ಹಸಿರು ಬಣ್ಣ ಹಾಕಿದರೆ ವಿಚಿತ್ರವಾಗಿ ಕಾಣುತ್ತದೆ. ಒಂದು ಕೋಣೆಯಲ್ಲಿ ಗೋಡೆಯ ಒಂದು ಭಾಗಕ್ಕೆ ಮಾತ್ರವೇ ಹಸಿರು ಹಚ್ಚುವುದರಿಂದ ಅದು ಹೈಲೈಟ್‌ ಆಗುತ್ತದೆ. ಗಾಢ ಬಣ್ಣಕ್ಕಿಂತ ತಿಳಿ ಹಸಿರು ಬಣ್ಣ ಚೆನ್ನಾಗಿ ಕಾಣುತ್ತದೆ.

ಸೌಮ್ಯ, ಒಳಾಂಗಣ ವಿನ್ಯಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT