ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹನೆಯ ಪರಾಕಾಷ್ಠೆ ಪ್ರಜಾಪ್ರಭುತ್ವ ವಿರೋಧಿ

Last Updated 9 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ದೇಶದ ವಿವಿಧ ಭಾಗಗಳಲ್ಲಿ ಪ್ರತಿಮೆಗಳನ್ನು ವಿರೂಪಗೊಳಿಸುವ ಮತ್ತು ಧ್ವಂಸಗೊಳಿಸುವ ದುಷ್ಕೃತ್ಯಗಳು ಮುಂದುವರಿದಿವೆ. ಇಂತಹ ಕುಕೃತ್ಯಗಳು ಆಧುನಿಕ ಸಮಾಜಕ್ಕೆ ಕಪ್ಪು ಚುಕ್ಕೆ. ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿಜಯದ ನಂತರ ರಷ್ಯಾ ಕಮ್ಯುನಿಸ್ಟ್ ನಾಯಕ ಲೆನಿನ್ ಪ್ರತಿಮೆ ಹೊಡೆದುರುಳಿಸಿ ಧ್ವಂಸ ಮಾಡಿದ ಪ್ರಕರಣ ತೀವ್ರ ಮಾತುಗಳಲ್ಲಿ ಖಂಡನೀಯ.

ಆ ನಂತರ ಸಾಲುಸಾಲಾಗಿ ಪ್ರತಿಮೆಗಳನ್ನು ವಿರೂಪಗೊಳಿಸುವ ಪ್ರಕರಣಗಳು ರಾಷ್ಟ್ರದ ವಿವಿಧೆಡೆ ನಡೆಯುತ್ತಿರುವುದು ರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಸಹನೆಯ ಸಂಸ್ಕೃತಿಗೆ ಪ್ರತೀಕ. ಅದರಲ್ಲೂ ತ್ರಿಪುರಾ ರಾಜ್ಯಪಾಲ ತಥಾಗತ ರಾಯ್ ಅವರು ತಮ್ಮ ಸಾಂವಿಧಾನಿಕ ಹೊಣೆಗಾರಿಕೆಯನ್ನು ಮರೆತು ಲೆನಿನ್ ಪ್ರತಿಮೆ ಧ್ವಂಸ ಪ್ರಕರಣವನ್ನು ಸಮರ್ಥಿಸಿಕೊಳ್ಳುವಂತಹ ಮಾತುಗಳನ್ನಾಡಿದ್ದು ಆಘಾತಕಾರಿ.

ನಮ್ಮ ಸಂವಿಧಾನದ ತತ್ವಗಳನ್ನು ಗಾಳಿಗೆ ತೂರುವಂತಹ ಇಂತಹ ನಡೆ ದುರದೃಷ್ಟಕರ. ಹಾಗೆಯೇ, ಕೇಂದ್ರ ಸಚಿವ ಗಿರಿರಾಜ ಸಿಂಗ್, ಹಿರಿಯ ನಾಯಕರಾದ ಸುಬ್ರಮಣಿಯನ್ ಸ್ವಾಮಿ, ರಾಮ ಮಾಧವ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಪ್ರತಿಮೆ ಧ್ವಂಸ ಸಮರ್ಥಿಸಿಕೊಂಡಿದ್ದರು.

ಇನ್ನೂ ಒಂದು ಹೆಜ್ಜೆ ಮುಂದೆ ಹೋದ ತಮಿಳುನಾಡಿನ ಬಿಜೆಪಿ ನಾಯಕ ಎಚ್. ರಾಜಾ ಅವರು, ಪೆರಿಯಾರ್ ಪ್ರತಿಮೆಗಳ ಕುರಿತಂತೆ ಪ್ರಚೋದನಾತ್ಮಕ ಮಾತುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದು ನಂತರ ಆ ಮಾತುಗಳನ್ನು ಹಿಂತೆಗೆದುಕೊಂಡ ಪ್ರಕರಣವೂ ನಡೆದುಹೋಯಿತು. ಅಂಬೇಡ್ಕರ್, ಪೆರಿಯಾರ್ ಪ್ರತಿಮೆಗಳಿಗೂ ಹಾನಿಯಾಯಿತು.

ಆ ನಂತರ, ಕೋಲ್ಕತ್ತದಲ್ಲಿ ಜನಸಂಘ ಸಂಸ್ಥಾಪಕ ಶ್ಯಾಮಪ್ರಸಾದ ಮುಖರ್ಜಿ ಅವರ ಪ್ರತಿಮೆಗೆ ಹಾನಿ ಮಾಡಲಾಯಿತು. ಈ ಎಲ್ಲಾ ಬೆಳವಣಿಗೆಗಳಾದ ಮೇಲೇ ನಿಧಾನವಾಗಿ ಎಚ್ಚೆತ್ತುಕೊಂಡ ಪ್ರಧಾನಿ ನರೇಂದ್ರ ಮೋದಿಯವರು, ಐತಿಹಾಸಿಕ ವ್ಯಕ್ತಿಗಳ ಪ್ರತಿಮೆ ಭಂಜನೆಯನ್ನು ತೀವ್ರ ಮಾತುಗಳಲ್ಲಿ ಖಂಡಿಸಿದ್ದಾರೆ, ಇಂತಹ ಕುಕೃತ್ಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂದು ಎಲ್ಲಾ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯವೂ ಆದೇಶ ನೀಡಿದೆ. ಅಲ್ಲದೆ, ವಿರೂಪಗೊಂಡ ಪ್ರತಿಮೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಅದರಲ್ಲೂ ಪೊಲೀಸ್ ಅಧಿಕಾರಿಗಳನ್ನೇ ಹೊಣೆಗಾರರಾಗಿಸಲಾಗುವುದೆಂದೂ ಎಚ್ಚರಿಕೆ ನೀಡಲಾಗಿದೆ. ಹೀಗಿದ್ದೂ ಪ್ರತಿಮೆ ಭಂಜನೆಯ ಸಾಮೂಹಿಕ ಸನ್ನಿ ಮುಂದುವರಿದಿದೆ. ಲೆನಿನ್ ಪ್ರತಿಮೆಯನ್ನು ಧ್ವಂಸ ಮಾಡಿದಾಗಲೇ ಕಟ್ಟುನಿಟ್ಟಿನ ಎಚ್ಚರಿಕೆ ನೀಡದಿದ್ದುದು ವಿಷಾದನೀಯ.

ಬಿಜೆಪಿ ನಾಯಕರ ಮಾತುಗಳಿಗೂ ಕಡಿವಾಣ ಹೇರಲಿಲ್ಲ. ಈಗ ಧ್ವಂಸಕ್ಕೆ ಪ್ರತಿಧ್ವಂಸ ಎಂಬಂತೆ ವಿಭಿನ್ನ ವಿಚಾರಧಾರೆಗಳನ್ನು ಸಂಕೇತಿಸುವ ಪ್ರತಿಮೆಗಳನ್ನು ವಿರೂಪಗೊಳಿಸುವ ಪ್ರಕ್ರಿಯೆ ಮುಂದುವರಿದಿರುವುದು ಆತಂಕಕಾರಿ. ಗಾಂಧೀಜಿ ಪುತ್ಥಳಿಯನ್ನೂ ದುಷ್ಕರ್ಮಿಗಳು ಬಿಟ್ಟಿಲ್ಲ. ಕೇರಳದಲ್ಲಿ ಗಾಂಧೀಜಿ, ಉತ್ತರಪ್ರದೇಶದಲ್ಲಿ ಹನುಮಾನ್ ಹಾಗೂ ಚೆನ್ನೈನಲ್ಲಿ ಅಂಬೇಡ್ಕರ್ ಪ್ರತಿಮೆಗಳಿಗೆ ಹಾನಿ ಮಾಡಿದಂತಹ ಸರಣಿ ಪ್ರಕರಣಗಳು ನಡೆದಿವೆ.

ಇದು ಭಿನ್ನಾಭಿಪ್ರಾಯಗಳು, ಭಿನ್ನವಿಚಾರಧಾರೆಗಳಿಗೆ ಸಹ ಅಸ್ತಿತ್ವ ಕಲ್ಪಿಸುವ ಪ್ರಜಾಪ್ರಭುತ್ವದ ಮೂಲತತ್ವಗಳಿಗೇ ಮಸಿ ಬಳಿಯುವಂತಹದ್ದು. ಅಫ್ಗಾನಿಸ್ತಾನದಲ್ಲಿ ಬಮಿಯಾನ್ ಬುದ್ಧ ಹಾಗೂ ಇರಾಕ್‌ನಲ್ಲಿ ಸದ್ದಾಂ ಹುಸೇನ್ ಪ್ರತಿಮೆಗಳನ್ನು ಯುದ್ಧಗಳ ನಂತರ ಉರುಳಿಸಲಾಯಿತು. ಅದು ಯುದ್ಧ ನಂತರ ನಡೆದ ದುರದೃಷ್ಟಕರ ಘಟನೆಗಳು. ಆದರೆ ನಾವಿರುವುದು ಪ್ರಜಾಸತ್ತೆಯಲ್ಲಿ.

ಪ್ರಜಾಪ್ರಭುತ್ವದಲ್ಲಿ ಸೋಲು– ಗೆಲುವು ಜನಸಾಮಾನ್ಯರ ಆಶಯವನ್ನು ಬಿಂಬಿಸುವಂತಹದ್ದು ಎಂಬುದು ನಮಗೆ ಗೊತ್ತಿರಬೇಕು. ಇತಿಹಾಸದ ಪರಂಪರೆಯ ಸಂಕೇತಗಳ ಮೇಲಿನ ದಾಳಿಗಳು, ನಮ್ಮ ಪರಂಪರೆಯನ್ನೇ ನಾವು ಅವಮಾನಿಸಿಕೊಂಡಂತೆ ಎಂಬುದನ್ನು ಅರಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT