ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಎಸ್.ಪಿ. ಆನೆಯನ್ನು ಪಳಗಿಸೀತೇ ಬಿಜೆಪಿ?

Last Updated 15 ಮಾರ್ಚ್ 2018, 4:38 IST
ಅಕ್ಷರ ಗಾತ್ರ

ನವದೆಹಲಿ: ಹಿಂದಿ ಸೀಮೆಯ ಹೃದಯ ಭಾಗವೆಂದೇ ಪರಿಗಣಿಸಲಾಗುವ ಉತ್ತರ ಪ್ರದೇಶ ಮತ್ತು ಬಿಹಾರದ ಉಪಚುನಾವಣೆಗಳ ಫಲಿತಾಂಶಗಳು ನಾಟಕೀಯ ನಿಜ. ಆದರೆ ಪ್ರತಿಪಕ್ಷಗಳು ಇವುಗಳನ್ನು ಅತಿಯಾಗಿ ಹಿಗ್ಗಿಸಿ ಅತಿಶಯ ಆನಂದದಲ್ಲಿ ಮುಳುಗುವುದು ಭ್ರಮೆಯನ್ನು ಆಲಿಂಗಿಸಿಕೊಂಡಂತೆಯೇ ಸರಿ.

ಬಿಜೆಪಿಗೆ ಸೋಲೇ ಇಲ್ಲ ಎಂಬ ಭಾವನೆ ದಿಟವಲ್ಲ ಎಂದು ಈ ಫಲಿತಾಂಶಗಳು ಸಾರಿವೆ. ಜನಸಮೂಹದ ಜೊತೆ ಸಂವಾದ ನಡೆಸಿ ಮನ ಗೆಲ್ಲಬಲ್ಲ ವರ್ಚಸ್ವೀ ನಾಯಕ ನರೇಂದ್ರ ಮೋದಿ ನಾಯಕತ್ವದ ಬಿಜೆಪಿಯನ್ನು ಸೋಲಿಸುವುದಕ್ಕೆ ದಾರಿ ಇದೆ ಎಂಬುದನ್ನು ತೋರಿವೆ.

ಆದರೆ 2019ರಲ್ಲಿ ಈ ದಾರಿಯಲ್ಲಿ ನಡೆಯಲು ಕೇವಲ ಹಸಿ ಹಸಿ ಚುನಾವಣಾ ಮೈತ್ರಿ ಸಾಲದು. ತಮ್ಮ ನಡುವಣ ಅಹಮಿಕೆಗಳನ್ನು ಪ್ರತಿಷ್ಠೆಗಳನ್ನು ಅದುಮಿಟ್ಟು, ಜನ ಒಪ್ಪಬಹುದಾದ, ವಿಶ್ವಾಸ ಇಡಬಹುದಾದ ರಾಜಕೀಯ ಪರ್ಯಾಯವನ್ನು ರೂಪಿಸುವ ದಿಕ್ಕಿನಲ್ಲಿ ಪ್ರತಿಪಕ್ಷಗಳು ಶ್ರಮಿಸಬೇಕಿದೆ. ತಾನು ಗೆದ್ದಿರುವ ಸ್ಥಾನಗಳನ್ನು 2019ರಲ್ಲೂ ಬಿಜೆಪಿ ಉಳಿಸಿಕೊಳ್ಳುವ ಗಂಭೀರ ಸವಾಲು ಬಿಜೆಪಿ ಮುಂದಿದೆ. ಆದರೆ ಈ ಸವಾಲಿಗಿಂತಲೂ ದೊಡ್ಡ ಸವಾಲನ್ನು ಪ್ರತಿಪಕ್ಷಗಳು ಎದುರಿಸಿವೆ. ಅದೆಂದರೆ ಅವುಗಳು ನಿಜಾರ್ಥದಲ್ಲಿ ಒಂದಾಗಿ ಪರ್ಯಾಯ ಕಟ್ಟುವುದು.

ಉತ್ತರಪ್ರದೇಶ- ಬಿಹಾರದಲ್ಲಿ ಗರಿಷ್ಠ ಸೀಟುಗಳನ್ನು ಗೆದ್ದು ಗಳಿಸಿರುವ ಎತ್ತರವನ್ನು ಬಹುಕಾಲ ಕಾಪಾಡಿಕೊಳ್ಳುವುದು ಸುಲಭ ಅಲ್ಲ. ನೀತಿ ನಿರ್ಧಾರಗಳು, ಚುನಾವಣಾ ಭರವಸೆಗಳನ್ನು ಜಾರಿಗೆ ತಾರದೆ ಕೇವಲ ಮಾತಿನ ಮನೆ ಕಟ್ಟಿದರೆ ನಡೆಯುವುದಿಲ್ಲ. ಮತದಾರರು ಹೇಗಿದ್ದರೂ ತನಗೇ ಒಲಿಯುತ್ತಾರೆ ಎಂದು ಸದರ ವಹಿಸುವುದು ಸಲ್ಲದು ಎಂಬ ಎಚ್ಚರಿಕೆಯ ಸಂದೇಶವನ್ನು ಇಂದಿನ ಫಲಿತಾಂಶಗಳು ಬಿಜೆಪಿಗೆ ರವಾನಿಸಿವೆ.

ಆರ್ಥಿಕ ಅಪರಾಧಗಳ ಗೋಜಲಿನಲ್ಲಿ ಸಿಲುಕಿದ್ದ ಬಿಎಸ್ಪಿ ಅಧಿನಾಯಕಿ ಮಾಯಾವತಿ ಅವರ 'ಆನೆ'ಯನ್ನು 'ಪಳಗಿಸಲು' ಇತ್ತೀಚಿನ ದಿನಗಳಲ್ಲಿ ಮುಂದಾಗಿತ್ತು ಬಿಜೆಪಿ. ಕರ್ನಾಟಕದ ವಿಧಾನಸಭಾ ಚುನಾವಣೆಗಳಲ್ಲಿ ತನಗೆ ಗೆಲುವು ಸಲೀಸಲ್ಲ ಎಂದು ಅರಿತ ಬಿಜೆಪಿ ದಲಿತ ಮತಗಳು ಹಂಚಿ ಹೋಗಿ ಕಾಂಗ್ರೆಸ್ಸನ್ನು ದುರ್ಬಲಗೊಳಿಸುವ ಹಂಚಿಕೆಯನ್ನು ಈಗಾಗಲೇ ಜಾರಿಗೊಳಿಸಿದೆ. ಮುಂಬರುವ ಲೋಕಸಭಾ ಚುನಾವಣೆಗಳಲ್ಲೂ 'ಆನೆಯನ್ನು ಪಳಗಿಸಿ' ಲಾಭ ಪಡೆಯುವ ದೂರದ ಹಂಚಿಕೆಯನ್ನು ಈಗಾಗಲೇ ರೂಪಿಸತೊಡಗಿದೆ.

'ಆನೆ'ಯನ್ನು ಪಳಗಿಸುವ ಕೆಲಸ ಅಸಾಧ್ಯ ಅಲ್ಲದಿದ್ದರೂ, ತಾವು ತಿಳಿದಷ್ಟು ಸಲೀಸಲ್ಲವೆಂದು ಇಂದಿನ ಹೊಸ ಬೆಳವಣಿಗೆ ಬಿಜೆಪಿಗೆ ಸಾರಿ ಹೇಳಿದೆ. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಾರ್ಟಿ ಮತ್ತು ಮಾಯಾವತಿ ಅವರ ಬಹುಜನ ಸಮಾಜ ಪಾರ್ಟಿ ಬಾಬರಿ ಮಸೀದಿ ನೆಲಸಮದ ನಂತರ ಜೊತೆಯಾಗಿ ಕೆಲಕಾಲ ಸಮ್ಮಿಶ್ರ ಸರ್ಕಾರ ರಚಿಸಿದ್ದುಂಟು. ಆದರೆ ಆನಂತರದ ಕಹಿ ಬೆಳವಣಿಗೆಗಳು ಎರಡೂ ಪಕ್ಷಗಳನ್ನು ಬದ್ಧ ರಾಜಕೀಯ ವೈರಿಗಳನ್ನಾಗಿ ಬದಲಾಯಿಸಿದ್ದವು.

ಸಮಾಜವಾದಿ ಪಕ್ಷದ ಅಧಿಕಾರ ದಂಡ ಇತ್ತೀಚೆಗೆ ತಂದೆ ಮುಲಾಯಂ ಸಿಂಗ್ ಯಾದವ್ ಅವರ ಕೈಯಿಂದ ಮಗ ಅಖಿಲೇಶ್ ಕೈಗೆ ವರ್ಗ ಆದ ನಂತರ ಈ ಎರಡೂ ಪಕ್ಷಗಳ ನಡುವಣ ದ್ವೇಷ ತುಸುವಾದರೂ ಕರಗತೊಡಗಿದ್ದ ಸೂಚನೆಗಳು ಕಂಡು ಬಂದಿದ್ದವು. ವಯಸ್ಸಿನಲ್ಲಿ ತಮಗಿಂತ ಹಿರಿಯರಾದ ಮಾಯಾವತಿ ಅವರನ್ನು 'ಬುವಾ' ಎಂದು (ಅತ್ತೆ- ತಂದೆಯ ಸೋದರಿ) ಅಖಿಲೇಶ್ ಕರೆಯತೊಡಗಿದ್ದುಂಟು. ಉತ್ತರಪ್ರದೇಶ ರಾಜಕಾರಣದ ಈ ಅಪರೂಪದ ಅತ್ತೆ-ಅಳಿಯ (ಬುವಾ-ಭತೀಜಾ) ಜೋಡಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಮಾತುಗಳು ಹುಸಿಯಾಗಿದ್ದವು. ಮೊನ್ನೆ ಮೊನ್ನೆ ಗೋರಖ್ ಪುರ ಮತ್ತು ಫೂಲ್ಪುರ ಉಪಚುನಾವಣೆಗಳ ವೇಳಾಪಟ್ಟಿ ಪ್ರಕಟ ಆದ ನಂತರವೂ ಇಂತಹ ಸಾಧ್ಯತೆಯೊಂದನ್ನು ಯಾರೂ ಕಂಡಿರಲಿಲ್ಲ.

ಆದರೆ ಉತ್ತರಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆ ಈ ಎರಡೂ ಪಕ್ಷಗಳನ್ನು ಹಠಾತ್ತನೆ ಹತ್ತಿರ ತಂದಿತ್ತು. ತನ್ನ ಅಭ್ಯರ್ಥಿ ಭೀಮರಾವ್ಅಂ ಬೇಡ್ಕರ್ ಅವರನ್ನು ರಾಜ್ಯಸಭೆಗೆ ತನ್ನ ಸದಸ್ಯ ಬಲದ ಮೇಲೆಯೇ ಆಯ್ಕೆ ಮಾಡಿ ಕಳುಹಿಸುವಷ್ಟು ಮತಗಳು ಮಾಯಾವತಿ ಅವರ ಬಳಿ ಇರಲಿಲ್ಲ. ಸಮಾಜವಾದಿ ಪಕ್ಷ ಅಗತ್ಯವಿರುವ ಹೆಚ್ಚುವರಿ ಮತಗಳ ಕೊರತೆಯನ್ನು ನೀಗಿಸಬೇಕು. ಈ ಉಪಕಾರಕ್ಕೆ ಬದಲಾಗಿ ಗೋರಖ್ ಪುರ ಮತ್ತು ಫೂಲ್ಪುರ ಉಪಚುನಾವಣೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೆ ಸಮಾಜವಾದಿ ಪಕ್ಷವನ್ನು ಬೆಂಬಲಿಸುವುದಾಗಿ ಮಾಯಾವತಿ ಸಾರಿದರು. ಎರಡೂ ಪಕ್ಷಗಳ ನಡುವೆ ನಡೆದ ಈ ಹಂಗಾಮಿ ಹೊಂದಾಣಿಕೆ ಇದೀಗ ಪರ್ಯಾಯ ರಾಜಕಾರಣದ ಹೊಸ ಬಾಗಿಲುಗಳನ್ನು ಉತ್ತರಪ್ರದೇಶದಲ್ಲಿ ಮತ್ತೊಮ್ಮೆ ತೆರೆದಿದೆ.

ಈ ರಾಜಕೀಯ ಬದ್ಧವೈರಿಗಳಿಬ್ಬರೂ ಮೋದಿ ಅಲೆಯ ವಿರುದ್ಧ ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟ ನಡೆಸಿದ್ದಾರೆ. ಉಪಚುನಾವಣೆಗಳ ಹಂಗಾಮಿ ಮೈತ್ರಿ ಈ ಬಗೆಯ ಭಾರೀ ಯಶಸ್ಸು ನೀಡೀತೆಂದು ಖುದ್ದು ಅಖಿಲೇಶ್- ಮಾಯಾವತಿ ಅವರೂ ನಿರೀಕ್ಷೆ ಮಾಡಿರಲಾರರು. ಪ್ರಬಲ ವೈರಿಯ ವಿರುದ್ಧ ಒಂದಾಗದೆ ವಿಧಿಯಿಲ್ಲ ಎಂಬ ಅನಿವಾರ್ಯವೇ ಇಬ್ಬರನ್ನು ಈ ಮೈತ್ರಿಯ ದಾರಿಯಲ್ಲಿ ಮುಂದುವರೆಸುವ ಸಾಧ್ಯತೆಯನ್ನು ತಳ್ಳಿ ಹಾಕಲು ಬರುವುದಿಲ್ಲ. ಹಾಗೆಯೇ ಮಹಾರಾಷ್ಟ್ರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್- ಎನ್.ಸಿ.ಪಿ. ಹಾಗೂ ಬಿಹಾರದಲ್ಲಿ ರಾಷ್ಟ್ರೀಯ ಜನತಾದಳ ಕಾಂಗ್ರೆಸ್ ಮತ್ತಿತರೆ ಪಕ್ಷಗಳು ಒಟ್ಟಾಗುವುದು ಅಸಾಧ್ಯವೇನೂ ಅಲ್ಲ.

ಸಮಾಜವಾದಿ ಪಕ್ಷದ ತಲೆಯಾಳುಗಳು, ಕಾರ್ಯಕರ್ತರು ಮತ್ತು ವಿಜಯೀ ಅಭ್ಯರ್ಥಿಗಳು ತಮ್ಮ ಗೆಲುವಿಗೆ ಮಾಯಾವತಿ ಅವರನ್ನು ಹಿಂಜರಿಯದೆ ಧಾರಾಳವಾಗಿ ಹೊಗಳಿದ್ದಾರೆ. ಇಂತಹ ಬಹಿರಂಗ ಹೊಗಳಿಕೆ ಮತ್ತು ಕೃತಜ್ಞತೆ ಸಮರ್ಪಣೆ ಇತ್ತೀಚಿನ ದಶಕಗಳಲ್ಲಿ ಇದೇ ಮೊದಲು ಎಂಬುದು ಗಮನಾರ್ಹ. ಮಾಯಾವತಿ ಅವರ ಜೊತೆ ಮೈತ್ರಿಗೆ ಹತ್ತು ಹೆಜ್ಜೆ ಮುಂದೆ ನಡೆಯಲು ತಾವು ಸಿದ್ಧ ಎಂಬ ನಿಚ್ಚಳ ಸೂಚನೆಯನ್ನು ಸಮಾಜವಾದಿ ಪಕ್ಷದ ನಾಯಕರು ನೀಡಿದ್ದಾರೆ.

ತಮ್ಮ ಪಕ್ಷದ ಮತಗಳು ಮೈತ್ರಿ ಮಾಡಿಕೊಳ್ಳಲಾಗುವ ಮತ್ತೊಂದು ಪಕ್ಷಕ್ಕೆ ವರ್ಗವಾಗುತ್ತವೆ. ಆದರೆ ಆ ಮತ್ತೊಂದು ಪಕ್ಷದ ಸವರ್ಣೀಯ ಮತಗಳು ತಮ್ಮ ಪಕ್ಷಕ್ಕೆ ವರ್ಗವಾಗುವುದಿಲ್ಲ ಎಂಬುದು ಮಾಯಾವತಿ ಅವರು ಬಹಳ ಹಿಂದೆಯೇ ಮನಗಂಡಿದ್ದ ಸತ್ಯ. ಈ ಕಹಿ ಸತ್ಯವೇ ಅವರನ್ನು ಮೈತ್ರಿಯಿಂದ ದೂರ ಇರಿಸಿದ್ದು ಸುಳ್ಳೇನೂ ಅಲ್ಲ. ಆದರೆ ಅಳಿವು ಉಳಿವಿನ ದಿನಗಳಲ್ಲೂ ಈ ದೂರವನ್ನು ಕಾಪಾಡಿಕೊಳ್ಳಲು ಅವರು ಬಯಸುತ್ತಾರೆಯೇ ಎಂಬುದನ್ನು ಮುಂಬರುವ ದಿನಗಳೇ ಹೇಳಬೇಕು. ಮಾಯಾವತಿ ಅವರು 'ನೆಲದ' ಮಾತು ಕೇಳುತ್ತಾರೆಯೋ ಅಥವಾ 'ಬಲ'ದ ಮಾತಿಗೆ ಕಿವಿಗೊಡುವ ಒತ್ತಡಕ್ಕೆ ಸಿಲುಕುವರೋ ಈಗಲೇ ಹೇಳಲು ಬಾರದು.

ಈ ಹಿಂದೆ ಬಿಹಾರದಲ್ಲಿ ನಿತೀಶ್ ಅವರ ಸಂಯುಕ್ತ ಜನತಾದಳ, ಕಾಂಗ್ರೆಸ್ ಪಕ್ಷ ಹಾಗೂ ಲಾಲೂ ಯಾದವ್ ಅವರ ರಾಷ್ಟ್ರೀಯ ಜನತಾದಳದ ಮಹಾಮೈತ್ರಿಕೂಟ ಬಿಜೆಪಿಯನ್ನು ಸೋಲಿಸಿತ್ತು. ಆದರೆ ನಿತೀಶ್ ಕುಮಾರ್ ತಾವು ವಿರೋಧಿಸಿದ್ದ ಬಿಜೆಪಿಯನ್ನೇ ಪುನಃ ಆಲಿಂಗಿಸಿಕೊಂಡರು. ಬಿಹಾರದ ಅರಾಡಿಯಾ, ಜೆಹಾನಾಬಾದ್ ಚುನಾವಣಾ ಫಲಿತಾಂಶಗಳು ನಿತೀಶ್ ಅವರನ್ನು ಇದೀಗ ಬೆಚ್ಚಿ ಬೀಳಿಸಿದ್ದರೆ ಅಚ್ಚರಿಯಿಲ್ಲ. ಲಾಲುಪ್ರಸಾದ್  ಅವರು ಜೈಲು ಪಾಲಾದರೂ ರಾಷ್ಟ್ರೀಯ ಜನತಾದಳ ಚುನಾವಣೆ ಗೆಲ್ಲಬಲ್ಲದು ಎಂಬ ಅಂಶವನ್ನು ಈ ಫಲಿತಾಂಶಗಳು ಸೂಚಿಸಿವೆ. ಒಂದು ಕಾಲಕ್ಕೆ ಅಜೇಯ ಎನಿಸಿದ್ದ ನಿತೀಶ್- ಬಿಜೆಪಿ ಮೈತ್ರಿ ಅಜೇಯ ಅಲ್ಲ ಎಂಬುದನ್ನೂ ಸಾರಿವೆ. ಬಿಜೆಪಿ ತೆಕ್ಕೆಯಿಂದ ಇತ್ತೀಚೆಗೆ ಹೊರಬಿದ್ದ ಬಿಹಾರದ ದಲಿತ ತಲೆಯಾಳು ಜೀತನ್ ರಾಂ ಮಾಂಝಿ ಅವರನ್ನು ಜೊತೆಗೆ ಸೇರಿಸಿಕೊಂಡ ಲಾಲು ಪುತ್ರ ತೇಜಸ್ವಿ ಯಾದವ್ ಅವರು ಅರಾಡಿಯಾ ಮತ್ತು ಜೆಹಾನಾಬಾದ್ ಉಪಚುನಾವಣೆಗಳನ್ನು ದೊಡ್ಡ ಅಂತರದಲ್ಲಿ ಗೆದ್ದಿರುವುದು ಸಾಧಾರಣ ಸಂಗತಿಯಲ್ಲ.

ಸಾಲು ಸಾಲು ಗೆಲುವುಗಳ ವಿಜಯೋತ್ಸವ ಆಚರಣೆಯ ನಡುವೆ ಬಿಜೆಪಿ ತುಸು ಮೈಮರೆತಂತಿದೆ. ಹೊಸ ಸೀಮೆಗಳನ್ನು ಗೆಲ್ಲುವ ಕುರಿತು ಕಂಡಿರುವ ಉತ್ಸಾಹ ಮತ್ತು ಚೈತನ್ಯಗಳು ಈಗಾಗಲೇ ಗೆದ್ದಿರುವ ಸೀಮೆಗಳನ್ನು ಉಳಿಸಿಕೊಳ್ಳುವಲ್ಲಿ ಕಂಡು ಬರುತ್ತಿಲ್ಲ. ಒಂದು ಬಗೆಯ ದಣಿವು ಆಲಸ್ಯ ಅಹಂಕಾರ ನುಸುಳಿರುವ ಸೂಚನೆಗಳಿವೆ. ಜನಸೇವೆಯನ್ನು ಮರೆತು ಅಧಿಕಾರವೊಂದೇ ಅಂತಿಮ ಗುರಿ ಎಂದು ಭಾವಿಸಿದಂತಿದೆ.

ಹಾಲಿ ರಾಜಕಾರಣದಲ್ಲಿ ಇತರೆ ಎಲ್ಲ ಪಕ್ಷಗಳಿಗಿಂತಲೂ ಜಾಣ ಪಕ್ಷ ಬಿಜೆಪಿ. ಚುನಾವಣೆ ಗೆಲ್ಲುವ ಕಲೆ ಅರಗಿಸಿ ಕುಡಿದಂತೆ ಕಂಡಿದೆ.  ಹಿನ್ನಡೆಯನ್ನು ಬಲು ಬೇಗ ಗುರುತಿಸಿ ತನ್ನ ತಂತ್ರಗಳನ್ನು ಮರು ರೂಪಿಸಿ ತಿದ್ದಿಕೊಳ್ಳಬಲ್ಲ ಪಕ್ಷ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಮುಂದೆಯೂ ಒಂದಾಗಬಲ್ಲ ಸಾಧ್ಯತೆಯನ್ನು ಎದುರಿಸಲು ರಣತಂತ್ರ ಹೆಣೆಯುವಲ್ಲಿ ಸಂಶಯವೇ ಇಲ್ಲ.

ಅಧಿಕಾರ ಸೂತ್ರ ಹಿಡಿದ ಒಂದೇ ವರ್ಷದಲ್ಲಿ ಘೋರ ಮುಖಭಂಗ ಅನುಭವಿಸಿರುವ ಯೋಗಿ ಆದಿತ್ಯನಾಥ ಅವರ ಸರ್ಕಾರ ಆಡಳಿತ ವಿರೋಧಿ ಅಲೆಯ ನೆವವನ್ನೂ ನೀಡುವಂತಿಲ್ಲ.ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪ್ರತಿನಿಧಿಸಿದ್ದ ಕ್ಷೇತ್ರಗಳಲ್ಲಿನ ಈ ಸೋಲು ಈಶಾನ್ಯ ರಾಜ್ಯಗಳ ವಿಜಯೋತ್ಸವಕ್ಕೆ ತಣ್ಣೀರು ಎರಚಿವೆ.

ತ್ರಿಕೋನ ಅಥವಾ ಬಹುಕೋನಗಳ ಚುನಾವಣಾ ಸ್ಪರ್ಧೆಯಲ್ಲಿ ಗೆಲ್ಲುವುದು ಸುಲಭ. ವಿಶೇಷವಾಗಿ ಬಲಿಷ್ಠ ಪ್ರಾದೇಶಿಕ ಪಕ್ಷಗಳಿರುವ ರಾಜ್ಯಗಳಲ್ಲಿ ನೇರ ಸ್ಪರ್ಧೆ ಏರ್ಪಟ್ಟರೆ ಗೆಲುವು ಕಠಿಣ ಎಂಬ ಸತ್ಯವನ್ನು ಬಿಜೆಪಿ ಇದೀಗ ಮನಗಂಡಿದೆ.

2019ರ ಲೋಕಸಭಾ ಚುನಾವಣೆ ಸ್ಪರ್ಧೆ ಬಿಜೆಪಿ ಪರ ಏಕಪಕ್ಷೀಯ ಆಗಲಾರದು ಎಂಬ ಸಂದೇಶವನ್ನು ಗುಜರಾತ್ ರವಾನಿಸಿತ್ತು. ಇತ್ತೀಚಿನ ಉಪಚುನಾವಣೆಗಳು ಈ ಸಂದೇಶವನ್ನು ಮತ್ತಷ್ಟು ಪುಷ್ಟೀಕರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT