ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಕನ್ ನಗರಸಭೆ: ಖುರ್ಷಿದಾ ಅಧ್ಯಕ್ಷೆ

ಒಪ್ಪಂದದ ಅನ್ವಯ ರಾಜೀನಾಮೆ ನೀಡಿದ್ದ ಹಿಂದಿನ ಅಧ್ಯಕ್ಷೆ ವೈಶಾಲಿ ಘಂಟಿ
Last Updated 17 ಮಾರ್ಚ್ 2018, 5:40 IST
ಅಕ್ಷರ ಗಾತ್ರ

ಇಳಕಲ್: ಇಳಕಲ್‌ ನಗರಸಭೆಯ ನೂತನ ಅಧ್ಯಕ್ಷರ ಆಯ್ಕೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ 21ನೇ ವಾರ್ಡ್‌ನ ಖುರ್ಷಿದಾ ಮೆಹಬೂಬ್‌ಸಾಬ್‌ ಗದ್ವಾಲ್‌ ಅವಿರೋಧವಾಗಿ ಆಯ್ಕೆಯಾದರು.

ಎರಡನೇ ಅವಧಿಗೆ ನಗರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಅ’ ಮಹಿಳೆಗೆ ಮೀಸಲಾಗಿತ್ತು. ಕಾಂಗ್ರೆಸ್‌ ಪಕ್ಷದೊಳಗಿನ ಒಪ್ಪಂದಂತೆ ಅಧ್ಯಕ್ಷ ಸ್ಥಾನವನ್ನು ಮೂವರಿಗೆ ತಲಾ 10 ತಿಂಗಳ ಹಂಚಿಕೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಈಚೆಗೆ ಹಿಂದಿನ ಅಧ್ಯಕ್ಷೆ ವೈಶಾಲಿ ಸಿದ್ದಣ್ಣ ಘಂಟಿ ರಾಜೀನಾಮೆ ನೀಡಿದ್ದರು.

ಅಧ್ಯಕ್ಷರ ಆಯ್ಕೆಗಾಗಿ ನಡೆದ ಸಭೆಯಲ್ಲಿ ನಗರಸಭೆಯ 21 ಸದಸ್ಯರು ಹಾಜರಿದ್ದರು. ಬಿಜೆಪಿ ಸದಸ್ಯರು ಗೈರು ಉಳಿದಿದ್ದರು. ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಸಭೆಯ ನಂತರ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ‘150 ವರ್ಷಗಳ ನಗರಸಭೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಮ್‌ ಸಮುದಾಯಕ್ಕೆ ಸೇರಿದ ಸದಸ್ಯರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದು ಕಾಂಗ್ರೆಸ್‌ ಪಕ್ಷ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವುದರ ದ್ಯೋತಕ. ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಒಟ್ಟಾಗಿ ನಗರದ ಅಭಿವೃದ್ಧಿಯತ್ತ ಗಮನ ಹರಿಸಬೇಕು’ ಎಂದು ಹೇಳಿದರು.

ನೂತನ ಅಧ್ಯಕ್ಷೆ ಖುರ್ಷಿದಾ ಗದ್ವಾಲ್‌ ಮಾತನಾಡಿ, ‘ಶಾಸಕರು ಹಾಗೂ ಕಾಂಗ್ರೆಸ್‌ ಪಕ್ಷದ ಸರ್ವ ಸದಸ್ಯರು ನನ್ನನ್ನು ಅವಿರೋಧ ಆಯ್ಕೆ ಮಾಡಿದ್ದು, ಎಲ್ಲರ ವಿಶ್ವಾಸಕ್ಕೆ ಧಕ್ಕೆ ಬಾರದ ಹಾಗೆ ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಾನು ಅಧ್ಯಕ್ಷೆಯಾಗಿರುವ ಈ ಸಂದರ್ಭದಲ್ಲಿ ಹಿಂದೆ ನಗರಸಭೆ ಸದಸ್ಯರಾಗಿದ್ದ ನಮ್ಮ ಮಾವ ಕರೀಂಸಾಬ್‌ ಗದ್ವಾಲ್‌ ಇರಬೇಕಿತ್ತು’ ಎಂದು ಭಾವುಕರಾದರು.

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ ಸುರಪುರ, ದೇವಾನಂದ ಕಾಶಪ್ಪನವರ, ಉಪಾಧ್ಯಕ್ಷ ಮಹಾಂತೇಶ ಹನಮನಾಳ, ಕಾಂಗ್ರೆಸ್‌ ಮುಖಂಡ ಶರೀಫ್‌ ಚೋಪದಾರ ಮತ್ತೀತರರು ಇದ್ದರು. ಗದ್ವಾಲ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಸ್ಲಿಂ ಬಾಂಧವರು ನಗರಸಭೆ ಹಾಗೂ ಕಂಠಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಗುಲಾಲು ಎರಚಿ, ಸಿಹಿ ಹಂಚಿ ಸಂಭ್ರಮ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT