ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಷನ್ 2023’; ಡಿಪಿಆರ್ ಸಲ್ಲಿಕೆಗೆ ಸೂಚನೆ

Last Updated 21 ಜುಲೈ 2018, 14:18 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವಿಷನ್ 2023 ಯೋಜನೆಯಡಿ ತಾಲ್ಲೂಕಿನಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಆ.25ರ ಒಳಗೆ ಸಲ್ಲಿಸಬೇಕು ಎಂದು ಶಾಸಕ ಸಿ.ಟಿ.ರವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ‘ವಿಷನ್ 2023’ ಯೋಜನೆ ಸಭೆಯಲ್ಲಿ ಮಾತನಾಡಿದರು.

ಸಣ್ಣ ನೀರಾವರಿ ಇಲಾಖೆ ವತಿಯಿಂದ ಯಗಚಿ ನದಿ ಮತ್ತು ತಾಲ್ಲೂಕಿನ ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು. ನದಿ ಪಾತ್ರದಲ್ಲಿ ತಡೆಗೋಡೆ ನಿರ್ಮಿಸಬೇಕು. ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಇಲಾಖೆಯ ಅಧಿಕಾರಿಗಳು ಪರಸ್ಪರ ಚರ್ಚಿಸಿ ಯೋಜನೆ ಅಂದಾಜುಪಟ್ಟಿ ಸಿದ್ಧಪಡಿಸಬೇಕು ಎಂದು ತಿಳಿಸಿದರು.

ಸಿರಗುಂದ, ಆಲದಗುಡ್ಡೆ, ಕರ್ತಿಕೆರೆ, ಮತ್ತಾವರ, ಇಂದಾವರ ಉಪ್ಪಳ್ಳಿ ಅಲ್ಲಂಪುರ ಮಾರ್ಗವಾಗಿ ಕಡೂರು ರಸ್ತೆಗೆ ಸಂಪರ್ಕಿಸುವಂತೆ ಹೊರ ವರ್ತುಲ ರಸ್ತೆ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಡಿಪಿಆರ್ ಸಿದ್ಧಪಡಿಸಬೇಕು ಎಂದು ತಿಳಿಸಿದರು.

ಮಳೆಯಿಂದಾಗಿ ರಸ್ತೆಗಳು ಹಾನಿಯಾಗಿವೆ. ರಸ್ತೆ ರಿಪೇರಿ, ಮಾರ್ಗ ಫಲಕ ಅಳವಡಿಸಲು ತುರ್ತಾಗಿ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ನಗರದಲ್ಲಿ ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಡಿವಾಣ ಹಾಕಬೇಕು. ನಗರದ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಅಗತ್ಯ ಸೌಕರ್ಯಗಳ ಪಟ್ಟಿ ಮಾಡಿ ವರದಿ ನೀಡಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ದೊಡ್ಡಮಲ್ಲಪ್ಪ ಅವರಿಗೆ ಸೂಚಿಸಿದರು.

ಸಖರಾಯಪಟ್ಟಣ, ಲಕ್ಯಾ ಭಾಗದಲ್ಲಿ ಪರಿಸರಕ್ಕೆ ಕೈಗಾರಿಕೆ ಸ್ಥಾಪನೆಗೆ ಅನುಮತಿ ನೀಡಬೇಕು. ನಗರದ ಹೊರ ಹೊಲಯದಲ್ಲಿ ಗ್ಯಾರೇಜ್, ಟ್ರಕ್‌ ಟರ್ಮಿನಲ್ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಗಣೇಶ್‌ ಅವರಿಗೆ ಹೇಳಿದರು.

ಮೆಸ್ಕಾಂ ವತಿಯಿಂದ ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ಪ್ರತ್ಯೇಕವಾಗಿ ಸರ್ಕಿಟ್ ರೂಪಿಸಬೇಕು. ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಚರ್ಚಿಸಿ ಜಿಲ್ಲೆಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರಚಿಸಬೇಕು.
ಮುದ್ರಾ ಯೋಜನೆಯಲ್ಲಿ ಬ್ಯಾಂಕುಗಳು ಸಾಲ ನೀಡಲು ಹಿಂದೇಟು ಹಾಕಬಾರದು. ಬ್ಯಾಂಕ್‌ ಅಧಿಕಾರಿಗಳ ಕಾರ್ಯಾಗಾರ ನಡೆಸಿ ಸಾಲ ಮೇಳ ಆಯೋಜಿಸಬೇಕು ಎಂದು ಹೇಳಿದರು.

ಮುದ್ರಾ ಯೋಜನೆಯಡಿ ಜಿಲ್ಲೆಯಲ್ಲಿ 14, 782 ಮಂದಿಗೆ ₹ 168 ಕೋಟಿ ಸಾಲ ವಿತರಿಸಲಾಗಿದೆ. 9,048 ಮಂದಿಗೆ ₹ 5 ಸಾವಿರದಿಂದ ₹ 50ಸಾವಿರದವರೆಗೆ, 4,122 ಮಂದಿಗೆ ₹ 50 ಸಾವಿರದಿಂದ 5 ಲಕ್ಷದವರೆಗೆ, 811 ಮಂದಿಗೆ 5 ಲಕ್ಷದಿಂದ 10ಲಕ್ಷದವರೆಗೆ ಸಾಲ ನೀಡಲಾಗಿದೆ ಎಂದು ಲೀಡ್ ಬ್ಯಾಂಕ್‌ ವ್ಯವಸ್ಥಾಪಕ ಪ್ರಶಾಂತ್‌ ದೇಸಾಯಿ ತಿಳಿಸಿದರು.

ಜಿಲ್ಲೆಯಲ್ಲಿ 38 ಸರ್ಕಾರಿ ಶಾಲೆಗಳಲ್ಲಿ ಸತತ ನಾಲ್ಕು ವರ್ಷದಿಂದ ಶೂನ್ಯ ದಾಖಲಾತಿ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಸನ್ನಕುಮಾರ್ ಮಾಹಿತಿ ನೀಡಿದರು.

ಮೂಲ ಸೌಕರ್ಯ, ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳ ಪಟ್ಟಿ ಮಾಡುವಂತೆ ಡಿಡಿಪಿಐಗೆ ಶಾಸಕ ರವಿ ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ, ನಗರಸಭೆ ಆಯುಕ್ತೆ ಎಂ.ವಿ.ತುಷಾರಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT