ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಗೆ ಮರಣ ಇಚ್ಛೆಯ ಉಯಿಲು

Last Updated 13 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಆತ್ಮಹತ್ಯೆಗೆ ಯತ್ನಿಸುವುದು ಮತ್ತು ಅದಕ್ಕೆ ಪ್ರಚೋದನೆ ನೀಡುವುದು ಅಪರಾಧ ಎನ್ನುತ್ತವೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 309 ಮತ್ತು 306. ‘ಇದೊಂದು ಬಗೆಯಲ್ಲಿ ವಿಚಿತ್ರವಾದ ಕಾನೂನು- ಆತ್ಮಹತ್ಯೆ ಯತ್ನ ಸಫಲವಾದರೆ ಶಿಕ್ಷೆ ಇಲ್ಲ (ಅಂದರೆ, ಶಿಕ್ಷಿಸಲು ವ್ಯಕ್ತಿಯೇ ಇರುವುದಿಲ್ಲ). ಆದರೆ, ಈ ಯತ್ನದಲ್ಲಿ ವಿಫಲನಾದವ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ವಕೀಲೆ ಜಿಯಾ ಮೋದಿ ಬರೆದಿದ್ದಾರೆ. ‘ಐಪಿಸಿಯ 309ನೇ ಸೆಕ್ಷನ್‌ ತೀರಾ ಕಠೋರವಾಗಿದೆ, ಇದು ಸಮರ್ಥನೀಯವಲ್ಲ’ ಎಂದು ಕೇಂದ್ರ ಕಾನೂನು ಆಯೋಗ 1971ರಲ್ಲಿಯೇ ಹೇಳಿದ್ದರೂ, ಈ ಸೆಕ್ಷನ್ ನಮ್ಮ ಕಾನೂನಿನ ಭಾಗವಾಗಿ ಉಳಿದಿದೆ.

ಸಂವಿಧಾನದ 21ನೇ ವಿಧಿಯು ಜೀವಿಸುವ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತದೆ. ಘನತೆಯಿಂದ ಬದುಕುವುದು ಪ್ರಜೆಯ ಮೂಲಭೂತ ಹಕ್ಕು ಎಂದು ಇದು ಹೇಳಿದೆ. ಈ ವಿಧಿಯನ್ನು ನಮ್ಮ ನ್ಯಾಯಾಲಯಗಳು ಹಲವು ರೀತಿಗಳಲ್ಲಿ ಅರ್ಥೈಸಿವೆ. ಮಾನನಷ್ಟಕ್ಕೆ ಸಂಬಂಧಿಸಿದ ಪ್ರಕರಣಗಳಿಂದ ಆರಂಭಿಸಿ, ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ಪ್ರಕರಣಗಳವರೆಗೆ ಈ ವಿಧಿಯ ಅರ್ಥೈಸುವಿಕೆ ನಡೆದಿದೆ. ದಯಾಮರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಕಳೆದ ವಾರ ನೀಡಿದ ತೀರ್ಪಿನಲ್ಲೂ ಈ ವಿಧಿಯ ಬಗ್ಗೆ ಸಾಕಷ್ಟು ಚರ್ಚೆ ಇದೆ. ‘ಘನತೆಯಿಂದ ಜೀವಿಸುವ ಸ್ವಾತಂತ್ರ್ಯ’ ಎಂಬ ಸ್ವಾತಂತ್ರ್ಯದ ಅಡಿಯಲ್ಲಿ ‘ಘನತೆಯಿಂದ ಸಾಯುವ ಸ್ವಾತಂತ್ರ್ಯ’ ಕೂಡ ಸೇರಿಕೊಂಡಿದೆ ಎಂದು ಐದು ಜನ ನ್ಯಾಯಮೂರ್ತಿಗಳ ಸಂವಿಧಾನ ಪೀಠ ಸ್ಪಷ್ಟಪಡಿಸಿದೆ. ಈ ತೀರ್ಪಿನಲ್ಲೇ ಸುಪ್ರೀಂ ಕೋರ್ಟ್‌, ‘ಮರಣ ಇಚ್ಛೆಯ ಉಯಿಲು’ ಕಾನೂನುಬದ್ಧ ಎಂದು ಹೇಳಿದೆ. ಭಾರತದ ಮಟ್ಟಿಗೆ ಈ ತೀರ್ಪು ಐತಿಹಾಸಿಕ. ಇದರ ವಿವಿಧ ಮಜಲುಗಳನ್ನು ಹೇಳುವ ಸುದ್ದಿ ವಿವರಣೆ ಇಲ್ಲಿದೆ.

* ಆತ್ಮಹತ್ಯೆ ನಮ್ಮಲ್ಲಿ ಅಪರಾಧವಾಗಿದ್ದರೂ, ‘ಸಾಯುವ ಹಕ್ಕನ್ನು’ ಈ ಹಿಂದೆ ಕೋರ್ಟ್‌ಗಳು ಚರ್ಚಿಸಿವೆಯೇ?
ಹೌದು, 1985ರಲ್ಲಿ ಬಾಂಬೆ ಹೈಕೋರ್ಟ್‌ ನೀಡಿದ ಒಂದು ಆದೇಶದಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರು ಸರ್ಕಾರದ ಅಧಿಕಾರಿಗಳ ನಿಷ್ಕ್ರಿಯತೆಯಿಂದ ಬೇಸತ್ತು ತಮಗೆ ತಾವೇ ಬೆಂಕಿ ಹಚ್ಚಿಕೊಂಡು ಸಾಯಲು ಯತ್ನಿಸಿದರು. ಅವರ ವಿರುದ್ಧ ಕ್ರಿಮಿನಲ್ ಆರೋಪ ಹೊರಿಸಿದಾಗ, ಅವರು ಐಪಿಸಿಯ 309ನೇ ಸೆಕ್ಷನ್‌ ಅನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ಈ ಪ್ರಕರಣದಲ್ಲಿ ನೀಡಿದ ಆದೇಶದಲ್ಲಿ ಕೋರ್ಟ್‌, ‘ಸಾಯುವ ಬಯಕೆ ಉಂಟಾಗುವುದರಲ್ಲಿ ಅಸಹಜವಾದುದು ಏನೂ ಇಲ್ಲ. ಹಾಗಾಗಿ ಸಾಯುವ ಹಕ್ಕಿನಲ್ಲಿಯೂ ಅಸಹಜತೆ ಇಲ್ಲ’ ಎಂದು ಹೇಳಿತ್ತು (ಮಾರುತಿ ಶ್ರೀಪತಿ ದುಬಾಲ್ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಣ ಪ್ರಕರಣ). ‘ಸಂವಿಧಾನ ನೀಡಿರುವ ಜೀವಿಸುವ ಸ್ವಾತಂತ್ರ್ಯದ ಅಡಿಯಲ್ಲಿ ಜೀವನವನ್ನು ಕೊನೆಗೊಳಿಸಿಕೊಳ್ಳುವ ಹಕ್ಕು ಕೂಡ ಇದೆ’ ಎಂದು ಬಾಂಬೆ ಹೈಕೋರ್ಟ್‌ ತೀರ್ಮಾನಿಸಿತ್ತು. ಈ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ ಮುಂದೊಂದು ದಿನ ರದ್ದುಪಡಿಸಿತು.

* ಅರುಣಾ ಶಾನ್‌ಭಾಗ್ ಪ್ರಕರಣದಲ್ಲಿ ದಯಾಮರಣಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆ ಏನು?
ಸಂವಿಧಾನದ 21ನೇ ವಿಧಿಯ ಅನುಸಾರ ‘ಸಾಯುವ ಹಕ್ಕು’ (ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಹಕ್ಕು) ಯಾರಿಗೂ ಇಲ್ಲ. ಆತ್ಮಹತ್ಯೆಗೆ ಯತ್ನಿಸುವುದು ಐಪಿಸಿಯ 309ನೇ ಸೆಕ್ಷನ್‌ ಅನ್ವಯ ಅಪರಾಧ. ಆದರೆ, ಗುಣಪಡಿಸಲಾಗದ ಕಾಯಿಲೆಗೆ ತುತ್ತಾದವರಿಗೆ, ಅವರು ಸಾಯುವುದು ಖಚಿತ ಎಂಬಂತಹ ಸ್ಥಿತಿ ಎದುರಾದಾಗ ದಯಾಮರಣಕ್ಕೆ (passive euthanasia) ಅವಕಾಶ ಕಲ್ಪಿಸಬಹುದು. ಹಾಗೆಯೇ, ಜೀವಚ್ಛವದಂತೆ ಆದವರಿಗೆ (Permanent Vegetative State) ಕೂಡ ದಯಾಮರಣ ಕಲ್ಪಿಸಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿತು. ‘ರೋಗಿ ತನಗೆ ದಯಾಮರಣ ಕಲ್ಪಿಸಬೇಕು ಎಂದು ಹೇಳುವ ಸ್ಥಿತಿಯಲ್ಲಿ ಇಲ್ಲದಿದ್ದಾಗ ಆತನ ತಂದೆ–ತಾಯಿ, ಹತ್ತಿರದ ಸಂಬಂಧಿಗಳು, ವೈದ್ಯರ ಅಭಿಪ್ರಾಯಕ್ಕೆ ಬೆಲೆ ಕೊಡಬೇಕು. ಆದರೆ, ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ನ್ಯಾಯಾಲಯಕ್ಕೆ ಮಾತ್ರ ಇದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿತು.

* ದಯಾಮರಣದಲ್ಲಿ ಎಷ್ಟು ವಿಧ?
ದಯಾಮರಣ ಅಂದರೆ ಉದ್ದೇಶಪೂರ್ವಕವಾಗಿ ಮನುಷ್ಯನ ಜೀವವನ್ನು ಕೊನೆಗೊಳಿಸುವುದು. ಇದರಲ್ಲಿ ಮುಖ್ಯವಾಗಿ ಎರಡು ವಿಧಗಳು. ಮೊದಲನೆಯದು ಚುಚ್ಚುಮದ್ದಿನ ಮೂಲಕ ವಿಷವನ್ನು ವ್ಯಕ್ತಿಯ ದೇಹದೊಳಕ್ಕೆ ಕಳುಹಿಸಿ, ಆತ ನೋವಿಲ್ಲದೆ ಸಾಯುವಂತೆ ಮಾಡುವುದು (active euthanasia). ಈ ಬಗೆಯ ದಯಾಮರಣಕ್ಕೆ ಭಾರತದ ಕಾನೂನಿನಲ್ಲಿ ಎಳ್ಳಷ್ಟೂ ಅವಕಾಶ ಇಲ್ಲ. ಎರಡನೆಯದು, ಜೀವರಕ್ಷಕ ಉಪಕರಣಗಳನ್ನು ತೆಗೆಯುವ ಅಥವಾ ಔಷಧಿಗಳನ್ನು ನಿಲ್ಲಿಸುವ ಮೂಲಕ ವ್ಯಕ್ತಿಗೆ ಸಾವು ಬರುವಂತೆ ಮಾಡುವುದು(passive euthanasia). ಅರುಣಾ ಶಾನ್‌ಭಾಗ್‌ ಪ್ರಕರಣದಲ್ಲಿ ಚರ್ಚೆಯಾಗಿದ್ದು, ಕೋರ್ಟ್‌ ಮಾನ್ಯ ಮಾಡಿದ್ದು ಇದನ್ನೇ. ಈ ದಯಾಮರಣದಲ್ಲೂ ಕೋರ್ಟ್‌ ಎರಡು ವಿಧಗಳನ್ನು ಗುರುತಿಸಿದೆ: ವ್ಯಕ್ತಿಯು ಹಲವು ಕಾರಣಗಳಿಂದಾಗಿ ತಾನಾಗಿಯೇ ದಯಾಮರಣವನ್ನು ಕೇಳುವುದು ಒಂದನೆಯದು. ಕೋಮಾ ಅಥವಾ ಜೀವಚ್ಛವದಂತಾದ ವ್ಯಕ್ತಿಗೆ ದಯಾಮರಣ ನೀಡಬಹುದು ಎಂದು ಇನ್ನೊಬ್ಬರು ಹೇಳುವುದು.

* ಚಿಕಿತ್ಸೆ ನಿರಾಕರಿಸುವ ಹಕ್ಕು ಭಾರತೀಯರಿಗೆ ಇದೆಯೇ?
ಮಾನಸಿಕವಾಗಿ ಆರೋಗ್ಯವಂತನಾಗಿರುವ ವಯಸ್ಕ ವ್ಯಕ್ತಿಗೆ ಚಿಕಿತ್ಸೆಯನ್ನು ನಿರಾಕರಿಸುವ ಹಕ್ಕು ಇದೆ. ಈ ಹಕ್ಕು ಮತ್ತು ಆತ್ಮಹತ್ಯೆಯ ನಡುವೆ ವ್ಯತ್ಯಾಸವಿದೆ. ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿರುವ ವ್ಯಕ್ತಿ ಚಿಕಿತ್ಸೆ ಪಡೆಯಲು ನಿರಾಕರಿಸುವುದನ್ನು ದಯಾಮರಣ ಎನ್ನಲಾಗದು, ಆತ್ಮಹತ್ಯೆ ಎನ್ನಲೂ ಆಗದು. ಚಿಕಿತ್ಸೆಯನ್ನು ನಿರಾಕರಿಸುವ ಹಕ್ಕು ಚಲಾಯಿಸುವ ವ್ಯಕ್ತಿಯಲ್ಲಿ ಸಾಯುವ ನಿರ್ದಿಷ್ಟ ಉದ್ದೇಶ ಇರುವುದಿಲ್ಲ. ಬದಲಿಗೆ ಈ ಹಕ್ಕು ವ್ಯಕ್ತಿಯನ್ನು ಇಷ್ಟವಿಲ್ಲದ ಚಿಕಿತ್ಸೆ ಪಡೆಯುವುದರಿಂದ ರಕ್ಷಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಕಳೆದ ವಾರ ನೀಡಿದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಈ ಸ್ಪಷ್ಟನೆ ನೀಡಿದ ನಂತರ ಕೋರ್ಟ್‌, ‘ಘನತೆಯಿಂದ ಜೀವಿಸುವ ಸ್ವಾತಂತ್ರ್ಯ ಮಾತ್ರವೇ ಅಲ್ಲ, ಘನತೆಯಿಂದ ಸಾಯುವ ಸ್ವಾತಂತ್ರ್ಯವೂ 21ನೇ ವಿಧಿಯ ಅವಿಭಾಜ್ಯ ಅಂಗ’ ಎಂದು ಹೇಳಿದೆ. ‘ಸಂವಿಧಾನದ 21ನೇ ವಿಧಿಯನ್ನು ವ್ಯಾಖ್ಯಾನಿಸುವ ರೀತಿ ವಿಸ್ತೃತವಾಗಬೇಕು. ವ್ಯಕ್ತಿಯೊಬ್ಬ ಜೀವಚ್ಛವದಂತೆ ಆದಾಗ ಅಥವಾ ಕೃತಕ ವ್ಯವಸ್ಥೆಯನ್ನು ಅವಲಂಬಿಸಿ ಬದುಕುಳಿದಿರುವಾಗ, ಘನತೆಯಿಂದ ಬದುಕುವ ಸ್ವಾತಂತ್ರ್ಯವು ಸಾಯುವ ಪ್ರಕ್ರಿಯೆಯನ್ನು ಸಹನೀಯ ಮಾಡುವುದನ್ನೂ ಒಳಗೊಳ್ಳಬೇಕು. ಈ ಮಾತನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಹೇಳಬೇಕು’ ಎಂದೂ ಪೀಠ ಸ್ಪಷ್ಟಪಡಿಸಿದೆ.

* ಮರಣ ಇಚ್ಛೆಯ ಉಯಿಲಿನ ಬಗ್ಗೆ ಕೋರ್ಟ್‌ ಹೇಳಿರುವುದೇನು?
ಚಿಕಿತ್ಸೆಯನ್ನು ನಿರಾಕರಿಸುವ, ಯಾವ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಅಥವಾ ನೀಡಬಾರದು ಎಂಬ ಕುರಿತ ನಿರ್ದೇಶನವನ್ನು ವ್ಯಕ್ತಿಯೊಬ್ಬ ಮೊದಲೇ ಬರೆದಿಡಲು ಕೆಲವು ದೇಶಗಳಲ್ಲಿ ಅವಕಾಶ ಇದೆ. ಆದರೆ, ಇಂತಹ ಉಯಿಲು ಬರೆದಿಡಲು ಅಗತ್ಯವಿರುವ ಕಾನೂನಿನ ಚೌಕಟ್ಟು ನಮ್ಮ ದೇಶದಲ್ಲಿ ಇನ್ನೂ ರೂಪುಗೊಂಡಿಲ್ಲ. ಹೀಗಿದ್ದರೂ, ‘ಪ್ರಜೆಗಳ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕೆಲಸ’ ಎಂದು ಕೋರ್ಟ್‌ ಹೇಳಿದೆ. ಈ ರೀತಿಯ ಉಯಿಲು ಬರೆಯಲು ಅವಕಾಶ ಕಲ್ಪಿಸುವುದರಿಂದ, ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ತಾವು ಕಾನೂನಿಗೆ ಅನುಗುಣವಾಗಿ ಕರ್ತವ್ಯ ನಿಭಾಯಿಸಿದ ತೃಪ್ತಿ ಸಿಗುತ್ತದೆ ಎಂದು ಪೀಠ ತೀರ್ಪಿನಲ್ಲಿ ಹೇಳಿದೆ. ಹೀಗೆ ಉಯಿಲು ಬರೆದಿಡಲು ನಿರ್ದಿಷ್ಟ ಮಾರ್ಗಸೂಚಿಗಳನ್ನು ಈಗ ಕೋರ್ಟ್‌ ಸಿದ್ಧಪಡಿಸಿದೆ.

* ಮರಣ ಇಚ್ಛೆಯ ಉಯಿಲನ್ನು ಯಾರು ಬರೆಯಬಹುದು?
ಉಯಿಲಿನ ಪರಿಣಾಮ ಏನಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಲ್ಲ , ಮಾನಸಿಕವಾಗಿ ಆರೋಗ್ಯವಾಗಿರುವಂತಹ ವಯಸ್ಕ ವ್ಯಕ್ತಿ ಮಾತ್ರ ಇದನ್ನು ಬರೆಯಬಹುದು. ಈ ಉಯಿಲು ಸಂಪೂರ್ಣವಾಗಿ ಸ್ವಯಂಪ್ರೇರಿತ ಆಗಿರಬೇಕು. ಪರಿಣಾಮಗಳ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ಇದನ್ನು ಬರೆದಿರಬೇಕು. ಉಯಿಲು ಬರಹದ ರೂಪದಲ್ಲಿ ಇರಬೇಕು, ವೈದ್ಯಕೀಯ ಚಿಕಿತ್ಸೆಯನ್ನು ಯಾವ ಹಂತದಲ್ಲಿ ಸ್ಥಗಿತಗೊಳಿಸಬಹುದು ಎಂಬುದು ಸ್ಪಷ್ಟವಾಗಿ ಇರಬೇಕು. ಇದಕ್ಕೆ ಇಬ್ಬರು ಸಾಕ್ಷಿಗಳ ಸಹಿ ಇರಬೇಕು, ಜೆಎಂಎಫ್‌ಸಿ ನ್ಯಾಯಾಧೀಶರು ಕೂಡ ಅದಕ್ಕೆ ಸಹಿ ಮಾಡಬೇಕು. ವ್ಯಕ್ತಿಯು ಉಯಿಲನ್ನು ಒತ್ತಡದಲ್ಲಿ ಬರೆದಿಲ್ಲ ಎಂಬ ಬಗ್ಗೆ ಸಾಕ್ಷಿಗಳು ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರು ತೃಪ್ತಿ ವ್ಯಕ್ತಪಡಿಸಬೇಕು. ಉಯಿಲಿನ ಒಂದು ಪ್ರತಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಇರಬೇಕು. ಜೆಎಂಎಫ್‌ಸಿ ನ್ಯಾಯಾಲಯವು ಈ ಉಯಿಲಿನ ಬಗ್ಗೆ ಬರೆದವನ ಅತ್ಯಂತ ಹತ್ತಿರದ ಸಂಬಂಧಿಕರಿಗೆ ಮಾಹಿತಿ ನೀಡಬೇಕು. ಇವು ಕೋರ್ಟ್‌ ಹೇಳಿರುವ ಪ್ರಮುಖ ಮಾರ್ಗಸೂಚಿಗಳು.

* ಉಯಿಲನ್ನು ಯಾರು ಜಾರಿಗೆ ತರಬಹುದು?
ಉಯಿಲು ಬರೆದಿರುವ ವ್ಯಕ್ತಿಯು ಮಾರಣಾಂತಿಕ ಕಾಯಿಲೆಗೆ ತುತ್ತಾದರೆ, ಆತ ಕಾಯಿಲೆಯ ಮುಷ್ಟಿಯಿಂದ ಹೊರಬರುವ ಸಾಧ್ಯತೆಯೇ ಇಲ್ಲವಾದರೆ, ಆತನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಉಯಿಲಿನ ಸತ್ಯಾಸತ್ಯತೆಯನ್ನು ಜೆಎಂಎಫ್‌ಸಿ ನ್ಯಾಯಾಲಯದಿಂದ ಖಚಿತಪಡಿಸಿಕೊಳ್ಳಬೇಕು. ಉಯಿಲು ಬರೆದಿಟ್ಟಿರುವ ವ್ಯಕ್ತಿ ಗುಣಮುಖನಾಗುವ ಸಾಧ್ಯತೆಯೇ ಇಲ್ಲ, ಆತ ಬಹುದೀರ್ಘ ಅವಧಿಯಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ, ಜೀವರಕ್ಷಕ ಸಾಧನಗಳ ಕಾರಣದಿಂದಾಗಿ ಆತ ಬದುಕಿದ್ದಾನೆ ಎಂಬುದನ್ನು ವೈದ್ಯರು ಖಚಿತಪಡಿಸಿಕೊಳ್ಳಬೇಕು. ವ್ಯಕ್ತಿಯ ಹತ್ತಿರದ ಸಂಬಂಧಿಕರಿಗೆ ಆತನ ಅನಾರೋಗ್ಯದ ಬಗ್ಗೆ, ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ, ಪರ್ಯಾಯ ಚಿಕಿತ್ಸೆಗಳ ಪರಿಣಾಮದ ಬಗ್ಗೆ, ಚಿಕಿತ್ಸೆ ಒದಗಿಸದೆ ಇದ್ದರೆ ಆಗುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಬೇಕು. ನಂತರ, ವೈದ್ಯರು ಕನಿಷ್ಠ ನಾಲ್ಕು ಜನ ವೈದ್ಯರಿರುವ ಸಮಿತಿಯೊಂದನ್ನು ರಚಿಸಬೇಕು. ಈ ಸಮಿತಿಯು ರೋಗಿಯನ್ನು ಪರಿಶೀಲಿಸಿ ಪ್ರಾಥಮಿಕ ವರದಿ ನೀಡಬೇಕು. ಉಯಿಲನ್ನು ಜಾರಿಗೆ ತರಬೇಕು ಎಂದು ಈ ಸಮಿತಿ ಅಭಿಪ್ರಾಯ ನೀಡಿದರೆ, ಅದನ್ನು ತಕ್ಷಣ ಜಿಲ್ಲಾಧಿಕಾರಿಯ ಗಮನಕ್ಕೆ ತರಬೇಕು. ಜಿಲ್ಲಾಧಿಕಾರಿಯು, ಜಿಲ್ಲಾ ಮುಖ್ಯ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಒಂದು ತಂಡ ರಚಿಸಬೇಕು. ಈ ತಂಡವು ಆಸ್ಪತ್ರೆಗೆ ಭೇಟಿ ನೀಡಿ, ರೋಗಿಯನ್ನು ಪರಿಶೀಲಿಸಿ, ಸಮಿತಿ ನೀಡಿದ ಅಭಿಪ್ರಾಯಕ್ಕೆ ತನ್ನ ಸಹಮತ ಸೂಚಿಸಬಹುದು. ಜಿಲ್ಲಾ ಮುಖ್ಯ ಆರೋಗ್ಯಾಧಿಕಾರಿಯು ತಮ್ಮ ತಂಡದ ಅಭಿಪ್ರಾಯವನ್ನು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ರವಾನಿಸಬೇಕು. ನಂತರ ಜೆಎಂಎಫ್‌ಸಿ ನ್ಯಾಯಾಧೀಶರು ಆದಷ್ಟು ಬೇಗ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ವೈದ್ಯರ ತಂಡ ನೀಡಿರುವ ಅಭಿಪ್ರಾಯದಂತೆ ದಯಾಮರಣ ಕಲ್ಪಿಸುವ ಅನುಮತಿ ನೀಡಬಹುದು. ಮರಣ ಇಚ್ಛೆಯ ಉಯಿಲನ್ನು ಯಾವುದೇ ಹಂತದಲ್ಲಿ ಬೇಕಿದ್ದರೂ ಹಿಂಪಡೆಯುವ ಅಧಿಕಾರ ಉಯಿಲು ಬರೆದವರಿಗೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT