ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ತಾನ ತಂದಾರ...

Last Updated 15 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕೇಳು ಕೃಷ್ಣ / ಹೇಳು ಪಾರ್ಥ/ ಒಳಗೊಳಗೆ ಭಯವೈತಯ್ಯಾ/ ನಾನಿವ್ನಿ ಸುಮ್ಕಿಲ್ಲಯ್ಯಾ

2016ರಲ್ಲಿ ಬಿಡುಗಡೆಯಾದ ‘ರಾಮಾ ರಾಮಾ ರೇ’ ಚಿತ್ರದ ಈ ಹಾಡು ತನ್ನ ತಾಜಾತನದಿಂದ ಸಾಕಷ್ಟು ಜನಪ್ರಿಯವಾಗಿತ್ತು. ಸಾಂಪ್ರದಾಯಿಕ ಭಜನಾ ಶೈಲಿಯನ್ನು ಕಥೆಯ ಸನ್ನಿವೇಶಕ್ಕೆ ಹೊಂದುವಂತೆ ಅಳವಡಿಸಿ ಹೊಸೆದ ಸಂಗೀತ ಜನರಿಗೆ ಇಷ್ಟವಾಗಿತ್ತು. ಇದೇ ಚಿತ್ರದ ಶೀರ್ಷಿಕೆ ಗೀತೆ, ನ್ಯೂಸ್‌ ನೋಡಿ ಎಂಬ ಹಾಡುಗಳೂ ತಮ್ಮ ತಾಜಾತನ ಮತ್ತು ಭಿನ್ನತೆಗಳಿಂದ ಜನರನ್ನು ಆಕರ್ಷಿಸಿದ್ದವು.

‘ಮುಂಗಾರು ಮಳೆ’ ಸಿನಿಮಾದ ಮೂಲಕ ಚಿಗುರಿಕೊಂಡು ಹುಲುಸಾಗಿ ಬೆಳೆದ ಮಾಧುರ್ಯಪ್ರಧಾನ ಹಾಡುಗಳ ‘ಸಿದ್ಧ ಮಾದರಿ’ಯನ್ನು ಅಲ್ಲಲ್ಲಿ ವಿಸ್ತರಿಸುವ, ಮುರಿಯುವ ಪ್ರಯತ್ನಗಳೂ ನಡೆಯುತ್ತಲೇ ಬಂದಿದ್ದವು. ಆದರೆ ಅದು ಸ್ಪಷ್ಟವಾಗಿ ಕಂಡುಬಂದಿದ್ದು ‘ರಾಮಾ ರಾಮಾ ರೇ’ ಚಿತ್ರದ ಮೂಲಕ. ಇಂಥವರಿಂದಲೇ ಸಾಹಿತ್ಯ ಬರೆಸಬೇಕು, ಅದನ್ನು ಸೋನು ನಿಗಂ, ಶ್ರೇಯಾ ಘೋಷಾಲ್‌ ಅವರು ಹಾಡಿದರೆ ಮಾತ್ರ ಹಿಟ್‌ ಆಗುತ್ತದೆ, ಎಂಬೆಲ್ಲ ಹರಳುಗಟ್ಟತೊಡಗಿದ್ದ ನಂಬಿಕೆಗಳಿಗೆ ತಕ್ಕಮಟ್ಟಿಗೆ ಪೆಟ್ಟುಕೊಡುವ ಹಾಗೆ ಭಿನ್ನ ರೀತಿಯಲ್ಲಿ ಸಂಯೋಜಿಸಿ ಎಂ.ಡಿ. ಪಲ್ಲವಿ, ಸಂಗೀತಾ ಕಟ್ಟಿ, ಸೇರಿದಂತೆ ಸ್ಥಳೀಯ ಗಾಯಕರಿಂದಲೇ ಹಾಡಿಸಿ ಗೆದ್ದರು ವಾಸುಕಿ ವೈಭವ್‌. ಅಂದ ಹಾಗೆ ‘ರಾಮಾ ರಾಮಾ ರೇ’ ಅವರ ಸಂಗೀತ ನಿರ್ದೇಶನದ ಮೊದಲ ಸಿನಿಮಾ. ಇವರ ಪ್ರತಿಭೆಯ ಸತ್ವವನ್ನು ಗುರ್ತಿಸಿ ಚಿತ್ರ ಬಿಡುಗಡೆಗೂ ಮೊದಲೇ ಧ್ವನಿಸುರಳಿಯ ಹಕ್ಕುಗಳನ್ನು ಕೊಂಡುಕೊಂಡು ಪ್ರೋತ್ಸಾಹಿಸಿದ್ದು ಇನ್ನೋರ್ವ ಪ್ರಯೋಗಶೀಲ ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌ ಎನ್ನುವುದನ್ನೂ ಇಲ್ಲಿ ಉಲ್ಲೇಕಿಸಲೇಬೇಕು. ಅನೂಪ್‌ ಕೂಡ ತಮ್ಮ ವೃತ್ತಿಜೀವನದುದ್ದಕ್ಕೂ ಪ್ರಯೋಗಗಳಿಗೆ ಒಡ್ಡಿಕೊಂಡೇ ಬಂದಿರುವುದು ಅವರು ಸಂಗೀತ ಸಂಯೋಜನೆ ಮಾಡಿರುವ ಚಿತ್ರಗಳ ಪಟ್ಟಿಯನ್ನು ನೋಡಿದರೆ ಸ್ಪಷ್ಟವಾಗುತ್ತದೆ.

ಅದೇ ವರ್ಷ ತೆರೆಕಂಡ ಹೇಮಂತ್‌ ನಿರ್ದೇಶನದ ‘ಗೋದಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾದ ಸಂಗೀತದ ತಾಜಾಗುಣ ಕೂಡ ಆ ಸಿನಿಮಾಕ್ಕೆ ಸಿಕ್ಕಿದ ಅಗ್ಗಳಿಕೆಗೆ ಮುಖ್ಯ ಕಾರಣವಾಯ್ತು. ಚರಣ್‌ ರಾಜ್‌ ಎಂಬ ಹುಡುಗ ತನ್ನ ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯಿಸಿದ ಚಿತ್ರ ಅದು. ಕಳೆದ ವರ್ಷ ತೆರೆಕಂಡ ‘ಅರುವಿ’ ಚಿತ್ರ ಕರ್ನಾಟಕದಲ್ಲಿಯೂ ಸಾಕಷ್ಟು ಸುದ್ದಿಯಾಗಿತ್ತು. ಮಹಿಳಾ ಪ್ರಧಾನ ಕಥೆಯುಳ್ಳ ಈ ಚಿತ್ರದ ಸಂಗೀತ ಸಂಯೋಜನೆಯ ಕುರಿತೂ ಸಾಕಷ್ಟು ಚರ್ಚೆಯಾಗಿತ್ತು. ‘ಅರುವಿ’ಗೆ ಸಂಗೀತ ಹೊಸೆದಿದ್ದ ಬಿಂದುಮಾಲಿನಿ ನಾರಾಯಣಸ್ವಾಮಿ ಇದೀಗ ಮಂಸೋರೆ ಅವರ ಹೊಸ ಚಿತ್ರ ‘ನಾತಿಚರಾಮಿ’ಗೆ ಸಂಗೀತ ನೀಡುತ್ತಿದ್ದಾರೆ. ಮೊದಲಿನಿಂದಲೂ ಅವರು ಮ್ಯೂಸಿಕ್‌ ಬ್ಯಾಂಡ್‌ ಮೂಲಕ ಶಾಸ್ತ್ರೀಯ– ಪಾಶ್ಚಾತ್ಯ ಸಂಗೀತ ಪ್ರಕಾರಗಳನ್ನು ಬೆರೆಸಿ ಹೊಸ ರೀತಿಯ ಪ್ರಯೋಗಗಳನ್ನು ಮಾಡುತ್ತಲೇ ಬಂದವರು. ಖಂಡಿತ ಅವರಿಂದ ಹೊಸತನದ ಇನ್ನೊಂದು ಅಲೆಯನ್ನು ನಿರೀಕ್ಷಿಸಬಹುದು. ‘ಉಳಿದವರು ಕಂಡಂತೆ’ ಸಿನಿಮಾದಿಂದ ಗುರ್ತಿತರಾದ ಅಜನೀಶ್‌ ಲೋಕನಾಥ್‌ ಈಗ ‘ಕಿರಿಕ್ ಪಾರ್ಟಿ’ಯ ಮೂಲಕ ಯಶಸ್ಸಿನ ಉತ್ತುಂಗಕ್ಕೇರಿ ತೆಲುಗು, ತಮಿಳು ಭಾಷೆಗೂ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ.

ಅಲೆಯೊಂದು ಶುರುವಾಗಿದೆ

ಕನ್ನಡ ಸಿನಿಮಾ ನಿರ್ಮಾಣದಲ್ಲಿ ಹೊಸ ಅಲೆ ಏಳುತ್ತಿದೆ ಎಂಬ ಹುಯಿಲು ಕೆಲ ಕಾಲದಿಂದ ಜೋರಾಗಿಯೇ ಕೇಳುತ್ತಿದೆ. ಆದರೆ ಆ ಅಲೆಗಿಂತ ನೊರೆಯೇ ಹೆಚ್ಚಿದೆ ಎಂಬ ವಾಸ್ತವಕ್ಕೂ ನಾವು ಎದುರಾಗಿಯಾಗಿದೆ. ಅದೇನೇ ಇರಲಿ, ಕನ್ನಡ ಚಿತ್ರರಂಗವನ್ನು ಕಳೆದ ಎರಡು ಮೂರು ವರ್ಷಗಳಿಂದೀಚೆಗೆ ಗಮನಿಸಿದಾಗ ಸಂಗೀತ ಸಂಯೋಜನೆಯಲ್ಲಿ ಹೊಸತನದ ತಾನ ಮೆಲ್ಲಗೇ ಕೇಳಿಬರುತ್ತಿರುವುದಂತೂ ಗಮನಕ್ಕೆ ಬಾರದಿರದು. ಅದು ಒಮ್ಮೆ ಎದ್ದು ಮರುಕ್ಷಣ ಮಾಯವಾಗುವ ಹುಸಿ ತೆರೆಯಲ್ಲ, ನೆಲಕ್ಕೆ ಬಿತ್ತಿದ ಬೀಜದ ಹಾಗೆ ಚಿಗುರೊಡೆದು ಫಲಕೊಡುವ ಬೆಳೆ ಎನ್ನುವುದಕ್ಕೆ ಮೇಲೆ ಉಲ್ಲೇಕಿಸಿದ ವ್ಯಕ್ತಿಗಳೇ ಪುರಾವೆ.

‘ಹೊಸಥರದ ಸಂಗೀತ ಮಾಡಬೇಕು ಎಂದು ಪಣತೊಟ್ಟು ಮಾಡುವುದು ಬೇಕಾಗಿಲ್ಲ. ನಿಜವಾಗಿಯೂ ನನಗೆ ಏನನಿಸುತ್ತದೆ ಅದನ್ನು ಪ್ರಾಮಾಣಿಕವಾಗಿ ಮಾಡಿದರೆ, ಅಂಥ ಸಂಗೀತವನ್ನು ಇದುವರೆಗೆ ಉಳಿದವರ‍್ಯಾರೂ ಮಾಡಿರದಿದ್ದರೆ ಅದು ಹೊಸತು ಅನಿಸಿಕೊಳ್ಳುತ್ತದೆ.

ಮತ್ತೆ ಒಂದೆರಡು ಸಿನಿಮಾಗಳಿಗೆ ಅದೇ ರೀತಿಯ ಸಂಗೀತ ಬಂದರೆ ಹಳತಾಗುತ್ತದೆ’ ಎನ್ನುವ ಬಿಂದುಮಾಲಿನಿ ಯಾವುದೇ ಚಿತ್ರವನ್ನು ಅದರ ಕಥೆ ತನ್ನ ಮನಸ್ಸಿಗೆ ತಟ್ಟಿದರೆ ಮಾತ್ರ ಒಪ್ಪಿಕೊಳ್ಳುತ್ತಾರಂತೆ. ಸದ್ಯದ ಟ್ರೆಂಡ್‌ ಅನ್ನು ಅನುಸರಿಸುವುದೋ ಅಥವಾ ತನ್ನ ಮನಸ್ಸಿನ ಮಾತು ಕೇಳುವುದೋ ಎಂದು ಯಾವತ್ತೂ ಅವರನ್ನು ಕಾಡಿಲ್ಲ. ‘ಸಿನಿಮಾದ ಅಗತ್ಯಕ್ಕೆ ತಕ್ಕ ಹಾಗೆ ನನ್ನ ಮನಸ್ಸಿಗೆ ಅನಿಸಿದ್ದನ್ನೇ ನಾನು ಮಾಡುತ್ತೇನೆ’ ಎಂಬುದು ಅವರ ಸ್ಪಷ್ಟ ಮಾತು.

‘ಟಗರು’ ಮೂಲಕ ಜನಪ್ರಿಯ ಮಾದರಿಯಲ್ಲಿಯೇ ಪ್ರಯೋಗಗಳನ್ನು ಮಾಡಿ ಗೆದ್ದಿರುವ ಚರಣ್‌ ರಾಜ್‌ ಕೂಡ ‘ಹೊಸತನ ಎನ್ನುವುದಕ್ಕಿಂತ ಅದೇ ಸಂಗೀತನ್ನು ಹೊಸ ರೂಪದಲ್ಲಿ ಕೊಡುತ್ತಿದ್ದೇವೆ ಎನ್ನಬಹುದು’ ಎಂದೇ ಹೇಳುತ್ತಾರೆ. ‘ನಮಗಿಂತ ಹಿರಿಯ ಸಂಗೀತ ನಿರ್ದೇಶಕರನೇಕರು ಈಗಾಗಲೇ ಸಾಕಷ್ಟು ಪ್ರಯೋಗಗಳನ್ನು ಮಾಡಿಬಿಟ್ಟಿದ್ದಾರೆ. ಅವರು ಮಾಡದಿರುವುದೇನನ್ನೂ ನಾವು ಮಾಡುತ್ತಿಲ್ಲ. ಅವರ ಮಟ್ಟಕ್ಕೆ ಇನ್ನೂ ಮುಟ್ಟುವುದೂ ಸಾಧ್ಯವಾಗಿಲ್ಲ. ಆದರೆ ಅದೇ ಸಂಗೀತವನ್ನು ಈಗಿನ ತಂತ್ರಜ್ಞಾನ ಮತ್ತು ನವೀನವಾಗಿ ರೂಪುಗೊಳ್ಳುತ್ತಿರುವ ಪ್ರಕಾರಗಳಿಗೆ ಒಗ್ಗಿಸಿ ಕೊಡುತ್ತಿದ್ದೇವೆ. ನಮ್ಮ ಪ್ರಯೋಗದ ಮೂಲಸೆಲೆ ಇರುವುದು ಹಿರಿಯರಲ್ಲಿಯೇ’ ಎಂದು ವಿನಯದಿಂದಲೇ ಪೂರ್ವಸೂರಿಗಳನ್ನು ನೆನಪಿಸಿಕೊಳ್ಳುತ್ತಾರೆ.

ಹಾಗಂತ ಈ ತರುಣ/ ತರುಣಿಯರ ದಾರಿಯೇನೂ ಸುಲಭದ್ದಲ್ಲ. ಈಗಲೂ ಅವರ ಮುಂದೆ ಸಾಕಷ್ಟು ಸವಾಲುಗಳು ಇವೆ.

‘ಎಷ್ಟೇ ಹೊಸತನ ಬರಲಿ, ಅದರ ಅಳಿವು ಉಳಿವಿನ ಸೂತ್ರ ಇರುವುದು ಕೊನೆಗೂ ನಿರ್ದೇಶಕ ಮತ್ತು ನಿರ್ಮಾಪಕನ ಕೈಯಲ್ಲಿ’ ಎನ್ನುತ್ತಾರೆ ವಾಸುಕಿ ವೈಭವ್‌. ‘ಸಂಗೀತ ನಿರ್ದೇಶಕ ಎನ್ನುವವನು ಗೋಡೆ ಇದ್ದ ಹಾಗೆ. ನಿರ್ದೇಶಕ ಎಷ್ಟು ಬಲವಾಗಿ ಚೆಂಡನ್ನು ಗೋಡೆಗೆ ಎಸೆಯುತ್ತಾನೋ ಅಷ್ಟೇ ಬಲವಾಗಿ ತಿರುಗಿ ಪುಟಿಯುತ್ತದೆ’ ಎನ್ನುವುದು ಅವರ ವ್ಯಾಖ್ಯಾನ. ಹೀಗೆ ನಿರ್ದೇಶಕನ ಹೆಗಲಿಗೇ ಎಲ್ಲವನ್ನೂ ವರ್ಗಾಯಿಸಲು ಕಾರಣವೂ ಇದೆ. ‘ಎಷ್ಟೊ ಜನ ನಿರ್ದೇಶಕರು ಹೊಸ ಕಥಾವಸ್ತು ಇರುವ ಸಿನಿಮಾ. ಪ್ರಯೋಗ ಮಾಡುತ್ತಿದ್ದೇವೆ ಎಂದೆಲ್ಲ ಹೇಳಿಕೊಳ್ಳುತ್ತಾರೆ. ಆದರೆ ಸಂಗೀತವ ವಿಷಯಕ್ಕೆ ಬಂದಾಗ ಮಾತ್ರ ಹಳೆ ಕಮರ್ಷಿಯಲ್‌ ಜನಪ್ರಿಯ ಸೂತ್ರಗಳಿಗೇ ಜೋತುಬೀಳುತ್ತಾರೆ’ ಎಂದು ಕೊಂಚ ಬೇಸರದಿಂದಲೇ ಹೇಳಿಕೊಳ್ಳುತ್ತಾರೆ. ‘ಹೊಸ ರೀತಿಯ ಸಂಗೀತದ ಹಂಬಲ ಮೊದಲು ನಿರ್ದೇಶಕನಿಗೆ ಇರಬೇಕು. ಅದಕ್ಕೆ ತಕ್ಕ ಹಾಗೆ ಸಂಗೀತ ಸಂಯೋಜಕನಿಗೆ ಸ್ವಾತಂತ್ರ್ಯ ಕೊಡಬೇಕು’ ಎನ್ನುವುದನ್ನು ಚರಣ್‌ ಕೂಡ ಅನುಮೋದಿಸುತ್ತಾರೆ.

‘ಸಿನಿಮಾ ಚೆನ್ನಾಗಿ ಬರಬೇಕು ಮತ್ತು ಹಿಟ್‌ ಆಗಬೇಕು ಎನ್ನುವುದು ಎಲ್ಲ ನಿರ್ದೇಶಕರಿಗೂ ಇರುತ್ತದೆ. ಆದರೆ ಹಿಟ್‌ ಆಗುವುದೇ ಉದ್ದೇಶವೋ, ಅಥವಾ ಸಿನಿಮಾವನ್ನು ಇನ್ನಷ್ಟು ಅರ್ಥಪೂರ್ಣವಾಗಿಸುವಂಥ ಸಂಗೀತ ಕೊಡುವುದು ಮುಖ್ಯವೋ ಎನ್ನುವುದನ್ನು ನಿರ್ದೇಶಕ ಆಯ್ಕೆ ಮಾಡಿಕೊಳ್ಳಬೇಕು. ಹಾಗಂತ ಇವೆರಡೂ ವಿರುದ್ಧ ಅಂತಲೂ ಅಲ್ಲ. ಹಲವು ಸಿನಿಮಾಗಳು ಪ್ರಯೋಗಮುಖಿಯಾಗಿಯೂ ಹಿಟ್‌ ಆಗುತ್ತವೆ’ ಎನ್ನುವ ಬಿಂದುಮಾಲಿನಿ, ತಮ್ಮದೇ ಸಂಗೀತ ನಿರ್ದೇಶನದ ‘ಅರುವಿ’ ಸಿನಿಮಾವನ್ನು ತಮ್ಮ ಮಾತಿಗೆ ಉದಾಹರಣೆಯಾಗಿ ನೀಡುತ್ತಾರೆ.

ಪ್ರೇಕ್ಷಕನನ್ನು ಅರಿತುಕೊಳ್ಳುವ ಸಮಯ

ಬದಲಾದ ಪ್ರೇಕ್ಷಕನ್ನು ಅರ್ಥಮಾಡಿಕೊಳ್ಳುವ ಸಮಯ ಇದೀಗ ಬಂದಿದೆ ಎನ್ನುತ್ತಾರೆ ಬಿಂದು. ‘ಪ್ರೇಕ್ಷಕ ಪ್ರಬುದ್ಧನಾಗಿರುತ್ತಾನೆ/ಳೆ ಎಂಬುದನ್ನು ಭಾರತೀಯ ಸಿನಿಮಾ ಕರ್ಮಿಗಳು ಈಗಲಾದರೂ ಅರಿತುಕೊಳ್ಳಬೇಕು. ಅವರ ಬುದ್ಧಿಮತ್ತೆಯ ಬಗ್ಗೆ ಅನುಮಾನ ಹೊಂದುವುದು ಖಂಡಿತ ಬೇಕಿಲ್ಲ. ಅವರಿಗೆ ಎಲ್ಲವೂ ಅರ್ಥವಾಗುತ್ತದೆ. ಆದ್ದರಿಂದ ಗುಣಮಟ್ಟ ಮತ್ತು ಜನಪ್ರಿಯತೆ ಎರಡೂ ಸಿಕ್ಕುವ ಸಾಧ್ಯತೆ ಖಂಡಿತ ಇದೆ’ ಎನ್ನುತ್ತಾರೆ ಅವರು.

ಹೊಸ ರೀತಿಯ ಪ್ರಯೋಗಶೀಲತೆಗೆ ಅವಕಾಶ ಇರುವ ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ ಎಂಬ ನಿರ್ಧಾರದಿಂದ ವೈಭವ್‌ ತಮಗೆ ಬಂದ ಹಲವು ಅವಕಾಶಗಳನ್ನು ತಿರಸ್ಕರಿಸಿದ್ದೂ ಇದೆ. ಆದರೆ ಬದುಕಿನ ಅನಿವಾರ್ಯತೆಗೆ ರಾಜಿ ಮಾಡಿಕೊಳ್ಳಲೇಬೇಕಾದ ಪರಿಸ್ಥಿತಿ. ‘ನಾನು ಎ. ಆರ್‌. ರೆಹಮಾನ್‌ ಶೈಲಿಯಲ್ಲಿ ಕೆಲಸ ಮಾಡಲಿಕ್ಕಾಗುವುದಿಲ್ಲ. ನನಗೆ ನನ್ನದೇ ಶೈಲಿ ಇದೆ. ಅದರಲ್ಲಿಯೇ ಕೆಲಸ ಮಾಡಬೇಕು. ಇದೇ ಕಾರಣಕ್ಕೆ ಹಲವು ಸಿನಿಮಾಗಳನ್ನು ತಿರಸ್ಕರಿಸಿದ್ದಿದೆ. ಆದರೆ ಅಮ್ಮ ಮನೆಯಲ್ಲಿನ ಖಾಲಿ ಡಬ್ಬಗಳನ್ನು ತೋರಿಸಿ ಹೆದರಿಸಿದರು. ತಮಿಳಿನಲ್ಲಾದರೆ ಅನಿರುದ್ಧ್‌ ಅವರಿಗೆ ಒಂದು ಸಿನಿಮಾಗೆ ಎರಡು ಕೋಟಿಗಿಂತ ಕಡಿಮೆಯಲ್ಲಿ ಮುಗಿದುಹೋಗುತ್ತದೆ. ಅವರಿಗೆ ವರ್ಷಕ್ಕೆ ಒಂದು ಸಿನಿಮಾಗೆ ಮಾಡಿದರೂ ಸಾಕು. ಆದರೆ ನಮ್ಮಲ್ಲಿ ಎರಡು ಕೋಟಿಯಲ್ಲಿ ಒಂದು ಸಿನಿಮಾವೇ ಮುಗಿದುಹೋಗುತ್ತದೆ’ ಎಂದು ಸೃಜನಶೀಲ ಬದ್ಧತೆಗೆ ಸವಾಲೊಡ್ಡುವ ಬದುಕಿನ ಅನಿವಾರ್ಯತೆಯ ಕಡೆಗೂ ಗಮನ ಸೆಳೆಯುತ್ತಾರೆ.

ಪ್ಯಾಕೆಜ್‌ ವ್ಯವಸ್ಥೆ: ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶನದ ‘ಪ್ಯಾಕೇಜ್‌ ವ್ಯವಸ್ಥೆ’ ಆರಂಭವಾಗಿದೆ. ಸಾಮಾನ್ಯವಾಗಿ ಸಂಗೀತ ನಿರ್ದೇಶಕನ ಜವಾಬ್ದಾರಿ ಸಂಗೀತ ಸಂಯೋಜನೆ ಅಷ್ಟೆ. ಗಾಯಕರು, ವಾದ್ಯಗಾರರು, ಧ್ವನಿಮುದ್ರಣ ಎಲ್ಲ ವಿಭಾಗಗಳ ವೆಚ್ಚವನ್ನು ನಿರ್ಮಾಪಕರೇ ನೋಡಿಕೊಳ್ಳುತ್ತಾರೆ. ಆದರೆ ಪ್ಯಾಕೇಜ್‌ ವ್ಯವಸ್ಥೆಯಲ್ಲಿ ಹಾಗಲ್ಲ, ಇಡೀ ಚಿತ್ರದ ಸಂಗೀತದ ಜವಾಬ್ದಾರಿಯನ್ನು ನಿರ್ದಿಷ್ಟ ಮೊತ್ತಕ್ಕೆ ಸಂಗೀತ ನಿರ್ದೇಶಕನಿಗೆ ಕೊಡಲಾಗುತ್ತದೆ. ಸಂಯೋಜನೆಯ ಜತೆಗೆ ಉಳಿದ ಎಲ್ಲ ಕರ್ಚು ವೆಚ್ಚಗಳನ್ನೂ ಅವನೇ ಕೊಟ್ಟುಕೊಳ್ಳಬೇಕು. ನಿರ್ದೇಶಕನಿಗೆ ಪ್ರತ್ಯೇಕವಾಗಿ ಸಂಭಾವನೆ ನೀಡುವುದಿಲ್ಲ. ಒಟ್ಟು ಮೊತ್ತದಲ್ಲಿ ಅವನು ತನ್ನ ಸಂಭಾವನೆಯನ್ನು ಉಳಿಸಿಕೊಳ್ಳಬಹುದು. ಈ ವ್ಯವಸ್ಥೆಯೂ ಸೃಜನಶೀಲ ಸ್ವಾತಂತ್ರ್ಯಕ್ಕೆ ಮಾರಕ ಎನ್ನುವ ವೈಭವ್‌ ‘ಹೀಗಾದಾಗ ಗುಣಮಟ್ಟಕ್ಕೆ ಆದ್ಯತೆ ಕೊಡಬೇಕೋ, ನಷ್ಟ ಮಾಡಿಕೊಳ್ಳದೆ ಹಣ ಉಳಿಸುವುದು ಹೇಗೆ ಎಂಬುದನ್ನು ನೋಡಬೇಕೋ ಎಂಬ ಗೊಂದಲ ಕಾಡುತ್ತದೆ. ಇದೇ ಒಂದು ಬಗೆಯಲ್ಲಿ ಹೊಸ ಅಲೆ’ ಎಂದು ನಗುತ್ತಾರೆ.‌

‘ಇದೆಲ್ಲ ಸವಾಲುಗಳ ನಡುವೆಯೂ ನಿರಂತರವಾಗಿ ಸಂಗೀತ ಮತ್ತು ಹೊಸ ತಂತ್ರಜ್ಞಾನಗಳು ತೆರೆದಿಡು ಸಾಧ್ಯತೆಗಳನ್ನು ಶೋಧಿಸುತ್ತಲೇ ಇರುವ ಮೂಲಕ ಮಾತ್ರ ನಾವು ಗಟ್ಟಿಯಾಗಿ ನೆಲಯೂರಬಹುದು’ ಎಂಬುದು ಚರಣ್‌ ರಾಜ್‌ ನಂಬಿಕೆ.

‘ಸಂಗೀತದಲ್ಲಿನ ಈ ಹೊಸ ಅಲೆ ಸದಭಿರುಚಿಯ ನಿರ್ದೇಶಕ ಮತ್ತು ನಿರ್ಮಾಪಕರಿಂದ ಮಾತ್ರ ಉಳಿದುಕೊಳ್ಳಲು ಸಾಧ್ಯ. ಸಂಗೀತದಲ್ಲಿ ಮಾತ್ರ ಏನೋ ಹೊಸದು ಮಾಡಿಬಿಡಲು ಸಾಧ್ಯ ಎನ್ನುವುದು ನನ್ನ ಪ್ರಕಾರ ಸುಳ್ಳು. ನಿರ್ದೇಶಕನ ಹೊಸತನದ ತುಡಿತ ಎಲ್ಲ ವಿಭಾಗಗಳಲ್ಲಿ ಪ್ರತಿಬಿಂಬಿತವಾಗುತ್ತದೆ. ಹಾಗೆ ಆಗಬೇಕು ಎಂದು ನಿರ್ದೇಶಕನಿಗೂ ಅನಿಸಬೇಕು’ ಎನ್ನುವ ವೈಭವ್‌ ಮಾತು ಸಿನಿಮಾ ಸಂಗೀತದ ನಾಳೆಯ ಕುರಿತು ದಿಕ್ಸೂಚಿ ನೀಡುವಂತೆ ತೋರುತ್ತದೆ.

**

‘ಒಂಟಿ ಹೋರಾಟಕ್ಕೀಗ ಜತೆ ಸಿಕ್ಕಿದೆ’

ನನ್ನ ಸಂಗೀತ ನಿರ್ದೇಶನದ ಮೊದಲ ಸಿನಿಮಾ ಗೂಳಿ ತೆರೆಕಂಡಿದ್ದು 2008ರಲ್ಲಿ. ಆಗ ಹೊಸ ಥರದ ಪ್ರಯತ್ನಗಳಿಗೆ ಈಗಿನ ಹಾಗೆ ಮಾರುಕಟ್ಟೆ ಇರಲಿಲ್ಲ. ಯಾರೂ ಹೊಸತನವನ್ನು ಗುರ್ತಿಸಿ ಪ್ರೋತ್ಸಾಹ ಕೊಡುವವರಿರಲಿಲ್ಲ. ಆದರೆ ಜನರು ಹಾಡುಗಳನ್ನು ಇಷ್ಟಪಟ್ಟು ಸ್ವೀಕರಿಸುತ್ತಿದ್ದರು. ಹಾಗಾಗಿಯೇ ನಾನು ಚಿತ್ರರಂಗದಲ್ಲಿ ಉಳಿದುಕೊಳ್ಳಲು ಸಾಧ್ಯವಾಯ್ತು.

ಈಗ ಹೊಸ ರೀತಿಯ ಸಂಗೀತ ಕೊಡುತ್ತಿರುವ ವಾಸುಕಿ ವೈಭವ್‌, ಚರಣ್‌ ರಾಜ್‌, ಅಜನೀಶ್‌ ಇವರೆಲ್ಲರೂ ಅದೃಷ್ಟವಂತರು. ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾ ಸಿಕ್ತಿವೆ. ಒಳ್ಳೆಯ ನಿರ್ದೇಶಕರ ಜತೆ ಕೆಲಸ ಮಾಡುವ ಅವಕಾಶ ಸಿಗುತ್ತಿದೆ. ಆದರೆ ಆಗ ನಾನೊಬ್ಬನೇ ಹೊಡೆದಾಡುತ್ತಿದ್ದೆ. ‘ಪ್ರಪಂಚವೇ ದೇವರು ಮಾಡಿರೋ ಬಾರು’ ಹಾಡನ್ನು ಸಂಯೋಜಿಸಿದ ಸಂದರ್ಭದಲ್ಲಿ ಐಟಂ ಸಾಂಗ್‌ ಅಂದ್ರೆ ಕೆಟ್ಟ ಸಾಹಿತ್ಯಕ್ಕೆ ಅಷ್ಟೇ ಕೆಟ್ಟ ಸಂಗೀತ ಹಾಕಿ ಕೆಟ್ಟದಾಗಿ ಕುಣಿಸುವುದು ಎಂಬ ಮಾದರಿ ಚಾಲ್ತಿಯಲ್ಲಿತ್ತು. ಅದನ್ನು ಬ್ರೇಕ್‌ ಮಾಡಿ ನಾನು ಹಾಡು ಕಟ್ಟಿದೆ.

ಆಗ ಟೀವಿಯಲ್ಲಿಯೂ ಅಷ್ಟೊಂದು ಹಾಡುಗಳನ್ನು ಹಾಕುತ್ತಿರಲಿಲ್ಲ. ನಾನು ಮಾಡುತ್ತಿದ್ದ ಹೊಸ ಪ್ರಯತ್ನಗಳಿಗೆ ಅಂಥ ಬೆಂಬಲ ಸಿಗುತ್ತಿರಲಿಲ್ಲ. ‘ಸಿದ್ಲಿಂಗು’ ಚಿತ್ರದ ಧ್ವನಿಸುರುಳಿಯನ್ನು ನಾನೇ ಒಂದು ರೇಡಿಯೊ ಸ್ಟೇಷನ್‌ಗೆ ತೆಗೆದುಕೊಂಡು ಹೋಗಿ ಕೊಟ್ಟಾಗ, ಇವೆಲ್ಲ ಹಾಡುಗಳೇ ಅಲ್ಲ ಎಂದು ಪಕ್ಕಕ್ಕೆ ಎತ್ತಿಟ್ಟಿದ್ದರು. ಆದರೆ ಅದನ್ನು ಜನರು ಮೆಚ್ಚಿಕೊಂಡರು. ಅಷ್ಟೇ ಅಲ್ಲ, ರಾಜ್ಯಪ್ರಶಸ್ತಿಯೂ ಬಂದಿತು.

ಇಷ್ಟು ವರ್ಷಗಳ ಕಾಲ ನಾನು ಸಂಗೀತ ಸಂಯೋಜನೆಯಲ್ಲಿ ಭಿನ್ನ ಪ್ರಯತ್ನ ಮಾಡುತ್ತೇನೆ ಎನ್ನುವುದು ಒಂದು ದೂರು ಅನ್ನುವ ಥರ ಆಗಿಹೋಗಿತ್ತು. ’ಇವರಿಗೆ ಕಮರ್ಷಿಯಲ್‌ ಆಗಿ ಸಂಯೋಜನೆ ಮಾಡಲಿಕ್ಕೆ ಬರುವುದಿಲ್ಲ’ ಎಂದು ದೂರುತ್ತಿದ್ದರು. ಇದೇ ಕಾರಣಕ್ಕೆ ‘ಸಿದ್ಲಿಂಗು’ ಸಿನಿಮಾದ ನಂತರ ಒಂದು ವರ್ಷ ಮನೆಯಲ್ಲಿ ಖಾಲಿ ಕೂರಬೇಕಾಯ್ತು. ನಂತರ ‘ಡಾರ್ಲಿಂಗ್‌ ಡಾರ್ಲಿಂಗ್‌...’ ಹಾಡು ಮತ್ತೆ ಹಿಟ್‌ ಆಗಿ ಅವಕಾಶಗಳು ಬರತೊಡಗಿದವು.

ಆದರೆ ಈಗ ಚರಣ್‌, ವಾಸುಕಿ ವೈಭವ್‌ ಅಂಥ ಇನ್ನೊಂದಿಷ್ಟು ಹೊಸಥರದ ಸಂಯೋಜಕರು ಬಂದಿದ್ದಾರೆ. ಇದನ್ನು ನೋಡಿದಾಗ ಖುಷಿಯಾಗ್ತಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಕಾಣಿಸುತ್ತಿದೆ. ನನಗೂ ಈಗೊಂದು ಮೂರ್ನಾಲ್ಕು ವರ್ಷಗಳಿಂದ ಸಾಕಷ್ಟು ಹೊಸ ಅವಕಾಶಗಳು ಬರುತ್ತಿವೆ.

ಆದರೆ ನಮ್ಮಲ್ಲಿನ ದೊಡ್ಡ ಕೊರತೆ ಏನೆಂದರೆ ಸ್ಥಳೀಯ ಪ್ರತಿಭೆಗಳನ್ನು ಗುರ್ತಿಸದೇ ಇರುವುದು. ನಮ್ಮ ಸುತ್ತಮುತ್ತಲಿನವರು ಹೊಸ ಪ್ರಯತ್ನಗಳನ್ನು ಮಾಡಿದಾಗ, ಗುರ್ತಿಸುವ ಪ್ರತಿಭಾವಂತರಿಗೆ ಅವಕಾಶ ಕೊಡುವ ಪದ್ಧತಿಯನ್ನು ಬೆಳೆಸಿಕೊಳ್ಳಬೇಕು. ಹಾಗಾದಾಗ ಮಾತ್ರ ಈಗ ಕಾಣಿಸಿಕೊಳ್ಳುತ್ತಿರುವ ಹೊಸ ಅಲೆ ಗಟ್ಟಿಯಾಗಿ ನಿಲ್ಲಲು ಇನ್ನಷ್ಟು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ.

–ಅನೂಪ್‌ ಸೀಳಿನ್, ಸಂಗೀತ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT