ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಾರಂಭದಲ್ಲೇ ಧಗದಹಿಸಿದ ಬೆಂಕಿ

Last Updated 7 ಮಾರ್ಚ್ 2018, 10:37 IST
ಅಕ್ಷರ ಗಾತ್ರ

ಅರಕಲಗೂಡು: ಬೇಸಿಗೆ ಆರಂಭವಾಗುತ್ತಿದ್ದಂತೆ ತಾಲ್ಲೂಕಿನಲ್ಲಿ ಬೆಂಕಿ ಅನಾಹುತಗಳು ಹೆಚ್ಚಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಗೆ ಕಾರಣವಾಗುತ್ತಿದೆ.

ಅಗ್ನಿ ಶಾಮಕದಳದ ಮಾಹಿತಿ ಪ್ರಕಾರ 2018ರ ಜನವರಿಯಿಂದ ಮಾರ್ಚ್‌ 5ರವರೆಗೆ ತಾಲ್ಲೂಕು ಹಾಗೂ ಅಕ್ಕಪಕ್ಕದ ವ್ಯಾಪ್ತಿಯಲ್ಲಿ 50 ಬೆಂಕಿ ಪ್ರಕರಣಗಳು ನಡೆದಿವೆ. ಜನವರಿ ತಿಂಗಳಿನಲ್ಲಿ 8 ಪ್ರಕರಣಗಳು ನಡೆದಿದ್ದರೆ, ಫೆಬ್ರುವರಿ ತಿಂಗಳಿನ 28 ದಿನಗಳಲ್ಲಿ ಬರೋಬ್ಬರಿ 36 ಬೆಂಕಿ ಪ್ರಕರಣಗಳು ನಡೆದಿವೆ. ಮಾರ್ಚ್‌ 5ರವರೆಗೆ 6 ಪ್ರಕರಣಗಳು ವರದಿಯಾಗಿವೆ.

ಬೇಸಿಗೆ ಆರಂಭದ ದಿನಗಳಲ್ಲಿ ಈ ಪ್ರಮಾಣದ ಬೆಂಕಿ ಅನಾಹುತಗಳು ಹಿಂದಿನ ಯಾವ ವರ್ಷಗಳಲ್ಲೂ ನಡೆದ ವರದಿಗಳಿಲ್ಲ. ಈ ಬಾರಿ ಅತ್ಯಂತ ಹೆಚ್ಚಿನ ಸಂಖ್ಯೆಯ ಅವಘಡಗಳು ಸಂಭವಿಸಿವೆ ಎನ್ನುತ್ತಾರೆ ಅಗ್ನಿಶಾಮಕ ಠಾಣಾಧಿಕಾರಿ ದಿನೇಶ್ ಆನಂದ್.

‘ಎರಡು ತಿಂಗಳ ಅವಧಿಯಲ್ಲಿ ಪ್ರತಿದಿನ ಮೂರು, ನಾಲ್ಕು ಪ್ರಕರಣಗಳು ನಡೆಯುತ್ತಿದ್ದು ಅಗ್ನಿಶಾಮಕ ಸಿಬ್ಬಂದಿ ಬಿಡುವಿಲ್ಲದಂತೆ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಸ್ಥಿತಿ ಉಂಟಾಗಿದೆ. ಫೆ. 22ರಂದು ಒಂದೇ ದಿನ ಎಂಟು ಪ್ರಕರಣಗಳು ನಡೆದಿವೆ’ ಎಂದರು.

ಬೆಂಕಿ ಪ್ರಕರಣಗಳಲ್ಲಿ ಹುಲ್ಲಿನ ಬಣವೆಗಳು, ಕಾಫಿ ತೋಟಗಳು, ಅರಣ್ಯ ಪ್ರದೇಶ, ಹುಲ್ಲು ಸಾಗಣೆ ಮಾಡುತ್ತಿರುವ ವಾಹನಗಳು, ಸಿಲ್ವರ್ ತೋಪುಗಳು ಹಾನಿಗೆ ಒಳಗಾಗಿವೆ. ಫೆ 25ರಂದು ತಾಲ್ಲೂಕಿನ ಕೊರಟಿಕೆರೆ ಗ್ರಾಮದಲ್ಲಿ ಜಮೀನಿಗೆ ಬಿದ್ದ ಬೆಂಕಿ ನಂದಿಸಲು ಹೋಗಿ 75ರ ವೃದ್ಧ ರೈತ ಜವರೇಗೌಡ ಬೆಂಕಿಗೆ ಆಹುತಿಯಾಗಿದ್ದು ಘೋರ ದುರಂತ. ಬೆಂಕಿಯ ಕುರಿತು ಜನರಲ್ಲಿ ಎಚ್ಚರ ಇಲ್ಲದಿರುವುದು. ದನಗಾಹಿಗಳು ತಮಾಷೆಗಾಗಿ ಹಚ್ಚುವ ಬೆಂಕಿ, ಗದ್ದೆ, ತೋಟದ ಬದುಗಳಲ್ಲಿ ಮಳೆ ಬಿದ್ದೊಡನೆ ಹುಲ್ಲು ಚಿಗುರುತ್ತದೆ ಎಂಬ ಕಾರಣಗಳಿಂದ, ರೈತರು ಕೃಷಿ ತ್ಯಾಜ್ಯಗಳನ್ನು ಸುಡಲು ಜಮೀನುಗಳಿಗೆ ಬೆಂಕಿ ಹಚ್ಚುವುದರಿಂದ ಅವಘಡಗಳು ನಡೆಯಲು ಕಾರಣವಾಗುತ್ತಿದೆ ಎಂದರು.

‘ಕೃಷಿ ತ್ಯಾಜ್ಯ ಸುಡಲು ಬೆಂಕಿ ಹಚ್ಚುವ ರೈತರು ಈ ಕುರಿತು ಎಚ್ಚರ ವಹಿಸುವುದಿಲ್ಲ. ಗಾಳಿಯ ಪ್ರಮಾಣವೂ ಹೆಚ್ಚಿರುವ ಕಾರಣ ಬೆಂಕಿ ವೇಗವಾಗಿ ಹಬ್ಬಿ ಅಕ್ಕಪಕ್ಕದ ಜಮೀನುಗಳಿಗೆ ಹಾಗೂ ಸಮೀಪದ ಅರಣ್ಯ ಪ್ರದೇಶಗಳಿಗೂ ವ್ಯಾಪಿಸುತ್ತದೆ. ಮಳೆ ಬಂದೊಡನೆ ಜಮೀನುಗಳ ಉಳುಮೆ ಮಾಡುವುದರಿಂದ ಕೃಷಿ ತ್ಯಾಜ್ಯಗಳು ಮಣ್ಣೊಳಗೆ ಸೇರಿ ಕೊಳೆತು ಉತ್ತಮ ಗೊಬ್ಬರವಾಗಿ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಹೀಗಾಗಿ ರೈತರು ತ್ಯಾಜ್ಯಕ್ಕೆ ಬೆಂಕಿ ಹಚ್ಚಲು ಮುಂದಾಗಬಾರದು. ಒಂದೊಮ್ಮೆ ಬೆಂಕಿ ಹಚ್ಚುವುದು ಅನಿವಾರ್ಯವಾದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅನಾಹುತಗಳು ನಡೆಯದಂತೆ ಎಚ್ಚರ ವಹಿಸಬೇಕು. ಬೇಸಿಗೆಯ ದಿನಗಳಲ್ಲಿ ಬೆಂಕಿಯ ಕುರಿತು ಸ್ವಲ್ಪ ಅಜಾಗರೂಕತೆ ವಹಿಸಿದರೂ ಅನಾಹುತಗಳು ಕ್ಷಣಮಾತ್ರದಲ್ಲಿ ಸಂಭವಿಸುತ್ತದೆ. ಸಾರ್ವಜನಿಕರು ಬೆಂಕಿ ಕುರಿತು ಜಾಗೃತರಾಗಿರಬೇಕು’ ಎಂದು ಸಲಹೆ ಮಾಡಿದರು.
***
ಅರಕಲಗೂಡು: ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಒಂದೇ ವಾಹನ ಇರುವ ಕಾರಣ ಒಂದಕ್ಕಿಂತ ಹೆಚ್ಚಿನ ಪ್ರಕರಣಗಳು ಒಂದೇ ಸಮಯದಲ್ಲಿ ನಡೆದಾಗ ಬೆಂಕಿ ನಂದಿಸಿ ಅನಾಹುತಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇನ್ನೊಂದು ವಾಹನ ಅಗತ್ಯವಿದ್ದು ಈ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಹೆಚ್ಚಿನ ಪ್ರಕರಣಗಳು ವರದಿಯಾದಾಗ ಸಮೀಪದ ಹಾಸನ, ಹೊಳೆನರಸೀಪುರ, ಪಿರಿಯಾಪಟ್ಟಣ, ಸೋಮವಾರಪೇಟೆ ಠಾಣೆಗಳಿಂದ ಸಹಾಯ ಪಡೆಯಲಾಗುತ್ತಿದೆ ಎಂದು ಠಾಣಾಧಿಕಾರಿ ದಿನೇಶ್‌ ಆನಂದ್‌ ತಿಳಿಸಿದರು.

ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ. ಇಬ್ಬರು ಅಧಿಕಾರಿಗಳು ಹಾಗೂ 17 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು 5 ಹುದ್ದೆಗಳು ಖಾಲಿ ಇವೆ. ₹ 4.15 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ, ವಸತಿಗೃಹಗಳನ್ನು ನಿರ್ಮಿಸಲಾಗಿದೆ. ನೀರಿಗಾಗಿ ಒಂದೇ ಕೊಳವೆ ಬಾವಿ ಕೊರೆಸಲಾಗಿದೆ. ಪಕ್ಕದ ಆಹಾರ ನಿಗಮದ ಗೋದಾಮು ಕಟ್ಟಡ ನಿರ್ಮಾಣ ಗೊಳ್ಳುತ್ತಿದ್ದು ಅವರೂ ಕೊಳವೆ ಬಾವಿ ಕೊರೆಯಿಸಿದ ಪರಿಣಾಮ ಇಲ್ಲಿನ ಬಾವಿಯಲ್ಲಿ ನೀರು ಕಡಿಮೆಯಾಗಿದೆ. ಇನ್ನೊಂದು ಬಾವಿಯ ಅಗತ್ಯವಿದೆ. ಕಟ್ಟಡಕ್ಕೆ ಕಾಂಪೌಂಡ್ ಇಲ್ಲದ ಕಾರಣ ಭದ್ರತೆ ಇಲ್ಲವಾಗಿದೆ. ವಸತಿ ಗೃಹಗಳಿಗೆ ತೆರಳಲು ಉತ್ತಮ ರಸ್ತೆ ಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT