ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ, ಹೆಣ್ಣು ಮತ್ತು ಸಿಹಿ–ಕಹಿ

Last Updated 16 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನಮ್ಮ ಬಡಾವಣೆಯಲ್ಲಿ ಸುಮಾರು ಮರಗಳಿವೆ. ದೊಡ್ಡವು, ಸಣ್ಣವು, ನೆರಳು ನೀಡುವಂಥವು, ಹೂ ಮುಡಿದು ನಿಂತಂಥವು, ಹತ್ತು ಹಲವು ಬಗೆಯವು. ಒಮ್ಮೆ ನೋಡಿದರೆ ಅವಕ್ಕೆ ಅವುಗಳದ್ದೇ ಆದ ವ್ಯಕ್ತಿತ್ವ ಇದೆಯೇನೋ ಎನ್ನಿಸುವಂಥವು. ನಮ್ಮ ಮನೆಯೆದುರಿನ ಒಂದು ಮರವಂತೂ ಮಾಗಿಯ ಒಂದು ರಾತ್ರಿ ಕಳೆದು ಬೆಳಗಾಗುವವರೆಗೆ ತನ್ನ ಎಲೆಗಳನ್ನೆಲ್ಲ ಒಂದೂ ಬಿಡದಂತೆ ಕುಡುಗಿ, ಕಾಲಡಿ ಬಿದ್ದ ಎಲೆಗಳು ತನ್ನದಲ್ಲವೇ ಅಲ್ಲ ಎಂಬಂತೆ ಆಕಾಶಕ್ಕೆ ಮೂತಿ ನೆಟ್ಟು ನಿಂತುಬಿಟ್ಟಿತ್ತು. ಹೊಪ್ಪಳೆಯಾಗಿ ಸುಲಿದುಕೊಂಡಂತಾದ ಅದರ ಕಾಂಡವನ್ನು ದಿನಾ ನನ್ನ ಮಗ ಕೈಯಿಂದ ಸವರುವುದೂ, ‘ಅಮ್ಮಾ ಇದಕ್ಕೆ ಸ್ವಲ್ಪ ಕೋಲ್ಡ್ ಕ್ರೀಮ್ ಹಚ್ಚೋಣ?’ ಎಂದು ಕೇಳುವುದೂ ನಡೆಯುತ್ತಿತ್ತು. ಎಲ್ಲ ಮರಗಳನ್ನೂ ಮನಸ್ಸಲ್ಲೇ ಮಾತಾಡಿಸಿ ಸಂಭ್ರಮಿಸುತ್ತಿದ್ದ ನನಗೆ ಈ ಮರವನ್ನು ಮಾತ್ರ ತಟ್ಟಲೂ ಆಗಿರಲಿಲ್ಲ. ಆ ಮರಕ್ಕೇನೋ ಸೊಕ್ಕು ಎನಿಸಿ ಅದನ್ನು ಕಂಡರೆ ಏನೋ ಕಿರಿಕಿರಿ.

ಸುಮಾರು ಎರಡು ವಾರಗಳ ಕಾಲ ಹೀಗೇ ‘ಚಾತುರ್ಮಾಸ್ಯ’ ನಡೆಸಿದ ಆ ಮರ, ಕಡೆಗೂ ಒಂದು ದಿನ ಬೆಳಿಗ್ಗೆ ನನ್ನನ್ನು ತಟ್ಟಿ ಎಬ್ಬಿಸಿತು. ಮೈ ತುಂಬ ಮರಿಚಿಗುರುಗಳನ್ನು ಹೊದ್ದು, ಗಾಳಿ ಹೇಳಿದ ಯಾವುದೋ ನಗೆಚಾಟಿಕೆಗೆ ಮೆಲ್ಲಗೆ ತಲೆದೂಗಿ ನಗುತ್ತಾ ನಿಂತಿದ್ದ ಅದನ್ನು ನನಗೆ ಗುರುತಿಸಲೇ ಆಗಲಿಲ್ಲ. ಆ ಹಳೆಯ ಒಣ ಮರ ತಾನಲ್ಲವೇ ಅಲ್ಲ ಎಂಬಂತೆ ನಳನಳಿಸುತ್ತಾ ನಿಂತಿತ್ತು. ನನ್ನೊಳಗೇ ಇದ್ದಿರಬಹುದಾದ ಯಾವುದೋ ಋಣಾತ್ಮಕ ಅಂಶವನ್ನು ಆ ಮರಕ್ಕೆ ಆರೋಪಿಸಿ ಕಸಿವಿಸಿ ಪಡುತ್ತಿದ್ದ ನನಗೆ ಸರಿಯಾಗಿ ಪಾಠ ಕಲಿಸಿತ್ತು. ಮತ್ತೆ ನೋಡಿದರೆ ಎಲ್ಲ ಮರಗಳೂ ಹೊಸ ತಳಿರಿನುಡುಗೆ ತೊಟ್ಟು, ತಮ್ಮಲ್ಲೇ ಗುಸುಪಿಸು ಮಾಡುತ್ತಾ ನಿಂತಿವೆ. ಗಾಳಿಯಲ್ಲೂ ಏನೋ ಹೊಸತನವಿದೆ. ಕೆಲವು ತಲೆ ತುಂಬ ಹೂ ಮುಡಿದ ತುಂಟ ಮರಗಳಂತೂ ದಾರಿಯಲ್ಲಿ ಹೋಗಿ ಬರುವವರ ಮೇಲೆ ಹೂಗಳನ್ನು ಉದುರಿಸಿ ಸಂಭ್ರಮಿಸುತ್ತಿವೆ! ಮಗ ಶಾಲೆಯಿಂದ ಬಂದು ‘ಹೊಸ ವರ್ಷದ ಹಬ್ಬ ಅಂತೆ’ ಎಂದು ಕುಣಿದಾಗಲೇ ಹೊಳೆದಿದ್ದು. ಮತ್ತೆ ಯುಗಾದಿ ಬಂದಿದೆ!

ಯುಗಾದಿ. ಹೆಸರು ಹೊಸತನ್ನು ಸೂಚಿಸಿ ದರೂ, ಹಳೆಯದರ ಅಂತ್ಯದ ಮಧುರ ನೆನಪನ್ನೂ ಮಾಡಿಸುತ್ತದೆ. ಈಗ ಏನೋ ಮುಗಿಯಿತೆಂದಿದ್ದು ಇದೀಗ ಮತ್ತಿನ್ನೇನೋ ಶುರುವಾದ ಭಾವನೆಯನ್ನು ಕೊಡುತ್ತದೆ. ಅದಕ್ಕೇ ಈ ಕಾಂಕ್ರೀಟ್ ಕಾಡಿನಲ್ಲೂ ಬಿಡದೇ ಮರಗಿಡಗಳೆಲ್ಲಾ ಹಸಿರು-ಹೂವನ್ನುಟ್ಟು ಅಲಂಕರಿಸಿಕೊಂಡು, ಹೊಸ ಲಾಲಿತ್ಯದಲ್ಲಿ ಬಳುಕಿದರೆ, ಹಕ್ಕಿಗಳು ಅವುಗಳ ‘ಕೊರಳೊಳಗಿಂದ’ (ಬೇಂದ್ರೆ ಅಜ್ಜನಿಗೆ ನಮಿಸುತ್ತಾ) ಹಾಡುತ್ತಾ ಹೊಸ ವರ್ಷವೊಂದನ್ನು ಬರಮಾಡಿಕೊಳ್ಳುತ್ತಾ ಇವೆ! ಕಾಲಕಾಲಕ್ಕೆ ಎಲೆ ಚಿಗುರಿಸಿ, ಹೂವಾಗಿಸಿ, ಹಣ್ಣಾಗಿಸಿ, ಮತ್ತೆ ಬರಿದಾಗಿಸುವ ಯಾವುದೋ ಸುಪ್ತ ತಿಳಿವಳಿಕೆ ಅವುಗಳೊಳಗೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಯಾರು ಇವಕ್ಕೆಲ್ಲಾ ಹೀಗೆ ಕಾಲಕ್ಕೆ ತಕ್ಕಂತೆ ಬದಲಾಗುವುದನ್ನು ಕಲಿಸಿದ್ದು? ಅವೆಲ್ಲವುಗಳನ್ನು ತಾಯಿ ಪ್ರಕೃತಿ ತಿದ್ದಿ-ತೀಡಿ ಬೆಳೆಸಿದ್ದಾಳೆ. ಅವಳ ಮಾತನ್ನು ಯಾರಿಂದಲೂ ಮೀರಲು ಸಾಧ್ಯವಿಲ್ಲ. ನಮ್ಮೆಲ್ಲರ ತಾಯಿ ಅವಳು, ಪೋಷಿಸುವವಳು, ಪೊರೆಯುವವಳು. ಅವಳು ಮರಗಳಲ್ಲಿ ಚಿಗುರಿ, ನಕ್ಕು ಹೂವರಳಿಸಿ, ಹಕ್ಕಿಯಂತೆ ರೆಕ್ಕೆಬಿಚ್ಚಿ, ಗಾಳಿಯಾಗಿ ಬೀಸುತ್ತಾಳೆ. ಮೇಲೆ ಬೆಟ್ಟಗಳಲ್ಲೆಲ್ಲೋ ಹನಿ ಹನಿಯಾಗಿ ತೊಟ್ಟಿಕ್ಕಿ ಕೆಳಗಿಳಿದು ಬರುವವರೆಗೆ ಭೂಮಿಯ ಸೊಕ್ಕು ಮುರಿವಂತೆ ಮಹಾನದಿಯಾಗುತ್ತಾಳೆ. ಹತ್ತಿಯಂತೆ ಚೆಲ್ಲು ಚೆಲ್ಲಾಗಿ ಅಲೆಯುವ ಮೋಡಗಳಿಗೆ ಕಾರ್ಮೋಡದ ಕೌಮಾರ್ಯ ಒದಗಿಸುತ್ತಾಳೆ. ಗುಡುಗಿನ ಮೇಳದಲ್ಲಿ, ಸಿಡಿಲಿನ ಅಗ್ನಿಸಾಕ್ಷಿಯಾಗಿ ಭೂಮಿಗೂ ಆಕಾಶಕ್ಕೂ ಮಿಲನವಾದರೆ, ಮಳೆ ನೀರಿನ ಅಕ್ಷತೆ ಕಾಳನ್ನು ಧರೆಯಿಡೀ ಬೀರಿ ಹಿಗ್ಗುತ್ತಾಳೆ. ಕೆಲವೊಮ್ಮೆ ಕ್ರೋಧಾಗ್ನಿಯಾಗಿ ಬಾನೆತ್ತರ ಚಿಮ್ಮಿದರೆ, ಇನ್ನು ಕೆಲವೊಮ್ಮೆ ಸಾವಿನ ಅಂತಿಮತೆಯ ರಭಸದಲ್ಲಿ ರಾಕ್ಷಸ ಅಲೆಯಾಗಿ ಧರೆಯನ್ನಪ್ಪಳಿಸುತ್ತಾಳೆ. ತುಂಬು ಚಂದ್ರನಂತೆ ಹಿಗ್ಗುವವಳೂ ಅವಳೇ, ಅಮವಾಸ್ಯೆಯಾಗಿ ಕುಗ್ಗುವವಳೂ ಅವಳೇ. ಅವಳಂಥ ಹೆಣ್ಣು ಇನ್ನಿಲ್ಲ!

ಈ ಪ್ರಕೃತಿಯನ್ನೇ ಬಹುಶಃ ದೇವಿಯೆನ್ನುತ್ತಾರೆ, ಸುಖ ಕೊಟ್ಟರೆ ‘ಲಕ್ಷ್ಮಿ’ ಎಂದರೆ, ಹೆದರಿಸಿದರೆ ‘ಕಾಳಿ’ ಎನ್ನುತ್ತಾರೆ; ಹೆದರಿದಾಗ ‘ದುರ್ಗೆ’ ಎಂದು ಬೇಡುತ್ತಾರೆ. ಒಟ್ಟಿನಲ್ಲಿ ನಾನಾ ಹೆಸರಿಂದ ಕರೆದು ಪೂಜಿಸುತ್ತಾರೆ. ಅವಳ ಅಂಶ ಎಲ್ಲರಲ್ಲಿಯೂ ಇದೆ. ಆದರೆ ದೇವರ ಮನೆಯಿಂದಾಚೆಗೆ ಅವಳನ್ನು ಕಾಣಲು ಬಹಳ ಜನ ಸೋಲುತ್ತಾರೆ. ತಮ್ಮನ್ನು ತಾವು ಮೀರಿ, ಮತ್ತೊಬ್ಬರ ಸುಖದ ಬಗ್ಗೆ ಯೋಚಿಸಲೂ ಹಿಂಜರಿಯುತ್ತಾರೆ. ತಮ್ಮ ಕಷ್ಟವನ್ನು ಕಡೆಗಣಿಸಿ ಮತ್ತೊಬ್ಬರಿಗಾಗಿ ಮಿಡಿಯುವ ಅಂತಃಕರಣದಲ್ಲಿ ಅವಳು ಸದಾ ಇರುತ್ತಾಳೆ ಎಂಬುದನ್ನೂ ಮರೆತು ತಮ್ಮದೇ ಲೋಕದಲ್ಲಿ ಮುಳುಗಿರುತ್ತಾರೆ. ಆದರೆ ಪ್ರಕೃತಿಗೆ ಇದ್ಯಾವುದರ ಹಂಗಿಲ್ಲ. ಸದಾ ಬಡಿಯುತ್ತಲೇ ಇರುವ ಹೃದಯದಂತೆ ಸುಮ್ಮನೆ ಮುಂದುವರಿಸಿಕೊಂಡು ಹೋಗುತ್ತಾಳೆ. ಎಷ್ಟು ಸಲ ಕಡಿದರೂ ಮೋಟು ಮರದಲ್ಲಿ ಚಿಗುರು ಮೂಡಿಸುತ್ತಾಳೆ. ಗಾರೆಯ ಬಿರುಕಿನಲ್ಲೂ ಸಸಿ ಮೂಡಿಸುತ್ತಾಳೆ. ಕೊಳೆ ತುಂಬಿದ ಕೆರೆಯಲ್ಲೂ ತಾವರೆ ಅರಳಿಸುತ್ತಾಳೆ. ಮನುಷ್ಯರ ಹುಚ್ಚಾಟ ಗಳನ್ನು ಮೀರಿದ ಘನತೆಯಲ್ಲಿ ವ್ಯವಹರಿಸುತ್ತಾಳೆ.

ಪ್ರಕೃತಿಗೆ ಚಕ್ರಗಳ ಪರಿಭಾಷೆ ಬಹಳ ಪ್ರೀತಿ. ಬಹುಶಃ ಎಲ್ಲೆಡೆಯಲ್ಲೂ ಅದೇ ಭಾಷೆಯಲ್ಲಿ ವ್ಯವಹರಿಸುತ್ತಾಳೆ. ಹೀಗಾಗಿಯೇ ಅವಳ ಕಾಲದ ಪರಿಭಾಷೆಯೂ ಚಕ್ರವೇ. ಕಾಲವೆಂದರೆ ಅವಳ ಪಾಲಿಗೆ ಎಲ್ಲೋ ಶುರುವಾಗಿ ಮತ್ತೆಲ್ಲೋ ಮುಗಿಯುವುದಲ್ಲ. ಅವಳ ಪರಿಭಾಷೆಯ ಕಾಲವೆಂದರೆ ಏನೋ ಮುಗಿದ ಕೂಡಲೇ ಇನ್ನೇನೋ ಶುರುವಾಗುವುದು. ಈ ಕ್ಷಣದಲ್ಲೇ ಸಾವು, ಈ ಕ್ಷಣದಲ್ಲೇ ಹುಟ್ಟು. ಅವಳಿಗೆ ಹಳೆಯ ಕ್ಷಣಗಳಿಗೆ ಆತುಕೊಳ್ಳಲೂ ಪುರುಸೊತ್ತಿಲ್ಲ, ಬರುವ ಹೊಸ ಕ್ಷಣದ ಕನಸು ಕಾಣಲೂ ಸಮಯವಿಲ್ಲ; ಆಕೆಯ ಸಂಪೂರ್ಣ ಅಸ್ತಿತ್ವವೆಂಬುದು ಇಲ್ಲಿ ಈ ಕ್ಷಣದಲ್ಲಿ ಮಾತ್ರ. ಈ ಕ್ಷಣಮಾತ್ರದ ವ್ಯಾಪಾರ ಅವಳದ್ದು. ಹಾಗಾಗಿಯೇ ಅವಳು ಚಿರಜವ್ವನೆ. ಪ್ರತಿ ಕ್ಷಣ ಹೊಸದಾಗುವವಳು, ನಿಂತು ಧ್ಯಾನಿಸಿದರೆ ಈ ಕ್ಷಣದಲ್ಲಿ ಮಾತ್ರ ಸಿಗುವವಳು. ಅವಳ ಕೈ ಹಿಡಿದು ಮುಂದಿನ ಕ್ಷಣಕ್ಕೆ ದಾಟಿಕೊಂಡಿರೋ ಸೈ, ಹಳೆಯದ್ಯಾವುದೋ ಈಗ ಇಲ್ಲದ ಕ್ಷಣಕ್ಕೆ ಆತುಕೊಂಡಿರೋ, ಅವಳು ಕೈ ಜಾರಿ ಹೋಗಾಯಿತು.

ಬೆಳಕು, ಕತ್ತಲೆ – ಎರಡೂ ಆಕೆಯ ಪ್ರೀತಿಯ ಮಕ್ಕಳೇ. ಅವಳಿಗೆ ಅವೆರಡರ ಮಧ್ಯೆ ಯಾವ ಭೇದವೂ ಇಲ್ಲ. ಭೇದವಿರುವುದು ಸುಖಕ್ಕೆ ದೇಹ–ಮನಸ್ಸು  – ಎರಡನ್ನೂ ಒಗ್ಗಿಸಿಕೊಂಡ ನಮಗೇ. ಈಗಷ್ಟೇ ಹುಟ್ಟಿದ ಮಗುವೊಂದರ ಕಣ್ಣಲ್ಲಿ ಬೆಳಕು ತುಂಬಿ, ಅದಕ್ಕೆ ಅದರ ತಾಯಿಯ ರೂಪವನ್ನು ನಿಧಾನಕ್ಕೆ ಕಾಣಿಸುವವಳೂ ಅವಳೇ. ಎಲ್ಲ ನೋಡಿದ, ಕೆಲವೊಮ್ಮೆ ಏನೂ ನೋಡದ ಕಂಗಳೊಳಗೆ ಕತ್ತಲೆಯನ್ನು ತುಂಬಿ ವಿಶ್ರಾಂತಿ ನೀಡುವವಳೂ ಅವಳೇ. ಅವಳ ಅಡುಗೆಯಲ್ಲಿ ಸವಿರುಚಿಯೊಡನೆ ಕಹಿರುಚಿಯೂ ಇದೆ. ಅವಳು ಕೆಲವೊಮ್ಮೆ ಸಿಹಿಪ್ರೇಮದ ಔತಣವನ್ನು ಬಡಿಸಿದರೆ, ಮತ್ತೆ ಕೆಲವೊಮ್ಮೆ ಸುಡುವ ಜ್ವರದಲ್ಲಿರುವ ಮಗುವು ಎಷ್ಟು ಬೇಡವೆಂದರೂ ಕೇಳದೆ ಔಷಧವನ್ನು ಕುಡಿಸುವ ಗಟ್ಟಿಗಿತ್ತಿ ತಾಯಿಯಂತೆ ಕಹಿಯನ್ನೂ ಉಣಿಸುತ್ತಾಳೆ. ಅವಳ ಚಿತ್ರಶಾಲೆಯಲ್ಲಿ ಸೌಂದರ್ಯಕ್ಕೂ ಕುರೂಪಕ್ಕೂ ಒಂದೇ ಬೆಲೆ; ಅಥವಾ ಈ ಎರಡಕ್ಕೂ ಬೆಲೆ ಇಲ್ಲ. ಸೃಷ್ಟಿಯಲ್ಲಿ ಪದೇ ಪದೇ ಈ ಎರಡನ್ನು ಒಟ್ಟಿಗೇ ಇಟ್ಟು ಈ ಎರಡಕ್ಕೂ ಆತುಕೊಳ್ಳಬೇಡ ಎಂದು ಒತ್ತಿ ಒತ್ತಿ ಹೇಳುತ್ತಾಳೆ. ಸಿಹಿಗೆ ಹಿಗ್ಗಬೇಡ, ಕಹಿಗೆ ಕುಗ್ಗಬೇಡ, ಹಳೆಯ ಭಾರ ಹೊರಬೇಡ, ಹೊಸತರ ಕನಸಲ್ಲಿ ಕಳೆದುಹೋಗಬೇಡ, ಎಲ್ಲವನ್ನೂ ಸಮಚಿತ್ತದ ತಕ್ಕಡಿಯಲ್ಲಿ ಇಟ್ಟು ನನ್ನ ಕೈ ಹಿಡಿದು ನಾ ಕರೆದೊಯ್ಯುವಲ್ಲಿಗೆ ಸರಸರನೇ ನಡೆ ಬೇಗ! – ಎನ್ನುತ್ತಾಳೆ.

ಈಗ ಎಷ್ಟನೇ ಸಲವೋ ಅವಳಿಗೇ ಗೊತ್ತು, ಯುಗಾದಿ ಮತ್ತೆ ಬಂದಿದೆ. ಪ್ರಕೃತಿ ಮತ್ತೆ ಮದುವಳಿತಿಯಂತೆ ಸಜ್ಜಾಗಿದ್ದಾಳೆ. ಸದ್ದಿಲ್ಲದೇ ಹೊಸ ವರ್ಷವೊಂದನ್ನು ಮೆಲ್ಲಗೆ ಉಡಿಗೆ ತುಂಬುತ್ತಿದ್ದಾಳೆ. ಅದರಲ್ಲಿ ಏನೇನಿದೆಯೋ, ಅದು ನಮ್ಮನ್ನು ಮೀರಿದ್ದು. ಕಷ್ಟ ಬರುತ್ತದೋ ಸುಖ ಬರುತ್ತದೋ, ಏನು ಬಂದರೂ ಅದನ್ನು ಬರಮಾಡಿಕೊಂಡು ಸ್ವೀಕರಿಸಬೇಕಷ್ಟೆ. ಎಷ್ಟು ಯುಗಾದಿ ಬಂದರೂ ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಈ ಪಾಠವನ್ನು ಪ್ರಕೃತಿಯ ಒಂದೊಂದು ಅಂಗಗಳೂ ಹುಟ್ಟುತ್ತಲೇ ಕಲಿತಂತಿದೆ. ಅದನ್ನು ಸಂಪೂರ್ಣವಾಗಿ ಮರೆತು, ಈಗ ತಿರುಗಿ ಕಲಿಯಬೇಕಿರುವುದು ನಾವು ಮಾತ್ರ…

ಅಲ್ಲದಿದ್ದರೆ, ವರ್ಷದಿಂದ ವರ್ಷ ಹದಗೆಡುತ್ತಿರುವ ನಾಗರಿಕ ಜಗತ್ತಿನಲ್ಲಿ ಯುಗಾದಿ ಮತ್ತೆ ಮತ್ತೆ ಇಷ್ಟು ಸುಂದರವಾಗಿ ಹೂವರಳಿಸಿಕೊಂಡು ನಗಲು ಹೇಗೆ ಸಾಧ್ಯ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT