ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ರಣರಂಗವೋ ಪ್ರೇಮರಂಗವೋ

Last Updated 4 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಒಮ್ಮೆ ರಣರಂಗದಂತೆಯೂ ಇನ್ನೊಮ್ಮೆ ಪ್ರೇಮರಂಗದಂತೆಯೂ ಕಾಣುವ ಇಂಡಿಯಾ ಎಂಬ ಭಾರತದ ಕಾಮರೂಪೀ ರಾಜಕಾರಣವು ಚುನಾವಣೆಯ ಹೊತ್ತಿಗೆ ರಣಪ್ರೇಮರಂಗವಾಗಿ ಬದಲಾಗುತ್ತದೆ. ವಾಸ್ತವದಲ್ಲಿ, ಈ ರಣಪ್ರೇಮರಂಗವೆಂಬುದು ರಾಜಕಾರಣವಾಗಿರದೆ ಶುದ್ಧ ರಾಜಕೀಯ ನಾಟಕವೇ ಆಗಿರುತ್ತದೆ.

ಇದರಲ್ಲಿ ಅತಿರಥರು, ಮಹಾರಥರು ಮತ್ತು ಸಾಮಾನ್ಯ ಯೋಧರು ಇತ್ಯಾದಿ ಇದ್ದು ಸ್ವಲ್ಪಮಟ್ಟಿಗೆ ಮಹಾಭಾರತದ ಕುರುಕ್ಷೇತ್ರ ರಣರಂಗವನ್ನು ಹೋಲುತ್ತದೆ. ರಥಿಕರ ಆಯುಧ ನಾಲಿಗೆ ಮಾತ್ರವೇ ಆಗಿರುತ್ತದೆ. ಪದಾತಿಗಳು ಈ ರಾಜಕೀಯ ರಣರಂಗದಲ್ಲಿ ಅದೃಶ್ಯವಾಗಿ ಕೆಲಸ ಮಾಡುತ್ತಾರೆ. ಅವರ ಬಳಿ ಇರುವುದು ವೋಟು ಎಂಬ ಆಯುಧ ಮಾತ್ರ. ಅದಕ್ಕೆ ಕೊಲ್ಲುವ ಶಕ್ತಿಯೂ ಇಲ್ಲ, ಕಾಯುವ ಶಕ್ತಿಯೂ ಇಲ್ಲ. ಅದರ ನಿಜವಾದ ಅಸ್ತಿತ್ವ ಕೆಲವೇ ನಿಮಿಷಗಳದ್ದು. ಇದು ಶಸ್ತ್ರಾಸ್ತ್ರ ರಹಿತ, ಅಹಿಂಸಾತ್ಮಕ ಸಮರವೇನೋ ನಿಜ. ಆದರೆ ವೋಟು ಎಂಬ ಆಯುಧದ ಬಲದಿಂದ ಕೆಲವೊಮ್ಮೆ ಸ್ವಲ್ಪಮಟ್ಟಿಗೆ ಹಿಂಸಾತ್ಮಕವೂ ಆಗುತ್ತದೆ.

ಅತಿರಥರು ಮತ್ತು ಮಹಾರಥರು ನಿರಂತರ ಒಬ್ಬರಿನ್ನೊಬ್ಬರನ್ನು ಕಳ್ಳ, ನೀಚ, ಭ್ರಷ್ಟ, ದ್ರೋಹಿ... ಎಂದಿತ್ಯಾದಿಯಾಗಿ ನಿಂದಿಸುತ್ತಾ ಇರುತ್ತಾರಾದರೂ ಚುನಾವಣೆಯಹೊತ್ತಿಗೆ ಇನ್ನಷ್ಟು ಹೊಸ ಹೊಸ ಶಬ್ದಗಳ ಸೃಷ್ಟಿಯಾಗಿ ಕರ್ಣಾರ್ಜುನರ ಬಾಣಗಳಂತೆ ಎಲ್ಲಾ ಕಡೆ ಹಾರಾಡುತ್ತವೆ. ಈ ಬಗೆಯ ಪರಸ್ಪರ ನಿಂದೆಯಿಂದಾಗಿ ಯಾರುಒಳ್ಳೆಯವರು, ಯಾರು ಕೆಟ್ಟವರು ಎಂದು ತಿಳಿಯಬೇಕಾದ ಅಗತ್ಯವೇ ಇರುವುದಿಲ್ಲ. ಯಾಕೆಂದರೆ ರಾಜಕೀಯ ನಾಟಕದಲ್ಲಿ ಎಲ್ಲರೂ ಕೇವಲ ಪಾತ್ರಗಳೇ ಆಗಿದ್ದು, ಮಾತೆಲ್ಲವೂ ನಾಟಕದ ಮಾತೇ ಆಗಿರುತ್ತದೆ. ಯಾರನ್ನುಯಾರು ಪ್ರೀತಿಸುತ್ತಾರೆ, ಯಾರನ್ನು ಯಾರು ದ್ವೇಷಿಸುತ್ತಾರೆ ಎಂಬ ಪ್ರಶ್ನೆ ಇಲ್ಲ. ಎಲ್ಲರನ್ನು ಎಲ್ಲರೂ ಪ್ರೀತಿಸುತ್ತಾರೆ, ಎಲ್ಲರನ್ನು ಎಲ್ಲರೂ ದ್ವೇಷಿಸುತ್ತಾರೆ. ಯಾರೂ ಯಾರ ಸಂಬಂಧವನ್ನೂ ಮಾಡಬಹುದು.

ಆದರೆ ಇದು ಕುರುಕ್ಷೇತ್ರ ರಣರಂಗದಂತಿರದೆ, ಶುದ್ಧ ನಾಟಕರಂಗವಾಗಿರುವುದರಿಂದ ಮತದಾರರೆಂಬ ಪ್ರೇಕ್ಷಕರು ಎಲ್ಲವನ್ನೂ ನೋಡುತ್ತಾ, ಕೇಳುತ್ತಾ ಇರುತ್ತಾರೆ. ಅದಕ್ಕಾಗಿ ಅವರು ಟಿಕೆಟ್‌ ಖರೀದಿಸಬೇಕಾಗಿಲ್ಲ. ವೋಟು ಎಂಬ ಟಿಕೆಟ್‌ ಪ್ರತಿಯೊಬ್ಬರ ಜೇಬಿನಲ್ಲಿಯೂ ಇರುತ್ತದೆ. ಶುಭ ಮುಹೂರ್ತ ಘೋಷಣೆಯಾದಾಗ ಈ ವೋಟಿಕೇಟುಗಳು ಹೊರಬರುತ್ತವೆ.

ಜನರಿಗೆ ತಮ್ಮನ್ನು ಪ್ರತಿನಿಧಿಸುವ ಎಲ್ಲಾ ಸಚಿವರ, ಸಂಸದರ ಮೇಲೆ ಗೌರವವಿರಬೇಕು. ರಾಜಕಾರಣಿಗಳ ವ್ಯಕ್ತಿತ್ವ ಜನ ಮೆಚ್ಚುವಂತಿರಬೇಕು. ಆದರೆ ಗೌರವ ಮೂಡುವುದಾದರೂ ಹೇಗೆ? ರಾಜಕೀಯ ಪೋಷಾಕುಧರಿಸಿರುವ ಯಾರೊಬ್ಬರಿಗೂ ಜನರು ಮೆಚ್ಚುವಂಥ ನಡೆ– ನುಡಿ– ಚಾರಿತ್ರ್ಯ ಇಲ್ಲವಾದರೆ ಹೇಗೆ ಮೆಚ್ಚುವುದು, ಯಾವ ಆಧಾರದಲ್ಲಿ ಈತ ನಮ್ಮ ಪ್ರತಿನಿಧಿಯಾಗಬೇಕು ಎಂದು ಜನ ತೀರ್ಮಾನಿಸುವುದು? ಪ್ರಜ್ಞಾವಂತರಾಗದೆ ವೋಟಿಗಾಗಿ ಹಣಕ್ಕೊ ಬಾಡೂಟಕ್ಕೊ ಕೈಯೊಡ್ಡುವ ಮಂದಿಗೆ ನಾಚಿಕೆ, ಮರ್ಯಾದೆ ಎಲ್ಲಿದೆ? ಇಂಥ ಮಂದಿಗೆ ಒಳ್ಳೆಯ ಸರ್ಕಾರವನ್ನು ಪಡೆಯುವ ಅರ್ಹತೆ ಎಲ್ಲಿದೆ?

ಸಚಿವರು, ಸಂಸದರು ಒಬ್ಬರನ್ನೊಬ್ಬರು ಚರಿತ್ರಹೀನ, ನೀಚ ಎಂದು ಬಿಂಬಿಸಲು ಪ್ರಯತ್ನಿಸುತ್ತಾ ಇದ್ದರೆ, ಜನರ ಮನದಲ್ಲಿ ಸಚಿವರ, ಸಂಸದರ ಮೇಲೆ ಹೇಗೆ ಗೌರವ ಭಾವ ಇದ್ದೀತು? ಸ್ವಾಭಾವಿಕವಾಗಿಯೇ ಕೆಲವು ಮನುಷ್ಯರು ಒಳ್ಳೆಯವರಾಗಿರುತ್ತಾರೆ, ಕೆಲವರು ಕೆಟ್ಟವರಾಗಿರುತ್ತಾರೆ ಎಂಬುದೇನೋ ನಿಜ. ಎಲ್ಲಾ ರಾಜಕಾರಣಿಗಳು ‘ರಾಜಾಪ್ರತ್ಯಕ್ಷ ದೇವತಾ’ ಎಂದುಪರಿಗಣಿಸುವಷ್ಟು ಒಳ್ಳೆಯವರಾಗಿರುವುದು ಅಸಂಭವ. ಇವತ್ತು ರಾಜಕಾರಣಿಗಳಲ್ಲಿ ಎಲ್ಲರೂ ಭ್ರಷ್ಟರು, ದ್ರವ್ಯಪಿಪಾಸುಗಳು, ಯಾವ್ಯಾವುದೋ ಅನ್ಯಾಯದ ಮಾರ್ಗದಲ್ಲಿ ಕೋಟಿಗಟ್ಟಳೆ ಹಣ, ಎಕರೆಗಟ್ಟಳೆ ಭೂಮಿ ಮಾಡಿಕೊಳ್ಳುವವರು ಎಂಬುದು ಜನರ ಭಾವನೆಯಾಗಿದೆ. ಒಳ್ಳೆಯವರಾಗಿರುವವರ ನಡೆ– ನುಡಿ ಮಾತ್ರವಲ್ಲ, ಚಾರಿತ್ರ್ಯ ಕೂಡ ಕಳಂಕಹೀನವಾಗಿರುತ್ತದೆ. ಅದಕ್ಕೆ ಸದ್ಗುಣವನ್ನು ಸಾರುವ ಜಾಹೀರಾತು- ಸರ್ಟಿಫಿಕೇಟು ಅಗತ್ಯವಿಲ್ಲ.

ಈ ಸಮರದಲ್ಲಿ ವೋಟುದಾರರಾದ ಸಾಮಾನ್ಯ ಮಾನವರ ವರ್ತನೆಯನ್ನು ಪರಿಶೀಲಿಸಿ ನೋಡಿದರೆ, ಜಗತ್ತು ಮೆಚ್ಚುವಂಥ ಮಾನವರ ಲೋಕವಾಗಿರುವ ಭಾರತ ಯಾಕೆ ಆಸೆಬುರುಕರ ಹರಕು ಪ್ರಜಾಪ್ರಭುತ್ವವಾಗಿ ನರಳುತ್ತಿದೆ ಎಂದು ಅಚ್ಚರಿಪಡುವುದರಲ್ಲಿ ಸಂಶಯವೇ ಇಲ್ಲ. ಜನರ ವರ್ತನೆಯು ಸುಸಂಸ್ಕೃತರು ನಾಚಿಕೆ ಪಡುವಂಥದಾಗಿದೆ. ಎಮ್ಮೆಲ್ಲೇ, ಎಂಪಿ ಆಗಲು ಮತ್ತು ಆಮೇಲೆ ಮಂತ್ರಿ ಆಗಲು ಜೊಲ್ಲು ಸುರಿಸುತ್ತಾ ಕಾಯುತ್ತಿರುವ ಚುನಾವಣಾ ಅಭ್ಯರ್ಥಿಗಳ ನಡೆ– ನುಡಿ ಹೇಗೇ ಇರಲಿ, ಅದನ್ನು ಸರಿಪಡಿಸುವುದು ವೋಟುದಾರರಿಗೆ ಮುಖ್ಯವಲ್ಲ.

ಆತ್ಮಗೌರವಹೀನರಾಗಿ ಎಮ್ಮೆಲ್ಲೇ, ಎಂಪಿಗಳ ಮುಂದೆಏನೇನೋ ಸ್ವಂತ ಕೆಲಸಕ್ಕಾಗಿ ದೈನ್ಯದಿಂದ ಭಿಕ್ಷೆ ಬೇಡುವವರಂತೆ, ಭಯ –ಭಕ್ತಿಯಿಂದ ನಿಲ್ಲುವುದನ್ನು ಜನಬಿಡಬೇಕು. ಜನಪ್ರತಿನಿಧಿಯೊಡನೆ ‘ಅವನು ಸಹ ನಮ್ಮಂಥ ಮನುಷ್ಯನೇ’ ಎಂದು ತಿಳಿದು ಸ್ನೇಹ– ಸೌಹಾರ್ದದಿಂದ ನಡೆದುಕೊಂಡರೆ ಸಾಕು. ತಮ್ಮ ಹೋಬಳಿಯಲ್ಲಿ ಏನೇನು ಅಭಿವೃದ್ಧಿ ಕಾರ್ಯ ಆಗಬೇಕೆಂಬುದನ್ನು ಜನರುಗುರುತಿಸಬೇಕು. ಅದನ್ನು ಮಾಡಲು ತಮ್ಮ ಎಮ್ಮೆಲ್ಲೇ, ಎಂಪಿಯನ್ನು ಒತ್ತಾಯಿಸಬೇಕು. ಅಗತ್ಯವಿದ್ದರೆ ಗಾಂಧೀಜಿಯಂತೆ ಸತ್ಯಾಗ್ರಹ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜನರು ಧೈರ್ಯದಿಂದ ಮಾತಾಡುವ ಗುಣ ಬೆಳೆಸಿಕೊಳ್ಳಬೇಕು. ಜನಪ್ರತಿನಿಧಿ ಚುನಾವಣೆಯ ಮೊದಲು ನೀಡುವ ಹಣ, ಊಟ ಮತ್ತಿತರ ಆಮಿಷಗಳ ಕಡೆಗೆ ಕಣ್ಣೆತ್ತಿಯೂ ನೋಡಬಾರದು. ಮಂತ್ರಿಯೋ, ಎಂಪಿಯೋ, ಎಮ್ಮೆಲ್ಲೆಯೋ, ದೊಡ್ಡ ಸರ್ಕಾರಿ ಅಧಿಕಾರಿಯೋ ಯಾರೇಆಗಿರಲಿ, ಅವರ ಜೊತೆ ಧೈರ್ಯದಿಂದ, ಆತ್ಮಗೌರವದಿಂದ ಮಾತಾಡಬೇಕು. ಆತ ಮಾಡಬೇಕಾದುದನ್ನು, ಮಾಡದಿರುವುದನ್ನು ನಿರ್ದಾಕ್ಷಿಣ್ಯವಾಗಿ ಹೇಳಬೇಕು.

ಜನರಿಗೆ ಆತ್ಮಗೌರವವಿದ್ದರೆ ಮಾತ್ರ ಒಳ್ಳೆಯ ಆಡಳಿತದೊರೆಯುತ್ತದೆ. ರಾಜಕಾರಣಿಗಳಲ್ಲಿ ಯೋಗ್ಯರು ಯಾರು,ಅಯೋಗ್ಯರು ಯಾರು ಎಂದು ಜನರು ಗುರುತಿಸಬೇಕು. ಅವರು ಒಬ್ಬರನ್ನೊಬ್ಬರ ಬಗ್ಗೆ ಏನು ಹೇಳುತ್ತಿದ್ದರೂ ಅದನ್ನು ಉಪೇಕ್ಷಿಸಬೇಕು. ಆ ಕೆಲಸವನ್ನು ಜನರಷ್ಟೇ ಮುಖ್ಯವಾಗಿ ದೃಶ್ಯ ಮಾಧ್ಯಮವೂ ಮಾಡಬೇಕು. ಮಾಧ್ಯಮಗಳಲ್ಲಿ ನಡೆಯುವ ಚರ್ಚೆ ವಿದ್ಯಾವಂತರು, ಪ್ರಜ್ಞಾವಂತ ಪ್ರಬುದ್ಧ ನಾಗರಿಕರು ಮಾಡುವಂಥ ಚರ್ಚೆಯಂತೆ ಆಗಿದ್ದರೆ ಮಾತ್ರ ಸಮಾಜಕ್ಕೆ ಪ್ರಯೋಜನ ಎನ್ನವುದು ಜನಸಾಮಾನ್ಯರಿಗೆ ತಿಳಿದ ವಿಚಾರ.ಚರ್ಚೆಯಲ್ಲಿ ಉದ್ವಿಗ್ನತೆಯ ಅಗತ್ಯವೇನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT