ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ತಳಿ ಬೀಜಗಳ ರಕ್ಷಕ

Last Updated 5 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ದೇಸಿ ತಳಿಯ ಬೀಜಗಳನ್ನು ರಕ್ಷಿಸಬೇಕು. ಅವುಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎನ್ನುವ ಆಸಕ್ತಿ ಮೈಗೂಡಿಸಿಕೊಂಡಿರುವ ರೈತರು ಹಲವು. ಬೀಜ ಸಂಗ್ರಹ ಮಾತ್ರವಲ್ಲದೇ ಸ್ವತಃ ಬೆಳೆದು ಫಸಲು ಪಡೆದು ನಿತ್ಯದ ಆಹಾರಕ್ಕಾಗಿ ಬಳಸಿಕೊಂಡು ಮಿಕ್ಕಿದ ದೇಸಿ ಧಾನ್ಯಗಳನ್ನು ವಿಕ್ರಯಿಸಲು ಬಳಸುತ್ತಿರುವ ಅನೇಕ ರೈತರಲ್ಲಿ ಧಾರವಾಡದ ಮುಗಳಿ ಗ್ರಾಮದ ಮಹೇಶ್ ರಾಮಾ ನಾಯ್ಕ್ ಪಾಟೀಲ್ ಒಬ್ಬರು. ಇವರಲ್ಲಿ ಒಂಬತ್ತು ಬಗೆಯ ನವಣೆಯ ಸಂಗ್ರಹವಿದೆ. ನಾಲ್ಕು ಬಗೆಯ ಜವಾರಿ ಜೋಳ ವೈವಿಧ್ಯವಿದೆ. ಬೀಜ ಸಂಗ್ರಹದ ಆಸಕ್ತಿ ಹೊಂದಿರುವ ಇವರು ಜವಾರಿ ಧಾನ್ಯಗಳ ಕೃಷಿಯನ್ನು ಮಾಡುತ್ತಿದ್ದಾರೆ.

ಒಂಬತ್ತು ನಮೂನೆಯ ನವಣೆ: ಕೃಷಿಯಲ್ಲಿ ಹೊಸತನದ ತುಡಿತ ಹೊಂದಿರುವ ಇವರು ಜವಾರಿ ತಳಿಯ ನವಣೆಯ ಬೆನ್ನು ಹತ್ತಿ ಎರಡು ವರ್ಷಗಳಾಗಿವೆ. ನವಣೆಯಲ್ಲಿ ಒಂದೆರಡು ತಳಿಯ ಹೆಸರುಗಳನ್ನು ಮಾತ್ರ ಕೇಳಿದ್ದ ಇವರು, ಒಂಬತ್ತು ವಿಧದ ನವಣೆಗಳಿವೆ ಎನ್ನುವ ವಿಷಯ ಕೇಳಿದಾಗ ಅಚ್ಚರಿಗೊಂಡಿದ್ದರು. ಕುತೂಹಲಗೊಂಡ ಇವರು ತಾವೂ ನವಣೆ ಕಾಳು ಗಳನ್ನು ಸಂಗ್ರಹಿಸಬೇಕೆಂದುಕೊಂಡು ರಾಜ್ಯದ ಮೂಲೆ ಮೂಲೆಗಳನ್ನು ಸುತ್ತಿದರು.

ಕೃಷಿ ವಿಶ್ವ ವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹೀಗೆ ಎಲ್ಲಿ ನವಣೆ ವೈವಿಧ್ಯ ಸಿಗಬಹುದು ಎನ್ನಿಸಿತೋ ಅಲ್ಲೆಲ್ಲಾ ಮಾಹಿತಿ ಕಲೆ ಹಾಕತೊಡಗಿದರು. ಆಗಾಗ ಒಂದೊಂದೇ ತಳಿಯ ನವಣೆಗಳು ಕೈಸೇರತೊಡಗಿದವು. ಕಳೆದ ಮುಂಗಾರಿನಲ್ಲಿ ಈ ಒಂಬತ್ತು ತಳಿಗಳ ನವಣೆ ಕೃಷಿ ಕೈಗೊಂಡಿದ್ದರು. ಒಂದು ಎಕರೆ ಪ್ರದೇಶದಲ್ಲಿ ಗುಂಟೆ ಲೆಕ್ಕದಲ್ಲಿ ವಿವಿಧ ನವಣೆಗಳಿಗೆ ಸ್ಥಾನ ಕಲ್ಪಿಸಿ ಹೊಸ ಕೃಷಿಯಲ್ಲಿ ಗೆಲುವು ಸಾಧಿಸಿದ್ದರು.

ದೊಡ್ಡ ತಲೆ ನವಣೆ, ಹಾಲು ನವಣೆ, ಜಡೆ ನವಣೆ, ಮುಳ್ಳು ನವಣೆ, ಕೆಂಪು ಹುಲ್ಲು ನವಣೆ, ಕಡು ಕೆಂಪು ನವಣೆ, ಸಣ್ಣ ನವಣೆ, ಕೆಂಪು ನವಣೆ, ಟಿ.ಇ.ಆರ್.ಎ.ಐ ನವಣೆ ಹೀಗೆ ಒಂಬತ್ತು ತಳಿಯ ನವಣೆ ವೈವಿಧ್ಯ ಇವರಲ್ಲಿದೆ.

ಈ ಬಾರಿಯ ಮುಂಗಾರಿನಲ್ಲಿ ಪ್ರತ್ಯೇಕ ಗುಂಟೆ ಲೆಕ್ಕದ ತಾಕು ಸಿದ್ಧಪಡಿಸಿಕೊಂಡು ಕೂರಿಗೆಯಲ್ಲಿ ಬಿತ್ತನೆ ಮಾಡಿದ್ದರು. ಕೊಟ್ಟಿಗೆ ಗೊಬ್ಬರ ಬಳಕೆ, ಮೂರು ತಿಂಗಳಿನಲ್ಲಿ ಕಟಾವು. ತಲಾ ಐವತ್ತು ಕೆ.ಜಿ.ಯಂತೆ ಇಳುವರಿ ಪಡೆದಿದ್ದಾರೆ. ಅಪರೂಪದ ನವಣೆಯಾಗಿದ್ದರಿಂದ ಇವರ ಮೊದಲ ಆದ್ಯತೆ ಸಂರಕ್ಷಣೆ ಮಾಡುವುದೇ ಆಗಿದೆ. ಹೆಚ್ಚಿನ ರೈತರು ಬೀಜಕ್ಕಾಗಿ ನವಣೆ ಒಯ್ಯುವುದಿದೆ. ಹಣಕ್ಕಾಗಿ ಮಾರಾಟ ಮಾಡಿದ್ದಕ್ಕಿಂತ ರೈತರಿಗೆ ಬೀಜಕ್ಕಾಗಿ ವಿತರಿಸಿದ್ದೇ ಹೆಚ್ಚು ಎನ್ನುವ ವಿವರಣೆ ಇವರದು.

ನಾಲ್ಕು ತಳಿಯ ಜೋಳ: ಜವಾರಿ ತಳಿಯ ಜೋಳ ವೈವಿಧ್ಯ ಇವರ ಕೃಷಿಯಲ್ಲಿದೆ. ತಲಾ ಒಂದೊಂದು ಎಕರೆಯಂತೆ ನಾಲ್ಕು ಎಕರೆಯಲ್ಲಿ ನಾಲ್ಕು ರೀತಿಯ ಜವಾರಿ ಜೋಳ ಬಿತ್ತನೆ ಮಾಡಿದ್ದರು. ಕರಿಗೊಂಡಿ ಮುತ್ತಿನ ಜೋಳ, ಗಿಡಗೆಂಪು ಜೋಳ, ದೋಸೆ ಜೋಳ, ಬಿದಿರುಕುಂಬಿ ಜೋಳ ಬಿತ್ತನೆ ಕೈಗೊಂಡಿದ್ದರು. ಅಕ್ಟೋಬರ್ ಎರಡನೆಯ ವಾರದಲ್ಲಿ ಬಿತ್ತನೆ. ಬಿತ್ತನೆ ಪೂರ್ವ ಎರಡು ಬಾರಿ ಆಳ ಉಳುಮೆ. ಎತ್ತಿನ ನೇಗಿಲು ಬಳಕೆ. ಎರೆ ಮಣ್ಣಿನ ಭೂಮಿಯಾಗಿದ್ದರಿಂದ ವರ್ಷಕ್ಕೊಮ್ಮೆ ಮುಂಗಾರಿನಲ್ಲಿ ಮಾತ್ರ ಕೊಟ್ಟಿಗೆ ಗೊಬ್ಬರ ಏರಿಸುತ್ತಾರೆ. ಯಾವುದೇ ಗೊಬ್ಬರ ಬಳಸುವುದಿಲ್ಲ. ಎಕರೆಗೆ ಎರಡು ಕೆ.ಜಿ.ಯಂತೆ ಕೂರಿಗೆಯಿಂದ ಬೀಜ ಬಿತ್ತನೆ. ಸಾಲಿನ ನಡುವೆ ಹಾಗೂ ಕಾಳಿನ ನಡುವೆ ಇಪ್ಪತ್ತು ಇಂಚು ಅಂತರದಲ್ಲಿ ಬಿತ್ತನೆ. ಕಾಳಿನ ನಡುವೆ ಬೀಜ ದಟ್ಟವಾಗಿ ಬಿದ್ದಲ್ಲಿ ಗಿಡ ಒಂದು ಅಡಿಗಳಷ್ಟು ಬೆಳೆದು ನಿಂತಾಗ ಅಗತ್ಯವಿಲ್ಲ ಎನ್ನಿಸಿದ ಗಿಡಗಳನ್ನು ಕಿತ್ತು ಹಾಕುತ್ತಾರೆ.

ಬಿತ್ತಿದ ನಂತರ ಈ ಬಾರಿ ಹಿಂಗಾರಿನಲ್ಲಿ ಉತ್ತಮ ಮಳೆಯಾಗಿತ್ತು. ಗಿಡಗಳು ಹುಲುಸಾಗಿ ಮೇಲೆದ್ದಿದ್ದವು. ಕರಿಗೊಂಡಿ ಮುತ್ತಿನ ಜೋಳ ಬಹಳ ವಿಶೇಷತೆಯಿಂದ ಕೂಡಿದೆ. ಈ ಜೋಳದ ಗಿಡಗಳನ್ನು ದೂರದಿಂದ ನೋಡಿದರೆ ತೆನೆಗಳು ಕಪ್ಪು ಬಣ್ಣದಲ್ಲಿ ಗೋಚರಿಸುತ್ತದೆ. ಸಮೀಪಿಸಿದಂತೆ ಬಿಳಿ ಹೊಳಪು ಕಂಡು ಬರುತ್ತದೆ. ಕಾಳನ್ನು ಹಿಡಿದುಕೊಂಡಿರುವ ಗೊಂಡಿ ಗಳು ಕಪ್ಪು ಬಣ್ಣದ್ದಾಗಿರುತ್ತವೆ. ಒಳಗಿನ ಕಾಳುಗಳು ಬಿಳಿಯಾಗಿರುತ್ತವೆ. ಗಿಡಗಳು ಏಳು ಅಡಿ ಎತ್ತರ ಬೆಳೆಯುತ್ತವೆ. ತೆನೆಯ ಉದ್ದ ಏಳು ಇಂಚು, ದಪ್ಪ ಮೂರು ಇಂಚು. ಎಕರೆಗೆ ಆರು ಕ್ವಿಂಟಾಲ್ ಇಳುವರಿ. ಕಡಿಮೆ ನೀರಿದ್ದರೂ ಬೆಳೆಯಬಲ್ಲದು. 110 ದಿನಕ್ಕೆ ಕಟಾವಿಗೆ ಬರುತ್ತದೆ ಎನ್ನುತ್ತಾರೆ.

ದೋಸೆ ಜೋಳದ ಧಾನ್ಯದಿಂದ ಮಾಡಿದ ರೊಟ್ಟಿ ಮೂರು ದಿನವಾದರೂ, ರೊಟ್ಟಿ ತಯಾರಿಸಿದ ದಿನ ಹೇಗೆ ಗರಿಗರಿಯಾಗಿರುತ್ತೋ ಹಾಗೆ ಇರುತ್ತದೆ. ‘ರೊಟ್ಟಿ ಬುಳುಬುಳು ಅನ್ನಲ್ಲ, ಹಾಗೆ ತಗಡಿನಂತೆ ಹೊಳಪಿನಂತಿರುತ್ತದೆ, ತಿನ್ನಲು ತಾಜಾ ಆಗಿರುತ್ತದೆ’ ಎಂದು ವಿವರಿಸಿದರು ಮಹೇಶ್. ಈ ಧಾನ್ಯದಿಂದ ದೋಸೆಯನ್ನೂ ತಯಾರಿಸಬಹುದು.

ಉದ್ದಿನ ಬೇಳೆ ನೆನೆಹಾಕಿ ಚೆನ್ನಾಗಿ ರುಬ್ಬಿ ‘ದೋಸೆ ಜೋಳದ ಹಿಟ್ಟಿನೊಂದಿಗೆ’ ಕಲೆಸಿ ದೋಸೆ ಹುಯ್ದರೆ ತಿನ್ನಲು ಸಿದ್ಧ. ನುಣುಪಾಗಿರುವ ದೋಸೆ ಮೆಲ್ಲಲು ವಿಶೇಷ ರುಚಿ ನೀಡುತ್ತದೆ. ಈ ಜೋಳದ ತೆನೆ ದೊಡ್ಡ ಗಾತ್ರದಲ್ಲಿದ್ದು ನೋಡಲು ಸುಂದರವಾಗಿರುತ್ತದೆ. ಬಿಳಿ ಬಣ್ಣದ ಕಾಳುಗಳು. ಗಿಡಗಳು ಎಂಟು ಅಡಿ ಎತ್ತರ ಬೆಳೆಯುತ್ತದೆ. ಇದರಿಂದ ಎಕರೆಗೆ ಆರು ಕ್ವಿಂಟಾಲ್ ಇಳುವರಿ ಸಿಗುತ್ತದೆ ಎನ್ನುತ್ತಾರೆ.

ಬಿದರಕುಂಬಿ ಜೋಳದ ದಂಟು ದಪ್ಪ ಇರುತ್ತದೆ. ಹೊಡೆ ಹೊಡೆಯುವ ಸಂದರ್ಭ ನೀರು ಕೊಟ್ಟರೆ ಅಬ್ಬರಿಸಿ ಬೆಳೆಯುತ್ತದೆ. ನೀರಿಲ್ಲದಿದ್ದರೆ ಎತ್ತರ ಬೆಳೆಯುವುದಿಲ್ಲ. ನೀರಿದ್ದರೆ ಎಂಟು ಅಡಿಗಳಷ್ಟು ಎತ್ತರಕ್ಕೆ ಹೋಗಬಲ್ಲ ಇವು ನೀರಿನ ಅಲಭ್ಯತೆಯಿದ್ದರೆ ಐದು ಅಡಿ ಎತ್ತರಕ್ಕೆ ಸೀಮಿತಗೊಳ್ಳುತ್ತದೆ. ತೆನೆ ಐದು ಇಂಚು ಉದ್ದ ನಾಲ್ಕು ಇಂಚು ದಪ್ಪ ಹೊಂದಿರುತ್ತದೆ. ತೆನೆಯಲ್ಲಿ ಕಾಳುಗಳು ಒತ್ತೊತ್ತಾಗಿರುತ್ತವೆ. ಎಕರೆಗೆ ಎಂಟು ಕ್ವಿಂಟಾಲ್ ಇಳುವರಿ ತಂದುಕೊಡುತ್ತದೆ. ಈ ಬಾರಿ ಮಳೆ ಉತ್ತಮವಾಗಿ ಬಿದ್ದಿರುವುದರಿಂದ ಎಂಟು ಅಡಿಗಳಷ್ಟು ಬೆಳೆದು ನಿಂತಿದೆ ಎಂದು ಬೆಳೆದು ನಿಂತ ಜೋಳದತ್ತ ಕೈ ತೋರಿಸಿದರು.

ಗಿಡಗೆಂಪು ಗಟ್ಟಿ ತೆನೆ ಜೋಳದ ತಳಿಯ ಕೃಷಿ ತಾಕಿಗೆ ಹೋಗುವಾಗ ದೂರದಿಂದಲೇ ಗಮನಿಸಿದರೆ ಯಾವುದೋ ಹೂವಿನ ತೋಟಕ್ಕೆ ಹೋಗುತ್ತಿದ್ದೇವೇನೋ ಅನ್ನಿಸುವುದರಲ್ಲಿ ಸಂಶಯವಿಲ್ಲ. ಅಚ್ಚ ಕೆಂಪು ಬಣ್ಣದ ತೆನೆಗಳು ಗಿಡದಲ್ಲಿ ತೊನೆದಾಡುತ್ತಿದ್ದವು. ಗಿಡಗಳು ಎಂಟು ಅಡಿಗಳಷ್ಟು ಎತ್ತರ ಬೆಳೆದು ನಿಂತಿದ್ದವು. ಗಿಡಗಳು ಬಲಿತಾಗ ಎಲೆಯೂ ಕೆಂಪು ಬಣ್ಣಕ್ಕೆ ತಿರುಗಿರುತ್ತದೆ. ತೆನೆಯ ಉದ್ದ ಐದು ಇಂಚು, ದಪ್ಪ ನಾಲ್ಕು ಇಂಚುಗಳಷ್ಟಿರುತ್ತದೆ. ಕಾಳುಗಳು ಗಟ್ಟಿ. ದಟ್ಟವಾಗಿರುತ್ತದೆ. ಎಕರೆಗೆ 8-9 ಕ್ವಿಂಟಾಲ್ ಇಳುವರಿ ಸಿಗಬಹುದು ಎಂದು ವಿವರಿಸಿದರು.

ಸಾವಯವ ಕೃಷಿ ಉತ್ಪನ್ನಗಳ ಬಗ್ಗೆ ಒಲವು ವ್ಯಕ್ತಪಡಿಸುವ ಗ್ರಾಹಕರ ಸಂಖ್ಯೆ ಅಧಿಕವಿರುವ ಇಂದಿನ ದಿನಗಳಲ್ಲಿ ದೇಸಿ ಧಾನ್ಯಗಳನ್ನು ಸಾವಯವ ಮಾದರಿಯಲ್ಲಿ ಬೆಳೆದು ಯಶಸ್ಸು ಪಡೆದಿದ್ದಾರೆ ಮಹೇಶ್.  ಸಂಪರ್ಕಕ್ಕೆ: 9740869820.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT