ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬ ತೆಗೆಯದೇ ಕಾಂಕ್ರೀಟ್‌ ಹಾಕಿದರು!

Last Updated 16 ಮಾರ್ಚ್ 2018, 10:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ವಾರ್ಡ್‌ ಸಂಖ್ಯೆ 28ರ ರಾಘವೇಂದ್ರ ದೇವಸ್ಥಾನದ ಎದುರಿನ ರಸ್ತೆಯ ವಿಸ್ತರಣೆಗೆ ಸಿದ್ಧತೆ ನಡೆದಿದೆ. ಆದರೆ, ಈ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಲೋಕಪ್ಪನಹಕ್ಕಲ ರೈಲ್ವೆ ಮೇಲ್ಸೇತುವೆ ದಾಟಿ, ರಾಜನಗರಕ್ಕೆ ಹೋಗುವ ಮಾರ್ಗದಲ್ಲಿರುವ ರಾಘವೇಂದ್ರ ದೇಗುಲದ ಎದುರಿನ ರಸ್ತೆಯನ್ನು ಅಗಲ ಮಾಡಲು ಎರಡೂ ಬದಿಯಲ್ಲಿ ಮಣ್ಣು ಅಗೆಯಲಾಗಿದೆ. ಆ ಜಾಗದಲ್ಲಿ ಕಾಂಕ್ರೀಟ್‌ ಹಾಕಲಾಗುತ್ತಿದೆ. ಆದರೆ, ವಿದ್ಯುತ್‌ ಕಂಬಗಳನ್ನು ತೆರವು ಮಾಡಿಲ್ಲ. ಕಾಂಕ್ರೀಟ್‌ ಹಾಕಿದ ನಂತರ, ಮಧ್ಯಭಾಗಕ್ಕೆ ಬರುವ ವಿದ್ಯುತ್‌ ಕಂಬಗಳಿಂದ ಸಂಚಾರಕ್ಕೆ ಅಡ್ಡಿಯಾಗಲಿದೆ’ ಎಂದು ಇಲ್ಲಿನ ನಿವಾಸಿ ವಿಶ್ವನಾಥ ದೇಸಾಯಿ ಹೇಳಿದರು.

‘ಕಾಂಕ್ರೀಟ್‌ ಹಾಕಿ ರಸ್ತೆ ವಿಸ್ತರಣೆ ಮಾಡುತ್ತಾರೆ. ನಂತರ, ವಿದ್ಯುತ್‌ ಕಂಬಗಳನ್ನು ತೆಗೆಯಲು ಮತ್ತೆ ಅಗೆಯುತ್ತಾರೆ. ಹೀಗೆ ಮಾಡುವ ಬದಲು, ಮೊದಲೇ ಕಂಬಗಳನ್ನು ತೆರವುಗೊಳಿಸಿ, ಹೊಸ ಕಂಬಗಳನ್ನು ಹಾಕಿದ ನಂತರವೇ ಕಾಂಕ್ರೀಟ್‌ ಹಾಕಿದರೆ ಉತ್ತಮ’ ಎಂದು ಅವರು ಸಲಹೆ ನೀಡಿದರು.

‘ವಾಹನಗಳ ಸಂಚಾರ ಹೆಚ್ಚಾಗಿದ್ದು, ರಸ್ತೆ ವಿಸ್ತರಣೆ ಮಾಡಿದರೆ ಅನುಕೂಲವಾಗುತ್ತದೆ ಎಂದು ರಾಘವೇಂದ್ರ ಗುಡಿ ಹತ್ತಿರದ ನಿವಾಸಿಗಳು ಹಾಗೂ ಮಹಿಳಾ ವಸತಿ ನಿಲಯದಲ್ಲಿರುವವರು ಮನವಿ ಮಾಡಿದ್ದರು. ಹಾಗಾಗಿ, ₹5 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ’ ಎಂದು ಪಾಲಿಕೆ ಸದಸ್ಯೆ ರತ್ನಾ ಪಾಟೀಲ ಹೇಳಿದರು.

‘ರಸ್ತೆಯ ಎರಡೂ ಬದಿಯಲ್ಲಿ ಅಂದಾಜು ಐದು ವಿದ್ಯುತ್‌ ಕಂಬಗಳಿವೆ. ಅವುಗಳಲ್ಲಿ, ರಾಘವೇಂದ್ರ ಗುಡಿ ಎದುರಿನ ಒಂದು ಕಂಬ ಮಾತ್ರ ಸ್ವಲ್ಪ ಮುಂದಿದೆ. ವಿದ್ಯುತ್‌ ಕಂಬಗಳನ್ನು ನಾವು ತೆಗೆಯಲು ಬರುವುದಿಲ್ಲ. ಸ್ಥಳೀಯರೇ ಈ ಬಗ್ಗೆ ಹೆಸ್ಕಾಂಗೆ ಅರ್ಜಿ ಸಲ್ಲಿಸಿದ್ದಾರೆ. ಆ ಕಂಬ ತೆರವುಗೊಳಿಸಿ, ಮೂರು ಅಡಿ ಹಿಂದೆ ಹೊಸ ಕಂಬ ಹಾಕಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ’ ಎಂದರು.

‘ಹೊಸ ಕಂಬ ಹಾಕುವುದಕ್ಕೆ ನಿರ್ದಿಷ್ಟ ಜಾಗ ಬಿಟ್ಟು, ಉಳಿದೆಡೆ ಕಾಂಕ್ರೀಟ್‌ ಹಾಕಲಾಗುವುದು. ವಾರದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ರತ್ನಾ ಪಾಟೀಲ ಹೇಳಿದರು.

ನಡುವೆ ಡಾಂಬರ್: ‘ಕಾಂಕ್ರೀಟ್‌ ಹಾಕುವ ಕಾಮಗಾರಿ ಪೂರ್ಣಗೊಂಡ ನಂತರ, ಈ ರಸ್ತೆಯಿಂದ ರಾಜನಗರದ ಮುಖ್ಯರಸ್ತೆಯವರೆಗೆ ಡಾಂಬರ್‌ ಹಾಕಲಾಗುವುದು. ಇದಕ್ಕೆ ಈಗಾಗಲೇ ಟೆಂಡರ್‌ ಕರೆಯಲಾಗಿ‌ದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT