ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ ಔಷಧಿಗೆ ಚೀಟಿ ಬರೆದರೆ ಅಮಾನತು

ಮಿಡಿಗೇಶಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಸಮಾರಂಭದಲ್ಲಿ ಆರೋಗ್ಯ ಸಚಿವ ರಮೇಶ್‌ಕುಮಾರ್ ಎಚ್ಚರಿಕೆ
Last Updated 17 ಮಾರ್ಚ್ 2018, 8:37 IST
ಅಕ್ಷರ ಗಾತ್ರ

ಮಧುಗಿರಿ: ಯಾವುದೇ ಕಾರಣಕ್ಕೂ ಸರ್ಕಾರಿ ಆಸ್ಪತ್ರೆಯ ವೈದ್ಯರು ರೋಗಿಗಳು ಹೊರಭಾಗದಿಂದ ಔಷಧಿ ತರುವಂತೆ ಚೀಟಿ ಬರೆಯುವಂತಿಲ್ಲ. ಒಂದು ವೇಳೆ ಚೀಟಿ ಬರೆದರೆ ಅಂತಹ ವೈದ್ಯರನ್ನು ಅಮಾನತು ಮಾಡಲಾಗುವುದು ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಮಿಡಿಗೇಶಿಯಲ್ಲಿ ಶುಕ್ರವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರದ ಚಿಕಿತ್ಸೆಯನ್ನು ವೈದ್ಯರು ಲಿಖಿತವಾಗಿ ಬರೆದುಕೊಡಬೇಕು. ಆ ಚಿಕಿತ್ಸೆ ಖಾಸಗಿ ಆಸ್ಪತ್ರೆಯಲ್ಲಿ ಪಡೆಯಲು ಆಗುವ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗುವುದು ಎಂದು ಹೇಳಿದರು.

ಆರೋಗ್ಯ ಸೇವೆಗೆ ಯಾವುದೇ ರೀತಿಯ ಹಣದ ಸಮಸ್ಯೆಯನ್ನು ಸರ್ಕಾರ ಎದುರಿಸುತ್ತಿಲ್ಲ. 15 ದಿನಕ್ಕೆ ಅಥವಾ ತಿಂಗಳಿಗೊಮ್ಮೆ ಅಗತ್ಯವಿರುವ ಔಷಧಿಗಳ ಬಗ್ಗೆ ಅಂದಾಜು ಮಾಡಿ ಇಲಾಖೆಗೆ ಬೇಡಿಕೆ ಸಲ್ಲಿಸಿದರೆ ಬೇಗನೆ ಪೂರೈಸಲಾಗುವುದು. ಮಧುಗಿರಿ ಮತ್ತು ಹೊಸಕೆರೆ ಆಸ್ಪತ್ರೆಗೆ ಭೇಟಿ ನೀಡಿದಾಗಲೂ ಇದೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಬಡವರು, ರೈತರು, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದವರಿಗೂ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆಯಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಮಧುಗಿರಿ, ತುಮಕೂರು, ಚಿಕ್ಕಬಳ್ಳಾಪುರದ ಜನರಿಗೆ ಕುಡಿಯುವ ನೀರಿಗಾಗಿ ಎತ್ತಿನ ಹೊಳೆ ಯೋಜನೆಯನ್ನು ಅನುಷ್ಠಾನ ಮಾಡುತ್ತಿದೆ ಎಂದು ತಿಳಿಸಿದರು.

ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ,‘ಮಿಡಿಗೇಶಿ ಸುತ್ತಮುತ್ತಲಿನ ಜನರಿಗೆ ಆರೋಗ್ಯ ಸೌಲಭ್ಯವನ್ನು ಒದಗಿಸಲು ನೂತನ ಕಟ್ಟಡವನ್ನು ₹ 1.63 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.1937ರಲ್ಲಿಯೇ ಇಲ್ಲಿ ಆಸ್ಪತ್ರೆ ನಿರ್ಮಾಣವಾಗಿತ್ತು. ಈ ಆಸ್ಪತ್ರೆಗೆ 84 ವರ್ಷಗಳ ಇತಿಹಾಸವಿದೆ’ ಎಂದು ಹೇಳಿದರು.

’ನನ್ನ ಬಳಿ ಹಣ ಬಲವಿಲ್ಲ. ಆದರೆ, ಜನ ಬಲವಿದೆ. ಎಲ್ಲ ವರ್ಗದವರ ಏಳಿಗೆಗೆ ಶ್ರಮಿಸುವುದು, ರೈತರ ಹಿತ ಕಾಪಾಡುವುದು ನನ್ನ ಕರ್ತವ್ಯ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಿ.ಜೆ.ರಾಜಣ್ಣ,  ಶಾಂತಲಾ ರಾಜಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ ದೇನಾ ನಾಯ್ಕ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾಕ್ಷಿ ಸುಧಾಕರ್, ತುಮುಲ್ ಅಧ್ಯಕ್ಷ ಚಂದ್ರಶೇಖರ್ ಕೊಂಡವಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ,  ಎಸ್.ರಾಜಗೋಪಾಲ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ವಿ.ರಂಗಸ್ವಾಮಿ, ವೈದ್ಯಾಧಿಕಾರಿ ಡಾ.ಅರವಿಂದರೆಡ್ಡಿ, ಮುಖಂಡರಾದ ರಾಜಗೋಪಾಲ್, ರಮೇಶ್, ಕನಕದಾಸ್, ಕೃಷ್ಣ, ಎಸ್‌ಬಿಟಿ ರಾಮು, ಎಂ.ಆರ್. ಜಗನ್ನಾಥ್ ಇದ್ದರು.

ಆರೋಗ್ಯ ಕರ್ನಾಟಕ ಯೋಜನೆ
’ಬಡವರಿಗೆ ಉತ್ತಮ ಅರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಆರೋಗ್ಯ ಕರ್ನಾಟಕ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಮುಖ್ಯಮಂತ್ರಿ, ಶಾಸಕರು, ಸರ್ಕಾರಿ ನೌಕರರು ಹಾಗೂ ಸಾಮಾನ್ಯ ಜನರಿಗೆ ಉಚಿತ ಮತ್ತು ಉತ್ತಮ ದರ್ಜೆಯ ಆರೋಗ್ಯ ಸೇವೆಯನ್ನು ಒದಗಿಸುವ ಯೋಜನೆಯಾಗಿದೆ’ ಎಂದು ರಮೇಶ್‌ಕುಮಾರ್ ತಿಳಿಸಿದರು.

’ಬಡವರು,ಅಸಹಾಯಕರು ಆಸ್ಪತ್ರೆಯಲ್ಲಿ ಅನುಭವಿಸುವ ಯಾತನೆಯ ಬಗ್ಗೆ ನನಗೆ ಅರಿವಿರುವ ಕಾರಣ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT