ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತು ತರಬೇತಿ ಪಡೆಯಲು ರೈತರಿಗೆ ಸಲಹೆ

ರಾಮನಗರದಲ್ಲಿ ಮಾವು ಕೊಯ್ಲೋತ್ತರ ನಿರ್ವಹಣೆ ಹಾಗೂ ಮಾರುಕಟ್ಟೆ ಕುರಿತ ತರಬೇತಿ ಕಾರ್ಯಕ್ರಮ
Last Updated 14 ಮಾರ್ಚ್ 2018, 9:04 IST
ಅಕ್ಷರ ಗಾತ್ರ

ರಾಮನಗರ: ಮಾವಿನ ಗುಣಮಟ್ಟ ವೃದ್ಧಿಸಿ ರಫ್ತು ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ರೈತರು ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ.ಎಸ್.ವಿ. ಹಿತ್ತಲಮನಿ ಹೇಳಿದರು.

ಇಲ್ಲಿನ ಬಿಜಿಎಸ್ ಅಂಧರ ಶಾಲೆಯಲ್ಲಿ ಮಾವು ಬೆಳೆಯಲ್ಲಿ ಕೊಯ್ಲೋತ್ತರ ನಿರ್ವಹಣೆ ಹಾಗೂ ಮಾರುಕಟ್ಟೆ ಕುರಿತು ಮಂಗಳವಾರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಮನಗರ ಜಿಲ್ಲೆಯು ಮಾವು ಬೆಳೆಯಲ್ಲಿ ರಾಜ್ಯದಲ್ಲಿಯೇ ಎರಡನೆ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಮಾರುಕಟ್ಟೆಯ ಮಾಹಿತಿ ಕೊರತೆಯಿಂದ ಇಲ್ಲಿನ ರೈತರು ಗುಣಮಟ್ಟ ಕಾಪಾಡಲು ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ಈ ಹಿನ್ನೆಲೆ­ಯಲ್ಲಿ ತರಬೇತಿಯ ಅವಶ್ಯಕತೆ ಇದೆ ಎಂದರು.

ಮಾವಿನ ಕಾಯಿಯನ್ನು ಕೀಳುವುದು ಹೇಗೆ. ಕಟಾವು ಮಾಡಿದ ಉತ್ಪನ್ನವನ್ನು ಯಾವ ತಾಪಮಾನದಲ್ಲಿ ಸಂರಕ್ಷಣೆ ಮಾಡ­ಬೇಕು. ಹಣ್ಣಿನ ನೈಸರ್ಗಿಕ ಬಣ್ಣ ಬರಲು ಯಾವ ರೀತಿ ಇಡಬೇಕು. ವಿದೇಶಕ್ಕೆ ರಫ್ತು ಮಾಡಲು ಅನುಸರಿಸಬೇಕಾದ ಮಾನ­ದಂಡಗಳೇನು ಎಂಬಿತ್ಯಾದಿ ವಿಷಯಗಳ ಬಗ್ಗೆ ತರಬೇತಿ ಕಾರ್ಯಕ್ರಮಗಳಲ್ಲಿ ತಿಳಿದುಕೊಳ್ಳಬೇಕು. ನಂತರ ಇಲ್ಲಿ ತಿಳಿದುಕೊಂಡ ವಿಷಯಗಳನ್ನು ಗ್ರಾಮಗಳಲ್ಲಿನ ಇತರ ರೈತರಿಗೆ ತಿಳಿಸಬೇಕು ಎಂದರು.

ಹೆಚ್ಚಿನ ರೈತರು ಕಟಾ­ವಿಗೂ ಮುಂಚೆಯೇ ಇಡೀ ತೋಟವನ್ನು ವರ್ತಕರಿಗೆ ಗುತ್ತಿಗೆ ಕೊಟ್ಟುಬಿಡುತ್ತಾರೆ. ಅವರು ಸರಿಯಾಗಿ ಬೆಳೆಯದ ಮಾವನ್ನು ಮಾರುಕಟ್ಟೆಗೆ ತರುತ್ತಾರೆ. ಮಾವು ನೋಡಲು ಸುಂದರವಾಗಿ­ರುತ್ತದೆ. ಆದರೆ, ಹುಳಿ ಹುಳಿಯಾಗಿ­ರುತ್ತದೆ. ಮತ್ತೆ ಗ್ರಾಹಕ ಈ ಹಣ್ಣನ್ನು ಖರೀದಿ ಮಾಡುವುದಿಲ್ಲ. ಇಂತಹ ಹಣ್ಣಿಗೆ ಉತ್ತಮ ಬೆಲೆಯೂ ಸಿಗು­ವುದಿಲ್ಲ ಎಂದರು.

ರೈತರಿಗೆ ತರಬೇತಿ ನೀಡುವುದ­ರಿಂದ ಭವಿಷ್ಯದಲ್ಲಿ ಇಂತಹ ಪ್ರಮೇಯ ಎದುರಾಗದಂತೆ ಎಚ್ಚರ ವಹಿಸಬಹುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಪಿ. ರಾಜೇಶ್ ಮಾತನಾಡಿ, ರೈತರು ಕೃಷಿಯಲ್ಲಿ ವೈಜ್ಞಾನಿಕ ವಿಧಾನ ಅಳವಡಿಸಿ
ಕೊಳ್ಳಬೇಕು. ಜತೆಗೆ ಗುಣಮಟ್ಟದ ಹಣ್ಣುಗಳನ್ನು ಬೆಳೆಯಲು ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಕ್ಷ್ಮಣಸ್ವಾಮಿ ಮಾತನಾಡಿ, ತೋಟಗಾರಿಕೆ ಇಲಾಖೆ ವತಿಯಿಂದ ಮಾವು ಬೆಳೆಗಾರರಿಗೆ ಇರುವ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕು. ರೈತ ಸಮುದಾಯದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕು. ಮಾವು ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಿಕೊಡಬೇಕು ಎಂದರು.

ಪ್ರಗತಿಪರ ರೈತ ಬಿಳಗುಂಬ ವಾಸು ಮಾತನಾಡಿ, ಸರ್ಕಾರಿ ಇಲಾಖೆಗಳಲ್ಲಿ ನಡೆಯುವ ಸಭೆಗಳಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸುತ್ತಾರೆ. ಸಭೆಗಳಲ್ಲಿ ಪಾಲ್ಗೊಳ್ಳುವವರಿಗೆ ಮಾವಿನ ಹಣ್ಣುಗಳನ್ನು ನೀಡಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ
ಎಂದರು

ಕೃಷಿ ವಿಜ್ಞಾನಿ ಡಾ. ವೈ.ಟಿ.ಎನ್. ರೆಡ್ಡಿ, ಅಪೆಡಾ ಸಂಸ್ಥೆಯ ಅಧಿಕಾರಿ ತಂಗಮ್ಮ, ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಮಹೇಶ್, ಗೋಪಿ, ಧರಣೀಶ್‌ ರಾಂಪುರ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಜೆ. ಗುಣವಂತ, ಅರ್ಕೆಶ್, ಬಿಸ್ಲಳ್ಳಿ ಇದ್ದರು.ಜಿಲ್ಲಾ ಪಂಚಾಯಿತಿ, ಅಪೆಡಾ, ರಾಜ್ಯ ಮಾವು ಅಭಿವೃದ್ಧಿ ನಿಗಮ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ರಾಸಾಯನಿಕ ಬಳಸದಿರಿ
ರೈತ ಮುಖಂಡ ಸಿ. ಪುಟ್ಟಸ್ವಾಮಿ ಮಾತನಾಡಿ, ಮಾವು ಬೆಳೆಗಾರರು ಹಣ್ಣಗಳನ್ನು ಮಾಗಿಸಲು ರಾಸಾಯನಿಕಗಳನ್ನು ಬಳಸಬಾರದು. ನೈಸರ್ಗಿಕವಾಗಿಯೇ ಹಣ್ಣುಗಳು ಮಾಗಬೇಕು. ಇದು ಆರೋಗ್ಯಕ್ಕೂ ಒಳ್ಳೆಯದು. ಜತೆಗೆ ನಾಲ್ಕು ಪಟ್ಟು ಅಧಿಕ ಲಾಭವನ್ನು ಪಡೆಯಬಹುದು ಎಂದು ತಿಳಿಸಿದರು.

ಜಿಲ್ಲಾ ಮಟ್ಟದಲ್ಲಿ ಮಾವು ಮಾರಾಟಕ್ಕೆ ಸಂಬಂಧಿಸಿದಂತೆ 31 ಕ್ಲಸ್ಟರ್‌ಗಳನ್ನು ರಚನೆ ಮಾಡಬೇಕು. ಇದರ ಮೂಲಕ ರಫ್ತು ಮಾಡಬಹುದು. ಅಪೆಡಾ ಸಂಸ್ಥೆಯ ಮೂಲಕ ಈ ವ್ಯವಸ್ಥೆ ಕಲ್ಪಿಸಬಹುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT