ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ರಾಜಕೀಯದ ಹೊಸ ಹಾದಿ

‘ಬಿಜೆಪಿ ವಿರೋಧಿವಾದ’ದ ಸಾಧ್ಯತೆ ಮತ್ತು ದಿಕ್ಕು
Last Updated 15 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಈ ತಿಂಗಳ 11ರಂದು ಉತ್ತರ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತದಾನದ ಒಟ್ಟು ಪ್ರಮಾಣ: ಫೂಲ್‌ಪುರ ಶೇ 38, ಗೋರಖಪುರ ಶೇ 43. ಈ ಸಂಖ್ಯೆ ನೋಡಿದ ತಕ್ಷಣ, ‘ಸಮಾಜವಾದಿ ಪಕ್ಷದ ಗೆಲುವು ಗ್ಯಾರಂಟಿ’ ಎಂದು ಹಲವರಲ್ಲಿ ಹೇಳಿದೆ. ಪಕ್ಕಾ ನಂಬಲು ಯಾರೂ ಸಿದ್ಧರಿರಲಿಲ್ಲ! ಫಲಿತಾಂಶ ಬಂದ ದಿನ ನನ್ನ
ಊಹೆ ನಿಜವಾಗಿತ್ತು.

ಗೋರಖಪುರ, ಕಳೆದ ಐದು ಲೋಕಸಭಾ ಚುನಾವಣೆಗಳಿಂದಲೂ ಯೋಗಿ ಆದಿತ್ಯನಾಥ್ ಕೈಯಲ್ಲಿತ್ತು. ಈ ಸಲ ಅವರಿಂದ ಎಡೆಬಿಡದ ಪ್ರಚಾರವೂ ನಡೆದಿತ್ತು. ಆದರೆ ಕ್ಷೇತ್ರ ಕೈ ಜಾರತೊಡಗಿದ್ದು ಸ್ಪಷ್ಟವಾದ ತಕ್ಷಣ ಮತ ಎಣಿಕೆಯ ಸ್ಥಳದಿಂದ ಮಾಧ್ಯಮಗಳನ್ನು ದೂರ ಇಡಲಾಯಿತು! ಮತ ಎಣಿಕೆ ಕೇಂದ್ರದ ಸುತ್ತ ಪರದೆ ಕಟ್ಟಲಾಯಿತು. ಮಾರ್ಚ್ 14ರ ಮಧ್ಯಾಹ್ನ, ಲೋಕಸಭೆಯಲ್ಲಿ ಹಾಗೂ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಇದನ್ನು ಪ್ರತಿಭಟಿಸಿದರು. ‘ಶೇಮ್– ಶೇಮ್’ ಎಂದು ಕೂಗಿದರು. ಪತ್ರಕರ್ತರು ಪ್ರತಿಭಟಿಸಿದರು. ಇದಾದ ನಂತರ ಎಣಿಕೆಯ ವಿವರಗಳನ್ನು ನೀಡಲಾಯಿತು.

ಬಿಜೆಪಿಗೆ ಸೋಲುವ ಭೀತಿ ಎದುರಾದಾಗ ಇಂಥದೊಂದು ಕೊನೆಯ ಮಳ್ಳಾಟ ಗೋರಖಪುರದ ಜಿಲ್ಲಾಧಿಕಾರಿಯಿಂದ ನಡೆಯಿತು. ಈ ಮಹಾಶಯ ಯಾರ ಆದೇಶದ ಮೇರೆಗೆ ಈ ಆಟ ಆಡಿರಬಹುದು ಎಂಬುದು ಎಲ್ಲರಿಗೂ ಗೊತ್ತಿದೆ. ‘ಮೊನ್ನೆ ತಾನೇ ಗೋರಖಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದ ಮಕ್ಕಳ ಸರಣಿ ಸಾವಿನ ಘಟನೆಯಿಂದ ತೀವ್ರ ಪ್ರಹಾರಕ್ಕೆ ಗುರಿಯಾಗಿದ್ದ ಜಿಲ್ಲಾಧಿಕಾರಿ ರಾವುತ್, ಬಿಜೆಪಿ ಆಡಳಿತಕ್ಕೆ ಕೊನೆಯ ಗಳಿಗೆಯ ‘ಅಳಿಲು ಸೇವೆ’ ಸಲ್ಲಿಸಲು ಎಣಿಕೆಯ ಸ್ಥಳಕ್ಕೆ ಹೋಗಿರುವ ಸಾಧ್ಯತೆ ಇದೆ’ ಎಂದು ಮಿತ್ರರು ಊಹಿಸಿದ್ದರಲ್ಲಿ ಅರ್ಥವಿದೆ!

ಅದೇನೇ ಇರಲಿ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಉಳಿದ ಪಕ್ಷಗಳು ಕೂಡಿ ಮಾಡಿದ ಸರಳ ಲೆಕ್ಕಾಚಾರ, ಅದರಲ್ಲೂ ಮುಖ್ಯವಾಗಿ ಮಾಯಾವತಿಯವರು ಮುನ್ನೋಟದಿಂದ ಮಾಡಿದ ತ್ಯಾಗವು ಫಲ ಕೊಟ್ಟಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಫೂಲ್‌ಪುರ ಲೋಕಸಭಾ ಕ್ಷೇತ್ರದ ಚುನಾವಣೆಯ ಮತಗಳ ವಿವರ: ಬಿಜೆಪಿ-ಶೇ 52.43, ಸಮಾಜವಾದಿ ಪಕ್ಷ- ಶೇ 20.3, ಬಹುಜನ ಸಮಾಜವಾದಿ ಪಕ್ಷ ಶೇ 17.1 ಮತಗಳು. ಈ ಸಲ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷ ಒಟ್ಟಾಗಿದ್ದರಿಂದ ಬಿಜೆಪಿಗೆ ಶೇ 38.81 ಮತಗಳು ಮತ್ತು ಎಸ್‌ಪಿಗೆ ಶೇ 46.95 ಮತಗಳು ಬಿದ್ದಿವೆ. ಫೂಲ್‌ಪುರದಲ್ಲಿ ಎಸ್‌ಪಿಯ ಬಂಡಾಯ ಅಭ್ಯರ್ಥಿ ಅತೀಕ್ ಅಹ್ಮದ್ 48,000 ಮತಗಳನ್ನು ಕಸಿಯದಿದ್ದರೆ, ಸಮಾಜವಾದಿ ಪಕ್ಷದ ಮತಪ್ರಮಾಣ ಹೆಚ್ಚಿರುತ್ತಿತ್ತು.

2014ರಲ್ಲಿ ಗೋರಖಪುರದಲ್ಲಿ ಬಿಜೆಪಿಗೆ ಶೇ 51.8, ಎಸ್‌ಪಿಗೆ ಶೇ 21.8 ಹಾಗೂ ಬಿಎಸ್‌ಪಿಗೆ ಶೇ 17 ಮತಗಳು. 2018ರಲ್ಲಿ ಬಿಜೆಪಿಗೆ ಶೇ 46.53 ಹಾಗೂ ಎಸ್‌ಪಿಗೆ ಶೇ 48.87 ಮತಗಳು ಬಿದ್ದಿವೆ. ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ.

ಹಿಂದೆ ಗೆಲ್ಲದ ರಾಜ್ಯಗಳಲ್ಲಿ ಬಿಜೆಪಿ ಈಗ ಗೆಲ್ಲುತ್ತಿರುವುದಕ್ಕೆ ಆ ರಾಜ್ಯಗಳಲ್ಲಿ ‘ಈ ಪಕ್ಷವನ್ನೂ ಒಮ್ಮೆ ನೋಡೋಣ’ ಎಂಬ ಕುತೂಹಲ ಕೂಡ ಕಾರಣ. ಆದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅದಕ್ಕೆ ಆಗುತ್ತಿರುವ ಹಿನ್ನಡೆ ‘ಅದನ್ನು ನೋಡಿದ್ದು ಸಾಕಾಗಿದೆ’ ಎಂಬ ಜನರ ತೀರ್ಮಾನವನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ. ಈ ತೀರ್ಮಾನವೇ ಹೊಸ ಧ್ರುವೀಕರಣಕ್ಕೆ ನಾಂದಿಯಾಗಲಿದೆ.

ಗೋರಖಪುರದಲ್ಲಿ ‘ನಿಷಾದ್ ಪಕ್ಷ’ದ ನಾಯಕ ಪ್ರವೀಣ್ ನಿಷಾದರನ್ನು ತನ್ನ ಅಭ್ಯರ್ಥಿಯಾಗಿ ನಿಲ್ಲಿಸಿದ್ದ ಸಮಾಜವಾದಿ ಪಕ್ಷ, ಫೂಲ್‌ಪುರವನ್ನು ಬಿಎಸ್‌ಪಿಗೆ ಬಿಟ್ಟುಕೊಡಬೇಕಾಗಿತ್ತು. ಹಾಗೆ ಬಿಟ್ಟುಕೊಟ್ಟು ಸೈಕಲ್ ಮೇಲೆ ಆನೆಯನ್ನು ಕೂರಿಸಿಕೊಂಡು ಗೆಲ್ಲಿಸಿದ್ದರೆ ದೇಶದಲ್ಲಿ ಹೊಸ ರಾಜಕೀಯ ಅಲೆಯೇ ಸೃಷ್ಟಿಯಾಗುತ್ತಿತ್ತು. ದಲಿತ- ಹಿಂದುಳಿದ ವರ್ಗಗಳ ಈ ಹೊಸ ಸಂಬಂಧ ನಿರ್ಣಾಯಕವಾಗಿರುತ್ತಿತ್ತು. ಹಾಗೆ ನೋಡಿದರೆ, ಈ ಎರಡೂ ಪಕ್ಷಗಳಲ್ಲಿ ಹೆಚ್ಚಿನ ತಾತ್ವಿಕ ಭಿನ್ನಾಭಿಪ್ರಾಯಗಳಿಲ್ಲ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಏಕಾಏಕಿ ನೋಟು ರದ್ದು ಮಾಡಿದ್ದರಿಂದ ಹಿನ್ನಡೆ ಅನುಭವಿಸಿದ್ದ ಎಸ್‌ಪಿ, ಬಿಎಸ್‌ಪಿ ಮತ್ತು ಇನ್ನಿತರ ಪಕ್ಷಗಳು, ಇಂಥ ಕುಟಿಲ ನೀತಿಗಳನ್ನು ಎದುರಿಸಲು ಒಟ್ಟಾಗಿವೆ, ಗೆದ್ದಿವೆ. ಫಲಿತಾಂಶ ಬಂದ ಒಂದು ಗಂಟೆಯಲ್ಲಿ ಅಖಿಲೇಶ್ ಯಾದವ್, ಮಾಯಾವತಿಯವರನ್ನು ಭೇಟಿ ಮಾಡಿರುವುದು ಈ ಮೈತ್ರಿ ಗಟ್ಟಿಯಾಗಲಿರುವುದನ್ನು ಸೂಚಿಸುವಂತಿದೆ.

ಅತ್ತ ಬಿಹಾರದಲ್ಲಿ ಲಾಲು ಅವರ ಆರ್‌ಜೆಡಿಯು, ಬಿಜೆಪಿ-ಜೆಡಿಯು ಎದುರು ತನ್ನ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಂಡಿದೆಯಷ್ಟೇ ಅಲ್ಲ, ಮತಪ್ರಮಾಣವನ್ನು ಶೇ 8ರಷ್ಟು ಹೆಚ್ಚಿಸಿಕೊಂಡಿದೆ. ಲಾಲು ಪ್ರಸಾದ್ ಜೈಲಿನಲ್ಲಿರದೆ ಬಿಹಾರ ರಾಜಕಾರಣದಲ್ಲಿ ಸಕ್ರಿಯವಾಗಿ ಇದ್ದಿದ್ದರೆ, ಜೆಡಿಯು ಇಬ್ಭಾಗವಾಗಿ ಆರ್‌ಜೆಡಿ ಮತ್ತೆ ಅಧಿಕಾರ ಹಿಡಿಯುವ ಸಾಧ್ಯತೆ ಇತ್ತು. ಆ ಸಾಧ್ಯತೆ ಈಗ ಬಿಹಾರದಲ್ಲಿ ತೆರೆದಂತಿದೆ.

ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಗೆಲುವುಗಳು ರಾಷ್ಟ್ರದಾದ್ಯಂತ ಇಷ್ಟು ದೊಡ್ಡ ಸುದ್ದಿಯಾಗಿರುವುದು ಕುತೂಹಲಕರವಾಗಿದೆ. ಈ ಕ್ಷೇತ್ರಗಳಲ್ಲಿ ಪ್ರಾದೇಶಿಕ ಪಕ್ಷಗಳು ಗೆದ್ದಿರುವ ರೀತಿ ಕಂಡು, ಇತರ ರಾಜ್ಯಗಳ ಪ್ರಾದೇಶಿಕ ಪಕ್ಷಗಳಲ್ಲೂ ಬಿಜೆಪಿಯ ಸಂಗ ತೊರೆಯುವ ಲೆಕ್ಕಾಚಾರ ಶುರುವಾಗಿರಬಹುದು! ಬಿಹಾರದ ನಿತೀಶ್, ಆಂಧ್ರದ ಚಂದ್ರಬಾಬು ನಾಯ್ಡು, ತೆಲಂಗಾಣದ ಚಂದ್ರಶೇಖರರಾವ್, ಒಡಿಶಾದ ನವೀನ್ ಪಟ್ನಾಯಕ್, ಮಹಾರಾಷ್ಟ್ರದ ಉದ್ಧವ್ ಠಾಕ್ರೆ, ಬಂಗಾಳದ ಮಮತಾ ಬ್ಯಾನರ್ಜಿ, ಕರ್ನಾಟಕದ ಎಚ್‌.ಡಿ. ಕುಮಾರಸ್ವಾಮಿ, ದೆಹಲಿಯ ಅರವಿಂದ ಕೇಜ್ರಿವಾಲ್, ತಮಿಳುನಾಡಿನ ಸ್ಟಾಲಿನ್... ನಿನ್ನೆಯಿಂದಲೇ ಪರಸ್ಪರ ಮೋಹಕ ಕಣ್ಣೋಟ ಬೀರುತ್ತಿದ್ದರೆ ಅಚ್ಚರಿಯೇನಲ್ಲ! ಕಾಂಗ್ರೆಸ್ ಜೊತೆ ಸೇರಲು ನಾಚಿಕೊಂಡಂತಿರುವ ಕಮ್ಯುನಿಸ್ಟ್ ಪಕ್ಷಗಳು ಮೇಲಿನ ಪಟ್ಟಿಯಲ್ಲಿರುವ ಕೆಲವು ಪ್ರಾದೇಶಿಕ ಪಕ್ಷಗಳ ಜೊತೆಗಾದರೂ ಸೇರಲು ಹಿಂಜರಿಯಲಾರವು.

ಇದೀಗ ಹಲವು ರಾಜಕೀಯ ಪಕ್ಷಗಳ ‘ಕಾಮನಬಿಲ್ಲು ಒಕ್ಕೂಟ’ ಮಾಡಲೆತ್ನಿಸುತ್ತಿರುವ ಕಾಂಗ್ರೆಸ್, ತನ್ನ ಅಖಿಲ ಭಾರತೀಯ ಪಾರ್ಟಿಯ ಹಮ್ಮು ಬಿಟ್ಟು ಬಾಗಿದರೆ ಮಾತ್ರ ಮುಂಬರುವ ಮಹಾಚುನಾವಣೆಯಲ್ಲಿ ಹೊಸ ಹಾದಿ ಕಂಡೀತು! ರಾಹುಲ್ ಗಾಂಧಿಯವರಿಗೆ ಆ ಶಕ್ತಿ ಹಾಗೂ ವಿನಯ ಇದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT