ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರಮಸಾಗರ: 45.2 ಮಿಮೀ ಮಳೆ ದಾಖಲು

ಚಿಕ್ಕಜಾಜೂರು ವ್ಯಾಪ್ತಿಯಲ್ಲಿ ಮೆಕ್ಕೆಜೋಳಕ್ಕೆ ನೀರು; ಆತಂಕದಲ್ಲಿ ರೈತರು
Last Updated 17 ಮಾರ್ಚ್ 2018, 6:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಾದ್ಯಂತ ಗುರುವಾರ ತುಂತುರು ಹಾಗೂ ಕೆಲವು ಕಡೆ ಹದ ಮಳೆಯಾದ ವರದಿಯಾಗಿದ್ದು, ಭರಮಸಾಗರ ವ್ಯಾಪ್ತಿಯಲ್ಲಿ 45.2 ಮಿಮೀ ಮಳೆ ಸುರಿದಿದೆ.

ಚಿಕ್ಕಜಾಜೂರು, ಅಮೃತಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಅರ್ಧ ಗಂಟೆಗೂ ಹೆಚ್ಚುಕಾಲ ಮಳೆಯಾಗಿದೆ. ಸಮೀಪದ ಗೌರೀಪುರ, ಕೊಂಡಾಪುರ, ಬಿಜ್ಜೆನಾಳ್, ಕೇಶವಾಪುರ, ಹನುಮನಕಟ್ಟೆ ಮೊದಲಾದ ಗ್ರಾಮಗಳಲ್ಲೂ ಮಳೆಯಾಗಿದೆ.

ದಿಢೀರ್ ಸುರಿದ ಮಳೆಯಿಂದ ಮೆಕ್ಕೆಜೋಳದ ರಾಶಿ ಕೆಳಗೆ ನೀರು ನುಗ್ಗಿದ್ದು, ತೆನೆಗಳು ನೆನೆದಿರುವ ಸಾಧ್ಯತೆ ಇದೆ. ಎಚ್ಚೆತ್ತುಕೊಂಡ ರೈತರು ರಾತ್ರಿಯೇ ತೆನೆಯ ರಾಶಿಗಳಿಗೆ ತಾಡಪಾಲುಗಳನ್ನು ಮುಚ್ಚಿದ್ದಾರೆ. ಕತ್ತಲಾಗಿದ್ದರಿಂದ ಮಳೆ ನೀರು ಮೇಲಿಂದ ರಾಶಿಗೆ ಇಳಿದಿದೆ.

ಸದ್ಯಕ್ಕೆ ಜೋಳದ ರಾಶಿಗೆ ಅಷ್ಟು ಹಾನಿಯಾಗಿಲ್ಲ ಎಂದು ಅಮೃತಾಪುರದ ರೈತರಾದ ಮಾರಪ್ಪರ ಕೆಂಚಪ್ಪ, ಚಿತ್ತಪ್ಪ, ಕೃಷ್ಣಮೂರ್ತಿ, ನಾಗರಾಜಪ್ಪ, ಗೋವಿಂದಪ್ಪ ತಿಳಿಸಿದ್ದಾರೆ. ದಿಢೀರ್ ಮಳೆಯಿಂದಾಗಿ ಎಲ್ಲಿ ಮೆಕ್ಕೆಜೋಳ ಹಾಳಾಗುತ್ತದೊ ಎಂದು ರೈತರು ಆತಂಕದಲ್ಲಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಹಲವೆಡೆ ಉತ್ತಮ ಮಳೆಯಾಗಿದೆ. ಬಿರುಗಾಳಿ ಹೆಚ್ಚಾದ ಕಾರಣ ಮಳೆಯ ಪ್ರಮಾಣ ತಗ್ಗಿತು. ಆದರೆ ನಗರದಲ್ಲಿ ಮಾತ್ರ ರಾತ್ರಿ 9ರವರೆಗೂ ಬಿರುಸಾಗಿ ಮಳೆ ಸುರಿದ ಪರಿಣಾಮ ಬಿ.ಡಿ ರಸ್ತೆಯಲ್ಲಿ ನೀರು ನಿಂತುಕೊಂಡು, ವಾಹನ ಸಂಚಾರಕ್ಕೆ ತೊಡಕಾಯಿತು.

ಗುರುವಾರ ರಾತ್ರಿ ತಾಲ್ಲೂಕಿನ ಜಾನಕೊಂಡ, ಭರಮಸಾಗರ, ಸಿರಿಗೆರೆ ಕ್ರಾಸ್, ಕಾತ್ರಾಳ್‌ವರೆಗೂ ಹದಮಳೆ ಯಾಗಿದೆ. ಬಚ್ಚಬೋರನಹಟ್ಟಿ, ಸಾಸಲು, ನಾಯಕನಹಟ್ಟಿ ಸುತ್ತ ಉತ್ತಮ ಮಳೆಯಾಗಿದೆ.

ಮೊಳಕಾಲ್ಮುರು ವರದಿ: ಮೊಳಕಾಲ್ಮುರು ಕಸಬಾ ಹೋಬಳಿ ವ್ಯಾಪ್ತಿಯ ಮೊಗಲಹಳ್ಳಿ, ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ಮಾರಮ್ಮನಹಳ್ಳಿ, ಕೋನಸಾಗರ, ರಾಯಾಪುರ, ತುಮಕೂರ್ಲಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ.

ಗುರುವಾರ ರಾತ್ರಿ 8ರ ಸುಮಾರಿಗೆ ಗುಡುಗು–ಸಿಡಿಲಿನ ಆರ್ಭಟದೊಂದಿಗೆ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಬಿರುಸಿನಿಂದ ಸುರಿಯಿತು. ನಂತರ ಒಂದು ಗಂಟೆ ಕಾಲ ತುಂತುರು ಮಳೆಯಾಯಿತು.

ಹಿರಿಯೂರು ವರದಿ: ತಾಲ್ಲೂಕಿನ ಬಹುತೇಕ ಕಡೆ ಗುರುವಾರ ರಾತ್ರಿ ಹದಮಳೆ ಆಗಿದೆ. ಹಿರಿಯೂರು ಪಟ್ಟಣ ವ್ಯಾಪ್ತಿಯಲ್ಲಿ 29.2 ಮಿಮೀ ಮಳೆಯಾಗಿದೆ. ಉಳಿದಂತೆ ಬಬ್ಬೂರು ಜವನಗೊಂಡನಹಳ್ಳಿ, ಸೂಗೂರು ಇಕ್ಕನೂರು, ಈಶ್ವರಗೆರೆ ಗ್ರಾಮಗಳಲ್ಲಿ ಹದ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಮಾಡದಕೆರೆ 3.2 ಮಿ.ಮೀ, ಮತ್ತೋಡಿನಲ್ಲಿ 1.3 ಮಿ.ಮೀ ಮಳೆಯಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

ಹಿಂಡಂಬೇಶ್ವರ ದೇಗುಲದ ಶಿಖರಕ್ಕೆ ಹಾನಿ ?
ಚಿತ್ರದುರ್ಗ:
ಗುರುವಾರ ರಾತ್ರಿ ಸಿಡಿಲು ಬಡಿದು ನಗರದ ಐತಿಹಾಸಿಕ ಏಳುಸುತ್ತಿನ ಕೋಟೆಯ ಮಧ್ಯರಂಗದಲ್ಲಿರುವ ಹಿಂಡಬೇಶ್ವರ ದೇಗುಲದ ಶಿಖರಕ್ಕೆ ಹಾನಿಯಾಗಿ, ಮೇಲಿದ್ದ ಕಲ್ಲು ಕೆಳಕ್ಕೆ ಉದುರಿದೆ.

ಸಿಡಿಲಿನ ರಭಸಕ್ಕೆ ಶಿಖರದ ಮೇಲಿದ್ದ ಕಲ್ಲು ನೆಲಕ್ಕೆ ಉರುಳಿದ್ದು, ಕೋಟೆಗೆ ಬೆಳಿಗ್ಗೆ ವಾಯುವಿಹಾರಕ್ಕೆ ಬರುವ ನಾಗರಿಕರು ಈ ವಿಷಯ ತಿಳಿಸಿದರು. ಈ ಘಟನೆ ಕಂಡ ಕೆಲವರು ‘ಶಿಖರದ ಕಳಸವನ್ನು ಯಾರೋ ಕದ್ದೊಯ್ದಿದ್ದಾರೆ’ ಎಂದು ಹೇಳುತ್ತಿದ್ದರು.

ಈ ಕುರಿತು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ಗಿರೀಶ್ ಅವರನ್ನು ‘ಪ್ರಜಾವಾಣಿ’ಗೆ ಸಂಪರ್ಕಿಸಿದಾಗ ‘ಅಂಥ ಘಟನೆ ನಡೆದಿಲ್ಲ. ಇದು ರಾತ್ರಿ ಸಿಡಿಲಿನಿಂದ ಆಗಿರುವ ಘಟನೆ. ಶಿಖರಕ್ಕೆ ಏನೂ ತೊಂದರೆಯಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ಚಿತ್ರದುರ್ಗ ಜಿಲ್ಲೆಯ ಮಳೆ ವಿವರ
ಚಿತ್ರದುರ್ಗ:
ಜಿಲ್ಲೆಯ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಗುರುವಾರ ಸುರಿದ ಮಳೆಯ ವಿವರ ಇಂತಿದೆ.

ಚಳ್ಳಕೆರೆ: ಚಳ್ಳಕೆರೆ 5.4 ಮಿ.ಮೀ ಪರಶುರಾಂಪುರ 3.2 ಮಿಮೀ, ನಾಯಕನಹಟ್ಟಿ 9.2 ಮಿ.ಮೀ, ಡಿ.ಮರಿಕುಂಟೆ 9.2 ಮಿ.ಮೀ , ತಳಕು, 4.6 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ: ಚಿತ್ರದುರ್ಗ 1 ಮಾಪನ ಕೇಂದ್ರದಲ್ಲಿ 38 ಮಿಮೀ , ಚಿತ್ರದುರ್ಗ 2ನೇ ಮಾಪನ ಕೇಂದ್ರದಲ್ಲಿ 38.5 ಮಿಮೀ, ಹಿರೇಗುಂಟನೂರು 1 ಮಿ.ಮೀ, ಐನಹಳ್ಳಿ 30 , ಭರಮಸಾಗರ 45.2 ಮಿ.ಮೀ , ಸಿರಿಗೆರೆ 25. ಮಿ.ಮೀ, ತುರುವನೂರು 7.8 ಮಿ.ಮೀ ಮಳೆಯಾಗಿದೆ.

ಹಿರಿಯೂರು: ಹಿರಿಯೂರು 29.2 ಮಿ.ಮೀ, ಬಬ್ಬೂರು 21 ಮಿ.ಮೀ , ಈಶ್ವರಗೆರೆ 3.6 ಮಿ.ಮೀ, ಇಕ್ಕನೂರು 10.2 ಮಿ.ಮೀ, ಸೂಗೂರು 2.1 ಮಿಮೀ, ಜೆ.ಜಿ.ಹಳ್ಳಿ 12 ಮಿ.ಮೀ ಮಳೆಯಾಗಿದೆ.

ಹೊಳಲ್ಕೆರೆ: ಹೊಳಲ್ಕೆರೆ 10.2 ಮಿಮೀ, ಚಿಕ್ಕಜಾಜೂರು 1.8 ಮಿ.ಮೀ, ಬಿ.ದುರ್ಗ 20.1 ಮಿಮೀ, ಎಚ್.ಡಿಪುರ 9 ಮಿ.ಮೀ, ತಾಳ್ಯ 1 ಮಳೆಯಾಗಿದೆ.

ಹೊಸದುರ್ಗ: ಮತ್ತೋಡು 1.3, ಮಾಡದಕೆರೆ 3.2, ಮೊಳಕಾಲ್ಮುರು : ಮೊಳಕಾಲ್ಮೂರು 39.4 ಮಿಮೀ , ಬಿ.ಜಿ.ಕೆರೆ 12.6 ಮಿ.ಮೀ, ರಾಯಪುರ 13.8 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT