ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಬ್ಬ ಬಿಜ್ಜಳ?

Last Updated 15 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಧರ್ಮ ಎನ್ನುವುದು ಗರಗಸದಂತೆ; ಹೋಗುತ್ತ ಕೊಯ್ವುದು ಬರುತ್ತ ಕೊಯ್ವುದು. ಪ್ರಸ್ತುತ ‘ಲಿಂಗಾಯತ ಪ್ರತ್ಯೇಕ ಧರ್ಮ’ ಹಾಗೂ ‘ವೀರಶೈವ- ಲಿಂಗಾಯತ ಒಂದೇ ಧರ್ಮ’ ಎಂಬ ಪರ-ವಿರೋಧದ ಕೂಗು ತಾರಕಕ್ಕೇರುತ್ತಿದೆ. ‘ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯ ಜಾರಿಗೆ ಶೀಘ್ರ ಕೇಂದ್ರಕ್ಕೆ ಶಿಫಾರಸು ಮಾಡಿ’ ಎಂದು ಲಿಂಗಾಯತ ಬಣದವರೂ, ‘ಆ ವರದಿಯನ್ನು ತಿರಸ್ಕರಿಸಿ’ ಎಂದು ವೀರಶೈವ-ಲಿಂಗಾಯತ ಬಣದವರೂ ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ರಾಜ್ಯ ಸರ್ಕಾರಕ್ಕೆ ಇದು, ‘ಕಚ್ಚು ಎಂದರೆ ಕಪ್ಪೆಗೆ ಸಿಟ್ಟು; ಬಿಡು ಎಂದರೆ ಹಾವಿಗೆ ಸಿಟ್ಟು’ ಎಂಬಂಥ ಪರಿಸ್ಥಿತಿ.

21ನೇ ಶತಮಾನದ ಪ್ರಜಾಪ್ರಭುತ್ವದ ಸಂದರ್ಭದಲ್ಲಿಯೇ ಇಂಥ ಪರಿಸ್ಥಿತಿ ಇರುವಾಗ, 12ನೇ ಶತಮಾನದ ರಾಜಾಳ್ವಿಕೆಯ ಸಂದರ್ಭದಲ್ಲಿ ಈ ಧರ್ಮ ಮೇಲಾಟ ಹೇಗಿದ್ದಿರಬಹುದು ಎಂಬುದು ಊಹೆಗೂ ನಿಲುಕದು. ‘ಬಸವಾದಿ ಲಿಂಗಾಯತ ಶಿವಶರಣರ ಪ್ರಗತಿಪರ ಧೋರಣೆಯಿಂದ ವರ್ಣ ಸಂಕರವಾಗಿ, ಸನಾತನ ಧರ್ಮಕ್ಕೆ ಅಪಚಾರವಾಗುತ್ತದೆ’ ಎಂದು ಹುಯಿಲೆಬ್ಬಿಸಿದ ಸನಾತನ ವಾದಿಗಳ ಹಾಗೂ ಶರಣರ ಸಂಘರ್ಷದಲ್ಲಿ ಕಲ್ಯಾಣನಗರ ಹೊತ್ತಿ ಉರಿಯಿತು. ಕಡೆಗೆ ಅದು ದೊರೆ ಬಿಜ್ಜಳನ ಕೊಲೆಯಲ್ಲಿ ಪರ್ಯವಸಾನವಾದದ್ದೂ, ಸನಾತನ ಧರ್ಮೀಯರ ಹಿತಾಸಕ್ತಿಯೇ ಮತ್ತೆ ಮೇಲುಗೈ ಪಡೆದದ್ದೂ ಈಗ ಇತಿಹಾಸ.

900 ವರ್ಷಗಳ ಹಿಂದಿನ ಈ ಇತಿಹಾಸವನ್ನು ನೋಡಿ, ಇಂದಿನ ವರ್ತಮಾನದ ನಡೆಯನ್ನು ವಿಶ್ಲೇಷಿಸಿದರೆ ಪರಿಸ್ಥಿತಿ ಇವತ್ತಿಗೂ ಹಾಗೆಯೇ ಇರುವಂತೆ ಕಂಡುಬರುತ್ತದೆ. ಆಡಳಿತದ ಚುಕ್ಕಾಣಿಯನ್ನು ಹಿಡಿದವರಿಗೆ ಮತಧರ್ಮ ಎನ್ನುವುದು ಯಾವತ್ತೂ ಅಗ್ನಿದಿವ್ಯವೇ. ಇಂದಿನ ಸುಪಾರಿ ಕೊಲೆಗಡುಕ ಯುಗದಲ್ಲಿ ಅದನ್ನು ಹಾದು ಬರುವುದೆಂದರೆ, ನಮ್ಮ ರಾಜ್ಯ ಇನ್ನೊಬ್ಬ ಬಿಜ್ಜಳನನ್ನು ಎದುರು ನೋಡುತ್ತಿದೆಯೇ ಎಂಬ ಆತಂಕ ಮೂಡುತ್ತಿದೆ.
ಪ್ರೊ. ಶಿವರಾಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT