ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿ ತಪ್ಪೊಪ್ಪಿಗೆ, ಮೇ 4ರಂದು ಶಿಕ್ಷೆ ಪ್ರಕಟ

Last Updated 7 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಕಳೆದ ವರ್ಷದ ಫೆಬ್ರುವರಿ 22ರಂದು ಹೈದರಾಬಾದ್‌ನ ಎಂಜಿನಿಯರ್ ಶ್ರೀನಿವಾಸ ಕೂಚಿಬೊಟ್ಲಾ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಆರೋಪಿ ಆ್ಯಡಂ ಪ್ಯೂರಿಂಟನ್ ಕನ್ಸಾಸ್ ಕೋರ್ಟ್‌ನಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಮೇ 4ರಂದು ಶಿಕ್ಷೆ ಪ್ರಕಟವಾಗಲಿದೆ.

ಕನ್ಸಾಸ್ ನಗರದಲ್ಲಿ ಜನಾಂಗೀಯ ದ್ವೇಷದಿಂದ ಈ ಘಟನೆ ನಡೆದಿತ್ತು. ಇದು ಅಮೆರಿಕದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಬಗ್ಗೆ ಸಾಕಷ್ಟು ಭೀತಿಯನ್ನೂ ಉಂಟು ಮಾಡಿತ್ತು. ಕೂಚಿಬೊಟ್ಲಾ ಜೊತೆ ಅವರ ಸ್ನೇಹಿತ ಅಲೋಕ್ ಮದಸಾನಿ ಹಾಗೂ ಬಾರ್‌ನಲ್ಲಿದ್ದ ಮತ್ತೊಬ್ಬ ವ್ಯಕ್ತಿಯ ಮೇಲೂ ಪ್ಯೂರಿಂಟನ್ ಗುಂಡಿನ ದಾಳಿ ನಡೆಸಿದ್ದ. ಅವರಿಬ್ಬರೂ ಗಾಯಗೊಂಡಿದ್ದರು.

‘ನನ್ನ ದೇಶ ಬಿಟ್ಟು ತೊಲಗಿ’ ಎಂದು ಕಿರುಚಾಡುತ್ತಾ ಗುಂಡಿನ ಮಳೆಗರೆದಿದ್ದ ಆರೋಪಿ ಪ್ಯೂರಿಂಟನ್‌ ವಿರುದ್ಧ ಹತ್ಯೆ ಆರೋಪ ಹೊರಿಸಲಾಗಿದೆ.

ಈ ಹಿಂದಿನ ಕೋರ್ಟ್ ವಿಚಾರಣೆಗಳಲ್ಲಿ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪ್ಯೂರಿಂಟನ್ ವಾದಿಸಿದ್ದ. ಆದರೆ ಈ ಬಾರಿ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸುವುದಕ್ಕೂ ಮುನ್ನ ನ್ಯಾಯಾಧೀಶ ಚಾರ್ಲ್ಸ್ ಡ್ರೋಗ್ ಅವರು ಶಿಕ್ಷೆಯ ಕುರಿತು ಆತನಿಗೆ ವಿವರಿಸಿದರು.

ಕೊಲೆ ಯತ್ನ ಪ್ರಕರಣದಲ್ಲಿ 146ರಿಂದ 653 ತಿಂಗಳು ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ ಎಂದರು. ಆದರೆ ಫೆಡರಲ್ ಕೋರ್ಟ್‌ನಲ್ಲಿ ಜನಾಂಗೀಯ ದ್ವೇಷ ಪ್ರಕರಣ ಸಾಬೀತಾದರೆ ಎಷ್ಟು ಪ್ರಮಾಣದ ಶಿಕ್ಷೆ ಆಗಲಿದೆ ಎಂದು ಅವರು ಹೇಳಲಿಲ್ಲ. ನ್ಯಾಯಾಧೀಶರ ಮಾತಿಗೆ ಪ್ಯೂರಿಂಟನ್, ಅರ್ಥವಾಯಿತು ಎಂದು ಹೇಳಿ ಕುಳಿತುಕೊಂಡ.

ಜಿಪಿಎಸ್ ಉಪಕರಣಗಳನ್ನು ತಯಾರಿಸುವ ಗಾರ್ಮಿನ್ ಎಂಬ ಕಂಪನಿಯಲ್ಲಿ ಕೂಚಿಬೊಟ್ಲಾ ಹಾಗೂ ಮದಸಾನಿ ಕೆಲಸ ಮಾಡುತ್ತಿದ್ದರು.

ಸುನಯನಾ ಸ್ವಾಗತ: ಆರೋಪಿಯ ತಪ್ಪೊಪ್ಪಿಗೆ ಹೇಳಿಕೆಯನ್ನು ಕೂಚಿಬೊಟ್ಲಾ ಅವರ ಪತ್ನಿ ಸುನಯನಾ ದುಮಾಲಾ ಅವರು ಸ್ವಾಗತಿಸಿದ್ದಾರೆ.

‘ಇಂದಿನ ತೀರ್ಪಿನಿಂದಾಗಿ ನನ್ನ ಶ್ರೀನು ಹಿಂದುರುಗಿ ಬರುವುದಿಲ್ಲ. ಆದರೆ ದ್ವೇಷವನ್ನು ಎಂದಿಗೂ ಒಪ್ಪಲಾಗದು ಎಂಬ ದೃಢ ಸಂದೇಶವನ್ನು ಈ ಮೂಲಕ ನೀಡಿದಂತಾಗಿದೆ’ ಎಂದು ಅವರು ಹೇಳಿದ್ದಾರೆ.

*


-ಆ್ಯಡಂ ಪ್ಯೂರಿಂಟನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT