ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿತ್ತು ಪರೀಕ್ಷೆಗೆ ನನ್ನ ತಯಾರಿ

Last Updated 14 ಮಾರ್ಚ್ 2018, 19:40 IST
ಅಕ್ಷರ ಗಾತ್ರ

ಮರವೇರಿ ಅಭ್ಯಾಸ

ನನ್ನದು ದಟ್ಟ ಮಲೆನಾಡಿನ ಕಾಡಂಚಿನ ಪುಟ್ಟ ಹಳ್ಳಿ. ಪ್ರೌಢಶಾಲೆಗೆ ನಿತ್ಯ ನಾಲ್ಕು ಕಿ.ಮೀ. ನಡೆದು ಹೋಗಬೇಕಿತ್ತು. ಆಗ ಈಗಿನಂತೆ ಎಸ್ಸೆಸ್ಸೆಲ್ಸಿಯಲ್ಲಿ ಮೂರು ಮೂರು ಪೂರ್ವಭಾವಿ ಪರೀಕ್ಷೆಗಳಿರಲಿಲ್ಲ. ಮುಖ್ಯ ಪರೀಕ್ಷೆಗೆ ಮುನ್ನ ಒಂದೇ ಪೂರ್ವಸಿದ್ಧತಾ ಪರೀಕ್ಷೆ. ಈ ‘ಪ್ರಿಪರೇಟರಿ ಎಕ್ಸಾಂ’ ಮುಗಿದ ಮೇಲೆ ಮನೆಯಲ್ಲೇ ಅಭ್ಯಾಸ ಮಾಡಲು ಶಾಲೆಗೆ ರಜೆ ಕೊಡುತ್ತಿದ್ದರು. ಹಾಗಾಗಿ ತಯಾರಿಗೆ ಸುಮಾರು ಒಂದೂವರೆ ತಿಂಗಳು ಸಮಯ ಸಿಗುತ್ತಿತ್ತು.

ನಮ್ಮ ಮನೆಯ ಪಕ್ಕದಲ್ಲಿ ಒಂದು ಮಾವಿನ ಮರವಿತ್ತು. ಆ ವೃಕ್ಷದ ಅಕ್ಕಪಕ್ಕದ ಎರಡು ಕೊಂಬೆಗಳಿಗೆ ಅಡಿಕೆ ದಬ್ಬೆಯ ತುಂಡುಗಳನ್ನು ಹಗ್ಗದಿಂದ ಕಟ್ಟಿ ಒಂದು ಅಟ್ಟಣಿಗೆ ಮಾಡಿಕೊಂಡಿದ್ದೆ. ಆ ಮರವೂ ಅಷ್ಟೆ. ಹತ್ತಲು ತುಂಬಾ ಸುಲಭವಿತ್ತು.

ಅಟ್ಟಣಿಗೆಯ ಮೇಲೆ ಕೂತು ಮರದ ದಪ್ಪ ಕಾಂಡಕ್ಕೆ ಒರಗಿಕೊಂಡು ಓದುವುದೆಂದರೆ ನನಗೆ ಬಲು ಖುಷಿ. ಕೃಷಿ ಕುಟುಂಬವಾದ್ದರಿಂದ ಮನೆಯೊಳಗೆ ಅಭ್ಯಾಸಕ್ಕೆ ಕುಳಿತರೆ ಅದೂ ಇದೂ ಅಂತ ಸಣ್ಣಪುಟ್ಟ ಕೆಲಸ ಹಚ್ಚುತ್ತಿದ್ದರು. ಜೊತೆಗೆ ಬಂದು ಹೋಗುವವರ ಕಾಟ ಬೇರೆ. ಹಾಗಾಗಿ ಮನಸ್ಸು ನೆಟ್ಟು ಓದಲು ಆಗುತ್ತಿರಲಿಲ್ಲ. ಅದಕ್ಕೆ ತಲೆಯೋಡಿಸಿ ಮರದ ಮೇಲೆ ಹೀಗೊಂದು ವ್ಯವಸ್ಥೆ ಮಾಡಿಕೊಂಡಿದ್ದೆ. ಮರ ಮನೆಯ ಪಕ್ಕದಲ್ಲೇ ಇದ್ದರಿಂದ ಒಮ್ಮೊಮ್ಮೆ ಅಲ್ಲಿಗೂ ಬಂದು ಕೆಲಸ ಹೇಳುತ್ತಿದ್ದರು. ಇಂತಹ ಸಂಭವವನ್ನು ಮೊದಲೇ ಊಹಿಸಿ ಮರದಿಂದ ಮಂಗಮಾಯವಾಗಿ ಅಡಿಕೆ ತೋಟದಲ್ಲಿ ತಪ್ಪಿಸಿಕೊಳ್ಳುತ್ತಿದ್ದೆ. ತೋಟದೊಳಗೆ ಮರದ ಬುಡದಲ್ಲಿ ಅಡಿಕೆ ಹಾಳೆಗಳನ್ನು ಹಾಸಿ ಅದರ ಮೇಲೆ ನನ್ನ ಅಭ್ಯಾಸ ನಿರ್ವಿಘ್ನವಾಗಿ ಸಾಗುತ್ತಿತ್ತು. ‌

ಆಗ ಇದ್ದ ಒಂದೇ ಭಯ ಹಾವುಗಳದ್ದು. ಎಲ್ಲೋ ಸರಬರ ಸದ್ದಾದರೆ ಗಮನ ಅತ್ತ ಹರಿದು ಆತಂಕವಾಗುತ್ತಿತ್ತು. ಹಾಗಾಗಿ ಮನೆ ನಾಯಿ ಜಿಮ್ಮಿಯನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದೆ. ವಿಷಜಂತು ಹತ್ತಿರ ಬಂದರೆ ಜಿಮ್ಮಿ ಬೊಗಳಿ ನನ್ನನ್ನು ಎಚ್ಚರಿಸುವುದಲ್ಲದೆ ಅದನ್ನು ದೂರ ಓಡಿಸುತ್ತದೆಯೆಂಬ ಬಲವಾದ ವಿಶ್ವಾಸ. ನಾನು ಓದುವಷ್ಟು ಕಾಲ ನನ್ನ ಪಕ್ಕದಲ್ಲಿ ಕುಳಿತೋ, ಮಲಗಿಯೋ ಬೆಂಗಾವಲು ನೀಡುತ್ತಿತ್ತು.

ನಾನು ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಲು ಮಾವಿನ ಮರ, ಜಿಮ್ಮಿ ನಾಯಿಯ ಕೊಡುಗೆ ತುಂಬಾ ಇದೆ!

–ಮುರಳೀಧರ ಕಿರಣಕೆರೆ ಶಿವಮೊಗ್ಗ

ಅಲೆಮಾರಿ ಓದು

ನನ್ನ ಪರೀಕ್ಷಾ ತಯಾರಿಗೆ ‘ಅಲೆಮಾರಿ ಓದು’ ಎಂಬ ಹೆಸರೇ ಸೂಕ್ತ. ಏಕೆಂದರೆ ನಾನು ಒಂದೇ ಕಡೆ ಕುಳಿತು ಓದಿದ್ದಕ್ಕಿಂತ ಅಲ್ಲಿ ಇಲ್ಲಿ ಕುಳಿತು, ನಡೆದು, ಮಲಗಿ ಓದಿದ್ದೇ ಹೆಚ್ಚು. ಆ ಕಾಲವನ್ನು ನೆನಪಿಸುವಾಗ ಪುನಃ ಅಂತಹ ಒಂದು ಸುವರ್ಣಕಾಲ ಸಿಕ್ಕರೆ? ಎಂದು ಹಂಬಲಿಸುವಂತಾಗಿದೆ. ನಾನು ಎಸ್ಸೆಸ್ಸೆಲ್ಸಿಯಲ್ಲಿದ್ದಾಗ ಶಿಕ್ಷಕರು ಪಾಠಗಳನ್ನೆಲ್ಲ ಮುಗಿಸಿ ನಂತರ ನಮ್ಮಲ್ಲಿ ಕನಿಷ್ಠ ಪಕ್ಷ ಎರಡು ಹಳೆಯ ಪ್ರಶ್ನೆ ಪತ್ರಿಕೆಗಳನ್ನಾದರೂ ಬರೆದು ಉತ್ತರಿಸುವಂತೆ ಹೇಳುತ್ತಿದ್ದರು. ಕೆಲವು ದಿನ ಪುನರಾವರ್ತನೆ ನಡೆಸಿ, ನಂತರ ಸ್ಟಡಿ ಲೀವ್ ಎಂಬ ಓದಿನ ರಜೆ ನೀಡುತ್ತಿದ್ದರು. ಸುಮಾರು ಒಂದು ತಿಂಗಳು ಮನೆಯಲ್ಲೇ ಕುಳಿತು ಪರೀಕ್ಷೆಗಾಗಿ ಸಿದ್ಧತೆ ನಡೆಸುವಾಗ ನನಗೆ ನನ್ನದೇ ಆದ ಓದಿನ ಕ್ರಮವಿತ್ತು. ಸ್ವಲ್ಪ ಹೊತ್ತು ಮನೆಯೊಳಗೆ ಕುಳಿತು ಓದಿದಾಗ ಅಲ್ಲಿನ ಗಾಳಿ-ಬೆಳಕು ಸಾಲದು ಎಂದೆನಿಸಿ ಹೊರಗಡೆ ಜಗಲಿಯಲ್ಲಿ ಕುಳಿತು ಓದುತ್ತಿದ್ದೆ. ಬೇಸಿಗೆಯ ಆ ಅವಧಿಯಲ್ಲಿ ಮಧ್ಯಾಹ್ನದ ಹೊತ್ತು ಸೆಕೆ ಜೋರಾದಾಗ ಮೆಲ್ಲ ತೋಟದೆಡೆಗೆ ಸಾಗುತ್ತಿದ್ದೆ. ಅಡಿಕೆ ತೋಟದ ತಂಪು ನೆರಳಲ್ಲಿ ಕುಳಿತುಕೊಂಡು ಓದುತ್ತಿದ್ದೆ. ತುಂಬಾ ಹೊತ್ತು ಕುಳಿತಾಗ ಕಾಲು, ಬೆನ್ನುಗಳಿಗೆ ಆಯಾಸವಾದಾಗ ಅಡಿಕೆ ಮರದಿಂದ ಆಗ ತಾನೇ ಬಿದ್ದ ಹಸಿ, ತಂಪು ಹಾಳೆಯಲ್ಲಿ ಮಲಗಿ ಓದುತ್ತಿದ್ದೆ.

ಓದಿನ ನಡುವೆ ಅಮ್ಮನಿಗೆ ಸಣ್ಣಪುಟ್ಟ ಸಹಾಯಗಳನ್ನೂ ಮಾಡುತ್ತಿದ್ದೆ. ಮಧ್ಯಾಹ್ನ ಮನೆಗೆ ಹೋಗಿ ಊಟ ಮಾಡಿ ಸಂಜೆಯ ವೇಳೆ ಪುಸ್ತಕ ಹಿಡಿದು ನಮ್ಮ ಜಮೀನಿನ ಮಧ್ಯೆ ಇರುವ ತೋಡಿನ (ಹಳ್ಳ) ಕಡೆಗೆ ಹೋಗುತ್ತಿದ್ದೆ. ಅಲ್ಲಿ ಸಪಾಟಾದ ಒಂದು ಕಲ್ಲಿಗೆ ಒಂದು ಕಡೆಗೆ ಬೆನ್ನು ಒರಗಿಸಿ ಕುಳಿತುಕೊಳ್ಳಲು ಸಾಧ್ಯವಾಗುವಂತಹ (ಆರಾಮ ಕುರ್ಚಿಯಂತಹ) ರಚನೆಯಿತ್ತು. ಈಗ ನನ್ನ ಓದಿನ ಪೀಠ ಇದಾಗುತ್ತಿತ್ತು. ಒಮ್ಮೊಮ್ಮೆ ಸೂರ್ಯ ಮುಳುಗುವ ತನಕ ಆ ಪೀಠದಲ್ಲಿ ಕುಳಿತು ಓದುತ್ತಿದ್ದೆ. ಒಂದೊಂದು ದಿನ ಗೇರು ತೋಟದ ಯಾವುದಾದರೂ ಬಾಗಿದ ಮರದ ರೆಂಬೆಯಲ್ಲಿ ಕುಳಿತು ಓದುತ್ತಿದ್ದೆ. ಈ ಸ್ಥಾನ ಬದಲಾವಣೆ ಓದಿನ ಏಕತಾನತೆಯನ್ನು ಮರೆಮಾಡಿ ಹೊಸ ಉತ್ಸಾಹ ತುಂಬಿಸುತ್ತಿತ್ತು. ಓದಿನ ಮಧ್ಯೆ ಪ್ರಕೃತಿಯ ರಮಣೀಯತೆಗೆ ಮನಸೋತು ಸಣ್ಣಪುಟ್ಟ ಕವನಗಳನ್ನು ಗೀಚುತ್ತಿದ್ದೆ. ಹಾಗಾಗಿ ಓದುವ ಕೆಲಸ ಶ್ರಮದಾಯಕ ಅಥವಾ ಬೋರಿಂಗ್ ಎಂದು ನನಗೆ ಅನಿಸಿದ್ದೇ ಇಲ್ಲ. ನಾನು ನನ್ನ ಪರೀಕ್ಷಾ ಸಿದ್ಧತೆಯನ್ನು ಬಹಳ ಉತ್ತಮವಾಗಿ ಆಸ್ವಾದಿಸಿದೆ. ಟೇಪ್ ರೆಕಾರ್ಡರ್‌ನಲ್ಲಿ ನನಗಿಷ್ಟವಾದ ಹಾಡನ್ನು ಹಾಕಿ ಕೇಳುತ್ತಾ ಓದುವುದು ಕೂಡ ನನ್ನ ಓದಿನ ಒಂದು ರೀತಿಯಾಗಿತ್ತು. ಯಾರಾದರೂ ಮಾತನಾಡಿದರೆ ಕಲಿಕೆಯ ಏಕಾಗ್ರತೆಗೆ ಭಂಗವಾಗುತ್ತಿದ್ದ ನನಗೆ ಹಿನ್ನೆಲೆಯಲ್ಲಿ ಹಾಡು ಕೇಳುವುದರಿಂದ ಓದಿಗೆ ಯಾವ ತೊಂದರೆಯೂ ಆಗುತ್ತಿರಲಿಲ್ಲ.

ರಾತ್ರಿಯ ವೇಳೆ ಎಷ್ಟು ಹೊತ್ತು ಬೇಕಾದರೂ ನಾನು ಕುಳಿತು ಓದುತ್ತಿದ್ದೆ. ಆದರೆ ಬೆಳಿಗ್ಗೆ ಬೇಗ ಏಳುವುದು ಮಾತ್ರ ದೊಡ್ಡ ಹಿಂಸೆಯೆನಿಸುತ್ತಿತ್ತು. ಹತ್ತನೇ ತರಗತಿಯ ನಂತರ ಹಲವು ಪರೀಕ್ಷೆಗಳನ್ನು ಬರೆದೆ. ಆದರೂ ಓದುವಾಗ ಆಗಿನಂತೆ ಈಗಲೂ ತನ್ಮಯತೆಯಿಂದ ಓದುತ್ತೇನೆ. ಸ್ಥಳ ಬದಲಿಸುತ್ತಾ ಓದುವ ಅಲೆಮಾರಿ ಓದೇ ಇಂದೂ ನನ್ನ ಫೇವರೆಟ್.

–ಜೆಸ್ಸಿ ಪಿ.ವಿ ಪುತ್ತೂರು

ನಸುಕಿನ ಅಧ್ಯಯನ

ಜೀವನದಲ್ಲಿ ಏನಾದರೊಂದು ಗುರಿ ಮುಟ್ಟಲೇಬೇಕು ಎಂಬ ಸಂಕಲ್ಪದಿಂದ ಓದಲು ನಿರ್ಧರಿಸಿಯೇ ಹಳ್ಳಿಯಿಂದ ನಗರಕ್ಕೆ ಹೆಜ್ಜೆ ಹಾಕಿದ್ದೆ. ಪ್ರಥಮ ಪಿಯುಸಿಗೆ ನಗರದ ಕಾಲೇಜಿಗೆ ಸೇರಿಕೊಂಡು ಊಟ-ವಸತಿಗಾಗಿ ಮೆರಿಟ್ ಆಧಾರದ ಮೇಲೆ ಹಾಸ್ಟೆಲ್‌ಗೆ ಸೇರಿದೆ. ಹಾಸ್ಟೆಲ್ ಅಂದ್ರೆ ವಿವಿಧ ಪರಿಸರದ ಹಿನ್ನೆಲೆಯ, ವಿವಿಧ ಗುರಿಯನ್ನಿಟ್ಟು ಕೊಂಡು ಗ್ರಾಮೀಣ ಭಾಗಗಳಿಂದ ಬಂದಂತಹ ವಿದ್ಯಾರ್ಥಿಗಳ ಸಮೂಹ. ಇಲ್ಲಿ ಪ್ರತಿನಿತ್ಯ ಓದು, ಬರವಣಿಗೆ, ಚರ್ಚೆಗಳೇ ತಡ ರಾತ್ರಿಯವರೆಗೂ ನಡೆಯುತ್ತಿದ್ದವು. ಪರೀಕ್ಷೆಯೆಂಬ ಯುದ್ಧಕ್ಕೆ ಸಿದ್ಧರಾಗುವಂತಹ ವಾತಾವರಣವನ್ನು ಆ ಪರಿಸರ ನಮಗೊದಗಿಸಿತ್ತು.

ದ್ವಿತೀಯ ಪಿಯುಸಿ ಪ್ರತಿಯೊಬ್ಬ ವಿದ್ಯಾರ್ಥಿಯ ಬಹುಮುಖ್ಯ ಘಟ್ಟ. ನಾನು ಸಹಿತ ಸಹಪಾಠಿಗಳೊಂದಿಗೆ ಸೇರಿ ವೇಳಾಪತ್ರಿಕೆ ತಯಾರಿಸಿಕೊಂಡು ಕಾಲೇಜಿಗೆ ಮೊದಲಿಗನಾಗಿ ಅಂಕ ಪಡೆಯಲೇಬೇಕೆಂದು ನಿರ್ಧರಿಸಿ ವರ್ಷದ ಆರಂಭದಿಂದಲೇ ಓದಲು ಪ್ರಾರಂಭಿಸಿದ್ದೆ. ವಸತಿಗೃಹದ ಒಂದೊಂದು ರೂಮಿನಲ್ಲಿ ಆರೇಳು ಜನರು ಇರುತ್ತಿದ್ದೆವು. ಎಂಟು ರೂಮುಗಳು ಹಾಸ್ಟೆಲ್‌ನಲ್ಲಿದ್ದವು.

ರಾತ್ರಿ ಯಾವುದೇ ಸಮಯದಲ್ಲಿಯೂ ರೂಮಿನ ದೀಪ ಬೆಳಗುತ್ತಿರುತ್ತಿದ್ದವು. ರಾತ್ರಿ ಒಂಬತ್ತರಿಂದ ಹನ್ನೆರಡವರೆಗೆ ಕೆಲವರು ಓದಿದರೆ, ಇನ್ನು ಕೆಲವರು ತಡರಾತ್ರಿ ಹನ್ನೆರಡರಿಂದ ನಾಲ್ಕರವರೆಗೆ ಓದುತ್ತಿದ್ದರು, ಮತ್ತೆ ಕೆಲವರು ನಸುಕಿನ ಜಾವದಿಂದ ಓದಲು ಪ್ರಾರಂಭಿಸುತ್ತಿದ್ದರು. ಇನ್ನು ಕೆಲವರು ಮೇಜಿನ ಮೇಲೆ ಧ್ವಜಯೇರಿಸಿಯೋ, ಆದರ್ಶ ವ್ಯಕ್ತಿಗಳ ಫೋಟೊ ಇಟ್ಟುಕೊಂಡೋ ರಾತ್ರಿಪೂರ್ತಿ ಓದುತ್ತಿದ್ದರು. ಹೀಗೆ ರೂಮಿನಲ್ಲಿ ಸದಾ ಓದು ನಡೆದಿರುತ್ತಿತ್ತು. ಕೆಲವು ಗುಂಪಿನ ಓದುವ ರೀತಿಯ ಕ್ರಮ ಬೇರೆ ಬೇರೆಯಾಗಿತ್ತು. ನಮ್ಮದು ನಸುಕಿನ ಜಾವದ ಓದು. ಯಾರಾದರೂ ಆದರ್ಶ ವ್ಯಕ್ತಿಗಳ ಫೋಟೊ ಇಟ್ಟುಕೊಂಡು ಓದಲು ಶುರು ಮಾಡಿದರೆ ಮೂರ್ನಾಲ್ಕು ಗಂಟೆಗಳು ನಿರಂತರವಾಗಿ ನಡೆಯುತ್ತಿತ್ತು. ಫೋಟೊ ತೆಗೆದಿಟ್ಟರೆ ಓದುತ್ತಿರಲಿಲ್ಲ. ನಮಗೆ ಸ್ಪರ್ಧೆಯಾಗಿ ಇನ್ನೊಂದು ಗುಂಪಿನವರು ರಾಷ್ಟ್ರಧ್ವಜ ಟೇಬಲ್ ಮೇಲೆ ಹಾರಿಸಿ ರಾತ್ರಿ ಪೂರ್ತಿ ಓದುತ್ತಿದ್ದರು. ರಾಷ್ಟ್ರಧ್ವಜ ತೆಗೆದಿಟ್ಟರೆ ಓದುವುದಕ್ಕೆ ವಿರಾಮ ಎಂದರ್ಥ.

ಸೋಜಿಗವೆಂದರೆ, ಮಲಗಿದಾಗ ಯಾರಿಗೆ ಯಾರೂ ಎಬ್ಬಿಸುತ್ತಿರಲಿಲ್ಲ. 'ಟ್ರಂಕ್'ನ ಶಬ್ದದ ಆಧಾರದ ಮೇಲೆಯೇ ಎಚ್ಚರವಾಗಿ ಓದುತ್ತಿದ್ದೆವು. ಜನವರಿ ತಿಂಗಳಿನಿಂದ ಸಮೀಪದ ದೇವಸ್ಥಾನ, ಮಠ, ತೋಟಗಳಿಗೆ ಹಗಲೊತ್ತಿನ ಓದಿಗೆ ಶಿಫ್ಟಾಗುತ್ತಿದ್ದ ನಮ್ಮ ದಿನಚರಿ ವಾರ್ಷಿಕ ಪರೀಕ್ಷೆವರೆಗೂ ಹೀಗೇ ಸಾಗುತ್ತಿತ್ತು. ಹೀಗೆ ಸಾಕಷ್ಟು ತಯಾರಿಯೊಂದಿಗೆ ದ್ವಿತೀಯ ಪಿಯು ಪರೀಕ್ಷೆ ಬರೆದು ಉತ್ತಮ ಅಂಕಗಳನ್ನು ಪಡೆದೆ.

–ಮಲ್ಲಪ್ಪ ಫಕರೇಣ್ಣನವರ ರಾಣೆಬೆನ್ನೂರ

ಚೌಡಿಯ ಸನ್ನಿಧಿಯಲ್ಲಿ


ನನ್ನವ್ವ, ನನ್ನಪ್ಪನಿಗೆ ಮಗ ಶಾಲೆಗೆ ಹೋಗ್ತಾನೆ ಅನ್ನೋದು ಬಿಟ್ರೆ ಯಾವ ಕ್ಲಾಸ್? ಏನ್ ಓದ್ತಾನೆ ಅಂತ ಗೊತ್ತೇ ಆಗ್ತಿರಲಿಲ್ಲ. ಅವು ಶಾಲೆಯ ಹೊಸ್ತಿಲನ್ನೇ ತುಳಿಯದ ಜೀವಗಳು. ನನ್ನ ಓದಿನ ಎಲ್ಲಾ ಟೆಂಡರ್ ತೆಗೆದುಕೊಂಡಂತೆ ನನ್ನಣ್ಣ ಭಯವೊಡ್ಡಿ ಓದಿಗೆ ಹಚ್ಚಿದ್ದ. ನನಗೆ ನಿಜಕ್ಕೂ ತಿರುವು ಕೊಟ್ಟಿದ್ದು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು. ಆ ಕ್ಷಣದಲ್ಲಿ ನನ್ನ ಓದು ಇದೆಯಲ್ಲಾ ಅದನ್ನಂತೂ ಎಂದೂ ಮರೆಯಲಾಗದು! ‘ನೀ ಹಿಂಗೆ ಓದಿದ್ರೆ ಮುಗೀತು!’ ಎಂಬ ಅಣ್ಣನ ವ್ಯಂಗ್ಯ ನನ್ನಲ್ಲಿ ಸಿಕ್ಕಾಪಟ್ಟೆ ಓದಿನ ಕಿಚ್ಚು ಹಚ್ಚಿಸಿತ್ತು. ಅದವನ ಜಾಣ ವ್ಯಂಗ್ಯ!

ಪರೀಕ್ಷೆ ಇನ್ನೇನು ಎರಡು ತಿಂಗಳು ಇದೆ ಎನ್ನುವಾಗಲೇ ಮೈಮೇಲೆ ದೆವ್ವ ಬಂದವನಂತೆ ಆಡುತ್ತಿದ್ದೆ. ಬರೀ ಓದುವುದು ನನ್ನ ಕೆಲಸ. ಚಿಕ್ಕ ಮನೆ. ಮನೆಯಲ್ಲಿ ಗಲಾಟೆಯಿಂದ ಓದಲಾಗುತ್ತಿರಲಿಲ್ಲ. ಬೆಳಿಗ್ಗೆ ಆರಕ್ಕೆ ಎದ್ದವನೇ ಶಾಲೆ ಸಮೀಪದ ಗುಡಿಗೆ ಓಡಿ ಹೋಗುತ್ತಿದ್ದೆ. ಚಳಿಗೆ ತಲೆಯ ಮೇಲೊಂದು ಟವಲ್ ಹಾಕಿಕೊಂಡು, ಪುಸ್ತಕವನ್ನು ಅಂಗಿಯೊಳಗೆ ತೂರಿಸಿಕೊಂಡು ನಡೆದು ಹೋಗುತ್ತಿದ್ದೆ. ಗುಡಿಯ ಒಂದು ಮೂಲೆಯಲ್ಲಿ ಕೂತು ಓದುತ್ತಿದ್ದೆ. ನಾನು ಓದಲು ಹೋಗುವುದು ಯಾರಿಗೂ ಗೊತ್ತಾಗದಂತೆ ಅಂಗಿಯ ಒಳಗೆ ಅಡಗಿಸಿಕೊಂಡು ಬರುತ್ತಿದ್ದೆ. ‘ಓ, ಇವ್ನೇನು ಸೀಮೆಗಿಲ್ಲದ್ದು ಓದ್ತಾನಾ?’ ಅನ್ನುವ ಮಾತುಗಳಿಂದ ತಪ್ಪಿಸಿಕೊಳ್ಳಲು ಹಾಗೆ ಮಾಡುತ್ತಿದ್ದೆ.

ಹತ್ತು ಗಂಟೆಗೆ ಮನೆಗೆ ಬಂದು ಊಟ ಮಾಡಿ ಅಪ್ಪನೊಂದಿಗೆ ತೋಟಕ್ಕೆ ಹೋಗುತ್ತಿದ್ದೆ. ಅವ್ವ, ಅಪ್ಪನ ಬುತ್ತಿಯ ಜೊತೆಗೆ ನನಗೂ ರೊಟ್ಟಿ ಕಟ್ಟಿ ಕಳುಹಿಸುತ್ತಿದ್ದಳು. ತೋಟದ ಮರದ ಕೆಳಗೆ ಕೂತು ಮತ್ತೆ ನನ್ನ ಓದು ಆರಂಭ. ಆ ಕ್ಷಣ ನೆನೆಸಿಕೊಂಡರೆ ಈಗಲೂ ರೋಮಾಂಚನ. ಆ ತಣ್ಣನೆಯ ವಾತಾವರಣ, ಹಸಿರು ನನ್ನ ಓದಿಗೆ ಪುಷ್ಟಿಕೊಡುತ್ತಿದ್ದವು. ತೋಟದಲ್ಲೊಂದು ಚೌಡಿಯ ಪುಟ್ಟ ಗುಡಿಯಿತ್ತು. ಅಪ್ಪ, ‘ಅಲ್ಲಿ ಓದು, ನಿಂಗೆ ಚೌಡಿ ಒಳ್ಳೇದು ಮಾಡ್ತಾಳೆ’ ಅಂತ ಅಲ್ಲಿ ಕೂರಿಸೋರು! ಬೆಳಿಗ್ಗೆ ಹತ್ತರಿಂದ ಮಧ್ಯಾಹ್ನ ಒಂದರವರೆಗೆ ಬಿಡುವಿಲ್ಲದೇ ಓದುತ್ತಿದ್ದೆ. ಮತ್ತೆ ಅಪ್ಪನೊಂದಿಗೆ ಊಟ, ಒಂದಿಷ್ಟು ಬಿಡುವು. ತೆಂಗಿನ ಮರದ ಕೆಳಗೆ ಮತ್ತೆ ಓದು ಸಾಗುತ್ತಿತ್ತು. ನಾನು ಮತ್ತು ಅಪ್ಪ ಬಿಟ್ಟರೆ ಮತ್ಯಾರು ಅಲ್ಲಿರುತ್ತಿರಲಿಲ್ಲ. ಅಪ್ಪ ಆಗಾಗ ‘ಸ್ವಲ್ಪ ಮಲಗೆದ್ದು ಓದು ಮಗಾ’ ಅಂತಿದ್ರು. ನನಗೆ ನಿದ್ದೆಯೇ ಬರುತ್ತಿರಲಿಲ್ಲ.

ಸೂರ್ಯ ಮುಳುಗಿದ ಮೇಲೆ ಅಪ್ಪನೊಂದಿಗೆ ಮನೆಗೆ ಹೋಗುತ್ತಿದ್ದೆ. ಅವ್ವ ಚಹಾ ಕೊಡೋಳು. ಕುಡಿದು ಪುಸ್ತಕ ಹಿಡಿದರೆ ಮತ್ತೆ ಊಟ ಮರೆಯುತ್ತಿದ್ದೆ. ನನ್ನೂರು ಯಾವುದೋ ಮೂಲೆಯ ಒಂದು ಹಳ್ಳಿ. ಕರೆಂಟು ಇದ್ರೆ ಇತ್ತು, ಇಲ್ಲ ಅಂದ್ರೆ ಇಲ್ಲ. ಕರೆಂಟು ಯಾವತ್ತೂ ನನಗೆ ಅಡ್ಡಿ ಅನಿಸಲಿಲ್ಲ. ಅವ್ವ ಸೀಮೆ ಎಣ್ಣೆ ಬುಡ್ಡಿನ ಯಾವತ್ತೂ ರೆಡಿ ಮಾಡಿ ಇಟ್ಟಿರುತ್ತಿದ್ದಳು. ಕರೆಂಟ್ ಹೋದ ನೆಪವಾಗಿ ಬುಡ್ಡಿ ಹೊತ್ತಿಕೊಳ್ಳುತ್ತಿತ್ತು. ಹೊಗೆಯಲ್ಲಿ ಕಣ್ಣು ಉರಿಯುತ್ತಿದ್ದರೂ ಹಾಸಿದ ಒಂದು ಗೋಣಿ ಚೀಲದ ಮೇಲೆ ನನ್ನ ಓದು ಸಾಗುತ್ತಿತ್ತು. ಅಂತಹ ಓದುಗಳೇ ನನ್ನನ್ನು ಕೈ ಹಿಡಿದದ್ದು. ಅವ್ವನ ರೊಟ್ಟಿ, ಮರದ ನೆಳಲು ಓದಿನ ಹುಚ್ಚು ಹೆಚ್ಚಿಸಿದ್ದವು.

–ಸದಾಶಿವ್ ಸೊರಟೂರು ಚಿಂತಾಮಣಿ

ಹರಕೆಯ ಬಲ

ನನಗೆ ಪರೀಕ್ಷೆ ಅಂದರೆ ದೊಡ್ಡ ತಲೆನೋವು. ಎಡೆಬಿಡದ ನಿದ್ದೆ. ಪಕ್ಕದ ಮನೆಯವಳು ಹೆಚ್ಚು ಮಾರ್ಕ್‌ ಪಡೆದಾಗ, ನನಗೆ ಮನೆಯಲ್ಲಿ ಬೈಗುಳ. ಅದು ಮಾತ್ರವಲ್ಲದೆ ಮನೆಗೆ ಬಂದ ನೆಂಟರಿಷ್ಟರಲ್ಲಿ, ಇವಳು ಕಲಿಯಲು ಸ್ವಲ್ಪ ಹಿಂದೆ ಎನ್ನುತ್ತಿದ್ದರು ಅಮ್ಮ.
ನಾನು 5ನೇ ತರಗತಿಯಲ್ಲಿದ್ದಾಗ ಕ್ಲಾಸ್ ಟೆಸ್ಟಿನಲ್ಲಿ ಜಸ್ಟ್ ಪಾಸ್ ಆಗಿದ್ದೆ. ಮಾರನೇ ದಿನ ಪೋಷಕರ ಜೊತೆ ಬರುವಂತೆ ಶಿಕ್ಷಕರು ತಿಳಿಸಿದರು. ಅಮ್ಮನ ಮನವೊಲಿಸಿ ಶಾಲೆ ಮೆಟ್ಟಿಲೇರಿದೆವು. ‘ಬೆಳಿಗ್ಗೆ ಬೇಗ ಎದ್ದು ಓದಬೇಕು. ಮಕ್ಕಳು ಓದುವಾಗ ಅವರ ಜೊತೆ ಕುಳಿತು ಅವರು ಓದುತಿದ್ದಾರೆಯೇ ಗಮನ ಹರಿಸಬೇಕು’ ಎಂದು ಅಮ್ಮನಿಗೂ ತಾಕೀತು ಬಂತು. ಅಲ್ಲಿಂದ ಪರೀಕ್ಷೆ ಹತ್ತಿರ ಬಂದಾಗ ಬೆಳಗ್ಗೆ ಬೇಗನೇ ಎಬ್ಬಿಸಿ, ಚಹಾ ಮಾಡಿಕೊಟ್ಟು ಬೀಡಿ ಕಟ್ಟುತ್ತಾ ನನ್ನನ್ನು ಅಪರಾಧಿಯಂತೆ ಕಾಯುತ್ತಿದ್ದಳು.

ಹತ್ತನೇ ತರಗತಿಯಲ್ಲಿ ಪಾಸ್ ಆಗೋದು ಅಂದ್ರೆ ಗೋಲ್ಡ್ ಮೆಡಲ್ ತೆಗೆದುಕೊಂಡಂತೆ. ಇಂಗ್ಲಿಷ್, ಗಣಿತದಲ್ಲಿ ಪಾಸ್ ಆಗೋದು ಅಂದ್ರೆ ಸುಲಭದ ಮಾತಲ್ಲ. ಮನೆ ದೈವಕ್ಕೆ ಅಜ್ಜಿ ಹರಕೆ ಹೊತ್ತಳು. ಅಂತೂ ಹರಕೆಗಳಿಂದಲೇ ಪಾಸಾಗ್ತಿನಿ ಅನ್ನೋ ಭರವಸೆಯನ್ನು ಮನೆಯವರು ತುಂಬಿದರು.

ಪ್ರಿಪರೇಟರಿ ಎಕ್ಸಾಂ ಹತ್ತಿರ ಸುಳಿಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಮೆಂಟರ್‌ ನೇಮಿಸಿದರು. ನನಗೆ ಸಿಕ್ಕ ಮೆಂಟರ್ ತುಂಬಾ ಜೋರು. ಅವರು ಹೇಳಿದ ಕೆಲಸ ಪೂರ್ಣವಾಗುವವರೆಗೆ ಬಿಡುತ್ತಿರಲಿಲ್ಲ. ಅತ್ತು ಹೊರಳಾಡಿದರೂ ಕಂಠಪಾಠ ಮಾಡದೇ ಬಿಡುತ್ತಿರಲಿಲ್ಲ. ಬೆಳಿಗ್ಗೆ ನಾವು ಎದ್ದು ನಮ್ಮ ಟೀಚರ್‌ಗೆ ‘ಮಿಸ್ ಕಾಲ್’ ಬೇರೆ ಕೊಡಬೇಕಿತ್ತು. ನಾನು ಅಲಾರಂ ಇಟ್ಟು ಎದ್ದು ‘ಮಿಸ್ ಕಾಲ್’ ಕೊಟ್ಟು ಪುನಃ ಮಲಗುತ್ತಿದ್ದೆ. ಪ್ರಿಪರೇಟರಿಯನ್ನು ಹೇಗೋ ನಿಭಾಯಿಸಿದೆ.

ಆದರೆ ಇನ್ನು ಉಳಿದಿದ್ದುದು ಮಹಾ ಪರೀಕ್ಷೆ. ಎಕ್ಸಾಂ ಹಾಲ್‍ನಲ್ಲಿ ಗುಳ್ಳೆ ನರಿಯಂತೆ ಹೊಂಚು ಹಾಕುತ್ತಿದ್ದ ಸಿ.ಸಿ ಕ್ಯಾಮೆರಾಗಳು ನನ್ನನ್ನೇ ನೋಡುತ್ತಿರುತ್ತವೆ ಎನ್ನುವ ಭಯದಲ್ಲಿ ಓದಲು ಶುರು ಮಾಡಿದೆ. ಊಟ ತಿಂಡಿ ಮರೆತರೂ ಪರೀಕ್ಷೆಯನ್ನು ಮರೆಯುವಂತಿರಲಿಲ್ಲ. ಎಲ್ಲದರಲ್ಲೂ ಜಸ್ಟ್ ಪಾಸ್ ಆಗಬೇಕು ಅನ್ನೋದು ನನಗಿದ್ದ ನಿಲುವು.

ಹಳೆ ಪ್ರಶ್ನೆ ಪತ್ರಿಕೆಗಳನ್ನು ಹುಡುಕಿ, ಜೆರಾಕ್ಸ್ ಸೆಂಟರ್‌ನಲ್ಲಿ ಗಂಟೆಗಟ್ಟಲೇ ಕ್ಯೂ ನಿಲ್ಲುತ್ತಿದ್ದ ಪರಿ, ಅಡಿಕೆ ತೋಟದಲ್ಲಿ ಬಾಳೆ ಗಿಡದ ನೆರಳಿನಲ್ಲಿ ಓದುತ್ತಿದ್ದ ನೆನಪು, ದೀಪದ ಬೆಳಕಲ್ಲಿ ನನ್ನ ನೆರಳನ್ನೇ ನೊಡುತ್ತಾ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದದ್ದು, ಬೆಳಿಗ್ಗೆ ಬೇಗನೇ ಎದ್ದು ‘ಮಿಸ್ ಕಾಲ್’ ಕೊಡುತ್ತಿದ್ದದ್ದು ಪರೀಕ್ಷಾ ತಯಾರಿಯ ಸವಿ ನೆನಪು. ಪರೀಕ್ಷೆ ಬರೆದೆ. ಫಲಿತಾಂಶ ಪ್ರಕಟವಾದಾಗ ನೆಂಟರ ಮನೆಯಲ್ಲಿದ್ದೆ. ಅವತ್ತು ನನ್ನ ಗೆಳತಿ ‘ಫಸ್ಟ್ ಕ್ಲಾಸ್‍ನಲ್ಲಿ ಪಾಸಾಗಿದ್ದಿಯಾ’ ಎಂದು ಮೆಸೇಜ್ ಕಳುಹಿಸಿದಳು. ಮೌಂಟ್ ಎವರೆಸ್ಟ್ ಹತ್ತಿದಷ್ಟು ಖುಷಿಯಾಯ್ತು. ಅಜ್ಜಿಯ ಹರಕೆ ನೆನಪಾಯ್ತು.

–ವಿಜೇತಾ ಎ. ಕೊಕ್ಕಡ ಉಜಿರೆ

ಸಂಡಿಗೆಯ ಸಾಥ್‌

ಪರೀಕ್ಷೆಯ ಪರಿಕಲ್ಪನೆಯೇ ಆತಂಕ. ಈಗಿನ ಶಾಲಾ-ಕಾಲೇಜು ಪರೀಕ್ಷೆಯ ಸಿದ್ಧತೆಯೇ ವಿಚಿತ್ರ. ಟ್ಯೂಷನ್‌ಗಳ ಭರಾಟೆಯಲ್ಲಿ ಓದುವುದಕ್ಕೂ ಪುರುಸೊತ್ತಿಲ್ಲದಂತೆ ಪರೀಕ್ಷೆಯ ತಯಾರಿ ಮಕ್ಕಳಿಗೆ. ಎಲ್ಲ ಮನರಂಜನೆಯೂ ಬಂದ್.

ಆದರೆ, ನಮ್ಮ ಪರೀಕ್ಷೆ ಸಿದ್ಧತೆ ಹೀಗಿರಲಿಲ್ಲ. ನಮಗೆ ಟಿ.ವಿಯೇ ಗೊತ್ತಿಲ್ಲ, ಮನೆಪಾಠ ಸಲ್ಲದ್ದು. ಓದು ಮನೆಯಲ್ಲೇ ನಡೆಯಬೇಕು. ಪರೀಕ್ಷೆ ಆಗ ವರುಷಕ್ಕೊಮ್ಮೆ ಬರುವ ನೆಂಟರಂತೆ. ಅದೂ ಮಾರ್ಚ್‌ನ ಬಿಸಿಲಲ್ಲಿ. ಹೀಗಾಗೇ ಪರೀಕ್ಷೆಯ ಸಿದ್ಧತೆಯ ಜೊತೆಗೆ ಅಮ್ಮನ ಹಪ್ಪಳ ಹಾಗೂ ಸಂಡಿಗೆಗಳ ಸಂಭ್ರಮ. ನಮ್ಮ ಮನೆಯ ಹಿತ್ತಲು ಒಂದು ಸಣ್ಣ ತೋಟ. ಬಗೆ ಬಗೆಯ ಹೂವು-ಹಣ್ಣಿನ ಮರಗಿಡಗಳಿಂದ ತುಂಬಿತ್ತು. ಪಕ್ಷಿ ಸಂಕುಲಗಳ ಜೊತೆ ಕಾಗೆ, ಗುಬ್ಬಿ, ಅಳಿಲುಗಳ ದೊಡ್ಡ ಸೈನ್ಯ. ಆದರೆ ಅಮ್ಮ ಇಟ್ಟ ಅರಳು ಸಂಡಿಗೆಯನ್ನು ಅಳಿಲ ದಾಳಿಯಿಂದ ರಕ್ಷಿಸುವ ಅಮ್ಮನ ಸೇನಾನಾಯಕಿ ನಾನೇ! ‘ಹಿತ್ತಲ ಮಾವಿನ ಮರದ ನೆರಳಲ್ಲಿ ಕೂತ್ಕೊಂಡು ಓದ್ಕೋ...ಹಾಗೇ ಸಂಡಿಗೆ ಕಡೆ ಗಮನ ಇಡು... ತಿನ್ನಕ್ಕೆ ಏನಾದರೂ ಕೊಡ್ತೀನಿ’ ಎಂಬ ಲಂಚ.

ಅಮ್ಮನಿಗೆ ನಿಧಾನವಾಗಿ ಅರಿವಾಗಿದ್ದು ನಾಲ್ಕು ಕಾಲಿನ ಅಳಿಲಿಗಿಂತ ಅವರು ಕೂರಿಸಿದ್ದ ಈ ಎರಡು ಕಾಲಿನ ಅಳಿಲು ಹೆಚ್ಚು ಉಪದ್ರವದ್ದು ಅಂತ! ಬಿಸಿಲಿನಲ್ಲಿ ಅರ್ಧ ಒಣಗಿದ ಸಂಡಿಗೆಯ ರುಚಿ ಪೂರಾ ಒಣಗಿ, ಎಣ್ಣೆಯಲ್ಲಿ ಹದವಾಗಿ ಹುರಿದ ಸಂಡಿಗೆಗೂ ಬರದು! ಇವುಗಳನ್ನು ಮೆಲ್ಲುತ್ತಾ ಓದಿದ್ದು, ಪರೀಕ್ಷೆಯ ಆತಂಕಗಳನ್ನು ಕಡಿಮೆ ಮಾಡಿತ್ತು. ಸ್ನಾತಕೋತ್ತರ ಪರೀಕ್ಷೆಯವರೆಗೂ ಈ ಸಂಡಿಗೆಯ ಜೊತೆಗೇ ಓದು.

ಹೀಗೆ ನಡೆದಿದ್ದ ಪರೀಕ್ಷೆ ತಯಾರಿ ಎಂದೂ ನಮ್ಮನ್ನು ಜೀವನದ ನಿಜಗಳಿಗೆ ದೂರಮಾಡಲಿಲ್ಲ. ಹಬ್ಬ, ಸಂಡಿಗೆಗಳಂತೆ ಮನೆಗೆ ಬರುವ ನೆಂಟರೂ ನಿರಂತರ. ಈ ಸದ್ದಿನ ಮಧ್ಯವೇ ಓದು ಸಾಗಬೇಕು, ಸಾಗುತ್ತಿತ್ತು. ನಮ್ಮ ವಿದ್ಯಾಭ್ಯಾಸ ಬೌದ್ಧಿಕವಾದ ಪ್ರಯೋಗಶಾಲೆ ಆಗಲಿಲ್ಲ; ಬದಲಾಗಿ, ಎಲ್ಲವನ್ನೂ ಒಳಗಾಗಿಸಿಕೊಳ್ಳಲು, ನಿರ್ಭಯವಾದ ಜೀವನಕ್ಕೆ ಸಿದ್ಧಪಡಿಸುತ್ತಿತ್ತು. ಯಾಂತ್ರಿಕತೆ ಹೆಚ್ಚಾಗಿ ಭಾದಿಸುತ್ತಿರಲಿಲ್ಲ. ಬೇರಿಲ್ಲದ, ಬೇರೂರಲು ಜಾಗವೇ ಇಲ್ಲದ ಇಂದಿನ ಜಾಳಾದ ಪರಿಸ್ಥಿತಿಯಲ್ಲಿ ನಾನು ಗಟ್ಟಿಯಾಗಿ ನಿಲ್ಲಲು ಅನುವು ಮಾಡಿಕೊಟಿದ್ದು ಈ ಪರಿಯ ಪರೀಕ್ಷಾ ತಯಾರಿಯೇ ಎನ್ನುವುದರಲ್ಲಿ ಅನುಮಾನವೂ ಇಲ್ಲ.

–ರೇಖಾ ದತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT