ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಹೃದಯಭಾಗದ ರಾಜಕೀಯ ಸಂದೇಶ

Last Updated 15 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಚುನಾವಣೆ ಗೆಲುವಿನ ಅಟ್ಟಹಾಸ- ಅಹಂಕಾರದ ಉಬ್ಬುಗಳನ್ನು ಮತದಾರ ಸಮುದಾಯ ತುಳಿದು ಸಮತಟ್ಟು ಮಾಡುವ ಕ್ರಿಯೆಯನ್ನು ಭಾರತೀಯ ರಾಜಕಾರಣ ಕಾಲ ಕಾಲಕ್ಕೆ ಪ್ರಕಟಿಸುತ್ತಲೇ ಬಂದಿದೆ. ಆದರೆ ರಾಜಕೀಯ ಪಕ್ಷಗಳು ಈ ಪಾಠವನ್ನು ಮರೆಯುತ್ತಲೇ ಬಂದಿವೆ. ಉತ್ತರ ಪ್ರದೇಶದ ಎರಡು ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳಲ್ಲಿ ಆಳುವ ಬಿಜೆಪಿ ಭಾರೀ ಮುಖಭಂಗ ಅನುಭವಿಸಿದೆ. ಈಶಾನ್ಯ ರಾಜ್ಯಗಳ ದಿಗ್ವಿಜಯದ ಸಿಹಿಸವಿ ಬಿಜೆಪಿಯ ಬಾಯಲ್ಲಿ ಇನ್ನೂ ಅಳಿದಿರಲಾರದು. ಅಷ್ಟರಲ್ಲೇ ಗೋರಖಪುರ ಮತ್ತು ಫೂಲ್‌ಪುರ ಲೋಕಸಭಾ ಕ್ಷೇತ್ರಗಳನ್ನು ದೊಡ್ಡ ಅಂತರದಲ್ಲಿ ಸೋತಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪ್ರತಿನಿಧಿಸಿದ್ದ ಕ್ಷೇತ್ರಗಳಿವು. ಗೋರಖಪುರವಂತೂ ಯೋಗಿ ಆದಿತ್ಯನಾಥರ ಭದ್ರಕೋಟೆಯೇ ಆಗಿ ಹೋಗಿತ್ತು. ಈ ಫಲಿತಾಂಶದಿಂದಾಗಿ ಅವರ ಶಕ್ತಿ ಪ್ರಭಾವಗಳು ಕಾಯಂ ಆಗಿ ಅಳಿದು ಹೋದವು ಎಂದು ಹೇಳಲು ಬರುವುದಿಲ್ಲ. ಆದರೆ ಅವರೂ ಕೂಡ ಸೋಲಬಲ್ಲರು ಎಂಬುದು ಸಾಬೀತಾಗಿದೆ. ಚುನಾವಣಾ ಸೋಲು ಗೆಲುವುಗಳ ಕ್ಷಣಭಂಗುರ ಸ್ವರೂಪವನ್ನೂ ಈ ಫಲಿತಾಂಶಗಳು ಅನಾವರಣಗೊಳಿಸಿವೆ.

ನೆರೆಯ ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಬಿಜೆಪಿ ಅಜೇಯ ರಾಜಕೀಯ ಶಕ್ತಿ ಎಂಬ ಮಾತು ಹುಸಿಯಾಗಿದೆ. ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಲಾಲು ಪ್ರಸಾದ್ ಜೈಲು ಪಾಲಾದ ಹಿನ್ನಡೆಯ ನಂತರವೂ ರಾಷ್ಟ್ರೀಯ ಜನತಾದಳ, ಅರಾರಿಯಾ ಲೋಕಸಭಾ ಕ್ಷೇತ್ರವನ್ನು ಮತ್ತು ಜೆಹನಾಬಾದ್ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಂಡಿದೆ.  ಭಭುವಾ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವುದಕ್ಕಷ್ಟೇ ಬಿಜೆಪಿ ಸಮಾಧಾನ ಪಟ್ಟುಕೊಳ್ಳಬೇಕಾಯಿತು. ಬಿಜೆಪಿಯ ಬಹು ವರ್ಚಸ್ವಿ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಉಪಚುನಾವಣೆಗಳಲ್ಲಿ ಪ್ರಚಾರ ಮಾಡಲಿಲ್ಲ. ಪಕ್ಷದ ಅತಿ ನಿಷ್ಠಾವಂತ ಮತದಾರ ಸಮೂಹ ಮತಗಟ್ಟೆಗಳಿಗೆ ತೆರಳಲಿಲ್ಲ. ಮತದಾನದ ಶೇಕಡಾವಾರು ಪ್ರಮಾಣವೂ ಕುಸಿದಿತ್ತು ಎಂಬುದಾಗಿ ಬಿಜೆಪಿ ಮುಂದೆ ಮಾಡಿರುವ ಕಾರಣಗಳಲ್ಲಿ ಹುರುಳಿದೆ. ಆದರೆ ಬಿಜೆಪಿ ಅಭ್ಯರ್ಥಿಗಳ ಸೋಲಿನ ಭಾರೀ ಅಂತರ ಈ ಪಕ್ಷದ ನೆಮ್ಮದಿ ಕೆಡಿಸುವುದು ನಿಶ್ಚಿತ.

ಆದಿತ್ಯನಾಥ ಅವರು ಈ ಉಪಚುನಾವಣೆಗಳನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಗಣಿಸಿದ್ದರು. ಬಿ.ಎಸ್.ಪಿ-ಎಸ್.ಪಿ ಮೈತ್ರಿಯನ್ನು ಹಾವು-ಮುಂಗುಸಿಯ ಸ್ನೇಹವೆಂದೂ, ಕಳ್ಳರ ಕೂಟವೆಂದೂ ಜರೆದಿದ್ದರು. ಉತ್ತರಪ್ರದೇಶದ ಸಂಪುಟ ದರ್ಜೆಯ ಸಚಿವ ನಂದಗೋಪಾಲ ನಂದಿ ಅವರು ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಅವರನ್ನು ರಾಮಾಯಣದ ‘ಖಳ ಪಾತ್ರ’ಗಳಾದ ರಾವಣ, ಮೇಘನಾದ ಹಾಗೂ ಶೂರ್ಪನಖಿ ಎಂದು ಹೀಯಾಳಿಸಿದ್ದರು. ಅತಿಯಾದ ಆತ್ಮವಿಶ್ವಾಸ, ದುರಹಂಕಾರ, ನಿರ್ಲಕ್ಷ್ಯಗಳೇ ಈ ಸೋಲಿಗೆ ಮೇಲ್ನೋಟದ ಕಾರಣವೆಂದು ಬಿಜೆಪಿಯ ಹಲವು ನಾಯಕರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಜನರಿಗೆ ನೀಡಿದ ಆಶ್ವಾಸನೆಗಳು ಈಡೇರಿಲ್ಲ ಎಂಬುದನ್ನೂ ಈ ಸಾಲಿಗೆ ಸೇರಿಸಿಕೊಳ್ಳಬೇಕಿದೆ. ಜೊತೆಗೆ ದಲಿತರು ಮತ್ತು ಅಲ್ಪಸಂಖ್ಯಾತರ ಕುರಿತು ಹೀನಾಯವಾಗಿ ಮಾತಾಡುವುದನ್ನು ಮತ್ತು ಸಂವಿಧಾನವನ್ನು ಬದಲಾಯಿಸುವ ಹೇಳಿಕೆ ನೀಡುವುದನ್ನು ಕೇಂದ್ರ ಮಂತ್ರಿಗಳು ಮತ್ತು ಸರ್ಕಾರದ ಹಿಂದೆ ನಿಂತಿರುವ ಸಂಘಟನೆಗಳ ತಲೆಯಾಳುಗಳು ಇನ್ನಾದರೂ ನಿಲ್ಲಿಸಬೇಕು.

ಬಿಹಾರದಲ್ಲಿ ಸಂಯುಕ್ತ ಜನತಾದಳ, ಮಹಾಮೈತ್ರಿ ಕೂಟದಿಂದ ಹಠಾತ್ತನೆ ಹೊರಬಿದ್ದು ಬಿಜೆಪಿಯ ಮಡಿಲಿಗೆ ಮರಳಿತ್ತು. ಈ ಬೆಳವಣಿಗೆಯ ನಂತರ ನಿತೀಶ್-ಬಿಜೆಪಿ ಮೈತ್ರಿಕೂಟ ಎದುರಿಸಿದ ಮೊದಲ ಚುನಾವಣಾ ಪರೀಕ್ಷೆ ಅರಾರಿಯಾ, ಜೆಹನಾಬಾದ್, ಭಭುವಾ ಉಪಚುನಾವಣೆಗಳು. ಫಲಿತಾಂಶಗಳು ನಿತೀಶ್ ಅವರ ನಿದ್ದೆ ಕೆಡಿಸಿದ್ದರೆ ಅಚ್ಚರಿಯಿಲ್ಲ. ಉತ್ತರಪ್ರದೇಶದಲ್ಲಿ ದಲಿತ ಶಕ್ತಿಯ ಬೆಳೆ ತೆಗೆದ ಮೊದಲಿಗರು ದಿವಂಗತ ಕಾನ್ಶಿರಾಂ ಮತ್ತು ಮಾಯಾವತಿ. ಇತ್ತೀಚಿನ ವರ್ಷಗಳಲ್ಲಿ ಇಳಿಜಾರಿನ ಹಾದಿ ಹಿಡಿದಿದ್ದ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಾರ್ಟಿಗೆ ಈ ಫಲಿತಾಂಶಗಳು ಹೊಸ ಆತ್ಮವಿಶ್ವಾಸವನ್ನು ನೀಡಿವೆ. ತನ್ನನ್ನು ‘ಬ್ಲ್ಯಾಕ್ ಮೇಲ್’ ಮಾಡಿ ಬಗ್ಗಿಸುವ ಶಕ್ತಿಗಳ ವಿರುದ್ಧ ಸೆಟೆದು ನಿಲ್ಲುವ ಹೊಸ ದಾರಿ ಈ ಪಕ್ಷದ ಮುಂದೆ ತೆರೆದಿದೆ. ದೇಶದ ಹಿಂದಿ ಹೃದಯಭಾಗ ಎಂದು ಬಗೆಯಲಾಗುವ ಉತ್ತರಪ್ರದೇಶ ಮತ್ತು ಬಿಹಾರದ ರಾಜಕಾರಣ ಮುಂಬರುವ ದಿನಗಳಲ್ಲಿ ಏಕಪಕ್ಷೀಯ ಆಗಲಾರದು ಎಂಬ ಸೂಚನೆಗಳನ್ನು ಈ ಫಲಿತಾಂಶಗಳು ಹೊಮ್ಮಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT