ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಯಲಿ

ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ; ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಅಭಿಮತ
Last Updated 10 ಮಾರ್ಚ್ 2018, 8:41 IST
ಅಕ್ಷರ ಗಾತ್ರ

ಮಂಡ್ಯ: ‘ಶಾಲಾ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಯಬೇಕು. ಪರಿಸರ ಸಂರಕ್ಷಣೆಯ ಬಗ್ಗೆ ಶಿಕ್ಷಕರು ಶಾಲಾ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಹೇಳಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ ಶುಕ್ರವಾರ ನಗರದ ಸೇಂಟ್‌ ಜಾನ್‌ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ 2017–18ನೇ ಸಾಲಿನ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡುವುದು ಇಂದಿನ ಪೀಳಿಗೆಯ ಜವಾಬ್ದಾರಿಯಾಗಿದೆ. ಉತ್ತಮ ಗಾಳಿ, ನೀರು, ಅರಣ್ಯ ಸಂಪತ್ತನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ದೇಶದಲ್ಲಿ ಪ್ಲಾಸ್ಟಿಕ್‌ ಬಹು ದೊಡ್ಡ ಸಮಸ್ಯೆಯಾಗಿದ್ದು ಪ್ಲಾಸ್ಟಿಕ್‌ ತ್ಯಾಜ್ಯವನ್ನು ನಿರ್ಮೂಲನೆ ಮಾಡಲು ಅಗತ್ಯ ಕ್ರಮ ಅನುಸರಿಸಬೇಕು. ಪ್ಲಾಸ್ಟಿಕ್‌ ಪುನರ್‌ ಬಳಕೆಯ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಅದರಿಂದ ಉಂಟಾಗಬಹುದಾದ ಹಾನಿಯನ್ನು ತಪ್ಪಿಸಬಹುದು. ಪ್ಲಾಸ್ಟಿಕ್‌ ನಿಂದ ಉಂಟಾಗಬಹುದಾದ ಅಪಾಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಹೇಳಿದರು.

‘ಮಕ್ಕಳು ಶಾಲಾ ಆವರಣದಲ್ಲಿ ಗಿಡಮರ ಬೆಳೆಸುವಂತೆ ಶಿಕ್ಷಕರು ಪ್ರೇರಣೆ ನೀಡಬೇಕು. ವಿದ್ಯಾರ್ಥಿ ದೆಸೆಯಲ್ಲೇ ಮಕ್ಕಳು ಪರಿಸರ ಕಾಳಜಿಯನ್ನು ಬೆಳೆಸಿಕೊಂಡರೆ ಅವರು ಮುಂದೆ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ಹೊಂದುತ್ತಾರೆ. ಇದರಲ್ಲಿ ಪೋಷಕರು ಹಾಗೂ ಶಿಕ್ಷಕರ ಜವಾಬ್ದಾರಿ ಬಲು ಮುಖ್ಯವಾದುದು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶಾಲೆಗಳಿಗೆ ಪರಿಸರ ಮಿತ್ರ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.

ರಾಜ್ಯ ವಿಜ್ಞಾನ ಪರಿಷತ್‌ ರಾಜ್ಯ ಸಮಿತಿ ಸದಸ್ಯ ಕೃಷ್ಣೇಗೌಡ ಮಾತನಾಡಿ ‘ಪರಿಸರ ಕಾಳಜಿ ಮೂಡಿಸುವ ಕಾರ್ಯಕ್ರಮಗಳು ನಡೆಯ ಬೇಕು. ಇದೇ ಮಾದರಿಯ ಡಿಸೆಂಬರ್‌–ಜನವರಿ ತಿಂಗಳಲ್ಲಿ ಜಿಲ್ಲಾಮಟ್ಟದಲ್ಲಿ ನಡೆಯಲಿದೆ. ಪರಿಸರವು ವಿಜ್ಞಾನದ ಭಾಗವಾಗಿದ್ದು ಪರಿಸರ ಸಂರಕ್ಷಣಾ ಮಹತ್ವವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಬೇಕು. ಪ್ರಸ್ತುತ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಮಾಲಿನ್ಯವಾಗುತ್ತಿದ್ದು ಪರಿಸ್ಥಿತಿ ಇದೇ ರೀತಿ ಮುಂದುವರಿದರೆ 2030ರ ವೇಳೆಗೆ ಆಮ್ಲಜನಕ ಪಡೆಯುವುದು ಬಹಳ ಕಷ್ಟ ಸಾಧ್ಯವಾಗಲಿದೆ. ಹೀಗಾಗಿ ಈಗಿನಿಂದಲೇ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಯ ಬಗ್ಗೆ ಎಲ್ಲರಲ್ಲೂ ತಿಳಿವಳಿಕೆ ಮೂಡಿಸಬೇಕು’ ಎಂದು ಹೇಳಿದರು.

ಮೈಸೂರು ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಉಮೇಶ್‌ ಮಾತನಾಡಿ ‘ಪರಿಸರ ಉಳಿವಿಗೆ ಇಂದಿನ ಸರ್ಕಾರಗಳು ಕಡೆಯ ಆದ್ಯತೆ ನೀಡುತ್ತಿವೆ. ಪರಿಸರ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡದಿದ್ದರೆ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಲು ಸಾಧ್ಯವಿಲ್ಲ ದೊಡ್ಡ ದೊಡ್ಡ ನಗರದಲ್ಲಿ ತ್ಯಾಜ್ಯ ನಿರ್ವಹಣೆ ಬಲುದೊಡ್ಡ ಸವಾಲಾಗಿದೆ. ಎಲ್ಲವೂ ಮಾಲಿನ್ಯಗೊಳ್ಳುತ್ತಿದ್ದು ಅದರ ನಡುವೆಯೇ ಮಾನವ ಜೀವನ ನಡೆಯುತ್ತಿದೆ. ತಿನ್ನುವ ಆಹಾರವು ಮಲಿನಗೊಂಡಿದೆ. ಪರಿಸರ ಸಂರಕ್ಷಣೆ ಚಿಂತನೆಗೆ ಇದು ಸಕಾಲ. ಇದು ಶಾಲೆಗಳಿಂದಲೇ ಆರಂಭಗೊಳ್ಳಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ವಿಜ್ಞಾನ ಪರಿಷತ್‌ ರಾಜ್ಯ ಘಟಕದ ಸದಸ್ಯ ರಾಮಚಂದ್ರ, ಪರಿಸರ ಅಧಿಕಾರಿ ಎ.ಉದಯ್‌ಕುಮಾರ್‌, ಡಿಡಿಪಿಐ ವಿ.ಸೂರ್ಯಪ್ರಕಾಶ ಮೂರ್ತಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಚಾರ್ಯ ಎಂ.ಶಿವಮಾದಪ್ಪ ಹಾಜರಿದ್ದರು.

**

ಪ್ರಶಸ್ತಿ ಪಡೆದ ಶಾಲೆಗಳು

ಶ್ರೀರಂಗಪಟ್ಟಣ ತಾಲ್ಲೂಕು ನೇರಳಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪಡೆಯಿತು.

ಹಸಿರು ಶಾಲೆ ಪ್ರಶಸ್ತಿ ಪಡೆದ ಶಾಲೆಗಳು: ಮದ್ದೂರು ತಾಲ್ಲೂಕು ಕೂಳಗೆರೆ ಗೇಟ್‌ನಲ್ಲಿರು ಸರ್ಕಾರಿ ಪ್ರೌಢಶಾಲೆ, ನಾಗಮಂಗಲ ತಾಲ್ಲೂಕು ಪಿ.ನೇರಳೆಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಮಳವಳ್ಳಿ ತಾಲ್ಲೂಕು ಭೀಮನಹಳ್ಳಿ ಸರ್ಕಾರಿ ಪ್ರೌಢಶಾಲೆ, ಮಂಡ್ಯ ತಾಲ್ಲೂಕಿನ ಬಿ.ಗೌಡಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀರಂಗಪಟ್ಟಣ ತಾಲ್ಲೂಕಿನ ಗೌರಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಡ್ಯ ತಾಲ್ಲೂಕಿನ ಹನಕೆರೆ ಹಿರಿಯ ಪ್ರಾಥಮಿಕ ಶಾಲೆ, ಕೆ.ಆರ್‌.ಪೇಟೆ ತಾಲ್ಲೂಕಿನ ಅಟ್ಟುಪ್ಪೆ ಹಿರಿಯ ಪ್ರಾಥಮಿಕ ಶಾಲೆ, ಮದ್ದೂರು ತಾಲ್ಲೂಕಿನ ಅಣ್ಣೂರು ಪ್ರೌಢಶಾಲೆ, ಮಳವಳ್ಳಿ ತಾಲ್ಲೂಕಿನ ರಾವಣಿ ಪ್ರೌಢಶಾಲೆಗಳು ಹಸಿರು ಶಾಲೆ.

ಹಳದಿ ಶಾಲೆ ಪ್ರಶಸ್ತಿ ಪಡೆದ ಶಾಲೆಗಳು: ಮಂಡ್ಯ ತಾಲ್ಲೂಕಿನ ಶಂಕರಪುರ ಪ್ರೌಢಶಾಲೆ, ಶ್ರೀರಂಗಪಟ್ಟಣ ತಾಲ್ಲೂಕಿನ ಬಲ್ಲೇನಹಳ್ಳಿ ಪ್ರೌಢಶಾಲೆ, ಪಾಂಡವಪುರ ತಾಲ್ಲೂಕಿನ ಬೆಳ್ಳಾಳೆ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಮದ್ದೂರು ತಾಲ್ಲೂಕಿನ ಕ್ಯಾತಘಟ್ಟ ಪ್ರೌಢಶಾಲೆ, ಮಂಡ್ಯ ತಾಲ್ಲೂಕಿನ ಎಲೆಚಾಕನಹಳ್ಳಿ ಹಿರಿಯ ಪ್ರಾಥಮಿಕ ಶಾಲೆ, ಮದ್ದೂರು ತಾಲ್ಲೂಕಿನ ಬೊಪ್ಪಸಮುದ್ರ ಪ್ರೌಢಶಾಲೆ, ಸೋಮನಹಳ್ಳಿ ಪ್ರೌಢಶಾಲೆ, ಪಾಂಡವಪುರ ತಾಲ್ಲೂಕಿನ ಮೂಡಲಕೊಪ್ಪಲು ಪ್ರೌಢಶಾಲೆ, ಕೆ.ಆರ್‌.ಪೇಟೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಮಳವಳ್ಳಿ ತಾಲ್ಲೂಕಿನ ಕೆಂಪಯ್ಯನ ದೊಡ್ಡಿ ಹಿರಿಯ ಪ್ರಾಥಮಿಕ ಶಾಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT