ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕರಣ ದಾಖಲು ಹೋರಾಟ ಹತ್ತಿಕ್ಕುವ ತಂತ್ರ: ದೇವೇಂದ್ರಪ್ಪ

ನಕ್ಸಲ್‌ ಚಟುವಟಿಕೆಗಳ 24 ಪ್ರಕರಣಗಳಿಂದ ಖುಲಾಸೆಯಾದ ದೇವೇಂದ್ರಪ್ಪ ಆರೋಪ
Last Updated 17 ಮಾರ್ಚ್ 2018, 8:42 IST
ಅಕ್ಷರ ಗಾತ್ರ

ಶಿವಮೊಗ್ಗ: ಜನಪರ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಮುಖಂಡರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಹಿಂದಕ್ಕೆ ಸರಿಯುವಂತೆ ಪರೋಕ್ಷ ಒತ್ತಡ ಹೇರಲಾಗುತ್ತಿದೆ ಎಂದು ಪ್ರಗತಿಪರ ಹೋರಾಟಗಾರ ದೇವೇಂದ್ರಪ್ಪ ಆರೋಪಿಸಿದರು.

ನಕ್ಸಲ್‌ ಆರೋಪದಲ್ಲಿ ಬಂಧಿತರಾ ಗಿದ್ದು,  24 ಪ್ರಕರಣಗಳಲ್ಲೂ ಖುಲಾಸೆಯಾಗಿರುವ ದೇವೇಂದ್ರಪ್ಪ ಶುಕ್ರವಾರ ಪ್ರೆಸ್‌ಟ್ರಸ್ಟ್‌ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಡವರು, ನಿರ್ಗತಿಗರು, ಶೋಷಿತರು, ಅರಣ್ಯ ವಾಸಿಗಳ ಪರವಾಗಿ ಧ್ವನಿ ಎತ್ತುವ, ಕಾಡಿನಲ್ಲೇ ವಾಸವಿದ್ದು ಅವರಲ್ಲಿ ಜಾಗೃತಿ ಮೂಡಿಸುವ ಹೋರಾಟಗಾರರ ವಿರುದ್ಧ ನಿರಂತರ ಪ್ರಕರಣ ದಾಖಲಿಸಲಾಯಿತು. ಜೀವನವಿಡೀ ಕೋರ್ಟ್‌ಗೆ ಅಲೆದಾಡುವಂತೆ ಮಾಡಲಾಯಿತು ಎಂದು ನಕ್ಸಲ್ ಹಣೆಪಟ್ಟಿ ಹೊತ್ತುಕೊಂಡಿದ್ದ ದಿನಗಳ ಘಟನೆಗಳನ್ನು ಬಿಚ್ಚಿಟ್ಟರು.

ಉಡುಪಿ ಜಿಲ್ಲೆ ಈದುವಿನಲ್ಲಿ 2003ರಲ್ಲಿ ನಡೆದ ಎನ್‌ಕೌಂಟರ್ ಒಂದು ನಕಲಿ ಕಾರ್ಯಾಚರಣೆ. ಹಾಜಿಮಾ, ಪಾರ್ವತಿ ಪೊಲೀಸರ ಗುಂಡಿಗೆ ಜೀವ ಕಳೆದುಕೊಂಡರು. ಯಶೋದಾ ಗಾಯಗೊಂಡರು. ಅಂದು ಸ್ಥಳದಿಂದ ಪರಾರಿಯಾದ ಇಬ್ಬರು ನಕ್ಸಲರಲ್ಲಿ ತಾವು 2ನೇ ಆರೋಪಿ ಎಂದು ಪ್ರಕರಣ ದಾಖಲಿಸಲಾಗಿತ್ತು. ವಾಸ್ತವದಲ್ಲಿ ತಾವು ಅಲ್ಲಿರಲಿಲ್ಲ. ಆದರೂ, ತಮ್ಮ ವಿರುದ್ಧ ದೂರು ದಾಖಲಿಸಲಾಯಿತು. ಇಂತಹ ನೂರಾರು ಸುಳ್ಳು ಪ್ರಕರಣಗಳನ್ನು ಪ್ರಗತಿಪರ ಹೋರಾಟಗಾರರು ಎದುರಿಸಬೇಕಾಯಿತು ಎಂದರು.

‘ಕುದುರೆಮುಖ ಗಣಿಗಾರಿಕೆ, ತುಂಗಾ ಮೂಲ ಉಳಿಸಿ ಹೋರಾಟದ ನಂತರ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಹೆಸರಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದರ ವಿರುದ್ಧ ಸಮಾನಮನಸ್ಕರು ಸೇರಿ ಹೋರಾಟ ಆರಂಭಿಸಿದ್ದೆವು. ಅದಕ್ಕಾಗಿ ಹಲವು ವರ್ಷ ಕಾಡಿನಲ್ಲೇ ಉಳಿದೆವು. ಎಂಟು ವರ್ಷ ಕಾರಾಗೃಹದಲ್ಲಿ ಕಳೆದ ನಂತರ ಬದುಕು ಪಾಠ ಕಲಿಸಿದೆ. ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಮಾದರಿ ಹೋರಾಟ ಮುಂದುವರಿಸಲು ನಿರ್ಧರಿಸಿದ್ದೇನೆ’ ಎಂದರು.

ನಕ್ಸಲ್ ಹೋರಾಟ ಒಂದು ಕ್ರಾಂತಿಕಾರಕ, ಜನಪರ ಚಳವಳಿ. ಇದನ್ನು ಭಯೋತ್ಪಾದಕ ಸಂಘಟನೆಗಳ ರೀತಿ ನೋಡಲಾಗುತ್ತಿದೆ. ಇದು ಸಲ್ಲದು ಎಂದು ಮನವಿ ಮಾಡಿದರು. ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT