ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ತೆರಿಗೆ ವಸೂಲಿಗೆ ಬಿಗಿ ಕ್ರಮ

ಮೂಲಸೌಕರ್ಯಕ್ಕೆ ಹೆಚ್ಚು ಹಣ ನಿಗದಿ, ಪಾಲಿಕೆ ಆವರಣದಲ್ಲಿ ಎಲ್‌ಸಿಡಿ ಪರದೆ ಮೇಲೆ ಬಜೆಟ್ ವೀಕ್ಷಿಸಿದ ಸಾರ್ವಜನಿಕರು
Last Updated 3 ಮಾರ್ಚ್ 2018, 9:32 IST
ಅಕ್ಷರ ಗಾತ್ರ

ತುಮಕೂರು: ಕುಡಿಯುವ ನೀರು, ಉತ್ತಮ ಆರೋಗ್ಯ, ಸ್ವಚ್ಛ ತುಮಕೂರು, ಬೀದಿ ದೀಪ, ಒಳಚರಂಡಿ, ರಸ್ತೆ ಮತ್ತು ಚರಂಡಿ ವ್ಯವಸ್ಥೆ, ಉದ್ಯಾನ‌ಗಳ ಅಭಿವೃದ್ಧಿಗೆ 2018–19ನೇ ಸಾಲಿನ ಮಹಾನಗರ ಪಾಲಿಕೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.

ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ತೆರಿಗೆ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಚ್.ವಾಸುದೇವ್ ಅವರು ಬಜೆಟ್ ಮಂಡಿಸಿದರು. ಹಿಂದಿನ ಮೂರು ವರ್ಷಗಳಂತೆ ಈ ಬಾರಿಯೂ ಇ– ಬಜೆಟ್‌ ಮಂಡಿಸಿದರು.

ಎಲ್ಲ ವರ್ಗದ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು, ಪ್ರಗತಿಪರ ಉದ್ದೇಶಗಳೊಂದಿಗೆ ಆರ್ಥಿಕ ಇತಿಮಿತಿಯಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಬಜೆಟ್‌ ತಯಾರಿಸಲಾಗಿದೆ ಎಂದು ವಾಸುದೇವ್ ಹೇಳಿದರು

ಮುಖ್ಯವಾಗಿ ಈ ಬಾರಿ ಆಸ್ತಿ ತೆರಿಗೆಯನ್ನು ಸಂಪೂರ್ಣವಾಗಿ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬಜೆಟ್ ಭಾಷಣ ಪ್ರಾರಂಭದಲ್ಲಿ ಒತ್ತು ಕೊಟ್ಟು ಹೇಳಿದರು.

ಆದಾಯ ನಿರೀಕ್ಷೆ: ಆಸ್ತಿ ತೆರಿಗೆ ಪಾಲಿಕೆಯ ಪ್ರಮುಖ ಆದಾಯ ಮೂಲವಾಗಿದೆ. ಈ ಸಾಲಿನಲ್ಲಿ ಕಟ್ಟಡಗಳು ಮತ್ತು ಭೂಮಿ ಮೇಲಿನ ಆಸ್ತಿ ತೆರಿಗೆಯಿಂದ ₹ 28 ಕೋಟಿ ಹಾಗೂ ಆಸ್ತಿ ತೆರಿಗೆ ಮೇಲಿನ ದಂಡದ ರೂಪದಲ್ಲಿ ₹ 2.5 ಕೋಟಿ ನಿರೀಕ್ಷಿಸಲಾಗಿದೆ. ಅಂತರಸನಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ನಿರ್ಮಿಸಿರುವ ಆಸ್ತಿಗಳಿಂದ ಕಂದಾಯ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಅನುದಾನಗಳ ಮೇಲೆಯೇ ಹೆಚ್ಚಿನ ಭರವಸೆ: ಎಸ್ಎಫ್‌ಸಿ ವೇತನ ಅನುದಾನ ₹ 10 ಕೋಟಿ, ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನ ₹ 10 ಕೋಟಿ, ಎಸ್‌ಎಫ್‌ಸಿ ವಿಶೇಷ ಅನುದಾನ ₹ 3 ಕೋಟಿ, ಎಸ್‌ಎಫ್‌ಸಿ ವಿದ್ಯುತ್ ವೆಚ್ಚ ಅನುದಾನ ₹ 16 ಕೋಟಿ, ಸ್ವಚ್ಛ ಭಾರತ್ ಮಿಷನ್ ಅನುದಾನ ₹ 4 ಕೋಟಿ, 14ನೇ ಹಣಕಾಸು ಆಯೋಗದ ಅನುದಾನ ₹ 114 ಕೋಟಿ ನಗರೋತ್ಥಾನ ಅನುದಾನ ₹ 7 ಕೋಟಿ, ಬರಪರಿಹಾರ ಅನುದಾನ ₹ 1 ಕೋಟಿ, ಘನತ್ಯಾಜ್ಯ ವಿಲೇವಾರಿ ಎಸ್‌.ಎಫ್‌.ಸಿ ವಿಶೇಷ ಅನುದಾನ ₹ 3 ಕೋಟಿ ಅನುದಾನ ನಿರೀಕ್ಷಿಸಲಾಗಿದೆ.

ಮೇಯರ್ ಎಚ್.ರವಿಕುಮಾರ್, ಉಪಮೇಯರ್ ಫರ್ಜಾನಾ ಖಾನಂ,ಆಯುಕ್ತ ಮಂಜುನಾಥ ಸ್ವಾಮಿ ವೇದಿಕೆಯಲ್ಲಿದ್ದರು.

ಸದಸ್ಯರ ಪ್ರತಿಕ್ರಿಯೆ

*ಬರೀ ನಿರೀಕ್ಷೆಯ ಬಜೆಟ್

ಪಾಲಿಕೆ ಸದಸ್ಯರಿಗೆ ಕೊಟ್ಟ ಬಜೆಟ್ ಕಾಪಿಯಲ್ಲಿ ನಿವೇಶನ ರಹಿತ ಪತ್ರಕರ್ತರಿಗೆ ನಿವೇಶನ ಅಭಿವೃದ್ಧಿಗೆ ₹ 2 ಕೋಟಿ ನಿಗದಿಪಡಿಸಿದ ಅಂಶ ನಮೂದಿಸಿಲ್ಲ. ಇದು ಕೊನೆ ಹಂತದಲ್ಲಿ ಸೇರಿಸಲಾಯಿತೇ ಅಥವಾ ಉದ್ದೇಶಪೂರ್ವಕವಾಗಿ ಸೇರಿಸಿರಲಿಲ್ಲವೇ?  ಹಾಗೆ ನೋಡಿದರೆ ಈ ಮೊತ್ತವೇನೂ ದೊಡ್ಡದಲ್ಲ. ಪತ್ರಕರ್ತರಿಗೆ ಅನುಕೂಲ ಮಾಡಿಕೊಡುವ ಬಗ್ಗೆ ನಮ್ಮದೇನೂ ಆಕ್ಷೇಪವಿಲ್ಲ.

–ಡೆಲ್ಟಾ ರವಿ, ವಿರೋಧ ಪಕ್ಷದ ನಾಯಕ

*ಗೋಪ್ಯತೆ ಸರಿಯಲ್ಲ

ಪತ್ರಕರ್ತರಿಗೆ ಸೌಕರ್ಯ ಕಲ್ಪಿಸಲು ಅಭ್ಯಂತರವಿಲ್ಲ. ಆದರೆ, ಬಜೆಟ್ ಕಾಪಿಯಲ್ಲಿ ಉಲ್ಲೇಖಿಸದೆ ವಿಷಯ ಪ್ರಸ್ತಾಪಿಸಿದ್ದು ಸರಿಯಲ್ಲ. ಗೋಪ್ಯತೆ ಸರಿಯಲ್ಲ.

– ಮಹೇಶ್, ಸದಸ್ಯ

* ಅಪ್ಪಾಜಿ ಕ್ಯಾಂಟೀನ್ ಮಾಡ್ತೇವೆ

ಇಂದಿರಾ ಕ್ಯಾಂಟೀನ್ ಅಭಿವೃದ್ಧಿಗೆ ಅನುದಾನ ನಿಗದಿಪಡಿಸಲಾಗಿದೆ. ಇದು ಸರಿಯಲ್ಲ. ಕೆಲವೇ ತಿಂಗಳಲ್ಲಿ ನಮ್ಮ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ ಅಪ್ಪಾಜಿ ಕ್ಯಾಂಟೀನ್ ಮಾಡುತ್ತೇವೆ. ಆಗ ಏನು ಮಾಡುತ್ತೀರಿ.

ಟಿ.ಆರ್. ನಾಗರಾಜ್, ಸದಸ್ಯ

*ಸತ್ಯವಂತರ ಬಾಯಿಯಲ್ಲಿ ಸುಳ್ಳು

ಬಜೆಟ್‌ನಲ್ಲಿ ವಿಶೇಷವೇನೂ ಇಲ್ಲ. ಸತ್ಯವಂತರ ಬಾಯಿಯಲ್ಲಿ ಸುಳ್ಳು ಹೇಳಿಸಲಾಗಿದೆ. ಹಿರಿಯ ನಾಗರಿಕರಿಗೆ ಏನೂ ಪ್ರಸ್ತಾಪ ಇಲ್ಲ.

ಕರುಣಾರಾಧ್ಯ, ಸದಸ್ಯ

* ಸಂಶಯಕ್ಕೆ ಕಾರಣ

ಪತ್ರಕರ್ತರಿಗೆ ನಿವೇಶನ ಅಭಿವೃದ್ಧಿಗೆ ಹಣ ಒದಗಿಸುವ ವಿಚಾರ ಬಜೆಟ್‌ ಮಂಡನೆಗೂ ಮುನ್ನವೇ ಸಾರ್ವಜನಿಕವಾಗಿ ಚರ್ಚೆಯಾಗಿದೆ. ಸದಸ್ಯರಿಗೆ ಕೊಟ್ಟ ಬಜೆಟ್ ಪ್ರತಿಯಲ್ಲಿ ಆ ವಿಷಯ ಇಲ್ಲ. ಪತ್ರಕರ್ತರ ಬಗ್ಗೆ ನಮಗೆ ಸಹಾನುಭೂತಿ ಇದೆ. ಆದರೆ, ಹೀಗೇಕೆ? ಎಂಬುದು ಸಂಶಯಕ್ಕೆ ಆಸ್ಪದವಾಗಿದೆ.

ಗೀತಾ ರುದ್ರೇಶ್, ಸದಸ್ಯೆ, ಪಾಲಿಕೆ

–––

ಅಂಕಿ ಅಂಶಗಳು

₹ 190 ಕೋಟಿ
ಆದಾಯ ನಿರೀಕ್ಷೆ

₹ 188 ಕೋಟಿ
ಅಭಿವೃದ್ಧಿ ಮಾಡಲು ಉದ್ದೇಶಿಸಿರುವ ವೆಚ್ಚ

₹ 2.13 ಕೋಟಿ
ಉಳಿತಾಯ ಮೊತ್ತ
***
ಪತ್ರಕರ್ತರಿಗೆ ನಿವೇಶನ ಅಭಿವೃದ್ಧಿಗೆ ₹ 2 ಕೋಟಿ

ತುಮಕೂರು ನಗರದಲ್ಲಿ ವಾಸಿಸುತ್ತಿರುವ ವೃತ್ತಿ ನಿರತ ಮತ್ತು ನಿವೇಶನ ರಹಿತ ಪತ್ರಕರ್ತರಿಗೆ ನಿವೇಶನ ಅಭಿವೃದ್ಧಿಗೆ ₹ 2 ಕೋಟಿ ವೆಚ್ಚ ಮಾಡಲು ಬಜೆಟ್‌ನಲ್ಲಿ ಉದ್ದೇಶಿಸಲಾಗಿದೆ. ಅರ್ಹರನ್ನು ಗುರುತಿಸಿ ಸರ್ಮರ್ಪಕ ರೀತಿ ಬಳಕೆ ಮಾಡಲಾಗುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷರು ಸಭೆಗೆ ಭರವಸೆ ನೀಡಿದರು.
**
ಪೌರ ಕಾರ್ಮಿಕರಿಗೆ ’ಗೃಹ ಭಾಗ್ಯ’

ಪಾಲಿಕೆಯ ಪೌರ ಕಾರ್ಮಿಕರಿಗೆ 52 ಮನೆಗಳ ನಿರ್ಮಾಣಕ್ಕಾಗಿ ಎಸ್.ಎಫ್‌.ಸಿ ವಿಶೇಷ ಅನುದಾನದಡಿ ₹ 1.5 ಕೋಟಿ ಬಿಡುಗಡೆ ಆಗಿದೆ. 2018–19ರಲ್ಲಿ ₹ 1.44 ಕೋಟಿ ಅನುದಾನ ನಿರೀಕ್ಷಿಸಲಾಗಿದೆ. ಈ ಅನುದಾನದಲ್ಲಿ ಪೌರ ಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷರು ಹೇಳಿದರು.
**
ಪಾಲಿಕೆ ಆವರಣದಲ್ಲಿ ಆರೋಗ್ಯ ಕೇಂದ್ರ

ಪೌರ ಕಾರ್ಮಿಕರ ಆರೋಗ್ಯ ಸುಧಾರಿಸುವ ಉದ್ದೇಶದಿಂದ ಆರೋಗ್ಯ ಸಿಡಿ ಯೋಜನೆ 2016–17ರಲ್ಲಿಯೇ ಜಾರಿಯಾಗಿದೆ.

ಈ ಯೋಜನೆಯಡಿ ಈ ಸಾಲಿನ ಬಜೆಟ್‌ನಲ್ಲಿ ಪೌರ ಕಾರ್ಮಿಕರು, ಡಿ ದರ್ಜೆ ನೌಕರರು ಹಾಗೂ ಇತರ ಎಲ್ಲಾ ಸಿಬ್ಬಂದಿಗೆ ಆರೋಗ್ಯ ತಪಾಸಣೆ ಮಾಡಿಸಲು ಆರೋಗ್ಯ ಕೇಂದ್ರವನ್ನು ಮಹಾನಗರ ಪಾಲಿಕೆ ಆವರಣದಲ್ಲಿ ತೆರೆಯಲಾಗುತ್ತದೆ. ಒಬ್ಬರು ವೈದ್ಯರು ಮತ್ತು ಒಬ್ಬರು ಶುಶ್ರೂಷಕರ ಸೇವೆಯನ್ನು ಹೊರ ಗುತ್ತಿಗೆ ಆಧಾರದ ಮೇಲೆ ಪಡೆಯಲಾಗುತ್ತಿದೆ. ಇದಕ್ಕಾಗಿ ವಾರ್ಷಿಕ ₹ 7 ಲಕ್ಷ ವೆಚ್ಚ ಮಾಡಲಾಗುವುದು ಎಂದು ವಿವರಿಸಿದರು.
**
ಹಳ್ಳಿಗಳಿಗೆ ಪ್ರತ್ಯೇಕ ಕ್ರಿಯಾ ಯೋಜನೆ

ಪಾಲಿಕೆ ವ್ಯಾಪ್ತಿಯ ಮತ್ತು ನಗರದ ಹೊರಭಾಗದಲ್ಲಿರುವ 22 ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಲಭ್ಯವಿರುವ ಅನುದಾನದಡಿ ಪ್ರತ್ಯೇಕ ಕ್ರಿಯಾ ಯೋಜನೆ ತಯಾರಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಬಜೆಟ್‌ನಲ್ಲಿ ಉದ್ದೇಶಿಸಲಾಗಿದೆ.
**
ನಗರ ವಸತಿ ರಹಿತರಿಗೆ ಆಶ್ರಯ

ನಗರ ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಇರುವ ನಿರ್ಗತಿಕ ವಸತಿ ರಹಿತರಿಗೆ ರಾತ್ರಿ ಮಲಗಲು ಸೌಕರ್ಯ (ನೈಟ್ ಶೆಲ್ಟರ್) ಕಲ್ಪಿಸುವ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಈ ಸಾಲಿನ ಬಜೆಟ್‌ನಲ್ಲಿ ಪೂರ್ಣಗೊಳಿಸಲಾಗುವುದು. ಇದರ ನಿರ್ವಹಣೆಗೆ ₹ 6.90 ಲಕ್ಷ ಬಳಸುವ ಗುರಿಯನ್ನು ಪಾಲಿಕೆ ಹೊಂದಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ವಾಸುದೇವ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT