ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಯರೋಗ: ಗ್ರಾಮೀಣರಲ್ಲಿ ಜಾಗೃತಿ ಮೂಡಿಸಿ

ದೊಡ್ಡಬಳ್ಳಾಪುರದಲ್ಲಿ ಸಿಬಿನಾಟ್ ಪರೀಕ್ಷಾ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಸಲಹೆ
Last Updated 8 ಮಾರ್ಚ್ 2018, 11:44 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸರ್ಕಾರಿ ಸಾರ್ವ ಜನಿಕ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ ಸಿಬಿನಾಟ್ ಕ್ಷಯರೋಗ ಪರೀಕ್ಷಾ ಘಟಕದಲ್ಲಿಯೇ ಆಧುನಿಕ ಪರೀಕ್ಷಾ ಸೌಲಭ್ಯ ಸಿಗಲಿದೆ. ಅರ್ಹರು ಈ ಸೌಲಭ್ಯ ಪಡೆದುಕೊಳ್ಳುವ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕ್ಷಯ ರೋಗದ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಸಹಕಾರ ನೀಡಬೇಕಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಅವರು ಹೇಳಿದರು.

ಸರ್ಕಾರಿ ಸಾರ್ವಜನಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾ ಘಟಕದ ವತಿಯಿಂದ ನಿರ್ಮಿಸಿರುವ ಸಿಬಿನಾಟ್ ಕ್ಷಯರೋಗ ಪರೀಕ್ಷಾ ಘಟಕ ಹಾಗೂ ನಿಯೋಜಿತ ಸೂಕ್ಷ್ಮದರ್ಶಕ ಕಫ ಪರೀಕ್ಷಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರಿಗೆ ತೆರಳಿ ಕ್ಷಯರೋಗ ಪರೀಕ್ಷೆ ಮಾಡಿಸಬೇಕಿದ್ದ ಅನಿವಾರ್ಯತೆ ಈಗ ದೂರವಾಗಿದೆ. ಯಾರಿಗಾದರೂ ಮೂರು ವಾರಕ್ಕಿಂತ ಹೆಚ್ಚು ಕಾಲ ಕೆಮ್ಮು ಇದ್ದರೆ ಪ್ರಾಥಮಿಕ ಕೇಂದ್ರಕ್ಕೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕೆಮ್ಮು ಬಗ್ಗೆ ನಿರ್ಲಕ್ಷ್ಯ ವಹಿಸದೆ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆದು ಗುಣಮುಖರಾಗಬೇಕು. ಕ್ಷಯ ರೋಗದ ಬಗ್ಗೆ ವೈದ್ಯರು ಜನರಿಗೆ ಹೆಚ್ಚು ತಿಳಿವಳಿಕೆ ನೀಡುವಂತಾಗಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಕ್ಷಯ ರೋಗದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶಕೀಲಾ ಮಾತನಾಡಿ, ಸಿಬಿನಾಟ್ ಪರೀಕ್ಷಾ ಘಟಕ ₹36 ಲಕ್ಷ  ಬೆಲೆ ಬಾಳಲಿದ್ದು, ಕೇಂದ್ರ ಸರ್ಕಾರ ₹17 ಲಕ್ಷ ಸಹಾಯಧನ ನೀಡಿದೆ. ಕ್ಷಯರೋಗ ಪತ್ತೆಗೆ ಈ ಘಟಕ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದರು.

ಸೂಕ್ಷ್ಮದರ್ಶಕ ಕಫದ ವರದಿ ಗಿಂತಲೂ ನಿಖರವಾಗಿ ವರದಿ ನೀಡಲಿದೆ. ಅಲ್ಲದೇ ರೋಗಿಗೆ ನೀಡಲಾಗುವ ಗುಳಿಗೆಗಳ ಪರಿಣಾಮ, ಸ್ವರೂಪ ಕುರಿತು ಮಾಹಿತಿ ಪಡೆಯಬಹುದಾಗಿದೆ ಎಂದರು.

ಕಾರ‍್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶ್ರೀವತ್ಸ, ಜಿಲ್ಲಾ ಪಂಚಾಯಿತಿ ಸದಸ್ಯ ಚುಂಚೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶರ್ಮಿಳಾ ಹೆಡೆ, ವೈದ್ಯಾಧಿಕಾರಿ ಡಾ.ಗಿರೀಶ್, ಡಾ.ಮಂಜುನಾಥ್, ಕ್ಷಯರೋಗ ಸಂದರ್ಶಕ ಯುವರಾಜ್ ಇದ್ದರು.

**

ಗಾಳಿಯಲ್ಲಿ ಹರಡುವ ಕಾಯಿಲೆ

ಡಾ.ಶಕೀಲಾ ಮಾತನಾಡಿ, ಕ್ಷಯರೋಗ ಗಾಳಿಯಲ್ಲಿ ಬಹುಬೇಗ ಹರಡುವ ಕಾಯಿಲೆ ಎಂದರು.

ಎರಡು ವಾರ ಅಥವಾ ಅದಕ್ಕಿಂತ ಮೇಲ್ಪಟ್ಟು ಸತತ ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು ಇದರ ಪ್ರಮುಖ ಲಕ್ಷಣವಾಗಿದ್ದು, ವೈದ್ಯರು ಹೇಳುವವರೆಗೆ ಸಂಪೂರ್ಣ ಚಿಕಿತ್ಸೆ ಪಡೆದರೆ ಮಾತ್ರ ಕ್ಷಯ ರೋಗ ಸಂಪೂರ್ಣ ಗುಣಮುಖವಾಗಲು ಸಾಧ್ಯ ಎಂದರು.

ಕ್ಷಯ ರೋಗಿಗಳ ಸಂಖ್ಯೆ ಇಳಿಮುಖವಾಗಿದ್ದರೂ ವಿಶ್ವದಲ್ಲಿ ಭಾರತ ಅತೀ ಹೆಚ್ಚು ಕ್ಷಯ ರೋಗಿಗಳನ್ನು ಹೊಂದಿದೆ. ಜಾಗೃತಿ ಜಾಥಾ ಹಮ್ಮಿಕೊಳ್ಳುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT