ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಮಾರ್ಗದ ನಿವೃತ್ತಿ ಎಂಬ ಪ್ರವೃತ್ತಿ!

Last Updated 31 ಜುಲೈ 2018, 11:52 IST
ಅಕ್ಷರ ಗಾತ್ರ

ಕುಶಲವರು ಮಾರ್ಗಕ್ರಮದಲ್ಲಿ ರಾಮಾಯಣವನ್ನು ಹಾಡಿದರು ಎಂದು ನೋಡಿದೆವಷ್ಟೆ. ‘ಮಾರ್ಗ’ಕ್ರಮ ಎಂದರೇನು? ಸಂಗೀತಕ್ಕೆ ಎರಡು ಕವಲುಗಳು ಎನ್ನುವ ಎಣಿಕೆಯಿದೆ: ಒಂದು ‘ಮಾರ್ಗ’; ಇನ್ನೊಂದು ‘ದೇಶೀ’. ಬ್ರಹ್ಮನಿಂದ ಆರಂಭವಾಗಿ ಭರತನ ಪರಂಪರೆಯ ಮೂಲಕ ಮುಂದುವರೆದ ಮೋಕ್ಷದಾಯಕವಾದ ಸಂಗೀತಪ್ರಕಾರವು ‘ಮಾರ್ಗ’ ಎಂದೂ, ಆಯಾ ದೇಶದ ಸೊಗಡಿನಿಂದ ರೂಪ ತಳೆದ ಜನರಂಜಕವಾದ ಸಂಗೀತಪರಂಪರೆಯು ‘ದೇಶೀ’ ಎಂದೂ ‘ಸಂಗೀತದರ್ಪಣ’ ಒಕ್ಕಣಿಸಿದೆ (ಮಾರ್ಗದೇಶೀ ವಿಭಾಗೇನ ಸಂಗೀತಂ ದ್ವಿವಿಧಂ ಮತಮ್‌|

ದೃಹಿಣೇನ ಯದುದ್ದಿಷ್ಟಂ ಪ್ರಯುಕ್ತಂ ಭರತೇನ ಚ| ಮಹಾದೇವಸ್ಯ ಪುರತಃ ತನ್ಮಾರ್ಗಾಖ್ಯಂ ವಿಮುಕ್ತಿದಮ್‌|| ತತ್ತದೇಶಸ್ಥಯಾರೀತ್ಯಾ ಯತ್ಸ್ಯಾಲ್ಲೋಕಾನುರಂಜಕಮ್‌| ದೇಶೇ ದೇಶೇ ತು ಸಂಗೀತಂ ತದ್ದೇಶೀತ್ಯಭಿದೀಯತೇ||)

ಸಂಗೀತದಲ್ಲಿ ಮಾತ್ರವಲ್ಲದೆ ಎಲ್ಲ ಕಲೆಗಳಲ್ಲೂ ಇಂಥ ಎರಡು ವಿಧದ ಮಾನಸಿಕತೆಗಳು ಪ್ರಾಚೀನ ಕಾಲದಿಂದಲೂ ಇದ್ದಿತೆಂದು ಊಹಿಸಲು ಸಾಧ್ಯವಿದೆ. ಈ ವಿಷಯವನ್ನು ಕುರಿತಂತೆ ಕೀರ್ತಿನಾಥ ಕುರ್ತಕೋಟಿಯವರ ಮಾತುಗಳು ಹೀಗಿವೆ:

‘ಒಂದು ಕಾಲಕ್ಕೆ ಕಲೆಗಳನ್ನು ಮಾರ್ಗ ಮತ್ತು ದೇಶಿ ಎಂದು ವಿಂಗಡಿಸಿ ಹೇಳುವ ಸಂಪ್ರದಾಯವಿತ್ತು. ಈ ಎರಡೂ ಜಾತಿಯ ಕಲೆಗಳ ಅಭಿವ್ಯಕ್ತಿಯ ಸಾಮಗ್ರಿ ಮತ್ತು ವಿಧಾನ ಬೇರೆ ಬೇರೆಯಾಗಿದ್ದವು. ಕಲೆಗಳಲ್ಲಿ ಈ ರೀತಿಯ ವಿಂಗಡನೆ ಬಹುಶಃ ವೇದಕಾಲದಷ್ಟು ಹಳೆಯದಾಗಿದ್ದು, ಈ ವಿಂಗಡಣೆಯ ಮೂಲತತ್ವ ಈಗ ಮರೆತುಹೋದಂತಾಗಿದೆ. ಕಾರಣವೆಂದರೆ ಕಾಲಾನುಕ್ರಮದಲ್ಲಿ ಎರಡು ರೀತಿಗಳು ಒಂದರೊಳಗೊಂದು ಸೇರಿಕೊಂಡು ತಮ್ಮ ಸತ್ವವನ್ನು ಬೆಳೆಸಿಕೊಂಡವು... ಇವೆರಡೂ ಒಂದರಿಂದ ಇನ್ನೊಂದು ಪರಿಪುಷ್ಟವಾಗಿ ಬೆಳೆದದ್ದರಿಂದ ಅವುಗಳ ನಡುವಿನ ವಿರೋಧ ಇಲ್ಲದಾಯಿತು. ಈಗಲೂ ನಮ್ಮ ಮಾರ್ಗ ಮತ್ತು ದೇಶಸಂಗೀತಗಳಲ್ಲಿ ಭೇದವಿರುವುದು ಅವುಗಳ ಪರಿಣಾಮದಲ್ಲಿಯೇ ಹೊರತು ಅವೆರಡೂ ಭಿನ್ನ ಸ್ತರಗಳಿಂದ ಬಂದವುಗಳಲ್ಲ. ಈ ಮಾತು ಕಾವ್ಯಕ್ಕೂ ಅನ್ವಯಿಸುತ್ತದೆ. ನಮ್ಮ ಜಾನಪದಕಾವ್ಯ ಅಭಿಜಾತಕಾವ್ಯಕ್ಕಿಂತ ಸುಲಭವಾಗಿದೆಯೇ ಹೊರತು ಕಾವ್ಯತಂತ್ರದ ಮತ್ತು ಕಾವ್ಯಮೌಲ್ಯಗಳ ದೃಷ್ಟಿಯಿಂದ ಭಿನ್ನವಾಗಿಲ್ಲ...’

‘ಅಭಿಜಾತಕಾವ್ಯದ ಅನುಭವಸಾಮಗ್ರಿ ಮತ್ತು ತಂತ್ರ ಎಷ್ಟೇ ಮೂರ್ತವಾಗಿದ್ದರೂ ಅವುಗಳ ಲಕ್ಷ್ಯ ಅಮೂರ್ತವಾದ ತಾತ್ವಿಕತೆಯ ಕಡೆಗೆ ಇರುತ್ತದೆ. ಅಮೂರ್ತವಾಗಿರುವುದು ವ್ಯಕ್ತಿನಿರಪೇಕ್ಷವಾಗಿರುವುದೇ ಇದಕ್ಕೆ ಕಾರಣವಾಗಿದೆ. ಅಮೂರ್ತವನ್ನು ಗ್ರಹಿಸಲು ಮತ್ತು ಅದಕ್ಕೆ ಅಭಿವ್ಯಕ್ತಿಯನ್ನು ನೀಡಲು ಹೆಚ್ಚಿನ ಶಕ್ತಿ–ಸಾಮರ್ಥ್ಯಗಳು ಬೇಕೆಂಬುದನ್ನು ವಿವರಿಸಿ ಹೇಳುವ ಕಾರಣವಿಲ್ಲ.’

(ಸಂಸ್ಕೃತಿಸ್ಪಂದನ)

ಆನಂದ ಕುಮಾರಸ್ವಾಮಿಯವರು ‘ಮಾರ್ಗ’ ಮತ್ತು ‘ದೇಶೀ’ಕಲೆಗಳ ಸ್ವರೂಪವನ್ನು ತುಂಬ ಗಹನವಾಗಿಯೂ ಸುಂದರವಾಗಿಯೂ ನಿರೂಪಿಸಿದ್ದಾರೆ. ರಾಮನು ತನ್ನ ಕಥೆಯನ್ನು ತಾನೇ ಕೇಳಿ ಏಕಾದರೂ ಸಂಭ್ರಮಿಸಿದ? ಋಷಿಮುನಿಗಳೂ ರಾಮಾಯಣಗಾಯನದಿಂದ ಭಾವಪರವಶರಾಗಿ ಮೈಮರೆಯಲು ಏನು ಕಾರಣ? ಇಂಥ ಹಲವು ಪ್ರಶ್ನೆಗಳಿಗೆ ಈ ಪ್ರಬಂಧವು ಉತ್ತರದಂತಿದೆ. ಅವರ ಮಾತುಗಳ ಸಾರಾಂಶವಿದು:

‘ಮಾರ್ಗ ಎಂದರೆ ಜೀವಿಗಳ ಓಡುದಾರಿ; ಅನುಸರಿಸಬೇಕಾದ ಹೆಜ್ಜೆಯ ಗುರುತುಗಳು; ಮುಕ್ತಿಯ ಕಡೆಗೆ ಹಾದಿ ತೋರುವ ಅಂತರಂಗದ ಬೆಳಕು ಅದು. ‘ಸೂಚಿಸು’ ಎಂಬ ಅರ್ಥದ ‘ದಿಶ್‌’ ಧಾತುವಿನಿಂದ ಹುಟ್ಟಿರುವ ‘ದೇಶಿ’ಯು ‘ಪ್ರದೇಶ’, ‘ಸ್ಥಳೀಯ’, ‘ದಿಕ್ಕು’ ಎನ್ನುವುದನ್ನು ಹೇಳುತ್ತದೆ.’

ಮಾರ್ಗ ಎಂದರೆ ‘ಅಲೌಕಿಕ’ ಎಂದೂ, ದೇಶೀ ಎಂದರೆ ‘ಲೌಕಿಕ’ ಎಂದೂ ಹೇಳಬಹುದು. ಕತ್ತಲೆಯ ಮೂಲೆ–ಮೊಡಕುಗಳಲ್ಲಿ ಕಳೆದುಹೋಗದೆ ಬೆಳಕಿನ ಮೂಲದ ಕಡೆಗೆ ನಮ್ಮ ಭಾವಬುದ್ಧಿಗಳನ್ನು ಕರೆದುಕೊಂಡುಹೋಗುವಂಥ ಕಾವ್ಯವೇ ದಿಟವಾದ ಕಾವ್ಯ ಎಂದು ಪ್ಲೇಟೋ ಪ್ರತಿಪಾದಿಸಿರುವುದರ ಬಗ್ಗೆ ಈ ಮೊದಲು ನೋಡಿದ್ದೆವು. ಸ್ಟಾನ್‌ಲೀ ರೋಸೆನ್‌ ಎಂಬ ವಿದ್ವಾಂಸ ‘ತತ್ತ್ವಶಾಸ್ತ್ರ ಮತ್ತು ಕಾವ್ಯದ ಮಧ್ಯೆ ಇರುವ ಹಳೆಯ ಜಗಳದ (ನೋಡಿ: ‘The Quarrel Between Philosophy and Poetry’ By Stanley Rosen) ಬಗ್ಗೆ ಚರ್ಚಿಸುತ್ತ ಸ್ವಾರಸ್ಯಕರ ರೀತಿಯಲ್ಲಿ ಆ ಎರಡಕ್ಕೂ ಸಂಧಾನವನ್ನು ನಡೆಸಿದ್ದಾರೆ.

‘ಕಾವ್ಯವು ನಮ್ಮಲ್ಲಿ ಬಯಕೆಗಳನ್ನು ಎಬ್ಬಿಸಿ ಭಾವುಕತೆಯಿಂದ ನಮ್ಮನ್ನು ಪ್ರವೃತ್ತಿಯ ಕಡೆಗೆ ತೊಡಗಿಸಿದರೆ, ತತ್ತ್ವಶಾಸ್ತ್ರವು ಪ್ರಜ್ಞೆಯನ್ನು ಉದ್ದೀಪಿಸಿ ನಿವೃತ್ತಿಯ ಕಡೆಗೆ ನಡೆಸುತ್ತದೆ. ಭಾವನೆಗಳನ್ನೂ ಪ್ರಜ್ಞೆಯನ್ನೂ ಸಮನ್ವಯ ಮಾಡಿಕೊಂಡ ‘ತಾತ್ವಿಕ ಕಾವ್ಯ’ವೇ (Philosophical Poetry) ಆದರ್ಶರಾಜ್ಯಕ್ಕೆ ಬೇಕೆನ್ನುವುದು ಪ್ಲೇಟೋವಿನ ಇಂಗಿತ’ ಎನ್ನುತ್ತಾರೆ, ಅವರು. ರಾಮಾಯಣ ಅಂಥ ಸಾಮರಸ್ಯವನ್ನು ಸಾಧಿಸಿದ ಮಹಾಕಾವ್ಯವೇ ಸರಿ. ಶ್ರೀರಾಮನ ಕಥೆಯಲ್ಲಿ ತಲ್ಲೀನನಾದ ರಾಮ – ಎಂದರೆ ‘ನಿವೃತ್ತಿಯಲ್ಲಿ ಪ್ರವೃತ್ತನಾದ ರಾಮ’ ಎಂದೇ ಹೌದು. ಇಡಿಯ ರಾಮಾಯಣದ ನಿಲುವಾದರೂ ಇದೇ ಆಗಿದೆಯಲ್ಲವೆ – ನಿವೃತ್ತಿಯಲ್ಲಿ ಪ್ರವೃತ್ತಿ! ಇಂಥ ಕಾವ್ಯವು ಋಷಿಗಳಿಗೂ ಆನಂದದಾಯಕವಾಗದಿದ್ದೀತೆ?

ಹೀಗಾಗಿ ರಾಮಾಯಣವು ವಿಚಾರಗಳ ಪಟ್ಟಿಯೂ ಅಲ್ಲ, ವರ್ಣನೆಗಳ ಕಟ್ಟೂ ಅಲ್ಲ; ಒಂದು ಇನ್ನೊಂದರಲ್ಲಿ ಹಿತವಾಗಿ ಬೆರೆತು ಮನಸ್ಸಿಗೂ ಬುದ್ಧಿಗೂ ದರ್ಶನ–ವರ್ಣನಗಳೆಂಬ ಹಾಲುಜೇನುಗಳನ್ನು ಉಣಿಸುವ ರಸಪಾಕವಾಗಿದೆ. ಋಷಿಗಳು ಕುಶಲವರಿಗೆ ಕೊಟ್ಟ ಪಾರಿತೋಷಕಗಳು ಕಾವ್ಯಸ್ಪಂದನೆಯ ತೀವ್ರತೆಯನ್ನು ಭಾವಪೂರ್ಣವಾಗಿಯೇ ನಿರೂಪಿಸಿವೆ. ಒಬ್ಬರು ಬಳಸಿದ ಜಪಮಾಲೆಯಂಥವನ್ನು ಮತ್ತೊಬ್ಬರಿಗೆ ದಾನವಾಗಿ ಕೊಡುವುದು ಸಲ್ಲದು ಎನ್ನುತ್ತವೆ ಶಾಸ್ತ್ರಗಳು. ಆದರೆ ಶಾಸ್ತ್ರದ ನಿಲುವನ್ನು ಮೀರಿ ಋಷಿಗಳು ನಡೆದುಕೊಂಡದ್ದು ಕಾವ್ಯಾನುಭವದ ಪರಿಣಾಮಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳಲಾಗಿದೆ. ಸಹೃದಯತತ್ತ್ವದ ಹಲವು ಆಯಾಮಗಳ ಕಡೆಗೆ ಈ ಪ್ರಸಂಗವು ಗಮನವನ್ನು ಸೆಳೆಯುತ್ತದೆ.

ರಾಮಾಯಣದ ರಸಪೂರ್ಣತೆಯ ಸ್ವಾರಸ್ಯವನ್ನು ಸಂಸ್ಕೃತಶ್ಲೋಕವೊಂದು ಸೊಗಸಾಗಿ ಹೇಳಿದೆ. ‘ಆದಿಶೇಷ ಈ ಭೂಮಿಯನ್ನು ಹೊತ್ತವನು; ಅವನಿಗೆ ಕಿವಿಗಳು ಇಲ್ಲವಷ್ಟೆ! ಹಾಗೆ ಅವನಿಗೆ ಕಿವಿಗಳನ್ನು ಕೊಡದಿರುವುದಕ್ಕೆ ಬ್ರಹ್ಮನಲ್ಲಿ ಕಾರಣವೂ ಉಂಟಂತೆ. ಅವನಿಗೆ ಕಿವಿಗಳು ಇದ್ದಿದ್ದರೆ ರಾಮಕಥಾಗಾಯನದ ಶ್ರವಣಾನಂದಕ್ಕೆ ವಶನಾಗಿ ತಲೆದೂಗದಿರುತ್ತಿದ್ದನೆ? ಹಾಗೇನಾದರೂ ಅವನು ತಲೆದೂಗಿದರೆ ಇಡಿಯ ಜಗತ್ತೇ ನಾಶವಾದೀತು ಎಂಬ ಕಾರಣದಿಂದ ಬ್ರಹ್ಮ ಅವನಿಗೆ ಕಿವಿಗಳನ್ನೇ ಕೊಡಲಿಲ್ಲ’:

ಅಕರ್ಣಮಕರೋಚ್ಛೇಷಂ
ವಿಧಿರ್ಬ್ರಹ್ಮಾಂಡಭಂಗಧೀಃ |
ಶ್ರುತ್ವಾ ರಾಮಕಥಾಂ ರಮ್ಯಾಂ
ಶಿರಃ ಕಸ್ಯ ನ ಕಂಪತೇ ||

ಕಥೆಯ ಆರಂಭಕ್ಕೂ ಮುನ್ನ ರಾಮಾಯಣ ತನ್ನ ಓದುಗರನ್ನು ತಾನೇ ಸಿದ್ಧ ಮಾಡಿಕೊಳ್ಳುತ್ತಿದೆ. ಆರಂಭದ ಸರ್ಗಗಳ ಕಾವ್ಯಮೀಮಾಂಸೆಯ ಮಾತುಗಳು ವ್ಯರ್ಥವಾಗಿ ಬರೆದಂಥವು ಅಲ್ಲ; ಎಂಥ ಸಹೃದಯರು ರಾಮಾಯಣದ ಓದಿಗೆ ಬೇಕಾದವರು ಎನ್ನುವುದನ್ನು ಋಷಿಗಳ ಮೂಲಕವೂ ರಾಮನ ಮೂಲಕವೂ ಅದು ಧ್ವನಿಸಿದೆ. ರಸಪಕ್ಷಪಾತಿಗಳಾಗದ ಹೊರತು ರಾಮಾಯಣದ ಅನುಸಂಧಾನಕ್ಕೆ ಅರ್ಹತೆಯೇ ಒದಗದು. ರಸಿಕರಲ್ಲದವರ ಮುಂದೆ ಶ್ಲೋಕವೂ ಶೋಕವಾಗುತ್ತದೆಯಂತೆ! (ಗಮನಿಸಿ: ರಾಮಾಯಣ ಎಂದರೆ ಶೋಕವೇ ಶ್ಲೋಕವಾದ ಕಥೆ!)

ಶ್ಲೋಕಸ್ತು ಶ್ಲೋಕತಾಂ ಯಾತಿ
ಯತ್ರ ತಿಷ್ಠಂತಿ ಪಂಡಿತಾಃ |
ಲಕಾರೋ ಲುಪ್ಯತೇ
ಯತ್ರ ತಿಷ್ಠಂತ್ಯಪಂಡಿತಾಃ ||
‘ಶ್ರೋತಾರರು ಬಲ್ಲವರಾಗಿದ್ದರೆ
ಶ್ಲೋಕವ ಶ್ಲೋಕವಿದೆನಬಹುದು;
ಶ್ರೋತಾರರು ಮಡ್ಡಿಗಳಾಗಿದ್ದರೆ
ಶ್ಲೋಕದ ಲಕಾರ ಬಿಡಬಹುದು.’
(ಅನುವಾದ: ಪಾ. ವೆಂ. ಆಚಾರ್ಯ)

ಇಷ್ಟಕ್ಕೂ ರಸ ಎಂದರೇನು? ರಸಪಾಕದ ಬಗ್ಗೆ ಡಿವಿಜಿಯವರ ಸಮತೂಕದ ಮಾತುಗಳಿವು:

‘ರಸವು ಎದೆಯೊಳಗಿನ ಓಡಾಟ. ನಾವು ಕಾವ್ಯವನ್ನು ಓದಿದಾಗ ನಮ್ಮ ಹೃದಯಸ್ಥಾನದಲ್ಲಿ ಏನೋ ಚಲಿಸಿದಂತಾಗಬೇಕು; ಏನೋ ಓಡಾಡಿದಂತೆ ಆಗಬೇಕು. ‘ಆಹಾ’ ಎಂದು ನಮ್ಮ ಒಳಗಡೆ ಅನ್ನಿಸಬೇಕು; ‘ಅಯ್ಯೋ’ ಎನ್ನಿಸಬೇಕು. ಕಣ್ಣು ಒದ್ದೆಯಾಗಬೇಕು. ನಮ್ಮ ಹೃದಯವು ಕಂಪಿಸುವಂತೆ ಅನುಭವವಾಗಬೇಕು. ಇದು ವರಪ್ರಸಾದದಿಂದ ಬರುವ ಸೂಕ್ಷ್ಮವೇದನ ಶಕ್ತಿ’.

ಬನ್ನಿ, ರಸಶಕ್ತಿಯಿಂದ ರಾಮಾಯಣದ ರಸಯಾನದಲ್ಲಿ ಹೆಜ್ಜೆ ಹಾಕೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT