ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಚ್ಚರ್ ನೋಡಿ

Last Updated 14 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘16 ವಯದಿನಿಲೆ’ ಈ ಚಿತ್ರ ತಮಿಳು ಚಿತ್ರರಂಗದ ಇತಿಹಾಸದಲ್ಲಿ ಮತ್ತು ಇತ್ತೀಚೆಗೆ ನಿಧನರಾದ ಶ್ರೇಷ್ಠ ನಟಿ ಶ್ರೀದೇವಿ ಅವರ ವೃತ್ತಿಬದುಕಿನಲ್ಲಿ ಹಲವು ಕಾರಣಗಳಿಗೆ ಮೈಲಿಗಲ್ಲು ಎನಿಸಿದೆ. ಪಿ. ಭಾರತೀರಾಜ ನಿರ್ದೇಶನದ ಈ ತಮಿಳು ಚಿತ್ರ ಬಿಡುಗಡೆಯಾಗಿದ್ದು 1977ರಲ್ಲಿ. ಶ್ರೀದೇವಿ, ಕಮಲ್‌ ಹಾಸನ್‌ ಮತ್ತು ರಜನೀಕಾಂತ್‌ ಇದರ ಮುಖ್ಯಭೂಮಿಕೆಯಲ್ಲಿದ್ದಾರೆ.

‘ಹದಿನಾರನೇ ವಯಸ್ಸಿನಲ್ಲಿ’ ಎಂಬ ಅರ್ಥ ಕೊಡುವ ಶೀರ್ಷಿಕೆಯ ಈ ಸಿನಿಮಾ ಹಳ್ಳಿಯ ಮುಗ್ಧ ಸುಂದರ ಹುಡುಗಿಯೊಬ್ಬಳ ಬದುಕಿನಲ್ಲಿ ನಡೆಯುವ ವಂಚನೆ ಮತ್ತು ಅದನ್ನು ಅವಳು ಎದುರಿಸಿ ನಿಲ್ಲುವ ಕಥನವನ್ನು ಒಳಗೊಂಡಿದೆ. ಮೈಲ್ ಎಂಬುವವಳು ಈಗಷ್ಟೇ ಹತ್ತನೇ ತರಗತಿ ಪಾಸು ಮಾಡಿರುವ ಹದಿನಾರರ ಬಾಲೆ. ಅಮ್ಮನೊಟ್ಟಿಗೆ ಬಡತನದ ಬದುಕನ್ನು ಸವೆಸುತ್ತಿದ್ದಾಳೆ. ಆದರೆ ಆ ಇಡೀ ಕೇರಿಯಲ್ಲಿ ಹೆಚ್ಚು ಓದಿದವಳು ಎಂಬ ಹೆಗ್ಗಳಿಕೆ ಅವಳದು. ಅವಳು ಸ್ನಾನ ಮಾಡುವಾಗ ಘಮದ ಸೋಪು ಬಳಸುತ್ತಾಳೆ ಎನ್ನುವುದು ಇಡೀ ಕೇರಿಗೆ ಬಿಸಿಬಿಸಿ ಚರ್ಚೆಯ ವಿಷಯ. ಶಿಕ್ಷಕಿ ಆಗಬೇಕು ಎನ್ನುವುದು ಮೈಲ್‌ಳ ಬದುಕಿನ ಕನಸು, ಗುರಿ ಎಲ್ಲವೂ.

ಅಮ್ಮ– ಮಗಳು ಇಬ್ಬರೇ ಇರುವ ಈ ಕುಟುಂಬಕ್ಕೆ ನೇರವಾದ ಯಾವ ಸಂಬಂಧವೂ ಇಲ್ಲದ, ಒಂದು ಹೊತ್ತಿನ ಊಟಕ್ಕಾಗಿ ಊರ ಜನರ ಕೆಲಸಗಳನ್ನೆಲ್ಲ ಮಾಡುವ, ತುಸು ಬುದ್ಧಿಮಾಂದ್ಯನಂತೆ ತೋರುವ ಚಪ್ಪಾಣಿ ಎಲ್ಲರಿಗೂ ಎಲ್ಲದಕ್ಕೂ ಆಗಿಬರುವವನು. ಅವನು ಒಳಗೊಳಗೇ ಮೈಲ್‌ಳನ್ನು ಪ್ರೇಮಿಸುತ್ತಿದ್ದಾನೆ. ಆದರೆ ಅವಳಿಗೋ ಅವನ ಕಂಡರೆ ಅಸಡ್ಡೆ. ಹೀಗಿರಲು ಊರಿಗೆ ಬರುವ ಪಶುವೈದ್ಯನ ಮೇಲೆ ಮೈಲ್‌ಗೆ ಪ್ರೇಮವಾಗುತ್ತದೆ. ಅವನೂ ಅವಳನ್ನು ಪ್ರೇಮಿಸುವ ನಾಟಕವಾಡಿ ಮೋಸಮಾಡುತ್ತಾನೆ.

ಮುಗ್ಧ ಹುಡುಗಿಯ ಅಷ್ಟೇ ಮುಗ್ಧವಾದ ಪ್ರಪಂಚ. ಆದರೆ ಅವಳ ಮುಗ್ಧತೆಯನ್ನು ಬಲಿತೆಗೆದುಕೊಳ್ಳುವ ಆಧುನಿಕತೆ, ಮೋಹ ಎಲ್ಲವನ್ನೂ ನಿರ್ದೇಶಕರು ಗಾಢವಾಗಿ ಕಾಡುವ ಕಥನದ ಮೂಲಕ ಹೇಳುತ್ತ ಹೋಗಿದ್ದಾರೆ.

ಚಿಟ್ಟೆ ರೆಕ್ಕೆ ಬಡಿಯುವಂತೆ ರೆಪ್ಪೆ ಅಲ್ಲಾಡಿಸುವ ಶ್ರೀದೇವಿಯ ಸೌಂದರ್ಯ ಮತ್ತು ನಟನೆ ಎರಡೂ ಸೂಜಿಗಲ್ಲಿನಂತೆ ಹಿಡಿದಿಟ್ಟುಕೊಳ್ಳುವಂಥದ್ದು. ತಮ್ಮ ವಯಸ್ಸಿಗೂ ಮೀರಿದ ಪಾತ್ರವನ್ನು ಅವರು ನಿರ್ವಹಿಸಿರುವ ರೀತಿ ಬೆರಗು ಹುಟ್ಟಿಸುತ್ತದೆ. ಹಾಗೆಯೇ ಪೆದ್ದು ಮನುಷ್ಯನಾಗಿ ಕಮಲ ಹಾಸನ್‌ ಅವರೂ ಕಣ್ಣಿನಲ್ಲಿ ನೀರುಕ್ಕಿಸುತ್ತಲೇ ಮನಸಲ್ಲಿ ತಾವು ಪಡೆದುಕೊಳ್ಳುತ್ತಾರೆ.

ಅದುವರೆಗೆ ತಮಿಳಿನ ಬಹುತೇಕ ಸಿನಿಮಾಗಳು ಚೆನ್ನೈನಲ್ಲಿ ಒಳಾಂಗಣ ಸೆಟ್‌ಗಳಲ್ಲಿಯೇ ಚಿತ್ರೀಕರಣವಾಗುತ್ತಿದ್ದವು. ಸಂಪೂರ್ಣವಾಗಿ ಹೊರಾಂಗಣದಲ್ಲಿ ಚಿತ್ರೀಕರಿಸಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಯೂ ‘16 ವಯದಿನಿಲೆ’ಗಿದೆ.

ಇಳೆಯರಾಜ ಅವರ ಸಂಗೀತ ಮತ್ತು ಪಿ.ಎಸ್. ನಿವಾಸ್‌ ಅವರ ಛಾಯಾಗ್ರಹಣವೂ ಈ ಚಿತ್ರದ ಯಶಸ್ಸಿಗೆ ಕೊಟ್ಟ ಕೊಡುಗೆ ದೊಡ್ಡದು. ಇತ್ತೀಚೆಗೆ ನಮ್ಮನ್ನು ಅಗಲಿದ ನಟಿ ಶ್ರೀದೇವಿ ಎಂಬ ಅಗಾಧ ಪ್ರತಿಭೆಯ ನಟನಾಜೀವನದ ಆರಂಭದ ಹಂತವನ್ನು ನೋಡಬೇಕೆಂದರೆ ಈ ಚಿತ್ರಕ್ಕಿಂತ ಒಳ್ಳೆಯ ಆಯ್ಕೆ ಇನ್ನೊಂದಿಲ್ಲ. ಯೂ ಟ್ಯೂಬ್‌ನಲ್ಲಿ https://goo.gl/jJyp7C ಕೊಂಡಿ ಬಳಸಿ ಈ ಚಿತ್ರವನ್ನು ವೀಕ್ಷಿಸಬಹುದು.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT