ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಧ್ಯಾಯ

Last Updated 9 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವೇದದಲ್ಲಿ ದೇವತೆಗಳ ಪ್ರಾರ್ಥನೆಗಳು, ಅಲೌಕಿಕ ಚಿಂತನೆಗಳು ಮಾತ್ರವಲ್ಲದೆ ನಿತ್ಯಜೀವನದ ಹಲವು ಸಂಗತಿಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಲಾಗಿದೆ. ಜೂಜನ್ನು ಆಡುವುದರಿಂದ ಆಗುವ ದುಷ್ಪರಿಣಾಮಗಳನ್ನು ಋಗ್ವೇದದ ಒಂದು ಸೂಕ್ತ ಸೊಗಸಾಗಿ ನಿರೂಪಿಸಿದೆ. ಈ
ಮಂತ್ರಭಾಗವನ್ನು ‘ಜೂಜುಗಾರನ ಅಳಲು’ ಎಂದು ಎಂ. ಗೋಪಾಲಕೃಷ್ಣ ಅಡಿಗರು ಕನ್ನಡಕ್ಕೆ ಪದ್ಯರೂಪದಲ್ಲಿಯೇ ತಂದಿದ್ದಾರೆ, ಹೀಗೆ:

ಗಾಳಿಬೀಸುವ ಬಯಲ ಹೆಮ್ಮರದ ಬೀಜವಿವು
ದಾಳಗಳು ತೂಗಿ ಕೆಳಗುರುಳುತಿರಲು
ಹಿಗ್ಗಿಸುವುವೆನ್ನೆದೆಯ; ಮುಜವಂತ ಗಿರಿಯಿಂದ
ತಂದ ಸೋಮದೊಲೆದೆಯನುಬ್ಬಿಸುವುವು.

ಮುನಿಯುವವಳಲ್ಲೆನ್ನ ಸತಿ. ಕಾದಾಡುವವಳಲ್ಲ;
ಅನುಕೂಲೆ, ಅನುಕಂಪ ತೋರಿಸುವಳು
ನನಗು ನನ್ನೆಲ್ಲ ಸಖರಿಗು; ಜೂಜಿನಲಿ ಸೋತ
ಖತಿಗೆ ಮನೆಯಿಂದವಳನೋಡಿಸಿದೆನು.

ಹಗೆಯಾದಳತ್ತೆ, ಸತಿ ಮನೆಗೆ ಸೇರಿಸಳೆನ್ನ;
ಕಷ್ಟಕಾಲಕೆ ಕರುಣೆ ದೊರೆಯದಕಟ!
ಜೂಜುಗಾರನಿಗಿಲ್ಲ ಬೆಲೆ ಕೊಂಚವೂ; ಮಾರ
ಲಿರುವ ಮುದಿಕುದುರೆಯಂತವನ ಬಾಳು!

ದಾಳದ ದುರಾಶೆ ದೋಚಲು ಮನೆಯ, ಪರಪುರುಷ
ರಪ್ಪುವರು ಜೂಜುಗಾರನ ಸತಿಯ;
ತಾಯ್ತಂದೆ ಸೋದರರೂ ಕಡೆಗಂಡು ನುಡಿಯುವರು
‘ಇವನ ನಾವರಿಯೆವು, ದೂಡಿ ಹೊರಗಿವನನು’.

‘ಜೂಜುಕಟ್ಟೆಗೆ ಗೆಳೆಯರೊಡನಿನ್ನು ಹೋಗೆ ನಾ’
ಎಂದು ನನ್ನೊಳೆ ನಾನು ಆಣೆಯಿಡುವೆ,
ಕೆಂದಾಳಗಳು ಉರುಳಿ ಕೂಗುತಿರೆ, ಮನಸೋತು
ಓಡುವೆನು, ವಿಟನೆಡೆಗೆ ವೇಶ್ಯೆಯಂತೆ.

‘ಗೆಲುವೆನೇ?’ ಎಂದು ಚಿಂತಿಸುತ ಜೂಜು
ಕಟ್ಟೆಗೈದುವನಿವನು ಜೂಜುಗಾರ;
ದಾಳಗಳು ಹಗೆಯಾಗಿ ತುಳಿವುವವನಾಸೆಯನು
ನೀಡುವವು ಜಯವನವನೆದುರಾಳಿಗೆ.

ಬಿಟ್ಟಹೆಂಡತಿ ಕೊರಗುವಳು; ತಾಯಿ ನೆಲೆಯಿಲ್ಲ
ದಲೆವ ಮಗನನು ಕಂಡು ತೊಳಲುತಿಹಳು.
ಋಣಿಯಾಗಿ ಹಣವರಸಿ ಬೆದರುತಿರುಳಿನಲಿ
ಹೆರರ ಮನೆಬಳಿ ಹೊಂಚುಕಾಯುತಿಹನು.

‘ದಾಳದಾಟವು ಬೇಡ; ಹೊಲವನುಳು; ನಿನ್ನಾಸ್ತಿ
ನೋಡಿ ನಲಿ; ಇರುವಷ್ಟೆ ಅಧಿಕವೆನ್ನು.
ಅಗೋ ಅಲ್ಲಿ ನಿನ್ನ ದನಕರು, ನಿನ್ನ ಸತಿ, ನೋಡು!’
ಸವಿತೃ ನನಗಿದನೆಲ್ಲ ತೋರಿಸಿದನು.

(‘ಋಗ್ವೇದ ಸೂಕ್ತಗಳು’, ಜಿ. ಹನುಮಂತರಾವ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT