ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗಾಗಿ ಜನರ ಪರದಾಟ

ಯಗಚಿ ಹಿನ್ನೀರಿನ ಬಹುಗ್ರಾಮ ಯೋಜನೆಗೆ ಸೇರಿದ ನರಸೀಪುರದಲ್ಲೂ ತಪ್ಪದ ಬವಣೆ
Last Updated 6 ಮಾರ್ಚ್ 2018, 11:20 IST
ಅಕ್ಷರ ಗಾತ್ರ

ಹಳೇಬೀಡು: ಕುಡಿಯುವ ನೀರಿನ ಪಂಪ್‌ಸೆಟ್‌ ಒಣಗಿರುವುದರಿಂದ ನೀರಿಗಾಗಿ ನರಸೀಪುರ ಗ್ರಾಮಸ್ಥರು ಪಡಬಾರದ ಕಷ್ಟ ಅನುಭವಿಸುತ್ತಿದ್ದು, ಒಂದು ತಿಂಗಳಿನಿಂದ ಗ್ರಾಮದಲ್ಲಿ ಕುಡಿಯುವ ನೀರು ಸಿಗದಂತಾಗಿದೆ.

ಗ್ರಾಮದಲ್ಲಿ ಸುಮಾರು 300 ಮನೆಗಳಿವೆ. ಭೋವಿ ಕಾಲೊನಿ ಹಾಗೂ ಕುರುಬ ಮತ್ತಿತರರು ವಾಸ ಮಾಡುವ ಪ್ರದೇಶ ಪ್ರತ್ಯೇಕವಾಗಿವೆ. ಎರಡೂ ಸ್ಥಳಗಳಿಂದ ಒಂದು ಕಿರು ನೀರು ಸರಬರಾಜು ಘಟಕ ಇದೆ. ಹಿಂದೆ ಮಳೆಗಾಲ ಸಮೃದ್ಧವಾಗಿದ್ದಾಗ ಕುಡಿಯುವ ನೀರಿಗೆ ತೊಡಕಾಗದಂತೆ ಬಾವಿಯಲ್ಲಿ ನೀರು ಬರುತ್ತಿತ್ತು. ಈಗ ಬಾವಿಯಲ್ಲಿ ಹನಿ ನೀರು ಬಾರದಂತಾಗಿದೆ. ಕೈಪಂಪಿನ ಎರಡೂ ಕೊಳವೆಬಾವಿಯಲ್ಲಿಯೂ ನೀರಿಲ್ಲದೆ ಒಣಗಿವೆ ಎಂದು ಗ್ರಾಮಸ್ಥ ನರಸಿಂಹೇಗೌಡ (ಅಪ್ಪಯ್ಯಣ್ಣ) ತಿಳಿಸಿದರು.

ಭೋವಿ ಕಾಲೊನಿಯಲ್ಲಿರುವ ಕೊಳವೆಬಾವಿಯ ಕೈಪಂಪ್‌ ಜಗ್ಗಿದರೆ ಒಂದು ಗಂಟೆಗೆ ಒಂದು ಬಿಂದಿಗೆ ನೀರು ಬರುತ್ತದೆ. ಐದಾರು ಗಂಟೆ ಎಡಬಿಡದೆ ಕೈಪಂಪ್‌ ಒತ್ತಿದರೆ ಮರು ದಿನದವರೆಗೂ ಬಾವಿಯಲ್ಲಿ ಜಲ ಸಂಗ್ರಹವಾಗುವುದಿಲ್ಲ. ಊರಿನ ಸುತ್ತ ಕೃಷಿ ಪಂಪ್‌ಸೆಟ್‌ಗಳು ಒಣಗಿವೆ ಎಂದು ಮುನಿಯಪ್ಪ ಅಳಲು ತೋಡಿಕೊಂಡರು.

ಯಗಚಿ ಹಿನ್ನೀರಿನ ಬಹುಗ್ರಾಮ ಯೋಜನೆಗೆ ಗ್ರಾಮ ಒಳಪಟ್ಟಿದೆ. ಗ್ರಾಮಕ್ಕೆ ಪೈಪ್‌ಲೈನ್‌ನಿಂದ ಯಗಚಿ ನದಿ ನೀರು ಹರಿಸಲಾಗುತ್ತಿದೆ. ನದಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ವಾರದಲ್ಲಿ ಎರಡು ದಿನ ಬರುತ್ತಿದ್ದ ನೀರು ಸರಬರಾಜು ಈಗ ಒಂದು ದಿನಕ್ಕೆ ಸಿಮೀತವಾಗಿದೆ. ಪೈಪ್‌ಲೈನ್, ವಿದ್ಯುತ್‌ ಮೊದಲಾದ ಸಮಸ್ಯೆಗಳಿಂದ ಒಮ್ಮೊಮ್ಮೆ 15 ದಿನವಾದರೂ ಊರಿಗೆ ನದಿ ನೀರು ಬರುವುದಿಲ್ಲ. ನೀರು ಬಂದರೂ ಒಂದು ಕುಟುಂಬಕ್ಕೆ ನಾಲ್ಕು ಬಿಂದಿಗೆ ಮಾತ್ರ ನೀರು ದೊರಕುತ್ತದೆ ಎಂದರು.

ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ತಗ್ಗಿರುವುದರಿಂದ ನೀರು ಹಳೆಯದಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ಹೆಚ್ಚುವರಿ ಕೊಳವೆಬಾವಿ ಕೊರೆಯಿಸಿ ಗ್ರಾಮಕ್ಕೆ ನೀರು ಪೂರೈಕೆ ಮಾಡಬೇಕು ಎಂಬುದು ಮಾರ್ಗೋಭೋವಿ ಅವರ ಒತ್ತಾಯವಾಗಿದೆ.

ನರಸೀಪುರ ನಾವೂ ಸಹ ವಾಸಮಾಡುತ್ತಿರುವ ಗ್ರಾಮವಾಗಿದ್ದು, ಕುಡಿಯುವ ನೀರಿನ ಸಮಸ್ಯೆಯತ್ತ ಚಿತ್ತಹರಿಸಿದ್ದೇವೆ. ಹೊಸದಾಗಿ ಕೊಳವೆಬಾವಿ ಕೊರೆಯಿಸುವಂತೆ ಶಾಸಕರಿಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ಊರಿಗೆ ಕರೆತಂದು ಸಮಸ್ಯೆಯನ್ನು ವಿವರಿಸಿದ್ದೇವೆ ಎಂದು ರಾಜನಶಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟಬೀರೇಗೌಡ (ರವಿ) ಹೇಳಿದರು.

‘ಖಾಸಗಿ ಬಾವಿಯಿಂದ ನೀರು ಪೂರೈಕೆ ಮಾಡುವ ಕುರಿತು ಜಿಲ್ಲಾ ಪಂಚಾಯಿತಿಯಲ್ಲಿ ಮಾತುಕತೆ ನಡೆಸುವುದಾಗಿ ಜಿ.ಪಂ ಸದಸ್ಯ ಮಂಜಪ್ಪ ಭರವಸೆ ನೀಡಿದ್ದಾರೆ’ ಎಂದು ಅವರು ತಿಳಿಸಿದರು.
***
ಜಿ.ಪಂ ಸದಸ್ಯ ಮಂಜಪ್ಪ ಹಾಗೂ ತಾ.ಪಂ ಸದಸ್ಯೆ ಸವಿತಾ ಮಹೇಶ್‌ ಸಲಹೆಯಂತೆ ತಹಶೀಲ್ದಾರ್‌ ಅನುಮತಿ ಪಡೆದು ಟ್ಯಾಂಕರ್‌ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿದ್ದೇವೆ.
ಪುಟ್ಟಬೀರೇಗೌಡ (ರವಿ), ಅಧ್ಯಕ್ಷ, ರಾಜನಶಿರಿಯೂರು ಗ್ರಾ.ಪಂ.
***

ಎಚ್‌.ಎಸ್‌.ಅನಿಲ್‌ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT