ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಟ್ಟಿ ಇರೋತನಕ ದುಡೀಬೇಕು...

Last Updated 16 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನನ್ನ ಹೆಸರು ಲಕ್ಷ್ಮಮ್ಮ. ಬಾಗಲಗುಂಟೆ ಮಾರ್ಕೆಟ್‌ನಲ್ಲಿ ಆರು ವರ್ಷದಿಂದ ಸೊಪ್ಪು ಮಾರೋ ಕೆಲಸ ನಂದು. ಊರು ಮಾದನೂರು. ಹುಟ್ಟಿದ ಮನೆಯಲ್ಲೂ ಕೊಟ್ಟ ಮನೆಯಲ್ಲೂ ಬಡತನ ಕಟ್ಟಿಟ್ಟ ಬುತ್ತಿ. ಊರಲ್ಲಿದ್ದಷ್ಟೂ ವರ್ಷ ಗದ್ದೆ ಕೆಲಸ ಮಾಡ್ಕಂಡು ಹೊಟ್ಟೆ ತುಂಬಿಸ್ಕೊತಿದ್ವಿ.

ನಾನು ಅಕ್ಷರ ಕಲಿಯಲಿಲ್ಲ. ನನ್ನ ಮದುವೆಯಾದಪ್ಪನೂ ಶಾಲೆ ಮೆಟ್ಟಿಲು ಹತ್ತಿದವನಲ್ಲ. ಬಿಸಿಲು, ಮಳೆ ಎನ್ನದೆ ದಿನಾ ಮೈಮುರಿದು ಕೆಲಸ ಮಾಡಿದ್ವಿ. ನಂಗೆ ಮೂರು ಗಂಡುಮಕ್ಕಳು. ನಾವು ಓದದಿದ್ದರೂ ಅವರನ್ನು ಓದಿಸಿದ್ವಿ. ಮೂವರು ಎಸ್ಸೆಸ್ಸೆಲ್ಸಿ ಮುಗಿಸಿದ್ದಾರೆ. ಏನೋ ಜೀವನ ಒಂದು ಮಟ್ಟಕ್ಕೆ ಸಾಗ್ತಾ ಇತ್ತು. ಅಷ್ಟೊತ್ತಿಗೆ, ಮಳೆ ಬರೋದೇ ನಿಂತೋಯ್ತು. ಊರಲ್ಲಿ ಇರೋದು ಹೊಲ, ನೀರಿಲ್ದೆ ಬೆಳೆ ಹೇಂಗ್‌ ಬೇಳೀಬೇಕು. ಎರಡು ವರ್ಷ ಹಾಂಗೋ ಹಿಂಗೋ ಬದುಕು ದೂಡಿದ್ವಿ.

ಆಗೆಲ್ಲಾ ಊರಲ್ಲಿ ಕೆಲಸ ಕೈಹಿಡಿದೆ ಇದ್ದವರಲ್ಲ ಪ್ಯಾಟೆ ಕಡೆ ಬಂದ್ರು. ಅದೂ ಬೆಂಗಳೂರಿಗೆ ಬಾಳ ಜನ ಬರೋರು. ಈ ಊರಲ್ಲೇ ಊಟದ ಸಂಪಾದನೆ ಆಗಬಹುದು ಎಂದುಕೊಂಡು ನಾನು, ನನ್ನ ಗಂಡ, ಮೂವರು ಮಕ್ಕಳು ಇಲ್ಲಿಗೆ ಬಂದೆವು. ಇಲ್ಲಿ ಬಂದು ಆರು, ಅಲ್ಲ ಹತ್ತು ವರ್ಷನೇ ಆಗಿರಬಹುದು. ದುಡಿತಕ್ಕೆ ಯಾವ ಕೆಲಸ ಮಾಡಬೇಕು ತಿಳಿಲಿಲ್ಲ. ಮೊದಮೊದಲು ಮನೆ ಕೆಲಸಕ್ಕೆ ಹೋಗ್ತಿದ್ದೆ. ಸೆಟ್ಟೇ ಆಗಲಿಲ್ಲ, ಬಿಟ್ಬಿಟ್ಟೆ.

ಮಾರುಕಟ್ಟೆಯಲ್ಲಿ ಕೂತು ಸೊಪ್ಪು ಮಾರೋದನ್ನ ದಿನಾ ನೋಡ್ತಿದ್ನಲ್ಲ, ನಾನು ಇದೇ ಕೆಲಸ ಮಾಡವ ಅನಿಸ್ತು. ಈಗ ಆರು ವರ್ಷದಿಂದ ಇದೇ ಕೆಲಸ. ಬೆಳಿಗ್ಗೆ 6 ಗಂಟೆಗೆ ಎದ್ದು ಬಾಣಾವರ ಮಾರ್ಕೆಟ್‌ ಹೋಗ್ತೀನಿ. ಹಳ್ಳಿಯಿಂದ ಬಂದ ಸೊಪ್ಪುಗಳನ್ನು ಆರಿಸಿ ಆಟೊದಲ್ಲಿ ಹಾಕ್ಕೊಂಡು ಬರ್ತೀನಿ. ಬೆಳಿಗ್ಗೆ ಮಲ್ಲಸಂದ್ರ ಮಾರ್ಕೆಟ್‌ನಲ್ಲಿ ವ್ಯಾಪಾರ. ಸಂಜೆ ಬಾಗಲಗುಂಟೆ ಮಾರ್ಕೆಟ್‌ನಲ್ಲಿ ವ್ಯಾಪಾರ. ಸೊಪ್ಪಿನ ಜೊತೆಗೆ ತೂಕ ಹಾಕದೆ ಮಾರುವಂಥ ಮೆಣಸು, ಶುಂಠಿ, ಹೂಕೋಸು, ಮೂಲಂಗಿ ಇಂಥವನ್ನೂ ಮಾರಾಟ ಮಾಡ್ತೀನಿ. ಶಾಲೆಗೆ ಹೋಗಿಲ್ದಿದ್ರೂ ವ್ಯಾಪಾರ ಮಾಡ್ತಾ ಮಾಡ್ತಾ ಲೆಕ್ಕಾ ಕಲ್ತಬಿಟ್ಟೆ.

ಈ ವ್ಯಾಪಾರದಲ್ಲಿ ಹಾಕಿದ ಬಂಡವಾಳಕ್ಕೇನೂ ಮೋಸ ಇಲ್ಲ. ಒಂದೊಂದು ಸಲ ಹೆಚ್ಚೂ ಎಂದರೆ ₹500 ವರೆಗೂ ಲಾಭ ಆಗಿದ್ದಿದೆ. ಇಲ್ಲ ಅಂದ್ರೆ ₹200, ₹300 ಸಿಕ್ಕೇ ಸಿಗತ್ತೆ. ಮಳೆ ಬಂದ್ರೆ ಮಾತ್ರ ಫಜೀತಿ. ಯುಗಾದಿ ಹಬ್ಬ, ಭಲೇ ವ್ಯಾಪಾರ ಆಗತ್ತೆ ಅಂತ ರಾಶಿ ಸೊಪ್ಪು ತಕಂಡಬಂದೆ. ಈ ಮಳೆ ಇವತ್ತೇ ಬರಬೇಕಾ. ಜನ ಎಲ್ಲಾ ಮನೆ ಸೇರ್ಕಂಡ್ರು. ವ್ಯಾಪಾರನೇ ಇಲ್ಲ. ಮಳೆಗೆ ಸೊಪ್ಪು ಬೇಗ ಬೇಗ ಹಾಳಾಗ್ತದೆ. ರಾತ್ರಿ ಆದಾಂಗ್ ಬೆಲೆ ಸ್ವಲ್ಪ ಕಮ್ಮಿ ಆದ್ರೂ ಪರ್ವಾಗಿಲ್ಲ, ಖಾಲಿ ಮಾಡಿದ್ರೆ ಸಾಕು ಅನ್ಸ್‌ತದೆ ಮನ್ಸಿಗೆ. ಹಾಂಗೆ ಮಾಡಬಡದೆ.

ನನ್ನ ಗಂಡ ತೀರ್ಕೊಂಡು ಎರಡು ಮೂರು ವರ್ಷ ಆಯ್ತು. ಮಕ್ಕಳಿಬ್ಬರು ಗಾರ್ಮೆಂಟ್‌ ಗಾಡಿಗೆ ಡ್ರೈವರ್‌ ಆಗವ್ರೆ. ಮೂರನೇಯವ ಅದ್ಯಾವ್ದೊ ಫ್ಯಾಕ್ಟರಿಲಿ ಕೆಲಸ ಮಾಡ್ತಾನೆ. ಈ ನಟ್‌, ಬೋಲ್ಟ್‌ ಎಲಾ ಕೂಡ್ಸೋ ಕೆಲಸ ಅಂತೆ. ಬಾಡಿಗೆ ಮನೆಲಿದೀವಿ. ಗಾರ್ಮೆಂಟ್‌ಗೆ ಹೋಗೋವ್ರನ್ನೆಲ್ಲಾ ಬಿಟ್ಟು ಬಂದು ಮಗನೇ ಅಡುಗೆ ಮಾಡ್ತಾನೆ. ಮಧ್ಯಾಹ್ನ ಹೋಗಿ ಊಟ ಮಾಡ್ಕೊಂಡ್‌ ಬತ್ತೀನಿ.

ಕೈಕಾಲ ಗಟ್ಟಿ ಇರೋವರೆಗೆ ದುಡದೇ ತಿನ್ನಬೇಕು ಕಣವ್ವ. ಮನೆಯಲ್ಲಿ ಸುಮ್ನೆ ಕೂತ್ಕಾಬಾರ್ದು. ಮಕ್ಕಳು ಸಾಕು, ಆರಾಮಾಗಿರಬಾರದಾ ಅಂತಾರೆ. ಮೊದಲಿನಿಂದಲೂ ಕೆಲಸ ಮಾಡಕಂಡೇ ಬದುಕಿದ ಜೀವ, ಸುಮ್ನೆ ಕುತ್ಕೊಳಕ್ಕೆ ಆಗದೇ ಇಲ್ಲ. ಈಗ ಮಾರ್ಕೆಟ್‌ ಬರೋರೆಲ್ಲಾ ಪರಿಚಯ ಆಗವ್ರೆ. ನನ್ನಂಗೆ ವ್ಯಾಪಾರ ಮಾಡೋವ್ರೆಲ್ಲಾ ಫ್ರೆಂಡ್ಸ್‌ ಆಗವ್ರೆ. ದೇವರು ಹಿಂಗೇ ಆರಾಮಾಗಿಟ್ರೆ ಅಷ್ಟೇ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT