ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ಯಾಪಲಾಪುರ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ

ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ ಸಂಸದ ಎಚ್‌.ಡಿ.ದೇವೇಗೌಡ ಭರವಸೆ
Last Updated 3 ಮಾರ್ಚ್ 2018, 7:37 IST
ಅಕ್ಷರ ಗಾತ್ರ

ಹಾಸನ: ತಾಲ್ಲೂಕಿನ ದ್ಯಾಪಲಾಪುರದ ನಿವಾಸಿಗಳಿಗೆ ಮನೆಗಳ ಹಕ್ಕುಪತ್ರ ಹಾಗೂ ಸಾಗುವಳಿ ಜಮೀನು ಖಾತೆಯನ್ನು ಶೀಘ್ರ ಕೊಡಿಸುವುದಾಗಿ ಸಂಸದ ಎಚ್.ಡಿ.ದೇವೇಗೌಡ ಭರವಸೆ ನೀಡಿದರು.

ಗ್ರಾಮಕ್ಕೆ ಭೇಟಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ನಂತರ ಮಾತನಾಡಿದ ಅವರು, 2004 ರಲ್ಲಿ ಇಡೀ ಊರಿಗೆ ಬೆಂಕಿ ಬಿದ್ದಾಗ ಖುದ್ದು ಭೇಟಿ ಕೊಟ್ಟಿದ್ದೆ. ಆಗ ಬಿ.ಶಿವರಾಂ ಶಾಸಕರಾಗಿದ್ದರು. ಅಂದು ರಾಜ್ಯ ಸರ್ಕಾರ ₹ 2 ಕೋಟಿ ಕೊಟ್ಟು ಮನೆ ಕಳೆದುಕೊಂಡರಿಗೆ ಮನೆ ಕಟ್ಟಿಸಿಕೊಡುವ ತೀರ್ಮಾನ ಮಾಡಿತ್ತು. ಆದರೆ, ಕೆಲ ಗೊಂದಲ ಮತ್ತು ಕೆಲವರ ಅಸಹಕಾರದಿಂದಾಗಿ ಈವರೆಗೂ ಮನೆಯ ವಾಸಿಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಕೂಡಲೇ ಗ್ರಾಮ ಪಂಚಾಯಿತಿ ಕಡೆಯಿಂದ ಅವರ ಹೆಸರಿಗೆ ಶೀಘ್ರ ಹಕ್ಕುಪತ್ರ ಕೊಡಿಸಲಾಗುವುದು ಎಂದು ನುಡಿದರು.

ಬೆಂಕಿ ಅವಘಡ ಸಂಭವಿಸುವ ಮುಂಚಿನಿಂದಲೂ ಗ್ರಾಮಸ್ಥರು ಸರ್ಕಾರಿ ಗೋಮಾಳದಲ್ಲಿ ಬೇಸಾಯ ಮಾಡಿಕೊಂಡು ಬಂದಿದ್ದಾರೆ. ಜಮೀನಿಗೆ ಸಂಬಂಧಿಸಿದಂತೆ ಯಾವುದೇ ಹಕ್ಕುಪತ್ರಗಳಿಲ್ಲ.
ಎಲ್ಲವೂ ಅಗ್ನಿಗೆ ಆಹುತಿಯಾಗಿವೆ. ಈ ಎಲ್ಲಾ ಸಮಸ್ಯೆ ಸರಿಪಡಿಸಿ, ಶೀಘ್ರವೇ
ಸರ್ವೆ ಕಾರ್ಯ ನಡೆಸಿ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಿಸಲಾಗುವುದು ಎಂದು ದೇವೇಗೌಡ ಅಭಯ ನೀಡಿದರು.

ಪ್ರಸ್ತುತ ವ್ಯವಸಾಯ ಮಾಡುತ್ತಿದ್ದಾರೋ ಅವರ ಹೆಸರಿಗೆ ಖಾತೆ ಮಾಡಿಕೊಡಬೇಕು. ಮತ್ತೆ ಗೊಂದಲ ಇರಬಾರದು ಎಂದು ಸಲಹೆ ನೀಡಿದ ಗೌಡರು, ಇದಕ್ಕೆ
ಕೆಲವು ದಿನ ಕಾಲಾವಕಾಶ ಬೇಕಾಗುತ್ತದೆ. ಇದನ್ನು ಚುನಾವಣೆ ಹಿನ್ನಲೆಯಲ್ಲಿ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

‘ಸ್ಥಳೀಯ ಶಾಸಕ ಪ್ರಕಾಶ್ ತಮ್ಮ ಅನುದಾನದಲ್ಲಿ ದೇವಾಲಯ ಕಟ್ಟಿಸಿಕೊಡಲಿದ್ದಾರೆ. ನಾನು ಊರಿಗೊಂದು ಸಮುದಾಯ ಕಟ್ಟಿಸಿಕೊಡುವೆ. ರಸ್ತೆ ಹಾಗೂ ಒಳಚರಂಡಿ ಸೌಲಭ್ಯ ಕಲ್ಪಿಸಿಕೊಡಲಾಗುವುದು’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ, ಬಿಜೆಪಿ ವಿರುದ್ಧ ಕಾಂಗ್ರೆಸ್ ಚಾರ್ಜ್ ಶೀಟ್ ಹಾಕುತ್ತಿದ್ದಾರೆ. ನಾವು ಯಾರ ಮೇಲೂ ಹಾಕಿಲ್ಲ. ಹಾಗೆಯೇ ನಮ್ಮ ಮೇಲೂ ಯಾರೂ ಹಾಕಿಲ್ಲ. ಸದ್ಯಕ್ಕೆ ನಾವು ಸುರಕ್ಷಿತ’ ಎಂದು ನಗುತ್ತಲೇ ಗೌಡರು ಪ್ರತಿಕ್ರಿಯಿಸಿದರು.

ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಮಾತನಾಡಿ, ಹಾಲಿ ವಾಸ ಇರುವವರಿಗೆ ಈಗಾಗಲೇ ನೀಡಿರುವ ಸಂಖ್ಯೆ ಪ್ರಕಾರ ಪಟ್ಟಿ ತಯಾರಿಸಿ, ಆಯಾಯ ಮನೆಯ ಅನುಭೋಗದ ಪತ್ರ ಕೊಡಿಸುವುದರ ಜೊತೆಗೆ ಸರ್ವೆ ನಂ. 23, 31, 32 ಮತ್ತು 33, 34 ರಲ್ಲಿ ಸುಮಾರು 150 ಎಕರೆ ಸರ್ಕಾರಿ ಗೋಮಾಳವಿದೆ. 1970 ರ ದಶಕದಿಂದಲೂ ಗ್ರಾಮಸ್ಥರು ಉಳುಮೆ ಮಾಡುತ್ತಿದ್ದಾರೆ. ಆದರೆ, ಅನೇಕರ ಬಳಿ ಜಮೀನಿಗೆ ಸಂಬಂಧಿಸಿದ
ದಾಖಲೆಗಳು ಇಲ್ಲದ ಕಾರಣ, ಹೊಸದಾಗಿ ಸರ್ವೆ ಕಾರ್ಯ ಮಾಡಿಸಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT