ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಾಂತರ ಜಿಲ್ಲೆಗೆ ಹೆಸರು ಹುಡುಕಾಟ

ಹಲವು ಹೆಸರು ಪರಿಶೀಲಿಸಿದ ಬಳಿಕ ಸರ್ಕಾರಕ್ಕೆ ಶಿಫಾರಸು–ಅನಂತಕುಮಾರಿ ಚಿನ್ನಪ್ಪ
Last Updated 8 ಮಾರ್ಚ್ 2018, 11:40 IST
ಅಕ್ಷರ ಗಾತ್ರ

ದೇವನಹಳ್ಳಿ: ಪ್ರಸ್ತುತ ದೇವನಹಳ್ಳಿ ತಾಲ್ಲೂಕು ಚಪ್ಪರದ ಕಲ್ಲು ಕ್ರಾಸ್ ಬಳಿ ನಿರ್ಮಾಣವಾಗುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಕಚೇರಿ ಸಂಕೀರ್ಣ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಜಿಲ್ಲೆಗೆ ಯಾವ ಹೆಸರು ಸೂಕ್ತ ಎಂಬುದರ ಬಗ್ಗೆ ಚರ್ಚೆಯೂ ಆರಂಭಗೊಂಡಿದೆ.

ಈ ಹಿಂದೆ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಒಂದಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಈ ನಡುವೆ ಪ್ರತ್ಯೇಕ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ರಾಮನಗರ, ಬೆಂಗಳೂರು ನಗರದಿಂದ ಸ್ಥಳಾಂತರಗೊಂಡು, ಪ್ರತ್ಯೇಕ ಕಚೇರಿ ಸ್ಥಾಪನೆಯಾಯಿತು. ಗ್ರಾಮಾಂತರ ಜಿಲ್ಲೆಯು ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ಹೊಸಕೋಟೆ ತಾಲ್ಲೂಕುಗಳ ವ್ಯಾಪ್ತಿಯನ್ನು ಹೊಂದಿದೆ. ಅದರ ಕೇಂದ್ರ ಕಚೇರಿ ಬೆಂಗಳೂರು ನಗರದಲ್ಲೆ ಈಗಲೂ ಕಾರ್ಯನಿರ್ವಹಿಸುತ್ತಿದೆ.

ಜಿಲ್ಲಾ ಕೇಂದ್ರದ ನೂತನ ಕಚೇರಿ ಸಂಕೀರ್ಣ ದೇವನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ಆರಂಭಗೊಳ್ಳುತ್ತಿದೆ. ಆದ್ದರಿಂದ ಜಿಲ್ಲೆಗೆ ಹೆಸರಿನ ಆಯ್ಕೆಗೆ ಪ್ರಗತಿಪರ ಸಂಘಟನೆ, ಕನ್ನಡ ಸಾಹಿತ್ಯ ಪರಿಷತ್ತು, ರೈತ ಸಂಘಟನೆಗಳೊಂದಿಗೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಸೂಕ್ತವಾದ ಹೆಸರನ್ನು ನಾಮಕರಣ ಮಾಡಿದರೆ ಉತ್ತಮವಾಗಲಿದೆ ಎಂಬುದು ಪ್ರಗತಿಪರ ಚಿಂತಕರಾದ ಬಿ.ಎನ್‌ ಕೃಷ್ಣಪ್ಪ ಹಾಗೂ ಚಂದ್ರಶೇಖರ ಹಡಪದ್‌ ಅವರ ಸಲಹೆ.

‘ನಾಡಪ್ರಭು ಕೆಂಪೇಗೌಡರ ವಂಶಸ್ಥರಾದ ನಾಡಪ್ರಭು ರಣಭೈರೇಗೌಡರ ಕರ್ಮಭೂಮಿ ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮ. ಅವರ ದೂರದೃಷ್ಟಿಯನ್ನು ಕೆಂಪೇಗೌಡರ ಆಡಳಿತ ವಿಸ್ತರಣೆ ಮಾಡಿದ ಪರಿಣಾಮ ಇಂದು ಬೆಂಗಳೂರು ಬೃಹತ್ ಆಗಿ ರೂಪುಗೊಂಡು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ. ಇದರಿಂದ ನಾಡಪ್ರಭು ರಣಭೈರೇಗೌಡರ ಹೆಸರನ್ನೇ ಜಿಲ್ಲೆಗೆ ನಾಮಕರಣ ಯಾಕೆ ಮಾಡಬಾರದು. ಇದು ನನ್ನ ವೈಯಕ್ತಿಕ ಅಭಿಪ್ರಾಯ’ ಎನ್ನುತ್ತಾರೆ ಆವತಿ ಬೆಟ್ಟ ಉಳಿಸಿ ಹೋರಾಟ ಸಮಿತಿ ಸದಸ್ಯ ಮೊಹನ್ ಕುಮಾರ್.

ಯಾವುದೇ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಕ್ಕೆ ನೂತನವಾಗಿ ನಾಮಕರಣ ಮಾಡಬೇಕಾದರೆ ಸ್ಥಳೀಯ ನೆಲದ ಇತಿಹಾಸ, ಭೌಗೋಳಿಕ ಹಿನ್ನೆಲೆ, ಕೃಷಿ ಮತ್ತು ತೋಟಗಾರಿಕೆ, ವಾಣಿಜ್ಯ ವಹಿವಾಟು, ಕವಿ, ಸಾಹಿತಿ, ಆದರ್ಶ ನಾಯಕರನ್ನು ಅನುಸರಿಸಿ ಸೂಕ್ತವಾದ ಹೆಸರನ್ನು ಇಡಬೇಕು. ಭಾವನಾತ್ಮಕ ಸಂಬಂಧಗಳು ಇರಬೇಕು. ಜಿಲ್ಲಾ ಪಂಚಾಯಿತಿ ಯಾವ ಹೆಸರನ್ನು ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂಬುದು ಗೊತ್ತಿಲ್ಲ ಎನ್ನತ್ತಾರೆ ಬೆಂಗಳೂರು ವಿಭಾಗೀಯ ಹಸಿರು ಸೇನೆ ಅಧ್ಯಕ್ಷ ಕೆ.ಎಸ್.ಹರೀಶ್.

‘ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವಂತೆ ಎಲ್ಲಾ ಪ್ರಗತಿಪರ ಸಂಘಟನೆಗಳು ಮತ್ತು ಎಲ್ಲಾ ರಾಜಕೀಯ ಪಕ್ಷಗಳ ಸಹಕಾರದಿಂದ 48 ದಿನಗಳ ಕಾಲ ಅಹೋರಾತ್ರಿ ಪ್ರತಿಭಟನೆ, ಹೋರಾಟ ನಡೆಸಿದ ಪರಿಣಾಮ ಸರ್ಕಾರ ಜಿಲ್ಲಾ ಕೇಂದ್ರ ಎಂದು ಪ್ರಕಟಿಸಿದೆ. ಬಳಿಕ ಜಿಲ್ಲಾಡಳಿತ ಕಚೇರಿ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ಜಿಲ್ಲೆಗೆ ನೂತನ ಹೆಸರಿಡಲು ನಮ್ಮೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಬೇಕು’ ಎನ್ನುತ್ತಾರೆ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಸಂಚಾಲಕ ಬಿ.ಕೆ.ಶಿವಪ್ಪ.

ಜಿಲ್ಲಾಡಳಿತ ಕಚೇರಿ ಕೇಂದ್ರ ಸಂಕೀರ್ಣ ಕಾಮಗಾರಿ ಶೇ 20 ರಷ್ಟೂ ಮುಗಿದಿಲ್ಲ, ಸಂಪೂರ್ಣ ಮುಗಿಯಲು ನಾಲ್ಕೈದು ತಿಂಗಳು ಬೇಕು. ಕೂಸು ಹುಟ್ಟುವ ಮೊದಲೇ ಕುಲಾವಿ ಎಂಬಂತೆ ಹೆಸರಿನ ಕಿತ್ತಾಟ ಬೇಡ ಎನ್ನುತ್ತಾರೆ ಪ್ರಜಾ ವಿಮೋಚನ ಬಹುಜನ ಸಮಿತಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ನಾಗರಾಜ್.

ಜಾತಿ ಓಲೈಕೆಗಾಗಿ ಹೆಸರನ್ನು ಸೂಚಿಸಬಾರದು. ಉದ್ಘಾಟನೆಯ ನಂತರ ಜಿಲ್ಲಾಡಳಿತ ಕಚೇರಿ ಸಂಕೀರ್ಣ ಮುಂಭಾಗ ಪ್ರತಿಮೆಗಳ ಅನಾವರಣಕ್ಕಾಗಿ ಪರ ವಿರೋಧ ತಳ್ಳಿಹಾಕುವಂತಿಲ್ಲ. ಸರ್ಕಾರ ಎಚ್ಚರಿಕೆಯ ಹೆಜ್ಜೆಇಡಬೇಕು ಎನ್ನುತ್ತಾರೆ.

**

ಸಂಭಾವ್ಯ ಹೆಸರುಗಳು

ಜಿಲ್ಲೆಗೆ ಹೊಸ ಹೆಸರು ನಾಮಕರಣ ಮಾಡಲು ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ.

ದೇವಾಗಾಣಪುರ, ದೇವನದೊಡ್ಡಿ, ದೇವಲಾಪುರ, ದೇವನಪುರ, ದೇವನಂದಿ, ದೇವಪುರ, ಕೆಂಪೇಗೌಡ ಮುಂತಾದ ಹೆಸರು ಪಟ್ಟಿ ಮಾಡಲಾಗಿದೆ. ಮತ್ತಷ್ಟು ಹೆಸರನ್ನು ಪರಿಗಣಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಸರ್ಕಾರಕ್ಕೆ ಈ ವರೆಗೂ ಯಾವುದೇ ಹೆಸರು ಶಿಫಾರಸು ಮಾಡಿಲ್ಲ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT