ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನ್‌ ದೋಷ; ವಿಮಾನ ಹಾರಾಟ ಸ್ಥಗಿತ

ಪ್ರಯಾಣಿಕರ ಸುರಕ್ಷತೆಗೆ ಪರಮೋಚ್ಚ ಆದ್ಯತೆ
Last Updated 16 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಎರಡು ಎಂಜಿನ್‌ ಹೊಂದಿದ ವಿಮಾನವು ನಿಲ್ದಾಣದಲ್ಲಿ ಇಳಿಯುವ ವೇಳೆಯಲ್ಲಿ ಒಂದೇ ಎಂಜಿನ್‌ ಕಾರ್ಯನಿರ್ವಹಿಸುತ್ತಿದ್ದರೂ ಸುರಕ್ಷಿತವಾಗಿ ಭೂಸ್ಪರ್ಶ ಮಾಡುತ್ತದೆ. ಆದರೆ, ಆಕಾಶದಲ್ಲಿ ಹಾರಾಡುವಾಗ ಒಂದು ಎಂಜಿನ್‌ನಲ್ಲಿ ದೋಷ ಕಂಡುಬಂದು ಹಠಾತ್ತಾಗಿ ಸ್ಥಗಿತಗೊಂಡರೆ ವಿಮಾನವು ತೀವ್ರವಾಗಿ ನಡುಗಲು ಆರಂಭಿಸುತ್ತದೆ. ರಸ್ತೆ ಉಬ್ಬುಗಳ ಮೇಲೆ ಕಾರ್‌ ವೇಗವಾಗಿ ಹೋಗುವಾಗ ಪ್ರಯಾಣಿಕರನ್ನು ಎತ್ತಿ ಕುಕ್ಕಿದಂತಾಗುವ ಅನುಭವ ವಿಮಾನದಲ್ಲೂ ಆದಾಗ ಸಹಜವಾಗಿಯೇ ಪ್ರಯಾಣಿಕರು ಹೌಹಾರುತ್ತಾರೆ. ವಿಮಾನ ಟೇಕಾಫ್‌ ಸಂದರ್ಭದಲ್ಲಿ ಅಥವಾ ಹಾರಾಟದಲ್ಲಿ ಇರುವಾಗ ಧಡ್‌, ಫಟ್‌ ಎನ್ನುವ ಪಟಾಕಿ ಸದ್ದಿನಂತೆ ಎಂಜಿನ್‌ನಿಂದ ಅಸಹಜ ಸದ್ದು ಕೇಳಿಬಂದಾಗ, ಹೊಗೆ ವಾಸನೆ ಮೂಗಿಗೆ ಬಡಿದಾಗ ಎಂಜಿನ್‌ ವೈಫಲ್ಯವಾಗಿರುವುದು ಪ್ರಯಾಣಿಕರ ಅನುಭವಕ್ಕೆ ಬರುತ್ತದೆ. ಭೀಕರ ಅನಾಹುತ ಸಂಭವಿಸಬಹುದು ಎಂದು ತಲ್ಲಣಗೊಳ್ಳುತ್ತಾರೆ. ಭಯದಿಂದ ಅವರಿಗೇ ಗೊತ್ತಿಲ್ಲದೆ ಚೀತ್ಕಾರ ಹೊರಡುತ್ತದೆ. ಸಾವಿಗೆ ಸಾಕ್ಷಿಯಾಗುವ ಶಂಕೆಯಿಂದ ಭಯ ವಿಹ್ವಲರಾಗುತ್ತಾರೆ.

ಒಂದೇ ಎಂಜಿನ್‌ ಬಳಸಿಕೊಂಡು ವಿಮಾನವು ಹೊರಟ ನಿಲ್ದಾಣಕ್ಕೆ ಕೆಲವೇ ನಿಮಿಷಗಳಲ್ಲಿ ಮರಳಿದಾಗ ನೆಮ್ಮದಿಯ ನಿಟ್ಟುಸಿರುಬಿಡುತ್ತಾರೆ. ಸಾವು ಗೆದ್ದು ಬಂದ ಖುಷಿಯಲ್ಲಿ ಸಿಬ್ಬಂದಿಗೆ ಅಭಿನಂದನೆಯ ಸುರಿಮಳೆಗೈಯ್ಯುತ್ತಾರೆ. ರನ್‌ವೇ ಪಕ್ಕದಲ್ಲಿ ಆಂಬುಲೆನ್ಸ್‌, ಅಗ್ನಿಶಾಮಕ ವಾಹನ ನೋಡಿ ಭೀತಿಯಿಂದ ಮತ್ತೊಮ್ಮೆ ನಡುಗಿದರೂ ನೆಮ್ಮದಿಯಿಂದಲೇ ನೆಲಕ್ಕೆ ಕಾಲಿಡುತ್ತಾರೆ. ಹದಿನಾರು ದಿನಗಳಲ್ಲಿ ಇಂತಹ ಮೂರು ಪ್ರಸಂಗಗಳು ನಡೆದಿವೆ. ಇದೊಂದು ನಿಜಕ್ಕೂ ಆತಂಕಕಾರಿ ವಿದ್ಯಮಾನ. ಒಂದು ವರ್ಷಾವಧಿಯಲ್ಲಿ ಎಂಜಿನ್‌ ವೈಫಲ್ಯದ ಹಲವಾರು ಘಟನೆಗಳು ನಡೆದಿವೆ.

ಇಂತಹ ಪರಿಸ್ಥಿತಿ ಮರುಕಳಿಸದಿರಲು ದೋಷಪೂರಿತ ಎಂಜಿನ್‌ ಬಳಸುತ್ತಿರುವ ವಿಮಾನಗಳ ಹಾರಾಟವನ್ನೇ ಸ್ಥಗಿತಗೊಳಿಸಲಾಗಿದೆ.

ನಿರ್ಧಾರ ಸರಿಯೇ?
ಖಂಡಿತವಾಗಿಯೂ ಹೌದು. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಇಂತಹ ಕಠಿಣ ನಿರ್ಧಾರ ಕೈಗೊಂಡಿರುವುದು ಸರಿಯಾಗಿದೆ. ಇದು ಈ ಮೊದಲೇ ಜಾರಿಗೆ ಬರಬೇಕಾಗಿತ್ತು. ತಡವಾಗಿ ನಿರ್ಧಾರಕ್ಕೆ ಬರಲಾಗಿದೆ. ಅದೃಷ್ಟವಶಾತ್‌ ಯಾವುದೇ ದುರಂತ ಸಂಭವಿಸಿಲ್ಲ.

ಇದು ಯಾರ ನಿರ್ಧಾರ?
ನಾಗರಿಕ ವಿಮಾನ ಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಈ ಕಠಿಣ ನಿರ್ಧಾರ ಕೈಗೊಂಡಿದೆ. ದೋಷಪೂರಿತ ಎಂಜಿನ್‌ ಹೊಂದಿರುವ 14 ವಿಮಾನಗಳ ಹಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೋಮವಾರ (ಮಾ.12) ಆದೇಶ ಹೊರಡಿಸಿತ್ತು.

ಯಾವ ವಿಮಾನ ರದ್ದು? 
ಅಗ್ಗದ ವಿಮಾನಯಾನ ಸಂಸ್ಥೆಗಳಾದ ಇಂಡಿಗೊ ಮತ್ತು ಗೋ ಏರ್‌ನ ಒಟ್ಟು 14 ವಿಮಾನಗಳ ಹಾರಾಟ ನಿಷೇಧಿಸಲಾಗಿದೆ. ದೇಶಿ ವಿಮಾನಯಾನ ರಂಗದಲ್ಲಿ ಅತಿ ಹೆಚ್ಚು ಮಾರುಕಟ್ಟೆ ಪಾಲು ಹೊಂದಿರುವ ಇಂಡಿಗೊ, ಮಾರ್ಚ್‌ 31ರವರೆಗೆ ಒಟ್ಟು 488 ವಿಮಾನ ಟ್ರಿಪ್‌ಗಳನ್ನು ರದ್ದುಪಡಿಸಿದೆ. ಸಂಸ್ಥೆಯು ಪ್ರತಿದಿನ 36 ವಿಮಾನಗಳ ಹಾರಾಟ ಸ್ಥಗಿತಗೊಳಿಸಿದೆ. ಗೋ ಏರ್‌, ಮಾರ್ಚ್‌ 22ರವರೆಗೆ 138 ವಿಮಾನ ಟ್ರಿಪ್ಸ್‌ ಸ್ಥಗಿತಗೊಳಿಸಿದೆ. 10 ನಗರಗಳಿಗೆ ಸಂಪರ್ಕ ಕಲ್ಪಿಸುವ 7 ವಿಮಾನಗಳ ಹಾರಾಟ ಕೈಬಿಟ್ಟಿದೆ.

ಪರಿಣಾಮಗಳೇನು?
ಹಲವಾರು ವಿಮಾನಗಳ ಹಾರಾಟವು ಹಠಾತ್ತಾಗಿ ರದ್ದಾಗಿದ್ದರಿಂದ ದೇಶದಾದ್ಯಂತ ಸಾವಿರಾರು ವಿಮಾನ ಪ್ರಯಾಣಿಕರು ತೊಂದರೆಗೆ ಸಿಲುಕಿದರು. ವಿಮಾನ ನಿಲ್ದಾಣಗಳಲ್ಲಿ ದಟ್ಟಣೆ ಹೆಚ್ಚಿತು. ಅನೇಕರ ಪ್ರಯಾಣ ವೇಳಾಪಟ್ಟಿಯೆಲ್ಲ ಏರುಪೇರಾಯಿತು. ವಿಮಾನಯಾನ ಸಂಸ್ಥೆಗಳು ಪರ್ಯಾಯ ವ್ಯವಸ್ಥೆ ಮಾಡಲು ಹೆಣಗಿದವು. ತಮ್ಮ ಇತರ ವಿಮಾನಗಳಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡುತ್ತಿವೆ. ಇದರಿಂದ ಪ್ರಯಾಣಿಕರು ಪೂರ್ವನಿಗದಿಯಂತೆ ಗಮ್ಯ ತಲುಪುವುದು ಸಾಧ್ಯವಾಗುತ್ತಿಲ್ಲ. ಸಕಾಲದಲ್ಲಿ ಪ್ರಯಾಣಿಸಬೇಕೆಂದರೆ ಕೊನೆ ಕ್ಷಣದ ಟಿಕೆಟ್‌ ಖರೀದಿಗೆ ದುಬಾರಿ ಹಣ ತೆರಬೇಕಾಗುತ್ತದೆ. ಜತೆಗೆ ವಿಮಾನಯಾನ ಸಂಸ್ಥೆಗಳ ಆರ್ಥಿಕ ಹೊರೆಯೂ ಹೆಚ್ಚಿಸಲಿದೆ.

ಬಾಧಿತರ ಸಂಖ್ಯೆ ಎಷ್ಟು?
ಈ ಎರಡೂ ವಿಮಾನಯಾನ ಸಂಸ್ಥೆಗಳ 14 ವಿಮಾನಗಳ ಹಾರಾಟ ರದ್ದತಿಯಿಂದ 1 ಲಕ್ಷ ಪ್ರಯಾಣಿಕರು ತೊಂದರೆಗೆ ಗುರಿಯಾಗಿದ್ದಾರೆ. ಏಪ್ರಿಲ್‌ನಲ್ಲಿ ಬೇಸಿಗೆ ರಜೆಗಳ ಕಾರಣಕ್ಕೆ ಪ್ರಯಾಣಿಕರ ದಟ್ಟಣೆ ಹೆಚ್ಚಲಿದೆ. ಇದರಿಂದ ಬಾಧಿತರ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗಲಿದೆ.

ಇಎಎಸ್‌ಎ ನಿರ್ದೇಶನ
ಪಿಡಬ್ಲ್ಯು (ಪ್ರ್ಯಾಟ್‌ ಅಂಡ್‌ ವ್ಹಿಟ್ನಿ ) ಎಂಜಿನ್‌ ಒಳಗೊಂಡಿರುವ ಏರ್‌ಬಸ್‌ ‘ಎ320 ನಿಯೊ’ ವಿಮಾನಗಳು ಟೇಕಾಫ್‌ ಹಂತದಲ್ಲಿ ಹಠಾತ್ತಾಗಿ ಹಾರಾಟ ಸ್ಥಗಿತಗೊಳಿಸಿದ ಮತ್ತು ಹಾರಾಟದ ವೇಳೆ ಎಂಜಿನ್‌ಗಳಲ್ಲಿ ದೋಷ ಕಂಡುಬಂದ ಕಾರಣಕ್ಕೆ ಅವುಗಳ ಹಾರಾಟ ನಿಲ್ಲಿಸಲು ಯುರೋಪ್‌ ವಾಯುಯಾನ ಸುರಕ್ಷತಾ ಪ್ರಾಧಿಕಾರವು (ಇಎಎಸ್‌ಎ) ಫೆಬ್ರುವರಿ ತಿಂಗಳಲ್ಲಿಯೇ ತುರ್ತು ನಿರ್ದೇಶನ ನೀಡಿತ್ತು.

ಪ್ರ್ಯಾಟ್‌ ಅಂಡ್‌ ವ್ಹಿಟ್ನಿ ಎಂಜಿನ್‌ಗೆ ಒಲವು ಏಕೆ?
ದೇಶದ ಬಹುತೇಕ ಅಗ್ಗದ ವಿಮಾನಯಾನ ಸಂಸ್ಥೆಗಳು 180 ಪ್ರಯಾಣಿಕರಿಗೆ ಅವಕಾಶ ಇರುವ ಏರ್‌ಬಸ್‌ನ ‘ಎ320 ನಿಯೊ’ ಶ್ರೇಣಿಯ ವಿಮಾನಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸಿವೆ. ಇವುಗಳಲ್ಲಿ ಅಳವಡಿಸಿರುವ ಪ್ರ್ಯಾಟ್‌ ಅಂಡ್‌ ವ್ಹಿಟ್ನಿ ಹೊಸಗಿಯರ್ಡ್‌ ಟರ್ಬೊ ಫ್ಯಾನ್‌ (ಜಿಟಿಎಫ್‌) ಎಂಜಿನ್‌ಗಳು ಗರಿಷ್ಠ ಪ್ರಮಾಣದ ಇಂಧನ ಉಳಿತಾಯ ಮಾಡಲಿವೆ. ಕಡಿಮೆ ಮಾಲಿನ್ಯವನ್ನೂ ಹೊರಸೂಸುತ್ತವೆ. ಈ ವೈಶಿಷ್ಟ್ಯಗಳು ಅವುಗಳ ಖರೀದಿಗೆ ಇರುವ ಆಕರ್ಷಣೆಯಾಗಿದೆ. 2016ರಿಂದಲೇ ಈ ಎಂಜಿನ್‌ಗಳನ್ನು ಬಳಸಲಾಗುತ್ತಿದೆ. ಆದರೆ ಆರಂಭದಿಂದಲೂ ಅವುಗಳ ಕಾರ್ಯನಿರ್ವಹಣೆಯಲ್ಲಿ ದೋಷಗಳು ಕಂಡುಬಂದಿವೆ.

ದೋಷಪೂರಿತ ಎಂಜಿನ್‌
‘ಎ320 ನಿಯೊ’ ವಿಮಾನಗಳಲ್ಲಿ ಅಳವಡಿಸಿರುವ ಪ್ರ್ಯಾಟ್‌ ಅಂಡ್‌ ವ್ಹಿಟ್ನಿ ಎಂಜಿನ್‌ಗಳಲ್ಲಿ ದೋಷ ಪತ್ತೆಯಾಗಿದೆ. ಇಂಡಿಗೊದ 32 ಮತ್ತು ಗೋಏರ್‌ನ 13 ಸೇರಿದಂತೆ ಒಟ್ಟು 45 ವಿಮಾನಗಳಲ್ಲಿ ಇಂತಹ ಎಂಜಿನ್‌ ಅಳವಡಿಸಲಾಗಿದೆ. 14 ವಿಮಾನಗಳನ್ನು ಹೊರತುಪಡಿಸಿದಂತೆ ಉಳಿದ ವಿಮಾನಗಳಲ್ಲಿ ದೋಷ ಕಂಡುಬಂದಿಲ್ಲ ಎಂದು ಡಿಜಿಸಿಎ ಹೇಳಿದೆ. ಫೆಬ್ರುವರಿಯಿಂದ ಈಚೆಗೆ ಇಂಡಿಗೊದ ಮೂರು ‘ಎ320 ನಿಯೊ’ ವಿಮಾನಗಳ ಹಾರಾಟವನ್ನು ಇದೇ ಕಾರಣಕ್ಕೆ ಸ್ಥಗಿತಗೊಳಿಸಲಾಗಿದೆ.

ಪರ್ಯಾಯ ಕ್ರಮಗಳೇನು?
ಸದ್ಯಕ್ಕೆ ಈ ಬಗ್ಗೆ ಹೆಚ್ಚಿನ ಸ್ಪಷ್ಟತೆ ಕಂಡುಬಂದಿಲ್ಲ. ಮುಂಗಡ ಕಾದಿರಿಸಿರುವವರಿಗೆ ಹಣ ಮರಳಿಸುವ, ಪರಿಹಾರ ನೀಡುವ, ಬದಲಿ ದಿನಕ್ಕೆ ‍ಪ್ರಯಾಣ ನಿಗದಿಪಡಿಸುವ ಬಗ್ಗೆ ವಿವರಗಳು ಲಭ್ಯ ಇಲ್ಲ. ಇದು ಪ್ರಯಾಣಿಕರ ಬವಣೆ ಹೆಚ್ಚಿಸಿದೆ.

ಪ್ರಯಾಣ ದರ ಏರುವುದೇ?
ಕೆಲವು ಮಾರ್ಗಗಳಲ್ಲಿ ಖಂಡಿತವಾಗಿಯೂ ಪ್ರಯಾಣ ದರ ಏರಲಿದೆ. ಈ ದರ ಹೆಚ್ಚಳವು ಶೇ 10ರಷ್ಟು ಇರುವ ಅಂದಾಜಿದೆ.

ವೇಳಾಪಟ್ಟಿ ಏರುಪೇರು
14 ವಿಮಾನಗಳ ಹಾರಾಟ ಸ್ಥಗಿತದಿಂದ ದೇಶಿ ವಿಮಾನಯಾನ ರಂಗದಲ್ಲಿ ವಿಮಾನಗಳ ವೇಳಾಪಟ್ಟಿಯು ಏರುಪೇರಾಗಲಿದೆ. ದಿನವೊಂದರಲ್ಲಿ ವಿಮಾನವೊಂದು ವಿವಿಧ ನಗರಗಳ ಮಧ್ಯೆ ಹಲವಾರು ಹಾರಾಟಗಳನ್ನು ನಡೆಸುತ್ತದೆ. ವಿಮಾನವೊಂದು ಸೇವೆಗೆ ಲಭ್ಯ ಇರದಿದ್ದರೆ ಅದರಿಂದ ದಿನವೊಂದರಲ್ಲಿ ಏಳೆಂಟು ಟ್ರಿಪ್ಸ್‌ ರದ್ದಾಗಲಿವೆ ಎಂದೂ ಅರ್ಥ.

ಹಾರಾಟ ಸ್ಥಗಿತಕ್ಕೆಕಾರಣವಾದದ್ದೇನು?
ಮುಂಬೈನಿಂದ ಕೋಲ್ಕತ್ತೆಗೆ ಹೊರಟಿದ್ದ ಇಂಡಿಗೊ ವಿಮಾನದಲ್ಲಿ ಎಂಜಿನ್‌ ದೋಷ ಪತ್ತೆಯಾಗಿತ್ತು. ಅಹ್ಮದಾಬಾದ್‌ನಿಂದ ಲಖನೌಗೆ ಹೊರಟಿದ್ದ ಇಂಡಿಗೊ ವಿಮಾನ ಅಹ್ಮದಾಬಾದ್‌ಗೆ ಮರಳಿತ್ತು. ಲೇಹ್‌ದಿಂದ ಜಮ್ಮು ಮಾರ್ಗವಾಗಿ ದೆಹಲಿಗೆ ಹೊರಟಿದ್ದ ಗೋ ಏರ್‌ ವಿಮಾನ ಲೇಹ್‌ಗೆ ಮರಳಿತ್ತು.
***
ಹಠಾತ್ತಾಗಿ ವಿಮಾನಗಳ ಸೇವೆ ರದ್ದಾಗಿರುವುದರಿಂದ ಅಲ್ಪಾವಧಿಯಲ್ಲಿ  ಪ್ರಯಾಣ ದರ ತುಟ್ಟಿಯಾಗಲಿದೆ
ಶರತ್‌ ಧಾಲ್‌, ಯಾತ್ರಾಡಾಟ್‌ಕಾಂನ ಸಿಒಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT