ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಕೀರ್ತಿ

Last Updated 11 ಮಾರ್ಚ್ 2018, 19:40 IST
ಅಕ್ಷರ ಗಾತ್ರ

ಒಂಭತ್ತನೇ ವರ್ಷದಲ್ಲಿಯೇ ರಾಷ್ಟ್ರಮಟ್ಟದ ಸಬ್ ಜೂನಿಯರ್ ರೋಯಿಂಗ್ ಚಾಂಪಿಯನ್‍ಷಿಪ್‍ನಲ್ಲಿ ಚಿನ್ನ ಗೆದ್ದ ಕೀರ್ತನಾ ಅಪರೂಪದ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡುವ ಕನಸು ಕಾಣುತ್ತಿದ್ದಾರೆ.

ರೋಯಿಂಗ್‍ನಲ್ಲಿ ಕರ್ನಾಟಕಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೊದಲ ಪದಕ ತಂದುಕೊಟ್ಟ ಕೀರ್ತಿ ಬೆಂಗಳೂರಿನ ಈ ಹುಡುಗಿಗೆ ಸಲ್ಲುತ್ತದೆ. ಕೀರ್ತನಾ 2012ರಿಂದ ಈ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಏಳು ವರ್ಷಗಳಿಂದ ಹಲಸೂರು ಕೆರೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಬೇಸಿಗೆ ಶಿಬಿರಗಳಲ್ಲಿ ರೋಯಿಂಗ್ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅವರು ಮ್ಯಾನೇಜರ್ ಶ್ಯಾಮಣ್ಣ ಅವರ ಮಾರ್ಗದರ್ಶನದಿಂದ ರೋಯಿಂಗ್‍ನಲ್ಲಿ ಮುಂದುವರಿಯುವ ಕನಸು ಕಂಡರು.

’ರೋಯಿಂಗ್‍ಗೆ ನೀವು ಸರಿಯಾಗಿ ಹೊಂದಿಕೊಳ್ಳುತ್ತೀರಿ ಎಂದು ಶ್ಯಾಮಣ್ಣ ನನಗೆ ಹೇಳಿದರು. ಆರಂಭದಲ್ಲಿ  ಸವಾಲುಗಳನ್ನು ಎದುರಿಸಿದೆ. ಕಾಲೇಜು, ಫ್ರೆಂಡ್ಸ್, ಸುತ್ತಾಟ ಎಲ್ಲವನ್ನೂ ತ್ಯಾಗ ಮಾಡಬೇಕಾಯಿತು. 8.15ಕ್ಕೆ ತರಗತಿಗಳು ಆರಂಭವಾಗುತ್ತಿದ್ದವು. ನಾನು 9ರ ನಂತರ ಕ್ಲಾಸ್‍ಗೆ ಹೋಗುತ್ತಿದ್ದೆ. ಓದಲು ಹೆಚ್ಚು ಸಮಯ ಸಿಗುತ್ತಿರಲಿಲ್ಲ' ಎಂದು ಬನಶಂಕರಿಯ ಪಿಇಎಸ್ ಕಾಲೇಜಿನಲ್ಲಿ ಎರಡನೇ ವರ್ಷದ ಎಂಜಿನಿಯರಿಂಗ್ ಓದುತ್ತಿರುವ ಕೀರ್ತನಾ ಹೇಳುತ್ತಾರೆ.

’ಹೆಣ್ಣು ಮಕ್ಕಳಿಗೂ ರೋಯಿಂಗ್‍ನಲ್ಲಿ ಸಮಾನ ಅವಕಾಶ ಇದೆ. ಆದರೆ ಈ ಕ್ರೀಡೆಯ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ಕ್ರೀಡೆಗೆ ಸಿಕ್ಕ ಮನ್ನಣೆ ಇಲ್ಲಿ ಸಿಗುವುದಿಲ್ಲ. ಇದರಲ್ಲಿ ಫಿಟ್‍ನೆಸ್ ಬಹಳ ಮುಖ್ಯ. ಹೊರಗೆ ಹೋದರೂ ಮನೆಯ ಊಟಕ್ಕೆ ಆದ್ಯತೆ ಕೊಡಬೇಕು. ಮೇಲ್ನೋಟಕ್ಕೆ ಕಾಲು, ಕೈಗೆ ಹೆಚ್ಚು ಕಸರತ್ತು ಕೊಡುವ ಕ್ರೀಡೆ ಅನಿಸುತ್ತದೆ. ಆದರೆ ಮನೋದೈಹಿಕ ಸಬಲತೆ ಮುಖ್ಯ. ಒಂದೆರಡು ದಿನ ಅಭ್ಯಾಸ ಮಾಡದಿದ್ದರೂ ಫಿಟ್‍ನೆಸ್ ಮಟ್ಟ ಕಡಿಮೆಯಾಗುತ್ತದೆ. ನಿಂತ ನೀರಿನಲ್ಲಿ ಆಡುವ ಕ್ರೀಡೆ ಆದ ಕಾರಣ ಅಪಾಯ ಸಾಧ್ಯತೆಗಳು ಕಡಿಮೆ. ಆದರೆ ಈಜು ಕಲಿತಿರಬೇಕು' ಎನ್ನುತ್ತಾರೆ ಕೀರ್ತನಾ. 16 ವರ್ಷಗಳ ಬಳಿಕ ರೋಯಿಂಗ್‍ನಲ್ಲಿ ಏಕಲವ್ಯ ಪ್ರಶಸ್ತಿ ಗಳಿಸಿದ ಸಾಧನೆ ಅವರದ್ದು.

ಅವಕಾಶದ ಬಾಗಿಲು

’ಸಬ್ ಜೂನಿಯರ್ ಚಾಂಪಿಯನ್‍ಷಿಪ್‍ನಲ್ಲಿ ಚಿನ್ನ ಗೆದ್ದ ಬಳಿಕ ಕರ್ನಾಟಕ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತು. ಭಾರತ ತಂಡಕ್ಕೆ ಆಡುವಾಗ ಬಹಳಷ್ಟು ಹೊಸ ಸವಾಲುಗಳು ಎದುರಾದವು. ಅಲ್ಲಿ ಗುಂಪು ವಿಭಾಗದಲ್ಲಿ ಆಡಬೇಕು. ಬೇರೆಯವರ ವೇಗಕ್ಕೆ ತಕ್ಕಂತೆ ಹುಟ್ಟು ಹಾಕಬೇಕು. ಬೇರೆ ಕ್ರೀಡೆಗಳಂತೆ ಪಂದ್ಯದ ಮಧ್ಯೆ ಯಾವುದೇ ವಿರಾಮ ಇಲ್ಲ. ಬೆವರು ಒರೆಸಿಕೊಳ್ಳುವುದಕ್ಕೂ ಸಮಯ ಸಿಗುವುದಿಲ್ಲ. ಇದು ರೋಚಕ ಹಂತಕ್ಕೆ ಕೊಂಡೊಯ್ಯುವ ಕ್ರೀಡೆ’ ಎಂದು ಕೀರ್ತನಾ ವಿವರಿಸುತ್ತಾರೆ.

ರೋಯಿಂಗ್ ಬಗ್ಗೆ ಒಂದಿಷ್ಟು

ರೋಯಿಂಗ್ ನಿಂತಿರುವ ನೀರಿನಲ್ಲಿ ಆಡುವ ಕ್ರೀಡೆ. ಕೆರೆಗಳಲ್ಲಿ ಹೆಚ್ಚಾಗಿ ಆಡುತ್ತಾರೆ. ಬೋಟ್ ಹಾಗೂ ವೋರ್ಸ್ (ಹುಟ್ಟು) ಸಹಾಯದಿಂದ ವೇಗವಾಗಿ ಮುನ್ನುಗ್ಗಬೇಕು. ಪಾಶ್ಚಿಮಾತ್ಯ ದೇಶಗಳಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಅಲ್ಲಿ ರೋಯಿಂಗ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಭಾರತದಲ್ಲಿ ಕ್ಲಬ್ ಮಟ್ಟದಲ್ಲಿ ಮಾತ್ರ ಸ್ಪರ್ಧೆಗಳು ನಡೆಯುತ್ತವೆ. ಇದುವರೆಗೂ ಬೆಂಗಳೂರಿನಲ್ಲಿ ಹಲಸೂರು ಕೆರೆಯಲ್ಲಿ ಒಂದು ಕ್ಲಬ್ ಮಾತ್ರ ಇತ್ತು. ಈಗ ಕೆ.ಆರ್.ಪುರಂನಲ್ಲಿಯೂ ಮತ್ತೊಂದು ಕ್ಲಬ್ ಆರಂಭವಾಗುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿಯೂ ಕ್ಲಬ್ ಮಟ್ಟದ ಪೈಪೋಟಿ ಇದೆ. ಸೀನಿಯರ್ ವಿಭಾಗದಲ್ಲಿ 2ಕಿಮೀ , ಸಬ್ ಜೂನಿಯರ್ ವಿಭಾಗದಲ್ಲಿ 500ಮೀ ಹಾಗೂ ಜೂನಿಯರ್ ವಿಭಾಗದಲ್ಲಿ 1000ಮೀ ವಿಭಾಗದ ಸ್ಪರ್ಧೆಗಳು ಇರುತ್ತವೆ.

* ಇದು ದುಬಾರಿ ಕ್ರೀಡೆ

‘ರೋಯಿಂಗ್‍ನಲ್ಲಿ ಎತ್ತರದ ಕನಸು ಕಾಣೋದಕ್ಕೆ ದುಡ್ಡು ಬೇಕು. ಒಂದು ಉತ್ತಮ ಬೋಟ್ ಕೊಂಡುಕೊಳ್ಳಲು ₹ 1 ಲಕ್ಷದಿಂದ 2 ಲಕ್ಷ ಬೇಕಾಗುತ್ತದೆ. ಜೊತೆಗೆ ವೋರ್ಸ್‍ಗೆ (ಹುಟ್ಟು) ₹ 1 ಲಕ್ಷ ಕೊಡಬೇಕು. ಅಂತರರಾಷ್ಟ್ರೀಯ ಪಂದ್ಯಗಳಿಗೂ ನಮ್ಮದೇ ವೋರ್ಸ್ ತೆಗೆದುಕೊಂಡು ಹೋಗಬೇಕು. ಅಭ್ಯಾಸಕ್ಕೂ ಸಾಕಷ್ಟು ಖರ್ಚು ಮಾಡಬೇಕು. ಇದು ನಮ್ಮ ಸಾಧನೆಯ ಹಾದಿಗೆ ಅಡ್ಡಿಯಾಗಿದೆ. ಹಣಕಾಸಿನ ನೆರವು ಇದ್ದರೆ ಈ ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ ಮಾಡಬಹದು. ಗೋವಾದಲ್ಲಿ ನಡೆಯುವ ನ್ಯಾಷನಲ್ ಗೇಮ್ಸ್‍ನಲ್ಲಿ ರಾಜ್ಯ ತಂಡಕ್ಕೆ ಪದಕ ತಂದುಕೊಡುವ ಕನಸಿದೆ.

–ಕೀರ್ತನಾ ರೋಯಿಂಗ್ ಪಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT