ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ನಲ್ಲಿ ಕನ್ನಡಿಗನ ಮಿಂಚು

Last Updated 15 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಸಿನಿಮಾಗಳಲ್ಲಿ ಕ್ಯಾಮೆರಾದಷ್ಟೇ ಧ್ವನಿ ವಿನ್ಯಾಸಕ್ಕೂ(ಸೌಂಡ್‌ ಡಿಸೈನಿಂಗ್) ಪ್ರಾಮುಖ್ಯವಿದೆ. ಕ್ಯಾಮೆರಾ ದೃಶ್ಯ ಕಟ್ಟಿಕೊಡುತ್ತದೆ. ಪ್ರತಿ ದೃಶ್ಯಕ್ಕೂ ನಾವು ಧ್ವನಿ ವಿನ್ಯಾಸ ನೀಡುತ್ತೇವೆ. ಚಿತ್ರವೊಂದು ಅಂತರರಾಷ್ಟ್ರೀಯಮಟ್ಟದ ಗುಣಮಟ್ಟ ಕಾಯ್ದುಕೊಳ್ಳಲು ಇದರ ಅಗತ್ಯವಿದೆ’ ಎಂದು ಶಬ್ದದ ಮಹತ್ವ ಬಿಚ್ಚಿಟ್ಟರು ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಕನ್ನಡಿಗರಾದ ಸೌಂಡ್‌ ಡಿಸೈನರ್‌ ವಿಜಯ್‌ಕುಮಾರ್.

ಸಿನಿಮಾದಲ್ಲಿ ಮ್ಯೂಸಿಕ್‌ ಹೊರತಾಗಿ ಕೆಲವು ಸೌಂಡ್‌ಗಳಿರುತ್ತವೆ. ಉದಾಹರಣೆಗೆ ಜನನಿಬಿಡ ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬರು ಹೂವು, ತರಕಾರಿ ಖರೀದಿಸುತ್ತಿದ್ದಾರೆ ಎಂದಿಟ್ಟುಕೊಳ್ಳಿ. ಆಗ ಅಲ್ಲಿನ ಪರಿಸರದಲ್ಲಾಗುವ ಶಬ್ದಗಳು(ವಾಹನಗಳ ಓಡಾಟ, ಸಡನ್‌ ಆಗಿ ಹಾಕಿದ ಬ್ರೇಕ್, ಇಂಡಿಕೇಟರ್‌ ಸೌಂಡ್‌, ಜನರ ಗದ್ದಲ, ವ್ಯಾಪಾರಿಗಳ ಕೂಗಾಟ) ಮತ್ತು ಆಕೆ ನಡೆಯುವಾಗ ಹೊರಹೊಮ್ಮುವ ಸಪ್ಪಳ ಮುಂತಾದ ಸೂಕ್ಷ್ಮವನ್ನು ಮ್ಯೂಸಿಕ್‌ನ ಗ್ಯಾಪ್‌ ನಡುವೆ ಪ್ರೇಕ್ಷಕರಿಗೆ ಪರಿಣಾಮಕಾರಿ ಕಟ್ಟಿಕೊಡುವುದೇ ‘ಸೌಂಡ್‌ ಡಿಸೈನಿಂಗ್’.

ವಿಜಯ್‌ಕುಮಾರ್‌ ತಂದೆ ಮಳವಳ್ಳಿ ತಾಲ್ಲೂಕಿನ ಗೌಡಗೆರೆಯವರು. ಉದ್ಯೋಗ ಅರಸಿ ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಗೆ ಬಂದರು. ಅಲ್ಲಿನ ರೇಷ್ಮೆ ನೂಲು ಬಿಚ್ಚಣಿಕೆ ಕೇಂದ್ರದಲ್ಲಿ ಕೆಲಸಕ್ಕೆ ಸೇರಿದರು. ಹಾಗಾಗಿ, ವಿಜಯ್‌ಕುಮಾರ್‌ ಗೌಡಗೆರೆ, ಕೊಳ್ಳೇಗಾಲ, ಯಳಂದೂರಿನಲ್ಲಿ ಪ್ರಾಥಮಿಕದಿಂದ ಪದವಿಪೂರ್ವದವರೆಗೆ ಶಿಕ್ಷಣ ಪೂರೈಸಬೇಕಾಯಿತು. ಬಳಿಕ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಬಿ.ಕಾಂ. ಪದವಿ ಪೂರ್ಣಗೊಳಿಸಿದರು. ಇದೇ ವೇಳೆ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಡಿಪ್ಲೊಮ ಶಿಕ್ಷಣ ಕೂಡ ಪಡೆದರು. ಬಳಿಕ ಅವರು ಉದ್ಯೋಗ ಅರಸಿ ಪಯಣ ಬೆಳೆಸಿದ್ದು ಮುಂಬೈಗೆ.

‘ಮುಂಬೈನ ಆರಾಧನಾ ಸ್ಟುಡಿಯೊದಲ್ಲಿ ಆರು ವರ್ಷ ಕೆಲಸ ಮಾಡಿದೆ. ಬಿಡುವಿನ ವೇಳೆ ಅಲ್ಲಿಯೇ ಸೌಂಡ್‌ ಎಡಿಟಿಂಗ್‌ ಕೆಲಸ ಕಲಿತೆ. ನನಗೆ ರಸೂಲ್‌ ಪೂಕುಟ್ಟಿ ಪರಿಚಯವಾದದ್ದು ಅಲ್ಲಿಯೇ. ಬಳಿಕ ಅವರ ಕ್ಯಾನರೀಸ್‌ ಪೋಸ್ಟ್‌ ಸೌಂಡಿಂಗ್‌ನಲ್ಲಿ ಅಸೋಸಿಯೇಟ್ ಸೌಂಡ್‌ ಎಡಿಟರ್‌ ಆಗಿ ಸೇರಿದೆ’ ಎಂದು ತಮ್ಮ ವೃತ್ತಿಬದುಕಿನ ಆರಂಭದ ದಿನಗಳನ್ನು ಮೆಲುಕು ಹಾಕುತ್ತಾರೆ.

‘ಸ್ಲಮ್‌ ಡಾಗ್‌ ಮಿಲೇನಿಯರ್ಸ್‌’ ಚಿತ್ರದ ಶಬ್ದ ಗ್ರಹಣಕ್ಕೆ ರಸೂಲ್ ಪೂಕುಟ್ಟಿ ಆಸ್ಕರ್‌ಗೆ ಭಾಜನರಾದರು. ಈ ಚಿತ್ರದ ಹಿಂದಿ ಅವತರಣಿಕೆಗೆ ಸೌಂಡ್‌ ಎಡಿಟಿಂಗ್‌ ಮಾಡಿದ್ದು ವಿಜಯ್‌ಕುಮಾರ್ ಎಂಬುದು ಹೆಮ್ಮೆಯ ಸಂಗತಿ.

ಇಲ್ಲಿಯವರೆಗೆ ಅವರು 150ಕ್ಕೂ ಹೆಚ್ಚು ಚಿತ್ರಗಳಿಗೆ ಸೌಂಡ್‌ ಎಡಿಟಿಂಗ್‌ ಮಾಡಿದ್ದಾರೆ. ಹಿಂದಿಯ ‘ಬ್ಲೂ’ ಚಿತ್ರದ ಅರ್ಧದಷ್ಟು ಚಿತ್ರೀಕರಣ ನೀರಿನೊಳಗೆ ನಡೆದಿದೆ. ಇದರ ಶಬ್ದವನ್ನು ನೀರಿನಲ್ಲಿಯೇ ಗ್ರಹಣ ಮಾಡಲಾಗಿದೆ. ಇದು ಅವರ ಪ್ರತಿಭೆಗೆ ಸಾಕ್ಷಿ. ರಜನೀಕಾಂತ್‌ ಅವರ ‘ರೋಬೋಟ್‌’ ಚಿತ್ರದಲ್ಲಿ ಅವರ ಕೈಚಳಕವಿದೆ. ಅದರ ಮುಂದುವರಿದ ಭಾಗ ‘ರೋಬೊ 2.0’ ಚಿತ್ರಕ್ಕೂ ಧ್ವನಿವಿನ್ಯಾಸದ ಕೆಲಸ ನಡೆದಿದೆ ಎನ್ನುತ್ತಾರೆ ಅವರು.

ಹಿಂದಿಯ ‘ರಾಒನ್’, ‘ಬ್ಲಾಕ್‌’, ‘ಇಂಗ್ಲಿಷ್‌ ವಿಂಗ್ಲಿಷ್‌’ ಅವರು ಸೌಂಡ್‌ ಡಿಸೈನಿಂಗ್‌ ಮಾಡಿರುವ ಪ್ರಮುಖ ಚಿತ್ರಗಳು. ತೆಲುಗು, ಮಲಯಾಳಂ ಚಿತ್ರಗಳಿಗೂ ಧ್ವನಿವಿನ್ಯಾಸ ನೀಡಿದ್ದಾರೆ. ಪಂಜಾಬಿನ ದೊಡ್ಡ ಬಜೆಟ್‌ ಚಿತ್ರ ‘ಸುಬೇದರ್‌ ಜೋಗಿಂದರ್ ಸಿಂಗ್’ ಚಿತ್ರಕ್ಕೂ ಶಬ್ದಗ್ರಹಣ ನೀಡುವ ಕೆಲಸ ನಡೆದಿದೆಯಂತೆ.

ಹಾಲಿವುಡ್‌ನಲ್ಲಿ ಸೌಂಡ್‌ ಎಡಿಟರ್‌ ಅಸೋಸಿಯೇಷನ್‌ ಆದ ಎಂ.‍ಪಿ.ಎಸ್‌.ಸಿ ಇದೆ(ಮೋಷನ್ ಪಿಕ್ಚರ್‌ ಸೌಂಡ್‌ ಎಡಿಟರ್ಸ್‌). ಅತ್ಯುತ್ತುಮ ಧ್ವನಿವಿನ್ಯಾಸ ಚಿತ್ರಗಳಿಗೆ ಇದು ‘ಗೋಲ್ಡರ್‌ ರೀಲ್‌ ಅವಾರ್ಡ್‘ ನೀಡುತ್ತದೆ. ದೆಹಲಿಯ ನಿರ್ಭಯಾ ಪ್ರಕರಣ ಕುರಿತ ‘ಇಂಡಿಯಾಸ್‌ ಡಾಟರ್‌’ ಸಾಕ್ಷ್ಯಚಿತ್ರವನ್ನು ಬಿ.ಬಿ.ಸಿ. ಬಿತ್ತರಿಸಿತ್ತು. ಇದರ ಧ್ವನಿವಿನ್ಯಾಸ ನೀಡಿದ್ದು ರೂಸಲ್‌ ಪೂಕುಟ್ಟಿ ಮತ್ತು ವಿಜಯ್‌ಕುಮಾರ್‌ ತಂಡಕ್ಕೆ ‘ಗೋಲ್ಡನ್‌ ರೀಲ್‌ ಅವಾರ್ಡ್‌’ ಕೂಡ ಲಭಿಸಿದೆ.

‘ಕೆಲವು ಸ್ಥಳಗಳು ತನ್ನದೆ ಆದ ವೈಶಿಷ್ಟ್ಯ ಹೊಂದಿರುತ್ತವೆ. ಅಲ್ಲಿನ ಶಬ್ದವೂ ಭಿನ್ನ. ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿರುವ ಶಬ್ದದ ವಿನ್ಯಾಸವೇ ಬೇರೆಯಾಗಿರುತ್ತದೆ. ಅದನ್ನು ಪ್ರೇಕ್ಷಕರಿಗೆ ಉಣಬಡಿಸುವುದು ಸೌಂಡ್‌ ಡಿಸೈನಿಂಗ್‌ನ ಉದ್ದೇಶ’ ಎಂದು ವಿವರಿಸುತ್ತಾರೆ.

ಯಾಣದಲ್ಲಿರುವ ಶಬ್ದ ಭಿನ್ನವಾಗಿದೆ. ಅಲ್ಲಿ ಸಾಕಷ್ಟು ಚಿತ್ರಗಳ ಶೂಟಿಂಗ್‌ ನಡೆಯುತ್ತದೆ. ನಾವು ಅಲ್ಲಿನ ಶಬ್ದವನ್ನು ನಿರ್ದಿಷ್ಟ ಉಪಕರಣ ಬಳಸಿ ರೆಕಾರ್ಡ್‌ ಮಾಡುತ್ತೇವೆ. ಚಿತ್ರದಲ್ಲಿನ ಆ ದೃಶ್ಯಕ್ಕೆ ಧ್ವನಿವಿನ್ಯಾಸ ಜೋಡಿಸುತ್ತೇವೆ. ಸಿನಿಮಾಗಳಲ್ಲಿ ಹೊಸ ಬಗೆಯ ಬೈಕ್‌ಗಳು, ಕಾರ್‌ಗಳ ಬಳಕೆ ಹೆಚ್ಚು. ಅವುಗಳ ಶಬ್ದವನ್ನು ರೆಕಾರ್ಡ್‌ ಮಾಡಿ ದೃಶ್ಯಕ್ಕೆ ಅನುಗುಣವಾಗಿ ಅಳವಡಿಸಿ ಜನರಿಗೆ ಕೇಳಿಸುವುದು ಸೌಂಡ್‌ ಎಂಜಿನಿಯರ್‌ಗಳ ಕೆಲಸ’ ಎನ್ನುವುದು ಅವರ ವಿವರಣೆ.

‘ಸೌಂಡ್‌ ಸ್ಟೋರಿ’ ಚಿತ್ರ ಮಲಯಾಳಂ, ಹಿಂದಿ, ತಮಿಳಿನಲ್ಲಿ ನಿರ್ಮಾಣವಾಗುತ್ತಿದೆಯಂತೆ. ಇದು ಧ್ವನಿ ವಿನ್ಯಾಸಕನೊಬ್ಬ ಎದುರಿಸುವ ತಳಮಳದ ಕಥನ. ಇದರ ನಾಯಕ ನಟ ರಸೂಲ್‌ ಪೂಕುಟ್ಟಿ. ಇದಕ್ಕೆ ಸೌಂಡ್‌ ಡಿಸೈನಿಂಗ್‌ ಮಾಡಿದ್ದು, ವಿಜಯ್‌ಕುಮಾರ್‌ಗೆ ಖುಷಿ ಕೊಟ್ಟಿದೆಯಂತೆ.

‘ಈ ಚಿತ್ರದ ಧ್ವನಿ ವಿನ್ಯಾಸಕ್ಕಾಗಿ ಕೇರಳದ ತ್ರಿಶೂರ್‌ನಲ್ಲಿ ನಡೆಯುವ ಪೂರಂ ಮೇಳಕ್ಕೆ ಹೋಗಿದ್ದೆವು. ಅಲ್ಲಿ 150 ಮಂದಿ ಏಕಕಾಲಕ್ಕೆ ಒಂದೂವರೆ ಗಂಟೆಕಾಲ ಚೆಂಡ ಬಾರಿಸುವುದನ್ನು ರೆಕಾರ್ಡ್‌ ಮಾಡಲಾಯಿತು. ಇದು ನನಗೆ ಸವಾಲಿನದಾಗಿತ್ತು’ ಎನ್ನುತ್ತಾರೆ.

‘ಚಂದನವನದಲ್ಲಿ ಸೌಂಡ್‌ ಡಿಸೈನಿಂಗ್‌ ಬಳಕೆ ಕಡಿಮೆ. ಅಪೂರ್ವ ಕಾಸರವಳ್ಳಿ ನಿರ್ದೇಶನದ ‘ನಿರುತ್ತರ’ ಚಿತ್ರಕ್ಕೆ ನಾವೇ ಧ್ವನಿವಿನ್ಯಾಸ ಮಾಡಿದ್ದೇವೆ. ಕನ್ನಡದಲ್ಲಿಯೂ ಆಸಕ್ತರು ಇದ್ದಾರೆ. ಅದರ ರುಚಿ ಗೊತ್ತಾದರೆ ಖಂಡಿತ ಸ್ವೀಕರಿಸುತ್ತಾರೆ’ ಎನ್ನುವುದು ಅವರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT