ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಿನ್ನತೆ ಕಳೆದ ಕೃಷಿ

Last Updated 5 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಳೆ ಕೊರತೆ, ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ, ಹಣಕಾಸಿನ ಸಮಸ್ಯೆ ಮುಂತಾದ ಕಾರಣಗಳಿಂದ ಗಂಡಸರೇ ಕೃಷಿಯಿಂದ ದೂರ ಸರಿಯುತ್ತಿರುವ ಕಾಲವಿದು. ಅಂಥದ್ದರಲ್ಲಿ, ಮಹಿಳೆಯೊಬ್ಬರು ಪತಿಯ ಅಕಾಲಿಕ ಮರಣದಿಂದ ಆದ ಖಿನ್ನತೆಯಿಂದ ಚೇತರಿಸಿಕೊಂಡು, ತೋಟದ ಜವಾಬ್ದಾರಿ ಹೊತ್ತು, ಅಧುನಿಕ ತಂತ್ರಜ್ಞಾನ ಬಳಸಿ ಕೃಷಿಯಲ್ಲೇ ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ.

ಮೈಸೂರಿನವರಾದ ವೀಣಾ, ದ್ವಿತೀಯ ಪಿಯುಸಿ ಓದುತ್ತಿರುವಾಗ ಸಕಲೇಶಪುರ ತಾಲ್ಲೂಕಿನ ಇಬ್ಬಡಿ ಗ್ರಾಮದ ಜಗನ್ನಾಥ ಅವರೊಂದಿಗೆ ವಿವಾಹವಾದರು. ಎರಡು ವರ್ಷಗಳ ಹಿಂದೆ ಪತಿ ತೋಟದಲ್ಲಿ ಕೆರೆ ತೋಡಿಸುತ್ತಿದ್ದಾಗ ಸನಿಹದಲ್ಲಿದ್ದ ಮರ ಆಕಸ್ಮಿಕವಾಗಿ ಮೈಮೇಲೆ ಉರುಳಿ ತೀರಿಕೊಂಡರು. ವೀಣಾರವರಿಗೆ ದಿಕ್ಕು ತೋಚದಂತಹ ಸ್ಥಿತಿ. ಕೃಷಿಯ ಗಂಧ ಗಾಳಿಯೂ ಗೊತ್ತಿರಲಿಲ್ಲ. ಆದರೆ ಈಗ ಸುತ್ತಮುತ್ತಲಿನವರೆಲ್ಲ ಅವರ ಕೆಲಸದ ವೈಖರಿ, ಅವರು ಪೋಷಿಸಿದ ತೋಟ ನೋಡಲೆಂದೇ ಬರುವಷ್ಟರ ಮಟ್ಟಿಗೆ ಪಳಗಿದ್ದಾರೆ.

ಸಕಲೇಶಪುರ ತಾಲ್ಲೂಕಿನಿಂದ 15 ಕಿ.ಮೀ ದೂರದಲ್ಲಿದೆ ಇಬ್ಬಡಿ. ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಕುಗ್ರಾಮ. ಜೊತೆಗೆ ಆನೆ ಹಾವಳಿಯಿರುವ ಪ್ರದೇಶ. ಇಲ್ಲಿ 30 ಎಕರೆಯಲ್ಲಿ ಅರೇಬಿಕ ಮತ್ತು ರೊಬಸ್ಟಾ ಕಾಫಿ,‌ ಕಾಳು ಮೆಣಸು, ಜೊತೆಗೆ ಐದು ಎಕರೆಯಲ್ಲಿ ಭತ್ತವನ್ನು ಬೆಳೆದಿದ್ದಾರೆ. ಪ್ರೀತಿಯಿಂದ ಸಾಕಿರುವ ಹಸುಗಳ ಆರೈಕೆಯೂ ಇವರದ್ದೆ.

‘ಪತಿಯ ಅಗಲಿಕೆಯಿಂದ ಒಂದು ವರ್ಷ ಮಾನಸಿಕ ಖಿನ್ನತೆಯಿಂದ ಬಳಲಿದೆ. ಆದರೆ ನನ್ನ ಪತಿಯ ಕಾರ್ಯಕ್ಷೇತ್ರವಾದ ಕೃಷಿಯ ಸಹವಾಸ, ಬಂಧುಗಳ ಬೆಂಬಲದಿಂದ ಕ್ರಮೇಣ ಚೇತರಿಸಿಕೊಂಡೆ. ಬೆಳೆ ಹೆಚ್ಚಾಗಬಹುದು ಕಡಿಮೆಯಾಗಬಹುದು, ರೈತರು ಕೃಷಿಕಾರ್ಯಗಳಿಂದ ಹಿಂಜರಿಯಬಾರದು, ಭೂಮಿತಾಯಿ ನಂಬಿದವರನ್ನು ಎಂದೂ ಕೈಬಿಡುವುದಿಲ್ಲ ಎಂದು ನನ್ನ ಪತಿ ಯಾವಾಗಲೂ ಹೇಳುತ್ತಿದ್ದರು. ಅವರ ಪ್ರೀತಿಯ ಕಾಯಕದಲ್ಲೇ ನಾನೂ ಮುಂದುವರೆದಿದ್ದೇನೆ’ ಎನ್ನುತ್ತಾರೆ ವೀಣಾ.

ಇಸ್ರೇಲ್ ಮಾದರಿಯ ನಿರ್ವಹಣೆ: ಇವರ ತೋಟದಲ್ಲಿ ಎದ್ದು ಕಾಣುವುದು ತಾಂತ್ರಿಕತೆ. ಇಸ್ರೇಲ್ ಮಾದರಿಯಲ್ಲಿ ಆಟೊಮೇಶನ್ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ನೀರಾವರಿಯಲ್ಲಿ ಆಟೊಮೇಶನ್ ವ್ಯವಸ್ಥೆ ಎಂದರೆ, ಸ್ವಯಂಚಾಲಿತವಾಗಿ ಪಂಪ್ ಚಾಲನೆಯಾಗುವುದು. ನಿರ್ದಿಷ್ಟ ಜಾಗದ ವಾಲ್ವ್ ನಿರ್ದಿಷ್ಟ ಸಮಯದವರೆಗೆ ತೆರೆದುಕೊಳ್ಳುವುದು, ನಂತರ ಮುಚ್ಚಿಕೊಳ್ಳುವುದು. ಇದರಲ್ಲಿ ನೀರಾವರಿ ಮಾತ್ರವಲ್ಲದೆ ರಸಾವರಿಯೂ ಸೇರಿರುತ್ತದೆ. ಗೊಬ್ಬರವನ್ನು ಸಹ ನೀರಿನ ಮುಖಾಂತರವೇ ನೀಡುತ್ತಾರೆ. ಕಳೆಕೊಚ್ಚಲು ಯಂತ್ರವನ್ನು ಬಳಸುತ್ತಾರೆ. ಬೇಸಿಗೆಯಲ್ಲಿ ಎರಡು ದಿನಕ್ಕೊಮ್ಮೆ ಎರಡು ಗಂಟೆ ನೀರು, ಒಂದು ಗಂಟೆ ಗೊಬ್ಬರ ಕೊಡುತ್ತಾರೆ.

ಹನಿ ನೀರಾವರಿಯನ್ನು ಸಹಾಯಧನಕ್ಕಾಗಿ ಮಾಡಿಕೊಳ್ಳ ಬಾರದು. ನೀರಿನ ಮೂಲದಿಂದ ಗಂಟೆಗೆ ಎಷ್ಟು ನೀರು ದೊರೆಯುತ್ತದೆ, ಎಷ್ಟು ನೀರಾವರಿ ಮಾಡಲಿಕ್ಕಿದೆ ಎಂದು ಲೆಕ್ಕಾಚಾರ ಮಾಡಿಕೊಳ್ಳಬೇಕು. ನಾಲ್ಕು ಜನರಿದ್ದರೆ 15 ಎಕರೆ ತೋಟವನ್ನು ನಿರಾಯಾಸವಾಗಿ ನಿಭಾಯಿಸಬಹುದು. ತರಬೇತಿ ಹೊಂದಿ ನುರಿತವರಾದರೆ ಒಬ್ಬರೇ ಸಾಕು. ನೀರಿಗೆ ಆಸರೆಯಾಗಿ ವಿಶಾಲವಾದ ಕೆರೆಯಿದೆ. 40 ಎಚ್.ಪಿ. ವಿದ್ಯುತ್‌ ಚಾಲಿತ ಮೋಟಾರ್ ಹಾಕಿಸಿದ್ದಾರೆ. ಫಸಲು ಹೆಚ್ಚಾಗಿದೆ. ಮೊದಲು ತುಂತುರು ನೀರಾವರಿ ಪದ್ಧತಿಯಿದ್ದಾಗ ಕಾಫಿ 8 ರಿಂದ 10 ಗೊಂಚಲಿನಷ್ಟು ಕಾಯಿ ಕಟ್ಟುತ್ತಿತ್ತು. ಈಗ 13ರಿಂದ 15 ಗೊಂಚಲು ಕಾಣುತ್ತಿದೆ.

‘ಸುತ್ತಮುತ್ತಲಿನ ಎಲ್ಲಾ ತೋಟಗಳಲ್ಲೂ ಈ ಬಾರಿ ರೊಬಸ್ಟಾ ಕಾಫಿ ಕಡಿಮೆಯಿದೆ. ಆದರೆ ನಮ್ಮ ತೋಟದಲ್ಲಿ ಚೆನ್ನಾಗಿದೆ. ಮುಂದೆಯೂ ಸುಸ್ಥಿರವಾಗಿರುವ ಭರವಸೆಯಿದೆ’ ಎನ್ನುತ್ತಾರೆ ವೀಣಾ. ಜೊತೆಗೆ ಎಲ್ಲವೂ ತಾಂತ್ರಿಕತೆಯೆಂದು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಹನಿ ನೀರಾವರಿಯ ಪೈಪ್ ಗೆದ್ದಲು, ಇರುವೆಗಳಿಂದ ಹಾಳಾಗುತ್ತದೆ ಎಂದೂ ಎಚ್ಚರಿಸುತ್ತಾರೆ.

ಕಾಳುಮೆಣಸು ಸಹ ಹೋದ ಸಲ ನಾಲ್ಕೂವರೆ ಟನ್ ಆಗಿತ್ತು. ಹನಿ ನೀರಾವರಿ ಪದ್ಧತಿಯಿಂದ ಈ ಸಲದ ಫಸಲು ದ್ವಿಗುಣವಾಗಿದೆ.

ಪತಿಯೊಂದಿಗೆ ಹಲವಾರು ದೇಶ ಸುತ್ತಿದ ಅನುಭವವೂ ಇವರಿಗಿದೆ. ಮನೆಯಿಂದ ಇವರ ತೋಟ ಎರಡು ಕಿ.ಮೀ. ದೂರದಲ್ಲಿದೆ. 25 ವರ್ಷಗಳ ಹಿಂದೆಯೇ ಕಲಿತಿದ್ದ ವಾಹನ ಚಾಲನೆ ಈಗ ಉಪಯೋಗಕ್ಕೆ ಬಂದಿದೆ. ಬೆಳಿಗ್ಗೆ 9ಕ್ಕೆಲ್ಲಾ ಶುರುವಾಗುವ ಇವರ ದಿನಚರಿ ಮುಗಿಯುವುದು ಅಂದಿನ ಕೆಲಸದ ಡೈರಿ ಬರೆದು, ದನಕರುಗಳ ಆರೈಕೆ, ಮನೆಬಳಕೆಗೆ ಬೇಕಾದ ತರಕಾರಿ ಬೆಳೆದಿರುವ ಕೈತೋಟದ ವೀಕ್ಷಣೆಯ ನಂತರ ಸಂಜೆ 6ಕ್ಕೆ. ‘ಮೊದಲು ಕಸೂತಿ ಹಾಕುವುದು, ಗೊಂಬೆಗಳನ್ನು ತಯಾರಿಸುವುದು ನನ್ನ ಹವ್ಯಾಸವಾಗಿತ್ತು, ಈಗ ಬೇಸರ ಕಳೆಯಲು ಓದುವ ಹವ್ಯಾಸ, ಪುಸ್ತಕಗಳ ಸಂಗ್ರಹ ರೂಢಿಸಿಕೊಂಡಿದ್ದೇನೆ, ಪುಸ್ತಕಗಳು ಒಳ್ಳೆಯ ಸ್ನೇಹಿತರಿದ್ದಂತೆ’ ಎನ್ನುತ್ತಾರೆ.

ಕಾರ್ಮಿಕರನ್ನು ಕುಟುಂಬದವರಂತೆ ಕಾಣುತ್ತಾರೆ. ಅವರಿಗೆ ಬೇಕಾದ ಮನೆ, ವಿದ್ಯುತ್, ನೀರು ಮತ್ತು ಉರುವಲನ್ನು ಉಚಿತವಾಗಿ ನೀಡುತ್ತಾರೆ. ‘ಕೃಷಿ ಜೀವನ ನನ್ನ ಖಿನ್ನತೆ ಕಳೆಯಿತು. ಮುಂದಿನ ದಿನಗಳಲ್ಲಿ ಒಂದಷ್ಟು ಸಮಾಜಮುಖಿ ಸೇವೆಮಾಡಬೇಕು. ಈ ತೋಟ, ಹಸಿರು ನನಗೆ ಹೊಸ ಉಸಿರು ನೀಡಿತು’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT