ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿದ್ದೆಯಲ್ಲೇ ನನ್ನ ಮಾತುಕತೆ!’

Last Updated 3 ಏಪ್ರಿಲ್ 2018, 15:55 IST
ಅಕ್ಷರ ಗಾತ್ರ

1. ನನಗೆ ನಿದ್ದೆಯಲ್ಲಿ ಮಾತನಾಡುವ ಸಮಸ್ಯೆ ಇದೆ. ನಿದ್ದೆಯಲ್ಲಿ ಏನೇನೋ ಮಾತನಾಡುತ್ತೇನೆ. ಮನೆಯವರಿಗೆಲ್ಲಾ ಬಯ್ಯುತ್ತೇನೆ ಎಂದು ಮನೆಯಲ್ಲಿ ಹೇಳುತ್ತಾರೆ. ಆದರೆ ನನಗೆ ಇದ್ಯಾವುದೂ ತಿಳಿಯುವುದಿಲ್ಲ. ಡಾಕ್ಟರ್ ಬಳಿ ಹೋಗಲು ನಾಚಿಕೆ. ಇದಕ್ಕೆ ನಿಮ್ಮಲ್ಲಿ ಏನಾದರೂ ಪರಿಹಾರವಿದೆಯೇ?

ಹೆಸರು, ಊರು ಬೇಡ

ನೀವು ಇಲ್ಲಿ ನಿಮ್ಮ ವಯಸ್ಸು ಎಷ್ಟು ಎಂಬುದನ್ನು ತಿಳಿಸಿಲ್ಲ. ಹಾಗಾಗಿ, ಜನರಲ್ ಆಗಿ ಹೇಳುತ್ತೇನೆ. ಇದು ಹಲವರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ ಮತ್ತು ಒಂದು ಹಂತದವರೆಗೆ ಇದರಿಂದ ತೊಂದರೆ ಏನಿಲ್ಲ. ಆದರೆ ಇದು ಪ್ರತಿನಿತ್ಯದ ವಿಷಯವಾದರೆ ಮತ್ತು ಇಲ್ಲದ ವಿಷಯಗಳನ್ನು ಹೇಳುತ್ತಿದ್ದರೆ ನೀವು ಇದಕ್ಕೆ ತಿಲಾಂಜಲಿ ಹಾಡಬೇಕು. ಇದಕ್ಕೆ ಅಂತಹ ಸರಿಯಾದ ಚಿಕಿತ್ಸೆ ಏನಿಲ್ಲ, ಆದರೆ ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

ನಿದ್ದೆಯಲ್ಲಿ ಮಾತನಾಡುವುದಕ್ಕೆ ಆತಂಕ ಒಂದು ಪ್ರಮುಖ ಕಾರಣ, ಹಗಲು ಹೊತ್ತಿನಲ್ಲಿ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ, ಇದರಿಂದ ನೀವು ರಾತ್ರಿ ಸಮಯದಲ್ಲಿ ಒಂಟಿಯಾಗಿ ಮಾತನಾಡುವುದಕ್ಕೆ ಫುಲ್‌ಸ್ಟಾಪ್‌ ಇರಿಸಬಹುದು. ನಿಮ್ಮ ಡಯೆಟ್‌ನ ಮೇಲೆ ಗಮನ ಇಡಿ. ರಾತ್ರಿ ವೇಳೆ ಲಘು ಆಹಾರ ಸೇವಿಸಿ. ಪ್ರತಿದಿನ ಎಕ್ಸ್‌ಸೈಜ್ ಮಾಡುವುದನ್ನು ತಪ್ಪಿಸಬೇಡಿ. ಪ್ರತಿದಿನ ಸ್ವಲ್ಪ ಹೊತ್ತು ಧ್ಯಾನ ಮಾಡಿ. ಅದು ನಿಮ್ಮ ಮನಸ್ಸು ನಿರಾಳವಾಗಲು ಸಹಾಯ ಮಾಡುತ್ತದೆ. ಮಲಗುವ ಮೊದಲು ಹಿತವಾದ ಸಂಗೀತವನ್ನು ಆಲಿಸಿ.

ಇದು ನಿಮ್ಮೊಳಗೆ ಹುಟ್ಟಿಕೊಂಡ ಅರಿಯಲಾರದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಮೆದುಳು ನಿರಾಳವಾಗಲು ಒಂದು ಉತ್ತಮ ನಿದ್ದೆಯ ವಾತಾವರಣವನ್ನು ಸೃಷ್ಟಿಸಿಕೊಳ್ಳಿ. ಇದು ಒಂದು ತಿರುವಿನಲ್ಲಿ ನಿಮ್ಮ ನಿದ್ದೆಯ ಮಾತಿಗೆ ಫುಲ್‌ಸ್ಟಾಪ್‌ ಇಡಬಹುದು. ಈ ಎಲ್ಲ ಪ್ರಯತ್ನದ ನಂತರವೂ ನಿಮ್ಮ ನಿದ್ದೆಯ ಮಾತು ಮುಂದುವರಿದರೆ ಡಾಕ್ಟರ್ ಅನ್ನು ನೋಡುವುದು ಉತ್ತಮ; ಇದರಲ್ಲಿ ನಾಚಿಕೆ ಪಡುವುದು ಏನಿಲ್ಲ, ಇದೊಂದು ಸಾಮಾನ್ಯ ವಿಷಯ. ಬಹುಶಃ ಡಾಕ್ಟರ್ ನಿಮಗೆ ಈ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡಬಹುದು.

**

2. ನಾನು ಸರ್ಕಾರಿ ನೌಕರಳು. ನನ್ನ ಇಲಾಖೆಯಲ್ಲೇ ಕೆಲಸ ಮಾಡುತ್ತಿರುವವರೊಂದಿಗೆ ನನ್ನ ಮದುವೆಯಾಯಿತು. ನಾನು ಮೊದಲ ಹೆರಿಗೆಗೆಂದು ತವರುಮನೆಗೆ ಹೋದಾಗ ಗಂಡ ಬೇರೆಯವಳ ಜೊತೆ ಸಂಬಂಧವನ್ನು ಇರಿಸಿಕೊಂಡರು. ಇದರಿಂದ ನಾನು ಬಹಳ ನೊಂದಿದ್ದೇನೆ, ಜೀವನವೇ ಬೇಸರವಾಗಿದೆ.

ಹೆಸರು, ಊರು ಬೇಡ

ಮೊದಲು ಈ ವಿಷಯ ಸತ್ಯವೇ ಎಂಬುದನ್ನು ಪರಿಶೀಲಿಸಿ ನೋಡಿ. ಬೇರೆಯವರು ಹೇಳಿದ್ದನ್ನು ನಂಬಬೇಡಿ. ಇದು ನಿಜವಾಗಿಯೂ ಸತ್ಯವಾದರೆ ನಿಮ್ಮ ಕುಟುಂಬದ ಹಿರಿಯರನ್ನು ಇದಕ್ಕೆ ಸೇರಿಸಿಕೊಳ್ಳಿ ಮತ್ತು ಅವರ ಜೊತೆ ಈ ವಿಷಯದ ಬಗ್ಗೆ ಚರ್ಚೆ ಮಾಡಿ. ಅವರು ನಿಮ್ಮ ಗಂಡನ ಜೊತೆ ಮಾತನಾಡಿ ಪರಿಸ್ಥಿತಿಯ ಬಗ್ಗೆ ಅವರಿಗೆ ಅರಿವಾಗುವಂತೆ ಹೇಳುತ್ತಾರೆ ಮತ್ತು ಅವರು ಬೇರೆ ಹೆಂಗಸನ್ನು ನೋಡುವುದನ್ನು ನಿಲ್ಲಿಸುವಂತೆ ಮಾಡುತ್ತಾರೆ. ನೀವು ನಿರಾಶರಾಗಬೇಡಿ, ಅದರ ಬದಲು ನಿಮ್ಮ ಮಗುವಿನ ಮೇಲೆ ಗಮನ ನೀಡಿ. ಈಗ ನಿಮ್ಮ ಗಮನ ಮಗುವನ್ನು ನೋಡಿಕೊಳ್ಳುವುದು ಮತ್ತು ಅದರ ಕಾಳಜಿ ವಹಿಸುವುದು ಆಗಿರಲಿ. ಮನೆಯ ಹಿರಿಯರಿಗೆ ಮಾತನಾಡಲು ಬಿಡಿ ಮತ್ತು ಅವರೇ ನಿರ್ಧಾರವನ್ನು ತೆಗೆದುಕೊಳ್ಳಲಿ.

**

3. ನಾನು ಸರ್ಕಾರಿ ಕೆಲಸ ಮಾಡುತ್ತಿದ್ದೇನೆ. 2014ರಲ್ಲಿ ನಾನು ಪಿಯುಸಿ ಇದ್ದಾಗ ಒಂದು ಹುಡುಗಿಯನ್ನು ಪ್ರೀತಿಸಿದ್ದೆ; ಅವಳು ಕೂಡ ಒಪ್ಪಿದ್ದಳು. ಅನಂತರ ಅವಳು ನನ್ನಿಂದ ದೂರಾಗಲು ಪ್ರಯತ್ನಿಸಿದಳು. ಆಗ ನಾನು ಅವಳಿಗೆ ಬೈದಿದ್ದೆ. ಅದೇ ನೆಪ ಇಟ್ಟಕೊಂಡು ಸಂಪೂರ್ಣ ದೂರವಾದಳು. ನಾನು ಸದಾ ಸಾಯುವ ಮಾತನ್ನಾಡುತ್ತಾ, ಆರೋಗ್ಯ ಹದಗೆಟ್ಟು ನರಕಯಾತನೆ ಅನುಭವಿಸಿದೆ. ಕೊನೆಗೂ ಸರ್ಕಾರಿ ನೌಕರಿಯನ್ನು ಪಡೆದೆ. ನಾಲ್ಕು ವರ್ಷ ಕಳೆದರೂ ನನಗೆ ಅವಳನ್ನು ಮರೆಯಲು ಆಗುತ್ತಿಲ್ಲ. ಸಾಯಬೇಕು ಎಂದು ಹಲವು ಬಾರಿ ಅನ್ನಿಸುತ್ತದೆ.

ಹೆಸರು ಬೇಡ, ತಾಳಿಕೋಟೆ

ಯಾವಾಗಲೂ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ, ಜೀವನಕ್ಕಿಂತ ಅತಿ ಮೌಲ್ಯಯುತವಾದದ್ದು ಯಾವುದೂ ಇಲ್ಲ. ಹಾಗಾಗಿ ಜೀವನಕ್ಕೆ ತೊಂದರೆ ಮಾಡಿಕೊಳ್ಳುವ ಬಗ್ಗೆ ಯಾವತ್ತೂ ಯೋಚಿಸಬೇಡಿ. ಜೀವನದಲ್ಲಿ ನೀವು ಇನ್ನು ತುಂಬಾ ದೂರ ಸಾಗಬೇಕಿದೆ ಮತ್ತು  ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ಹಾಗಾಗಿ ನಿಮ್ಮ ಜೀವನದಿಂದ ದೂರಾದ ಹುಡುಗಿಯ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ. ನೀವು ಈಗಾಗಲೇ ನಾಲ್ಕು ಮೌಲ್ಯಯುತ ವರ್ಷಗಳನ್ನು ಹಾಳು ಮಾಡಿಕೊಂಡಿದ್ದೀರಿ. ಆ ಹುಡುಗಿ ನಿಮ್ಮಿಂದ ದೂರಾಗಿದ್ದಕ್ಕೆ ಅವಳದೇ ಆದ ಕಾರಣಗಳು ಇರಬಹುದು. ಅವರ ಭಾವನೆಗಳಿಗೆ ಗೌರವ ನೀಡಿ. ನಿಮ್ಮ ದೈನಂದಿನ ದಿನಚರಿಗೆ ಮರಳಿ. ಹೊಸ ಜನ ಹಾಗೂ ಸ್ನೇಹಿತರನ್ನು ಭೇಟಿ ಮಾಡಿ. ಮೊದಲ ಪ್ರೇಮದೊಂದಿಗೆ ನಿಮ್ಮ ಜೀವನವೇನೂ ಕೊನೆಗೊಳ್ಳುವುದಿಲ್ಲ. ಇನ್ನೂ ಅನೇಕ ವಿಷಯಗಳು ನಿಮ್ಮನ್ನು ಎದುರುಗೊಳ್ಳಲಿವೆ. ಈಗ ನಿಮಗೆ ಕೆಲಸವಿದೆ. ನೀವ್ಯಾಕೆ ಮುಂದಿನ ವಿದ್ಯಾಭ್ಯಾಸದ ಕಡೆ ಗಮನ ಕೊಡಬಾರದು? ದೂರಶಿಕ್ಷಣ ಅಥವಾ ಸಂಜೆ ಕಾಲೇಜಿಗೆ ಹೋಗುವ ಮೂಲಕ ನಿಮ್ಮ ಡಿಗ್ರಿಯನ್ನು ಪೂರ್ಣಗೊಳಿಸಿಕೊಳ್ಳಿ. ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡುವತ್ತ ನಿಮ್ಮ ಗುರಿ ಹಾಗೂ ಗಮನವಿರಲಿ. ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ.

**

4. ನನ್ನ ವಯಸ್ಸು 35. ನಾನು ಸಾಫ್ಟ್‌ವೇರ್‌ ಎಂಜಿನಿಯರ್. ನನಗೆ ಇನ್ನೂ ಓದುವ ಆಸೆ ಇದೆ. ಆದರೆ ಓದಲು ಕುಳಿತರೆ ಏಕಾಗ್ರತೆ ಇಲ್ಲವಾಗುತ್ತದೆ. ಪರಿಹಾರ ತಿಳಿಸಿ.

ರಮೇಶ್‌, ಬೆಂಗಳೂರು

ಬೆಳೆಯುತ್ತಿರುವ ವಯಸ್ಸಿನ ನಡುವೆ ಓದಿನ ಮೇಲೆ ಗಮನ ಹರಿಸುವುದು ತುಂಬಾ ಕಷ್ಟ ಎನ್ನಿಸುತ್ತದೆ. ಅದರಲ್ಲೂ ಒಮ್ಮೆ ನೀವು ದುಡಿಯಲು ಆರಂಭಿಸಿದರೆ ಹೆಚ್ಚಿನ ಸಮಯದಲ್ಲಿ ಓದು ಹಿಂದಿನ ಸೀಟಿಗೆ ತೆರಳುತ್ತದೆ. ಇದಕ್ಕೆ ಇರುವ ಒಂದು ಮುಖ್ಯವಾದ ಕಾರಣವೆಂದರೆ, ಇದು ಈಗ ಮುಖ್ಯವಲ್ಲ ಎಂಬ ಭಾವ ಮತ್ತು ಅದರ ಜೊತೆಗೆ ಅತಿಯಾದ ಜವಾಬ್ದಾರಿಗಳು. ಈಗ ನೀವು ನಿಮ್ಮ ಓದನ್ನು ಮುಂದುವರಿಸಬೇಕೆಂದುಕೊಂಡಿದ್ದೀರಿ. ನೀವು ಯಾವುದಕ್ಕೆ ಹೆಚ್ಚು ಪ್ರಾಮುಖ್ಯವನ್ನು ನೀಡಬೇಕು ಎಂಬುವಷ್ಟರ ಮಟ್ಟಿಗೆ ನೀವು ಪ್ರೌಢರಾಗಿದ್ದೀರಿ. ನೀವು ಕರೆಸ್ಪಾಡೆಂಟ್ಸ್ ಕೋರ್ಸ್‌ ಅನ್ನು ಆಯ್ಕೆ ಮಾಡಿದ್ದರೆ ನೀವು ನಿಮ್ಮ ಕೆಲಸದ ಸಮಯದಲ್ಲೇ ಅದಕ್ಕೂ ಸಮಯವನ್ನು ಹೊಂದಿಸಬೇಕು. ಪ್ರತಿದಿನ ಕನಿಷ್ಠ ಒಂದು ಗಂಟೆಯನ್ನಾದರೂ ನಿಮ್ಮ ಓದಿಗೆ ಮೀಸಲಿಡಿ; ವಾರಾಂತ್ಯವನ್ನು ಸಂಪೂರ್ಣ ಅದಕ್ಕಾಗಿಯೇ ಮೀಸಲಿಡಿ. ದಿನನಿತ್ಯ ವ್ಯಾಯಾಮ ಹಾಗೂ ಧ್ಯಾನ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT