ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 13 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವಿಜಯ್.ಎ.ಆರ್. ಬೆಂಗಳೂರು

* ನಾನು ಬಿಇ ಓದಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದೇನೆ. ನನ್ನ ತಂದೆಯವರಿಗೆ ನಿವೃತ್ತಿಯಾಗಿ ₹4000 ಪಿಂಚಣಿ ಬರುತ್ತದೆ. ನಿವೃತ್ತಿಯಿಂದ ₹18 ಲಕ್ಷ ಬಂದಿದೆ. ಪ್ರತಿ ಬಡ್ಡಿ ಪಡೆಯಲು ಮಾರ್ಗದರ್ಶನ ಮಾಡಿ.

ಉತ್ತರ: ನಿಮ್ಮ ತಂದೆಯವರು ಹಿರಿಯ ನಾಗರಿಕರಾಗಿರುವುದರಿಂದ, ನಿಮ್ಮ ತಂದೆಯವರಿಗೆ ಬಂದಿರುವ ₹ 18 ಲಕ್ಷದಲ್ಲಿ ₹ 15 ಲಕ್ಷ ಸೀನಿಯರ್ ಸಿಟಿಜನ್ ಠೇವಣಿ ಅಂಚೆಕಚೇರಿಯಲ್ಲಿ ಇರಿಸಿರಿ. ಈ ಠೇವಣಿಗೆ ಸದ್ಯದ ಬಡ್ಡಿದರ ಶೇ 8.3 ಇದ್ದು, ಮೂರು ತಿಂಗಳಿಗೊಮ್ಮೆ ಬಡ್ಡಿ ಕೊಡುತ್ತಾರೆ. ಪ್ರಥಮ ಮೂರು ತಿಂಗಳು ಕಾದರೂ ನಂತರ ಮೂರು ತಿಂಗಳ ಬಡ್ಡಿ ಹಣ ಒಮ್ಮೆಲೇ ಬರುವುದರಿಂದ ಉಳಿತಾಯ ಖಾತೆಯಲ್ಲಿ ಇರಿಸಿ ಪ್ರತೀ ತಿಂಗಳೂ ಬಡ್ಡಿ ಪಡೆಯಬಹುದು. ಇಂದಿನ ವಾತಾವರಣದಲ್ಲಿ ಇದಕ್ಕೂ ಹೆಚ್ಚಿನ ವರಮಾನ ಬರುವ ಸುರಕ್ಷಿತ ಠೇವಣಿ ಬೇರೊಂದಿಲ್ಲ. ಅಂಚೆಕಚೇರಿಯಲ್ಲಿ ಪ್ರತೀ ತಿಂಗಳೂ ಬಡ್ಡಿ ಕೊಡುವ M/S ಯೋಜನೆ ಇದ್ದರೂ ಇಲ್ಲಿ ಬಡ್ಡಿ ದರ ಶೇ 7.3. ಈ ಎಲ್ಲಾ ಕಾರಣದಿಂದ ನಿಮ್ಮ ತಂದೆಗೆ ಸೀನಿಯರ್ ಸಿಟಿಜನ್ ಠೇವಣಿಯೇ ಲೇಸು.

**

ಜೋಸ್ನಾ ರಾಯನ್ನನವರ್, ಧಾರವಾಡ

* ನಾನು Health and Welfare Deptನಲ್ಲಿ ನೌಕರಿ ಮಾಡುತ್ತೇನೆ. 2005ರಲ್ಲಿ ಶೇ 8.25 ಬಡ್ಡಿ ದರದಲ್ಲಿ 15 ವರ್ಷಗಳ ಅವಧಿಗೆ ₹ 5100 ಇ.ಎಂ.ಐ. ನಂತೆ ಬ್ಯಾಂಕ್‌ನಲ್ಲಿ ಗೃಹಸಾಲ ಪಡೆದಿದ್ದೆ. ನಾನು ಇ.ಎಂ.ಐ. ತಪ್ಪದೇ ಕಟ್ಟುತ್ತಿದ್ದು, ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ₹ 3.62 ಲಕ್ಷ ಬಾಕಿ ಇರುವುದಾಗಿ ತಿಳಿಸಿದರು. ನಾನು  2017 ಮಾರ್ಚ್ ತನಕ ₹7,64,383 ಪಾವತಿಸಿರುವೆ. ಅದರಲ್ಲಿ ₹6,01,140 ಬಡ್ಡಿ ಹಾಗೂ ₹1,63,243 ಅಸಲಿಗೆ ಬಂದಿರುವುದು ತಿಳಿದು ಬಂತು. ಸಾಲ ತೀರಿಸಬೇಕೆಂದಿದ್ದೇನೆ. ಲೆಕ್ಕಾಚಾರ ಸರಿ ಇಲ್ಲ  ಎನ್ನುವುದು ನನ್ನ ಭಾವನೆ. ದಯಮಾಡಿ ಮಾರ್ಗದರ್ಶನ ಮಾಡಿರಿ.

ಉತ್ತರ: ನಿಮ್ಮ ಪ್ರಶ್ನೆಯಲ್ಲಿ ತಿಳಿಸಿರುವ ವಿಚಾರ, ಮುಖ್ಯವಾಗಿ ನೀವು ಇದುವರೆಗೆ ತುಂಬಿರುವ ಹಣದಲ್ಲಿ ಬಡ್ಡಿ ₹ 7,64,383, ₹ 1,63,243 ಅಸಲು, ಪರಿಗಣಿಸುವಾಗ ಲೆಕ್ಕಾಚಾರ ಎಲ್ಲಿಯೋ ತಪ್ಪಿದಂತಿದೆ. ಒಟ್ಟಿನಲ್ಲಿ 15 ವರ್ಷ ಅವಧಿಯಲ್ಲಿ ಇ.ಎಂ.ಐ. ಸರಿಯಾಗಿ 12 ವರ್ಷ ತುಂಬಿದಾಗಲೂ ₹ 3.62 ಲಕ್ಷ ಬಾಕಿ ಇರಲಾರದು ಎನ್ನುವುದು ನನ್ನ ವೈಯಕ್ತಿಕ ವಿಚಾರ. ತಕ್ಷಣ ಸಾಲ ಪಡೆದ ತಾರೀಕಿನಿಂದ ಸಾಲದ ಸಂಪೂರ್ಣ ವಿವರ (Statement of loan A/c) ಪಡೆದು, ಮನೆಗೆ ಸಮೀಪದ ಚಾರ್ಟರ್ಡ್ ಅಕೌಂಟೆಂಟ್ ಬಳಿ ತೋರಿಸಿ. ನಿಜವಾಗಿ ನೀವು ಕೊಡ ತಕ್ಕ ಹಣದ ಮೊತ್ತ ತಿಳಿಯಿರಿ. ಬ್ಯಾಂಕ್‌ನಲ್ಲಿ ಸರಿಪಡಿಸಿ ಕೊಡುತ್ತಾರೆ. ಆದರೆ ವಿಚಾರ ಮುಂದೆ ದೂಡಬೇಡಿರಿ. ಅಲ್ಪಸ್ವಲ್ಪ ಹಣ ಬಾಕಿ ಇರುವಲ್ಲಿ ಸಂಪೂರ್ಣ ಹಣ ತುಂಬಿ ಸಾಲ ತೀರಿಸಿರಿ.

**

ಸತ್ಯನಾರಾಯಣ

* ನನ್ನ ವಯಸ್ಸು 23. ಒಂದು ಸಣ್ಣ ಕೆಲಸ ಮಾಡುತ್ತಿದ್ದೇನೆ. ₹ 6,000 ಸಾವಿರ ಸಂಬಳ. ಎಷ್ಟಾದರಷ್ಟು ಉಳಿಸಲು ಮಾರ್ಗದರ್ಶನ ಮಾಡಿರಿ.

ಉತ್ತರ: ನೀವು ಉಳಿಸುವುದರ ಜೊತೆಗೆ ಇನ್ನೂ ಹೆಚ್ಚಿನ ಆದಾಯ ಪಡೆಯಲು ಎಲ್.ಐ.ಸಿ. ಯವರ ಏಜೆನ್ಸಿ ಪಡೆಯಿರಿ. ಈ ಉದ್ಯೋಗ ಮಾಡಲು Insurance Institute Of India ನಡೆಸುವ On Line ಪರೀಕ್ಷೆಗೆ ಕುಳಿತುಕೊಳ್ಳಬೇಕು. ಇದು ಅತೀ ಸುಲಭವಾದ ಪರೀಕ್ಷೆ. ಹೀಗೆ ಏಜೆನ್ಸಿ ಪಡೆದಲ್ಲಿ ನೀವು ಬಿಡುವಿನ ವೇಳೆಯಲ್ಲಿ ಪಾಲಿಸಿ ಮಾಡಿಸಬಹುದು. ಇದರಿಂದ ಉತ್ತಮ ಆದಾಯ ಪಡೆಯಬಹುದು. ಸದ್ಯದ ಪರಿಸ್ಥಿತಿಯಲ್ಲಿ ₹ 3,000 ಉಳಿಸಿ, ಆ ಹಣವನ್ನು 5 ವರ್ಷಗಳ ಆರ್.ಡಿ. ಮಾಡಿರಿ. ನಿಮಗೆ ಉತ್ತಮ ಭವಿಷ್ಯ ಹಾರೈಸುತ್ತೇನೆ.

**

ಬಸವರಾಜ, ಮೈಸೂರು

* ನಾನು ಎಸ್.ಬಿ.ಎಂ. ನಿವೃತ್ತ ನೌಕರ. ನಿಮ್ಮ ಸಾವಿರಾರು ಅಭಿಮಾನಿಗಳಲ್ಲಿ ನಾನೂ ಒಬ್ಬನಾಗಿರುತ್ತೇನೆ. Gift Deed, ನೋಟರಿಯವರ ಸಮಕ್ಷಮ ಸಹಿ ಹಾಕಿದರೆ ಸಾಕಾದೀತೇ ಅಥವಾ ನೋಂದಾಯಿಸಬೇಕೇ ತಿಳಿಸಿರಿ.

ಉತ್ತರ: ಬಸವರಾಜ ಅವರೇ ನಿಮ್ಮ ಅಭಿಮಾನಕ್ಕೆ ಅಭಿನಂದಿಸುತ್ತೇನೆ. ಕಾನೂನಿನಂತೆ Gift Deed ನೋಂದಾಯಿಸಬೇಕಾಗುತ್ತದೆ. ನೋಂದಾಯಿಸುವುದರಿಂದ ಮುಂದೆ ತಾಪತ್ರಯ ಕೂಡಾ ಇರುವುದಿಲ್ಲ. Will ಮಾಡುವುದಾದರೆ ಮಾತ್ರ  ನೋಂದಾಯಿಸುವ ಅವಶ್ಯವಿಲ್ಲ. ಇಲ್ಲಿ ಕೂಡಾ ನೋದಾಯಿಸುವ ಸೌಲಭ್ಯವಿದ್ದು, ಇಂತಹ ವಿಚಾರಗಳು ನೋಂದಾಯಿಸುವುದೇ ಸೂಕ್ತ.

**

ಕಲೀಮ್ ಉಲ್ಲಾ, ಊರು ಬೇಡ

* ನಾನು ಎಸ್.ಬಿ.ಐ.ನಲ್ಲಿ ಅವಧಿ ಠೇವಣಿ ಇರಿಸಿದ್ದೇನೆ. ಈ ಠೇವಣಿ ಹೆಣ್ಣು ಮಕ್ಕಳ ಮದುವೆಗಾಗಿ ಮೀಸಲಿಟ್ಟಿದ್ದೇನೆ. ಇತ್ತೀಚೆಗೆ ಸಂಸತ್‌ನಲ್ಲಿ ಅಂಗೀಕಾರಗೊಂಡಿರುವ ಮಸೂದೆ ಪ್ರಕಾರ, ನಾವು ಕೇಳಿದಾಗ ಹಣ ವಾಪಸು ಸಿಗುವುದಿಲ್ಲ ಎಂಬ ಸುದ್ದಿ ಇದೆ. ದಯಮಾಡಿ ತಿಳಿಸಿರಿ.

ಉತ್ತರ: ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಸಂಸತ್‌ನಲ್ಲಿ ಬ್ಯಾಂಕ್ ಠೇವಣಿ ಸಕಾಲದಲ್ಲಿ ವಾಪಸು ಮಾಡದಿರುವ ಮಸೂದೆ ಅಂಗೀಕಾರ ಅಥವಾ ಕಾನೂನು ಮಾಡಲಿಲ್ಲ. ಇದು ಸುಳ್ಳು ಸುದ್ದಿ. ಎಸ್.ಬಿ.ಐ. ರಾಷ್ಟ್ರೀಯ ಬಹು ದೊಡ್ಡ ಬ್ಯಾಂಕ್ ಅಲ್ಲಿಯೇ ಹಣ ಇರಿಸಿ. ಮಕ್ಕಳ ಮದುವೆಗೆ ಬೇಕಾದಾಗ ವಾಪಸು ಪಡೆಯಿರಿ. ಬೇರೆಯವರ ಮಾತು ಕೇಳಿ ಅಭದ್ರವಾದ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಹಣ ಕೊಟ್ಟು ಕಳೆದು ಕೊಳ್ಳಬೇಡಿ.

**

ಮಹ್ಮದ್ ಯುಸೂಫ್, ಗಜೇಂದ್ರಗಡ

* ನಾನು ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದೇನೆ. ನಾನು ಇದೇ ವಿಚಾರದಲ್ಲಿ Sales and Service ಅಂಗಡಿ ಪ್ರಾರಂಭಿಸ ಬಯಸುತ್ತೇನೆ. ಇದಕ್ಕಾಗಿ  ₹ 3 ಲಕ್ಷ   ಅವಶ್ಯವಿದೆ. ಇದಕ್ಕಾಗಿ ಯಾವ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಬೇರೆ ಮಾರ್ಗವಿದ್ದರೆ ಸಲಹೆ ನೀಡಿ. ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ.

ಉತ್ತರ: ನೀವು ವೃತ್ತಿಪರ ಪದವೀಧರರಾಗಿದ್ದು, ನೀವು ಓದಿದ ವಿಷಯದಲ್ಲಿ ಸ್ವಂತ ಉದ್ಯೋಗ ಮಾಡುವುದು ನನಗೆ ಖುಷಿ ತಂದಿದೆ. ನಿಮ್ಮಂತಹ ಯುವ ಜನಾಂಗಕ್ಕೆ ಸಹಾಯವಾಗಲಿ ಎನ್ನುವ ಮೂಲ ಹಾಗೂ ಮುಖ್ಯ ಉದ್ದೇಶದಿಂದ ಕೇಂದ್ರ ಸರ್ಕಾರ ‘ಮುದ್ರಾ’ ಯೋಜನೆಯನ್ನು ಬ್ಯಾಂಕುಗಳ ಮುಖಾಂತರ ಜಾರಿಗೆ ತಂದಿದೆ (Micro Units Development Refinance Agency) ಈ ಯೋಜನೆಯಲ್ಲಿ ಮೂರು ವಿಧಗಳಿವೆ.

ಈ ಯೋಜನೆ 2015–16ನೇ ಬಜೆಟ್‌ನಿಂದ ಪ್ರಾರಂಭವಾಗಿದೆ. ಈ ವರ್ಷದ ಬಜೆಟ್ಟಿನಲ್ಲಿ ಕೂಡಾ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ. ಬಡ್ಡಿ ದರ ಶೇ 12. ಎಲ್ಲಾ ಬ್ಯಾಂಕುಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಜೊತೆಗೆ ಎಲ್ಲಾ ಬ್ಯಾಂಕುಗಳಲ್ಲಿ ಸಾಲ ನೀಡುವ ಅಥವಾ ಇತರೆ ವಿಚಾರ ಒಂದೇ ಇರುತ್ತದೆ. ನೀವು ತರುಣ್ ಯೋಜನೆ ಅಡಿಯಲ್ಲಿ ₹ 3 ಲಕ್ಷ ಸಾಲ ಪಡೆಯಿರಿ. ಕಂಪ್ಯೂಟರ್ ಅಥವಾ ಇನ್ನಿತರ ಯಂತ್ರೋಪಕರಣ ಕೊಳ್ಳಲು ಬ್ಯಾಂಕ್ ಸಹಾಯ ಮಾಡುತ್ತದೆ. ಇಂತಹ ಉಪಕರಣ ಕೊಳ್ಳುವಾಗ ನೀವು ಹಣ ನಗದಾಗಿ ಪಡೆಯುವಂತಿಲ್ಲ.

ಉಪಕರಣ ಅಥವಾ ಮಷಿನ್‌ ಒದಗಿಸುವ ಸಂಸ್ಥೆಗಳಿಗೆ ಬ್ಯಾಂಕ್ ಡಿಡಿ ಮುಖಾಂತರ ಹಣ ರವಾನಿಸಿ, ನೇರವಾಗಿ ನಿಮಗೆ ಉಪಕರಣ ಅಥವಾ ಮಷಿನರಿಗಳು ಸಿಗುವಂತೆ ಮಾಡುತ್ತವೆ. ಇಂತಹ ಸರಕುಗಳನ್ನು ನೀವು ಬ್ಯಾಂಕಿಗೆ ತೋರಾಧಾರ (Hypothication) ಮಾಡಿಕೊಡಬೇಕು. ನಿಮಗೊಂದು ಕಿವಿ ಮಾತು. ಸರ್ಕಾರ ಹಾಗೂ ಸಾಲ ಕೊಡುವ ಬ್ಯಾಂಕು ನಿಮ್ಮ ಸ್ವಂತ ಉದ್ಯೋಗಕ್ಕಾಗಿ ಆರ್ಥಿಕ ಸಹಾಯ ನೀಡುವಾಗ, ಮುಖ್ಯವಾಗಿ ಈ ಸೌಲತ್ತು ನಿಮ್ಮಂತಹ ಯುವ ಜನರು ಸದ್ಭಳಕೆ ಮಾಡಿಕೊಂಡು, ಶ್ರಮ ವಹಿಸಿ ಕಷ್ಟಪಟ್ಟು ದುಡಿದು, ನೀವೂ ಜೀವನದಲ್ಲಿ ಮುಂದೆ ಬಂದು ದೇಶದ ಉತ್ತಮ ಪ್ರಜೆಯಾಗಬೇಕು. ಸಕಾಲದಲ್ಲಿ ಸಾಲದ ಕಂತು ಬಡ್ಡಿ ಬ್ಯಾಂಕಿಗೆ ಸಲ್ಲಿಸಬೇಕು, ಈ ವಿಚಾರ ಗಮನದಲ್ಲಿಟ್ಟು ಸತ್ಯ ಧರ್ಮದಿಂದ ಕೆಲಸ ಮಾಡಿರಿ. ನಿಮ್ಮ ಹೊಸ ಸಾಹಸದಲ್ಲಿ (New Venture) ದೇವರು ನಿಮಗೆ ಯಶಸ್ಸನ್ನು ಕೊಡಲಿ ಎಂದು ಹಾರೈಸುತ್ತೇನೆ.

**

ಹೆಸರು ಬೇಡ, ಬೆಂಗಳೂರು

* ನಾನು ಗೃಹಿಣಿ ಹಾಗೂ ಹಿರಿಯ ನಾಗರಿಕಳು. ನನ್ನ ಗಂಡ ನಿವೃತ್ತ ಸರ್ಕಾರಿ ನೌಕರರು. ನನ್ನ ತಂದೆಯ ಮನೆಯಲ್ಲಿ ಕೊಟ್ಟ ಬಂಗಾರ ಮಾರಾಟ ಮಾಡಿ, ವಿಜಯನಗರ ಜನತಾ ಸೇವಾ ಕೋ ಆಪರೇಟಿವ್‌ ಬ್ಯಾಂಕಿನಲ್ಲಿ ₹ 25 ಲಕ್ಷ ಶೇ 9.50 ಬಡ್ಡಿ ದರದಲ್ಲಿ ಠೇವಣಿಯಾಗಿರಿಸಿದ್ದೇನೆ. ಬ್ಯಾಂಕಿಗೆ 15ಎಚ್‌ ಸಲ್ಲಿಸಿದ್ದೇನೆ. ಪ್ಯಾನ್‌ ಕಾರ್ಡು ಸಲ್ಲಿಸಿದ್ದೇನೆ. ನನಗೆ ಆದಾಯ ತೆರಿಗೆ ಬರುತ್ತದೆಯೇ, ಹಾಗೂ ಎಷ್ಟು ಬಡ್ಡಿ ಬರುವ ತನಕ ತೆರಿಗೆ ಬರುವುದಿಲ್ಲ ತಿಳಿಸಿರಿ. ಈ ಠೇವಣಿಯಿಂದ ಒಂದು ರೂಮು ಇರುವ ಮನೆ ಖರೀದಿಸಬೇಕೆಂದಿದ್ದೇನೆ.   ಬೆಂಗಳೂರು ಇಲ್ಲವೇ ಮೈಸೂರಿನಲ್ಲಿ ಭೋಗ್ಯಕ್ಕೆ ಮನೆ ಪಡೆಯುವುದು ಲೇಸೇ ತಿಳಿಸಿರಿ. ನಾವು ಮಗನ ಮನೆಯಲ್ಲಿದ್ದೇವೆ. ನನಗೆ ನಿಮ್ಮ ಉತ್ತಮ ಸಲಹೆ ಬೇಕಾಗಿದೆ.

ಉತ್ತರ: ನೀವು ವಾರ್ಷಿಕವಾಗಿ ₹ 25 ಲಕ್ಷ ಠೇವಣಿಯ ಮೇಲೆ ₹ 2,37,500 ಬಡ್ಡಿ ವರಮಾನ ಪಡೆಯುತ್ತಿದ್ದು, ನೀವು ಹಿರಿಯ ನಾಗರಿಕರಾದ್ದರಿಂದ ನಿಮಗೆ ಬೇರಾವ ಆದಾಯ ಇಲ್ಲದಿರುವಲ್ಲಿ, ಈ ಬಡ್ಡಿ ಆದಾಯಕ್ಕೆ ಸಂಪೂರ್ಣ ಆದಾಯ ತೆರಿಗೆ ವಿನಾಯ್ತಿ ಇದೆ. ಹೀಗೆ ಗರಿಷ್ಠ ವಾರ್ಷಿಕ ಬಡ್ಡಿ ₹ 3 ಲಕ್ಷ ಬರುವ ತನಕ ನಿಮಗೆ ತೆರಿಗೆ ಬರುವುದಿಲ್ಲ. ₹ 25 ಲಕ್ಷದಿಂದ ಸಣ್ಣ ಸ್ಥಿರ ಆಸ್ತಿ ಅಂದರೆ ಒಂದು ಕೋಣೆ ಇರುವ ಮನೆ ಬೆಂಗಳೂರಿನಲ್ಲಿ ಸಿಗಲಾರದು. ಎಷ್ಟು ದಿವಸ ಸಾಧ್ಯವೋ ಅಷ್ಟು ದಿವಸ ಮಗನ ಮನೆಯಲ್ಲಿ ವಾಸವಾಗಿದ್ದು ಮುಂದೆ ನೀವು ಬಯಸಿದಂತೆ ಭೋಗ್ಯಕ್ಕೆ ಮನೆ ಪಡೆದು ಸುಖವಾಗಿ ಬಾಳಿರಿ. ಸದ್ಯದ ಪರಿಸ್ಥಿತಿಯಲ್ಲಿ ನಿಮಗೆ ತೆರಿಗೆ ಭಯ ಇರುವುದಿಲ್ಲ.

**

ಹೆಸರು, ಊರು, ಬೇಡ

* ನನ್ನ ಗೆಳೆಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿ.ಇ. ಓದುತ್ತಿದ್ದಾಗ ಆತ ಬ್ಯಾಂಕ್‌ ಒಂದರಲ್ಲಿ ಶಿಕ್ಷಣ ಸಾಲ ಪಡೆದಿದ್ದ. ದುರಾದೃಷ್ಟದಿಂದ ಆತ ಬಿ.ಇ. ಎರಡನೇ ವರ್ಷ ಸಾವನ್ನಪ್ಪಿದ್ದಾನೆ. ಈಗ ಆತನ ಸಾಲ ಮನ್ನಾ ಆಗಬಹುದೇ ತಿಳಿಸಿರಿ.

ಉತ್ತರ: ಹೆಚ್ಚಿನ ಬ್ಯಾಂಕುಗಳು ಗೃಹ ಸಾಲ ಹಾಗೂ ಶಿಕ್ಷಣ ಸಾಲ ವಿತರಿಸುವಾಗ ಸಾಲದ ಮೊತ್ತ ಪರಿಗಣಿಸಿ ಸಾಲಗಾರರ ಹೆಸರಿನಲ್ಲಿ ವಿಮೆ ಇಳಿಸುತ್ತಾರೆ. ನಿಮ್ಮ ಗೆಳೆಯನ ಹೆಸರಿನಲ್ಲಿ ವಿಮೆ ಇಳಿಸಿರುವ ಸಾಧ್ಯತೆ ಇದೆಯೇ ಎಂದು ವಿಚಾರಿಸಿರಿ. ಯಾವುದೇ ಸಾಲ ವ್ಯಕ್ತಿಯ ಸಾವಿನಿಂದ ಮನ್ನಾ ಆಗುವ ಯೋಜನೆ ಬ್ಯಾಂಕುಗಳಲ್ಲಿ ಇರುವುದಿಲ್ಲ. ಇದೇ ವೇಳೆ ವಾರಸುದಾರರು ಅಂತಹ ಸಾಲ ಮರುಪಾವತಿಸುವಲ್ಲಿ, ಸಾಲದ ಬಡ್ಡಿಯಲ್ಲಿ ಸ್ವಲ್ಪ ಬಿಡಬಹುದು.  ಕೆಲವೊಮ್ಮೆ ಅಸಲಿನಲ್ಲಿಯೂ ಸ್ವಲ್ಪ ಬಿಡಬಹುದು. ಇದನ್ನು One Time Settlement ಎನ್ನುತ್ತಾರೆ. ಬ್ಯಾಂಕಿನಲ್ಲಿ ವಿಚಾರಿಸಿರಿ.

**

ನಾಗೇಂದ್ರ, ಧಾರವಾಡ

* ನಾನು ಕೇಂದ್ರ ಸರ್ಕಾರದ ನೌಕರ. ತಿಂಗಳ ಸಂಬಳ ₹ 35,000 ನನ್ನ ವಾರ್ಷಿಕ ಉಳಿತಾಯ ಹೀಗಿದೆ. ಎಲ್‌ಐಸಿ ಜೀವನ ಆನಂದ ₹ 72,000 ಎನ್‌.ಪಿ.ಎಸ್‌. ₹ 28,000. ನನ್ನ ಪ್ರಶ್ನೆ ಏನೆಂದರೆ ಫಾರಂ ನಂ. 16 ರಲ್ಲಿ ಎನ್‌.ಪಿ.ಎಸ್‌. ಸರ್ಕಾರಿ ಕಾಂಟ್ರಿಬ್ಯೂಷನ್‌ ಕೂಡಾ ಒಟ್ಟು ಆದಾಯದಲ್ಲಿ ಸೇರಿಸಿರುತ್ತಾರೆ. ಹಾಗೆಯೇ ಆದಾಯ ತೆರಿಗೆ ಉಳಿಸಲು ಯಾವ ಸೆಕ್ಷನ್‌ನಲ್ಲಿ ಎಷ್ಟು ಹೇಗೆ ಉಳಿತಾಯ ಮಾಡಬಹುದು. ದಯಮಾಡಿ ವಿವರಿಸಿರಿ.

ಉತ್ತರ: ಫಾರಂ ನಂ. 16ರಲ್ಲಿ ಸರ್ಕಾರದ ಕಾಂಟ್ರಿಬ್ಯುಷನ್‌ ಸೇರಿಸಿ ಕೊಟ್ಟಿರುವುದು ಸರಿ ಇರುತ್ತದೆ. ಸೆಕ್ಷನ್‌ 80ಸಿ ಆಧಾರದ ಮೇಲೆ ಎಲ್‌ಐಸಿ ಪ್ರೀಮಿಯಮ್‌ ಹಣ, ಪಿ.ಎಫ್‌., ಪಿ.ಪಿ.ಎಫ್‌., ಎನ್‌.ಎಸ್‌.ಸಿ., ಇ.ಎಲ್‌.ಎಸ್‌.ಎಸ್‌., ಎರಡು ಮಕ್ಕಳ ತನಕ ಸ್ಕೂಲ್‌ ಫೀಸ್‌, ಗೃಹ ಸಾಲದ ಕಂತು, 5 ವರ್ಷಗಳ ಬ್ಯಾಂಕ್‌ ಠೇವಣಿ ಇವುಗಳಲ್ಲಿ ಗರಿಷ್ಠ ₹ 1.50 ಲಕ್ಷ ವಾರ್ಷಿಕವಾಗಿ ಉಳಿಸಿ ಒಟ್ಟು ಆದಾಯದಿಂದ ಕಳೆಯಬಹುದು. ಇದು ಹೊರತಾಗಿ ಸೆಕ್ಷನ್‌ 80 CCD (1B) ನ್ಯಾಷನಲ್‌ ಪೆನ್ಶನ್‌ ಸ್ಕೀಮ್‌ನಲ್ಲಿ ವಾರ್ಷಿಕವಾಗಿ ಗರಿಷ್ಠ ₹ 50,000 ತೊಡಗಿಸಿ.

ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಇನ್ನು ಆರೋಗ್ಯ ವಿಮೆಯಲ್ಲಿ ಗರಿಷ್ಠ (80ಡಿ) ₹ 25,000 (ತಾ. 1–4–2018ರ ನಂತರ ₹ 30,000) ಕಂತು ತುಂಬಿ ವಿನಾಯ್ತಿ ಪಡೆಯಬಹುದು. ಶಿಕ್ಷಣ ಸಾಲ ಪಡೆದಲ್ಲಿ ಸೆಕ್ಷನ್‌ 80ಇ ಆಧಾರದ ಮೇಲೆ ಸಾಲದ ಬಡ್ಡಿಗೆ ಸಂಪೂರ್ಣ ವಿನಾಯ್ತಿ ಇದೆ. ಉಳಿತಾಯ ಖಾತೆಯಲ್ಲಿ ಪಡೆಯುವ ಬಡ್ಡಿ (Section 80TTA) ಆಧಾರದ ಮೇಲೆ ಗರಿಷ್ಠ ವಾರ್ಷಿಕ ₹ 10,000 ತೆರಿಗೆ ವಿನಾಯ್ತಿ ಹೊಂದಿದೆ.

**

ಆರ್‌.ಎಸ್‌. ಹೆಗಡೆ, ಸಿರ್ಸಿ

* ನಾನು ನಿವೃತ್ತ ಹಿರಿಯ ನಾಗರಿಕ. ನನ್ನ ವಾರ್ಷಿಕ ಆದಾಯ ಎಲ್ಲಾ ಕಡಿತದ ಬಳಿಕ ₹ 6,35,350. ಈ ಆದಾಯದಲ್ಲಿ ₹ 3 ಲಕ್ಷ ಕಳೆದು ಉಳಿದ ಆದಾಯಕ್ಕೆ ಮಾತ್ರ ತೆರಿಗೆ ಸಲ್ಲಿಸಬಹುದೇ ತಿಳಿಸಿರಿ. ಅಥವಾ ಪೂರ್ಣ ಆದಾಯಕ್ಕೆ ತೆರಿಗೆ ಸಲ್ಲಿಸಬೇಕೇ ತಿಳಿಸಿರಿ. ಅಂದರೆ ನನ್ನ ಆದಾಯ ₹ 3,00,100 ಆಗಿದ್ದಲ್ಲಿ ₹ 100ಕ್ಕೆ ಮಾತ್ರ ಆದಾಯಕರ ಕೊಡಬೇಕಲ್ಲವೇ?

ಉತ್ತರ: ಹಿರಿಯ ಅಥವಾ ಕಿರಿಯ ನಾಗರಿಕರಲ್ಲಿ ಅವರಿಗೆ ಎಷ್ಟು ಆದಾಯವಿದ್ದರೂ, ಕೇಂದ್ರ ಸರ್ಕಾರ ಸಾದರಪಡಿಸಿದ ಮಿತಿ ದಾಟಿದಾಗ ಮಾತ್ರ ಆ ಮೊತ್ತಕ್ಕೆ ತೆರಿಗೆ ಕೊಡಬೇಕಾಗುತ್ತದೆ. ನೀವು ತಿಳಿಸಿದ ಉದಾಹರಣೆ ಸರಿ ಇದೆ. ಮಿತಿ ದಾಟಿದಾಗ ಕೂಡಾ, ಸೆಕ್ಷನ್‌ 80ಸಿ ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಉಳಿತಾಯ ಮಾಡಿ ಅಥವಾ ಇನ್ನಿತರ ಯೋಜನೆಗಳಲ್ಲಿ (ಸೆಕ್ಷನ್‌ CCD(1B) ಸೆಕ್ಷನ್‌ 80ಡಿ ಹೀಗೆ) ತೊಡಗಿಸಿ ತೆರಿಗೆ ವಿನಾಯ್ತಿ ಪಡೆಯಬಹುದು.

ಒಟ್ಟಿನಲ್ಲಿ ಪ್ರಥಮವಾಗಿ ಆದಾಯದ ಮಿತಿ (₹ 2.50 ಇತರರಿಗೆ, ಹಿರಿಯ ನಾಗರಿಕರಿಗೆ ₹ 3 ಲಕ್ಷ ಮತ್ತು 80 ದಾಟಿದವರಿಗೆ ₹ 5 ಲಕ್ಷ) ಒಟ್ಟು ಆದಾಯದಲ್ಲಿ ಕಳೆದೇ ತೆರಿಗೆ ಲೆಕ್ಕ ಹಾಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT